ಈ ದೇಶದಲ್ಲಿ ಜಾತಿ ಹೆಸರಲ್ಲಿ ಜನ ಒಟ್ಟಾಗುತ್ತಾರೆ, ಆದರೆ ಅತ್ಯಾಚಾರಕ್ಕೊಳಗಾದ ಮಹಿಳೆ ಮತಬ್ಯಾಂಕ್ ಅಲ್ಲವಲ್ಲ…

ಪ್ರವೀಣ ಕುಮಾರ್

ಉತ್ತರ ಪ್ರದೇಶದ ಬುಲಂದ್ಶಹರದಲ್ಲಿ ತಾಯಿ-ಮಗಳ ಮೇಲಾಗಿರುವ ಅತ್ಯಾಚಾರ ಪ್ರಕರಣದ ವಿವರಗಳು ಎದೆನಡುಗಿಸುತ್ತವೆ.

ಶುಕ್ರವಾರ ತಡರಾತ್ರಿಯಲ್ಲಿ ಶಹಜಾನ್ಪುರದ ಕೌಟುಂಬಿಕ ಕಾರ್ಯಕ್ರಮಕ್ಕೆಂದು ಪತಿ- ಪತ್ನಿ-ಮಗಳು ಹಾಗೂ ಕುಟುಂಬದ ಕೆಲವರು ತೆರಳುತ್ತಿದ್ದರು. ಬುಲಂದ್ಶಹರದ ಹೆದ್ದಾರಿಯಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಅಡ್ಡಹಾಕಿದ ದುಷ್ಕರ್ಮಿಗಳು ಇವರನ್ನು ಹೊರಗೆಳೆದು ಕುಟುಂಬ ಸದಸ್ಯರ ಎದುರೇ ತಾಯಿ ಮತ್ತು ಮಗಳು ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದಾರೆ.

ಆ ಹುಡುಗಿಯ ವಯಸ್ಸಿನ್ನೂ 14. ‘ನಮ್ಮಲ್ಲಿರುವ ಏನನ್ನಾದರೂ ತೆಗೆದುಕೊಳ್ಳಿ. ಇಬ್ಬರನ್ನೂ ಬಿಟ್ಟುಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಂಡೆ. ಅವರು ನಮಗೆ ಕಬ್ಬಿಣದ ಸಲಾಕೆಗಳಲ್ಲಿ ಹೊಡೆದರು. ಇಬ್ಬರ ಆಕ್ರಂದನಗಳನ್ನು ನಾವೆಲ್ಲ ಅಸಹಾಯಕರಾಗಿ ನೋಡಬೇಕಾಯಿತು. ಅವರೇನಾದರೂ ಇನ್ನೊಮ್ಮೆ ನನ್ನೆದುರು ಬಂದರೆ ಗುಂಡಿಕ್ಕಿ ಕೊಲ್ಲುತ್ತೇನೆ. ಕಣ್ಣೆದುರೇ ಹೆಂಡತಿ- ಮಕ್ಕಳ ಅತ್ಯಾಚಾರ ಕಾಣುವುದು ಎಷ್ಟು ಯಾತನಾಮಯ ಎಂದು ನಿಮಗೆ ಗೊತ್ತಿಲ್ಲ. ಇವರನ್ನು ನಮ್ಮ ಹೆಂಗಸರಿಂದಲೇ ಕೊಲ್ಲುವುದಕ್ಕೆ ಅನುವು ಮಾಡಿಕೊಡಬೇಕು ಅಂತ ನಾನು ಸರ್ಕಾರ ಮತ್ತು ನ್ಯಾಯಾಂಗವನ್ನು ಕೇಳಿಕೊಳ್ಳುತ್ತೇನೆ..’ ಹೀಗಂತ ಅತ್ಯಾಚಾರ ಸಂತ್ರಸ್ತೆಯ ತಂದೆ ಪತ್ರಿಕಾಗೋಷ್ಠಿಯಲ್ಲಿಹೇಳಿಕೊಂಡಾಗ ಅಲ್ಲಿ ಬಿಕ್ಕಳಿಕೆ- ಆಕ್ರೋಶಗಳೆಲ್ಲ ಒಟ್ಟೊಟ್ಟಿಗೇ ಸ್ಫೋಟಿಸಿದ್ದವು.

