ನವಲಗುಂದ ದೌರ್ಜನ್ಯದ ವಿರುದ್ಧ ಪ್ರತಿಭಟನೆ, ಬೆಂಗಳೂರಿನ ಮದ್ರಸಾದಲ್ಲಿ ಅಮಾನವೀಯತೆ, ಮೇರಿ ಕೊಮ್ ಕ್ರೀಡಾ ಕಾಳಜಿ

ಡಿಜಿಟಲ್ ಕನ್ನಡ ಟೀಮ್:

ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ

ಮಹದಾಯಿ ಮಧ್ಯಾಂತರ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ಬಂದ್ ಆಚರಣೆ ಸಂದರ್ಭದಲ್ಲಿ ನವಲಗುಂದದಲ್ಲಿ ಗ್ರಾಮಸ್ಥರ ಮೇಲೆ ಲಾಠಿಚಾರ್ಜ್, ಪೊಲೀಸ್ ದೌರ್ಜನ್ಯಗಳಾಗಿದ್ದವು. ಮಂಗಳವಾರ ಒಬ್ಬ ಸಿಪಿಐ ಹಾಗೂ ಎಂಟು ಪೇದೆಗಳನ್ನು ಈ ಪ್ರಕರಣ ಸಂಬಂಧ ಅಮಾನತು ಮಾಡಿರುವ ಪ್ರಕಟಣೆ ಹೊರಬಿದ್ದಿದೆ.

ಇನ್ನೊಂದೆಡೆ, ಘಟನೆ ನಡೆದ ಮೂರು ದಿನಗಳ ನಂತರ ಗ್ರಾಮಕ್ಕೆ ಭೇಟಿ ನೀಡಿದ ತಹಶಿಲ್ದಾರರನ್ನು ಗ್ರಾಮಸ್ಥರೇ ಆಕ್ರೋಶದಿಂದ ಹೊರಕಳುಹಿಸಿದ ಘಟನೆ ನಡೆಯಿತು. ಗ್ರಾಮಸ್ಥರನ್ನು ಮಾತನಾಡಿಸುವ ಮೊದಲೇ ವರದಿ ಕೊಟ್ಟಿದ್ದಾದರೂ ಹೇಗೆ ಅಂತ ತರಾಟೆಗೆ ತೆಗೆದುಕೊಳ್ಳಲಾಯಿತು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಸಹ ನವಲಗುಂದಕ್ಕೆ ಭೇಟಿ ನೀಡಿ ಸಂತ್ರಸ್ತರಿಂದ ಮಾಹಿತಿ ಕಲೆಹಾಕಿದರು. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಹ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ದುಃಖ ಆಲಿಸಿತು.

ಇತ್ತ, ಬೆಂಗಳೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚ ವತಿಯಿಂದ ನವಲಗುಂದದ ಯಮನೂರಿನ ಮಹಿಳೆಯರ ಮೇಲಾದ ಪೊಲೀಸ್ ಹಲ್ಲೆ ವಿರುದ್ಧ ಪ್ರತಿಭಟನೆ ನಡೆಯಿತು. ಮಹಿಳೆಯರ ಮೇಲೆ ಲಾಠಿ ಪ್ರಯೋಗದ ಅಣಕು ಪ್ರದರ್ಶನ, ಬಾಯಿಗೆ ಕಪ್ಪುಬಟ್ಟೆ ಬಿಗಿದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಪ್ರತಿಭಟನೆ ನಡೆಯಿತು.

ಬೆಂಗಳೂರು ಮದ್ರಸಾದಲ್ಲಿ ಮಕ್ಕಳ ಮೇಲೆ ಅಮಾನವೀಯತೆ, ಶಿಕ್ಷಕ ಮತ್ತು ತಂದೆಯ ಬಂಧನ

 ಮದ್ರಸಾಕ್ಕೆ ಹೋಗಲೊಲ್ಲೆ ಎಂದ ಮೂವರು ಮಕ್ಕಳು. ಇದಕ್ಕೆ ಪ್ರತಿಯಾಗಿ ಬುದ್ಧಿ ಕಲಿಸುವುದಕ್ಕೆ ಮುಂದಾದ ತಂದೆ ಸಿರಾಜ್ ವಹಾಬ್. ಇದಕ್ಕೆ ಎಚ್ ಎಸ್ ಆರ್ ಲೇಔಟಿನ ಮಸ್ಜಿದ್ ಎ ಹುಸೈನಿಯಾ ಧರ್ಮಶಿಕ್ಷಣ ಶಾಲೆಯ ಶಿಕ್ಷಕ ಕೈಜೋಡಿಸಿ, ಮೂರು ಮಕ್ಕಳ ಕಾಲಿಗೆ ಸರಪಳಿ ಬಿಗಿದು ಶಾಲೆಯಲ್ಲಿ ಬಂಧಿಸಿಟ್ಟ ಘಟನೆ ಬೆಳಕಿಗೆ ಬಂದಿದೆ. ಬಾಲನ್ಯಾಯ ಕಾಯ್ದೆ ಹಾಗೂ ಇಂಡಿಯನ್ ಪಿನಲ್ ಕೋಡ್ ಅನುಸಾರವಾಗಿ ಮದ್ರಸಾ ಶಿಕ್ಷಕ ಹಾಗೂ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರೀಡಾಳುಗಳ ಪರ ಧ್ವನಿ ಎತ್ತಿದ ಮೇರಿ ಕೊಮ್

ಬಾಕ್ಸಿಂಗ್ ನಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೊಮ್, ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆಯಾಗಿರುವ ಅವರು ಒಲಿಂಪಿಕ್ಸ್ ಗೆ ತಯಾರಾಗುತ್ತಿರುವ ಅಥ್ಲೀಟ್ ಗಳ ಪರ ಧ್ವನಿ ಎತ್ತಿ ಕಾಳಜಿ ಮೆರೆದರು.

‘ಕ್ರೀಡಾಳುಗಳಿಗೆ ಆಹಾರ ಮತ್ತು ನಿರಂತರ ತರಬೇತಿ ಸಿಗದ ಸ್ಥಿತಿ ಇದೆ. ಒಲಿಂಪಿಕ್ಸ್ ಗೆ ಕೆಲವು ದಿನಗಳಿರುವಾಗಲಷ್ಟೇ ಈ ಸವಲತ್ತುಗಳನ್ನು ಒದಗಿಸಿದರೆ ಸಾಲದು. ನಿರಂತರತೆ ಸಂಬಂಧ ಅಥ್ಲೀಟ್ ಗಳು ತೊಂದರೆ ಅನುಭವಿಸುತ್ತ ಬಂದಿದ್ದಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ವಿಜಯ್ ಗೋಯೆಲ್ ‘ಸರ್ಕಾರ ರಿಯೊ ಒಲಿಂಪಿಕ್ಸ್ ಗೆ ತೆರಳುವ 119 ಕ್ರೀಡಾಳುಗಳ ವಿಷಯದಲ್ಲಿ 30 ಲಕ್ಷದಿಂದ 1 ಕೋಟಿ ರುಪಾಯಿಯವರೆಗೆ ವ್ಯಯಿಸುತ್ತಿದೆ. ಟೊಕಿಯೊ ಒಲಿಂಪಿಕ್ಸ್ ಗೆ ಈಗಲೇ ತಯಾರಿ ಶುರುವಾಗಿದೆ’ ಎಂಬ ಭರವಸೆ ನೀಡಿದರು.

Leave a Reply