ಸೇನೆ ಎಂದರೆ ಮಣಿಸಲು, ಕೊಲ್ಲಲು ಮಾತ್ರವೇ ಇರೋದು ಎಂದು ವಾದಿಸುವವರಿಗೆ ಕಾಣುತ್ತಿಲ್ಲವೇಕೆ ಈ ಸದ್ಭಾವನೆ?

author-chaitanyaಜಮ್ಮು-ಕಾಶ್ಮೀರದ ವಿಚಾರ ಚರ್ಚೆಗೆ ಬಂದಾಗಲೆಲ್ಲ ಪ್ರತ್ಯೇಕತಾವಾದಿಗಳಿಗೆ ಹಾಗೂ ಅವರನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಉದಾರವಾದಿಗಳಿಗೆ ಸರ್ಕಾರಗಳಿಗಿಂತ ಹೆಚ್ಚಾಗಿ ಭಾರತೀಯ ಸೇನೆಯೇ ದೂಷಣೆಗೆ ಪ್ರಿಯ ಸಂಗತಿ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಸ್ತುತಿ ಇರುವ ಆಂಗ್ಲ ವೆಬ್ ತಾಣದ ಪತ್ರಕರ್ತರೊಬ್ಬರ ವಾದ. ‘ಸೇನೆ ಇರುವುದೇ ಶತ್ರುಗಳೊಂದಿಗೆ ವ್ಯವಹರಿಸುವುದಕ್ಕೆ. ಹೀಗಾಗಿ ಹುಡುಕಿ ಕಾರ್ಯಾಚರಣೆ ಮಾಡುವುದಕ್ಕಷ್ಟೇ ಅವರು ತರಬೇತುಗೊಂಡಿರುತ್ತಾರೆ. ಹೀಗಾಗಿ ಜಮ್ಮು-ಕಾಶ್ಮೀರದ ನಾಗರಿಕರ ಮಧ್ಯೆ ಅಷ್ಟೆಲ್ಲ ಸೇನಾ ನಿಯೋಜನೆಯೇ ತಪ್ಪು..’ ತಾವು ಕೆಲ ದಶಕಗಳ ಹಿಂದೆ ಸಶಸ್ತ್ರ ಪಡೆ ಕುರಿತ ಸಾಕ್ಷ್ಯಚಿತ್ರ ನಿರ್ಮಿಸುವಾಗಲೂ ಬಹಳಷ್ಟು ಯೋಧರು ‘ಆಫ್ ದಿ ರೆಕಾರ್ಡ್’ ಹೀಗೆಯೇ ಹೇಳಿದ್ದರು ಅಂತ ದಾಖಲೆಯಿಲ್ಲದೇ ಕಳಂಕ ಮೆತ್ತಿಬಿಡುವ ಚಾಲಾಕಿತನವನ್ನು ಪಾಡ್ಕಾಸ್ಟ್ ಒಂದರಲ್ಲಿ ಮೆರೆದಿದ್ದಾರೆ ಮಹನೀಯರು.

ಇದು ಒಂದು ಉದಾಹರಣೆ ಮಾತ್ರ. ಸೇನಾ ಉಪಸ್ಥಿತಿಗೆ ವಿರೋಧ ವ್ಯಕ್ತಪಡಿಸುತ್ತ ಇದನ್ನೇ ಬೇರೆ ಬೇರೆ ಮಾತುಗಳಲ್ಲಿ ಕಟ್ಟಿಕೊಡುವ ಉದಾರವಾದಿಗಳ ದೊಡ್ಡ ವರ್ಗವಿದೆ. ಕಾಶ್ಮೀರಿಯೊಬ್ಬ ತನ್ನದೇ ಮನೆಯೊಳಗೆ ಹೋಗಬೇಕಾದರೂ ಸೇನಾ ತಪಾಸಣೆಗೆ ಒಳಗಾಗಬೇಕು ಎಂಬ ಚಿತ್ರಣ ಕಟ್ಟಿಕೊಟ್ಟು ಇತರ ಭಾರತೀಯರನ್ನು ನಂಬಿಸುವ ‘ಹೈದರ್’ನಂಥ ಚಿತ್ರಗಳು ಬಂದಿವೆ.