ಉತ್ತರ ಪ್ರದೇಶದ ಆಡಳಿತ ಹೇಗಿದೆ ಎಂದರೆ ಸಂತ್ರಸ್ತರು ಆ ವಿಭಾಗದ ಪೊಲೀಸ್ ಠಾಣೆಗೆ ಫೋನ್ ಮಾಡಿದಾಗ ಕರೆ ಸ್ವೀಕರಿಸುವವರೇ ಇರಲಿಲ್ಲ. ನಂತರ ಕಂಟ್ರೋಲ್ ರೂಮಿಗೆ ಕರೆ ಮಾಡಿ ಅಂತೂ ಸಹಾಯ ಪಡೆದರು. ಆದರೆ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಅತ್ಯಾಚಾರಕ್ಕೆ ಒಳಗಾದ ತಾಯಿ ಮತ್ತು ಮಗಳಿಗೆ ಅವಮಾನಿಸಿದರು, ಕೇಳಬಾರದ ಪ್ರಶ್ನೆಗಳನ್ನು ಕೇಳಿ ಗಾಯದ ಮೇಲೆ ಉಪ್ಪು ಸವರಿದರು. ಆಸ್ಪತ್ರೆಯಲ್ಲಿ ಇಬ್ಬರಿಗೂ ಎದುರಾದ ಮಾನಸಿಕ ಆಘಾತವನ್ನು ರಾಷ್ಟ್ರೀಯ ಮಹಿಳಾ ಆಯೋಗ ದೃಢೀಕರಿಸಿದೆ.

ಇಷ್ಟೆಲ್ಲ ಆಗಿರುವ ಪ್ರಕರಣದ ಕುರಿತು ಆಡಳಿತಾರೂಢ ಸಮಾಜವಾದಿ ಪಕ್ಷದ ಅಜಂ ಖಾನ್ ಪ್ರತಿಕ್ರಿಯಿಸಿರುವ ರೀತಿ ಎಂಥಾದ್ದು?

ಈ ಮಹಾನುಭಾವನ ಪ್ರಕಾರ ಇದು ಉತ್ತರ ಪ್ರದೇಶ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವುದಕ್ಕೆ ನಡೆದಿರುವ ರಾಜಕೀಯ ಹುನ್ನಾರ! ಮತ್ತದೇ ಗುಜರಾತ್ ದಂಗೆಯ ಕತೆ ಹೇಳುತ್ತ, ರಾಜಕೀಯ ಲಾಭಕ್ಕೆ ಜನರು ಯಾವ ಹಂತಕ್ಕೆ ಬೇಕಾದರೂ ಇಳಿದುಬಿಡುತ್ತಾರೆ ಎಂಬ ಘನಘೋರ ಮಾತುದುರಿಸಿದ್ದಾರೆ ಅಜಂ ಖಾನ್. ಅಂದರೆ ಬಿಜೆಪಿಗೋ ಇನ್ಯಾವುದೋ ಪಕ್ಷಕ್ಕೋ ಲಾಭವಾಗಲೀ ಅಂತ ತಾಯಿ- ಮಗಳು ಕುಟುಂಬದ ಎದುರೇ ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎಂದು ಪ್ರತಿಪಾದಿಸುವಷ್ಟರಮಟ್ಟಿಗಿನ ನೀಚತನ ಈ ಅಜಂ ಖಾನನದು.

ಈತನಿಗೆ ಬಿದ್ದಿರಬಹುದಾದ ನಿಜ ಉರಿ ಯಾವುದಿರಬಹುದು ಎಂಬುದು, ಸದ್ಯಕ್ಕೆ ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರ ಹೆಸರುಗಳನ್ನು ಓದಿಕೊಂಡರೆ ಅರ್ಥವಾಗಿಬಿಡುತ್ತದೆ.

