ಮೋದಿಯವರ ಜೀವ ತೆಗೆಯಲು ಬಂದಿದ್ದ ಜುಂದಾಲ್ ಮತ್ತು ಆರು ಮಂದಿಗೆ ಜೀವನ ಪರ್ಯಂತ ಜೈಲು

ಡಿಜಿಟಲ್ ಕನ್ನಡ ಟೀಮ್:

2006ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಬು ಜುಂದಾಲ್ ಸೇರಿದಂತೆ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಮುಜ್ಫರ್ ತನ್ವೀರ್ ಹಾಗೂ ಡಾ. ಮೊಹ್ಮದ್ ಷರೀಫ್ ಇಬ್ಬರಿಗೆ 14 ವರ್ಷಗಳ ಜೈಲು, ಇನ್ನು ಮೂವರಿಗೆ ಎಂಟು ವರ್ಷದ ಜೈಲುಶಿಕ್ಷೆ ಪ್ರಕಟವಾಗಿದೆ.

ಕೆಲದಿನಗಳ ಹಿಂದೆಯೇ ನ್ಯಾಯಾಲಯದಲ್ಲಿ ಇವರೆಲಲ್ರ ಅಪರಾಧ ಸಾಬೀತಾಗಿತ್ತು. ಮಂಗಳವಾರ ಪ್ರಕಟಗೊಂಡಿರುವುದು ಶಿಕ್ಷೆಯ ಪ್ರಮಾಣ.

ಪ್ರಕರಣದ ವಿವರಕ್ಕೆ, ಮೋದಿ ಅವರನ್ನು ಕೊಲ್ಲಲು ಬಂದಿದ್ದ ಜುಂದಲ್ ಅಪರಾಧಿ ಎಂದು ಘೋಷಿಸಿದ ಕೋರ್ಟ್ ಎಂಬ ಡಿಜಿಟಲ್ ಕನ್ನಡದ ವರದಿ ಓದಬಹುದು.

ಹತ್ತು ವರ್ಷಗಳ ಕೆಳಗೆ ಉಗ್ರ ನಿಗ್ರಹ ದಳವು ಔರಂಗಾಬಾದಿನಲ್ಲಿ ಭಾರೀ ಪ್ರಮಾಣದ ಮಾರಕ ಶಸ್ತ್ರಗಳನ್ನು ವಶಪಡಿಸಿಕೊಂಡಿತ್ತು. ನಂತರ ಈ ಸಂಬಂಧ ಆದ ಬಂಧನಗಳಲ್ಲಿ ಆರೋಪಿತರ ವಿರುದ್ಧ ಮೊಕಾ ಕಾಯ್ದೆ ಅಡಿ ವಿಚಾರಣೆ ನಡೆಸಲಾಗಿತ್ತು.  ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾದ ಒಬ್ಬಾತ ಸೇರಿ ಎಂಟು ಮಂದಿ ನಿರ್ದೋಷಿಗಳೆಂದು ಬಿಡುಗಡೆ ಆಗಿದ್ದಾರೆ. ಈಗಿನ ಅಪರಾಧಿಗಳ ಮೇಲೆ ಈ ಪ್ರಮಾಣದ ಶಿಕ್ಷೆ ಪ್ರಕಟಿಸಲು, ಅವರಿಗೆ ತಾವು ಮಾಡಿದ ಕೃತ್ಯಗಳ ಕುರಿತು ಯಾವ ಪಶ್ಚಾತಾಪವೂ ಇಲ್ಲದಿರುವುದು ಹಾಗೂ ಜನರ ಮೇಲೆ ಇವರ ದುಷ್ಕೃತ್ಯ ಉಂಟುಮಾಡಲಿದ್ದ ಪರಿಣಾಮಗಳನ್ನು ಪರಿಗಣಿಸಿರುವುದಾಗಿ ನ್ಯಾಯಾಲಯ ಹೇಳಿದೆ.

ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ವಿಎಚ್ಪಿ ಮುಖ್ಯಸ್ಥ ಪ್ರವೀಣ್ ತೊಗಡಿಯಾ ಅವರನ್ನು ಮುಗಿಸುವುದು ಈ ಗುಂಪಿನ ಉದ್ದೇಶವಾಗಿತ್ತು ಎಂಬ ಅಂಶವನ್ನೂ ನ್ಯಾಯಾಲಯ ಈ ಮೊದಲೇ ಒಪ್ಪಿಕೊಂಡಿದೆ.

Leave a Reply