ಉಗ್ರವಾದಿಗಳ ಉಪಟಳ, ಬಗಲಲ್ಲೇ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ, ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದಲೇ ಮೂಲೋತ್ಪಾಟನೆ ಮಾಡಿದ ಹಿಂಸಾತ್ಮಕ ವಿವರಗಳು, ಪಾಕ್ ಪರವಾಗಿ ವಿಧ್ವಂಸ ಎಬ್ಬಿಸುವುದಕ್ಕೆ ಅನವರತ ಕಾಯ್ದಿರುವ ಪ್ರತ್ಯೇಕತಾವಾದಿಗಳು…ಇಂಥವೆಲ್ಲದರ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಸೇನೆ ಯಾಕಿರಬೇಕು ಅಂತ ಕೇಳುವವರಿಗೆ ಒಂದೋ ಅಜ್ಞಾನ ತಾಂಡವವಾಡುತ್ತಿರಬೇಕು, ಇಲ್ಲವೇ ಎಲ್ಲ ಗೊತ್ತಿದ್ದೂ ವಾಸ್ತವಕ್ಕೆ ಬೆನ್ನು ಹಾಕಿ ವಿತಂಡವಾದ ಮಾಡುವ ಧೂರ್ತತೆ ಇದ್ದಿರಬೇಕು. ಹೆಚ್ಚಿನ ಭಾರತೀಯ ಉದಾರವಾದಿಗಳೆಲ್ಲ ಎರಡನೇ ಸಾಲಿಗೇ ಸೇರುತ್ತಾರೆ.

ಸೇನೆಗೆ ಗೊತ್ತಿರುವುದು ಸೆಣೆಸಿ ಜೀವ ತೆಗೆಯುವುದು ಮಾತ್ರ ಎಂಬಂಥ ಹೇಳಿಕೆಗಳು ನಿಸ್ಸಂದೇಹವಾಗಿ ಭಾರತೀಯ ಸೇನೆಗೆ ಮಾಡುವ ಅವಮಾನ. ಪ್ರವಾಹ/ ರಾಷ್ಟ್ರೀಯ ವಿಪತ್ತುಗಳಲ್ಲಿ ಜೀವರಕ್ಷಣೆಯಲ್ಲಿ ಅತಿ ಮುಂಚೂಣಿಯಲ್ಲಿರುವುದು ಸೇನೆ. ಜಮ್ಮು-ಕಾಶ್ಮೀರದಲ್ಲೇ ಪ್ರವಾಹ ಬಂದಾಗ ಕಾಶ್ಮೀರಿಗಳನ್ನೇನು ಪ್ರತ್ಯೇಕತಾವಾದಿಗಳು ರಕ್ಷಿಸಿದ್ದರೇ? ಇವತ್ತು ದೂಷಣೆಗೆ ಒಳಗಾಗುತ್ತಿರುವ ಸೇನೆಯೇ ಅಲ್ಲವೇ? ಉತ್ತರಾಖಾಂಡದಲ್ಲಿ ಅತಿವೃಷ್ಟಿ- ಭೂಕುಸಿತಗಳಾದಾಗ ಕಂಪಿಸುತ್ತಿದ್ದ ಜೀವಗಳನ್ನು ಪಾರು ಮಾಡಿದವರು ಯಾರು? ಯುದ್ಧವೇನೂ ಅಲ್ಲದ ಅಂಥ ಸಂದರ್ಭದಲ್ಲೂ ನಾಗರಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾರತದ ವಾಯುಸೇನೆ ತನ್ನ ಯೋಧನ ಜೀವಹಾನಿಯನ್ನು ಕಂಡಿತ್ತು ಅಂತ ನೆನಪಿಸಿಕೊಳ್ಳುವುದು ಒಳಿತು. ಅಷ್ಟೆಲ್ಲ ಏಕೆ, ಈ ಕ್ಷಣದಲ್ಲಿ ಅಸ್ಸಾಂ ಪ್ರವಾಹದಲ್ಲಿ ತತ್ತರಿಸಿದೆ. ಅಲ್ಲೂ ಧಾವಿಸಿದೆ ಸೇನೆ.