ರಾಯಿಸ್ ಖಾನ್, ಜಬಾರ್, ಶಹಬಾಜ್…

ಸಂತ್ರಸ್ತರಿಂದ ದೋಚಿದ್ದ ಆಭರಣಗಳ ಸಮೇತ ಇವರನ್ನು ಹಿಡಿದಿರುವ ಪೊಲೀಸರು ನ್ಯಾಯಾಲಯದೆದುರು ಇವರನ್ನು ಹಾಜರಾಗಿಸಿ, ನ್ಯಾಯಾಂಗ ವಶಕ್ಕೇನೋ ಕೊಡಿಸಿದ್ದಾರೆ. ಆದರೆ, ಕೃತ್ಯದಲ್ಲಿ ಭಾಗಿಯಾಗಿರುವವರು 7-8 ಮಂದಿ ಎಂದು ಸಂತ್ರಸ್ತರು ಪ್ರಮಾಣೀಕರಿಸಿದ್ದಾರೆ. ಹೀಗಿರುವಾಗ ಈ ಮೂವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೇಕೆ ಪಡೆಯಲಾಗಿಲ್ಲ ಎಂಬುದೂ ಒಗಟೇ.

ಈ ಪ್ರಕರಣವನ್ನು ತ್ವರಿತ ವಿಚಾರಣೆಗೆ ಒಳಪಡಿಸುವ, ಮೂರು ತಿಂಗಳ ಅವಧಿಯಲ್ಲಿ ನ್ಯಾಯ ದೊರಕಿಸುವ ಭರವಸೆಗಳೆಲ್ಲ ಸಿಕ್ಕಿವೆ. ಆದರೆ ಉಳಿದವರ ಬಂಧನವಿನ್ನೂ ಆಗಬೇಕಿದೆ.

14ರ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರವಾದರೂ ಪೊಸ್ಕೊ (ಮಕ್ಕಳ ವಿರುದ್ಧದ ಲೈಂಗಿಕ ಅಪರಾಧ ಕಾಯ್ದೆ) ಪ್ರಕಾರ ಏಕೆ ಎಫ್ ಐ ಆರ್ ಆಗಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಪೊಲೀಸರಿಗೆ ಜಾಡಿಸಿದೆ.

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯ ಕುಸಿತ ಬಿಂಬಿಸುವ ಮೊದಲ ಪ್ರಕರಣವೇನೂ ಇದಲ್ಲ. ಆದರೆ ಸಮಾಜವಾದಿ ಪಕ್ಷದ ಮೇಲಿನ ರಾಜಕೀಯ ಒತ್ತಡ ಮಾತ್ರ ಅಂಥದ್ದೇನಲ್ಲ. ಪ್ರತಿಪಕ್ಷ ಪಾಳೆಯದಲ್ಲಿ ಬಿಜೆಪಿಯೊಂದನ್ನು ಬಿಟ್ಟರೆ ಮತ್ಯಾರೂ ಇಲ್ಲಿ ಒಗ್ಗಟ್ಟಾಗಿ ಅಖಿಲೇಶ್ ಯಾದವರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗುವುದಿಲ್ಲ.

ದೇಶದಲ್ಲಿ ಜಾತಿ ಆಧಾರದ ದೌರ್ಜನ್ಯಗಳಾದಾಗ ರಾಜಕೀಯ ಪಕ್ಷಗಳು- ಸಂಘಟನೆಗಳೆಲ್ಲ ಸೇರಿ ಬಹುದೊಡ್ಡ ಪ್ರತಿಭಟನೆಯನ್ನು ನಿರ್ಮಿಸುತ್ತವೆ. ತಪ್ಪೇನೂ ಇಲ್ಲ. ಈ ಸಂಘಟಿತ ಪ್ರತಿರೋಧ ಇರಬೇಕಾದದ್ದೇ.

ಆದರೆ….

ಮಹಿಳೆಯ ನೋವಿಗೆ ಯಾವ ಜಾತಿ ಪಟ್ಟವಿಲ್ಲವಲ್ಲ. ಮಹಿಳೆ ಇಡಿ ಇಡಿಯಾಗಿ ಯಾವ ಪಕ್ಷದ ಮತಬ್ಯಾಂಕ್ ಅಲ್ಲವಲ್ಲ?

ಹಾಗೆಂದೇ ಕಾಂಗ್ರೆಸ್ಸಿಗೆ ವಾರಾಣಸಿಯಲ್ಲಿ ಚುನಾವಣಾ ಕೇಂದ್ರಿತ ಬಲಪ್ರದರ್ಶನ ನಡೆಸುವುದು ಮುಖ್ಯವಾಗುತ್ತದೆಯೇ ಹೊರತು, ಅತ್ಯಾಚಾರಕ್ಕೊಳಗಾದ ತಾಯಿ-ಮಗಳ ಬೆನ್ನ ಹಿಂದೆ ನಿಲ್ಲುವುದಲ್ಲ. ಅರವಿಂದ ಕೇಜ್ರಿವಾಲರಿಗೆ ಪಾಪ ವಿಪಾಸನಾ ಧ್ಯಾನ ಮೌನ. ಬಹುಶಃ, ಶನಿವಾರ ಈ ಪ್ರಕರಣದ ವರದಿಯಾಗುತ್ತಿದ್ದಂತೆ ಇವರೆಲ್ಲ ಸಂತ್ರಸ್ತರ ಜಾತಿ ವಿವರಗಳನ್ನೂ ಹಾಗೂ ಅತ್ಯಾಚಾರ ಎಸಗಿದವರ ಜಾತಿ ವಿವರಗಳನ್ನೂ ಕಲೆಹಾಕಿ ಅಳೆದೂ ತೂಗಿ ನೋಡಿದ್ದಿರಬಹುದು. ಆ ಪ್ರಕಾರವಾಗಿ, ಮಾಧ್ಯಮದಲ್ಲಿ ಒಂದು ಹೇಳಿಕೆ ಸಾಕು ಹೆಚ್ಚೇನೂ ಬೇಡ; ಪ್ರತಿಭಟನೆಗಳನ್ನೇನಿದ್ದರೂ ಗುಜರಾತಿನಲ್ಲಿ ನಡೆಸೋಣ, ಜಮ್ಮು-ಕಾಶ್ಮೀರದ ‘ಮುಗ್ಧ ಕಲ್ಲುತೂರಾಟಗಾರರ’ ಬೆನ್ನಿಗೆ ನಿಲ್ಲೋಣ ಅಂತ ಠರಾವು ಪಾಸುಮಾಡಿಕೊಂಡಿದ್ದಿರಬಹುದು.

ಅಜಂ ಖಾನಿನಂಥವರು ಆರಾಮಾಗಿಯೇ ಇರುತ್ತಾರೆ. ಕೈರಾನಾ, ಮುಜಪ್ಪುರ ನಗರ ಗಲಭೆ ಎಲ್ಲ ಆಗಿರುವಾಗ ಬುಲಂದ್ಶಹರ ಅತ್ಯಾಚಾರವನ್ನೂ ಸಹಿಸಿಕೊಳ್ಳಿ ಅಷ್ಟೇ ಎಂಬ ಧಾಟಿಯಲ್ಲಿ ಈ ಮನುಷ್ಯ ಮಾತಾಡುತ್ತಾನೆ. ಅದೇ ಪಕ್ಷದ ಇನ್ನೂ ಕೆಲವರು, ‘ಉತ್ತರ ಪ್ರದೇಶದ ಅತ್ಯಾಚಾರವನ್ನು ಮಾತ್ರ ಏಕೆ ಮಾಧ್ಯಮಗಳು ಬಿಂಬಿಸುತ್ತಿವೆ. ಅತ್ಯಾಚಾರ ಪ್ರಕರಣಗಳು ದೇಶದೆಲ್ಲೆಡೆ ಆಗುತ್ತಿದೆ’ ಅಂತ ವಾದ ಹೂಡುತ್ತಿದ್ದಾರೆ.

ಹೀಗೆ ಹೆದ್ದಾರಿಯಲ್ಲಿ ಅಡ್ಡಹಾಕಿ ಎಳೆದು ಮನೆಯವರೆದುರೇ ಅತ್ಯಾಚಾರ ಮಾಡುವ ಈ ಕೃತ್ಯ ನಾಳೆ ಯಾರ ಜೀವನದಲ್ಲೂ ಆಗಿಬಿಡಬಹುದು ಅಂತ ಎಷ್ಟು ಮಂದಿಗೆ ಅನಿಸುವುದೋ ಗೊತ್ತಿಲ್ಲ.

Leave a Reply