ಇನ್ನು ಜಮ್ಮು-ಕಾಶ್ಮೀರದ ವಿಷಯ…

‘ಕಾಶ್ಮೀರದಲ್ಲಿ ಇವತ್ತಾಗಬೇಕಿರುವುದು ಹೃದಯಗಳನ್ನು ಬೆಸೆಯುವ ಕೆಲಸ’ ಅಂತ ಮಾತನಾಡುವ ಉದಾರವಾದಿಗಳಿಗೆ ಗೊತ್ತಿರಬೇಕು, ಇವರಂತೆ ಪುಕ್ಕಟೆ ಭಾಷಣವನ್ನೇನೂ ಕುಟ್ಟದೇ 1998ರಿಂದಲೇ ಸೇನೆ ತುಂಬ ಗಂಭೀರವಾಗಿ ಸಮುದಾಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಆದರೆ ಕೃತಘ್ನ ಕಾಶ್ಮೀರಿಗಳಿಂದ ಈವರೆಗೆ ಸಿಕ್ಕಿರುವುದು ಕಲ್ಲುಗಳು ಮಾತ್ರ. ಸೇನೆಯ ಕಾರ್ಯಕ್ಕೆ ಕೃತಜ್ಞತೆ ಸೂಸುವ ಕೆಲವು ಧ್ವನಿಗಳು ಸಿಗುತ್ತವೆಯಾದರೂ ಕಲ್ಲು ತೂರುವ ಪೌರುಷಕ್ಕೆ ಸಮನಾಗಿಲ್ಲ.

ಶಾಲೆಗಳ ನಿರ್ಮಾಣ, ಸೇತುವೆ ಕಟ್ಟುವುದು, ಆರೋಗ್ಯ ಶಿಬಿರಗಳು… ಇವೆಲ್ಲ ಸೇನೆಯ ಕೆಲಸ ಆಗಬೇಕಿಲ್ಲ. ಆದರೆ ಜಮ್ಮು-ಕಾಶ್ಮೀರದಲ್ಲಿ ನಾಗರಿಕರಿಗೆ ಉಪಯೋಗವಾಗುವ ಇಂಥ ಕಾರ್ಯಗಳಲ್ಲಿ ಸೇನೆ ಯುದ್ಧೋಪಾದಿಯಲ್ಲೇ ತೊಡಗಿಕೊಂಡಿದೆ. ಅದಕ್ಕೆ ಆಪರೇಷನ್ ಸದ್ಭಾವನಾ ಎಂದೇ ಹೆಸರಿಟ್ಟಿದೆ.

ಗೊತ್ತಿರಲಿ, ಸಂಘರ್ಷದ ಮಧ್ಯೆ ನಿಲ್ಲದೇ ಇರುವಾಗ ಎಲ್ಲರೂ ಸಾಕ್ರಟೀಸರೇ. ತತ್ತ್ವೋಪದೇಶಗಳು ತುಂಬ ಸುಲಭ. ಆದರೆ ಸೇನೆ ‘ಆಪರೇಷನ್ ಸದ್ಭಾವನಾ’ವನ್ನು ಹಮ್ಮಿಕೊಂಡಿದ್ದೇ ಪ್ರತ್ಯೇಕತಾವಾದಿಗಳ ಬಂದೂಕಿನ ಅಬ್ಬರ ಮಾಸಿರದಿದ್ದ ಕಾಲದಲ್ಲಿ. ಆ ಸಂಘರ್ಷದ ನಡುವೆಯೇ, ಒಂದೆಡೆ ಉಗ್ರರನ್ನು ಮಟ್ಟಹಾಕುತ್ತಲೇ ಮತ್ತೊಂದೆಡೆ ಸಮುದಾಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಭಾರತೀಯ ಸೇನೆ. ಇವರನ್ನುದ್ದೇಶಿಸಿ ‘ನೋಡಿ… ಈಗೇನಾಗ್ಬೇಕು ಅಂತಂದ್ರೆ, ಬಂದೂಕು ಪಕ್ಕಕ್ಕಿಟ್ಟು ಬುರ್ಹಾನ್ ವಾನಿಯಂಥ ಉಗ್ರರ ಜತೆ ಮಾತುಕತೆ ಮಾಡುತ್ತ ಸ್ಥಳೀಯ ಕಾಶ್ಮೀರಿಗಳ ಹೃದಯ ಗೆಲ್ಲುವ ಕೆಲಸ ಮಾಡಬೇಕಿದೆ’ ಅಂತ ಪತ್ರಿಕೆ, ಟಿವಿ ವಾಹಿನಿಗಳಲ್ಲಿ ಉಪದೇಶಕ್ಕೆ ಕೂರುವಾಗ ನಾಚಿಕೆಯಾಗಬೇಡವೇ? ನಮ್ಮ ಯೋಗ್ಯತೆಯ ಅರಿವಾದರೂ ಬೇಡವೇ?

ಜಮ್ಮು-ಕಾಶ್ಮೀರ ರಾಜ್ಯದ ಬಗ್ಗೆ ಉದಾರವಾದಿ ಸಾಮ್ರಾಜ್ಯ ಬಾಯಿಗೆ ಬಂದಿದ್ದೆಲ್ಲ ಒದರಿಕೊಂಡಿರುವಾಗ, ಅತ್ತ ಮೊನ್ನೆಯಷ್ಟೇ ಭಾರತೀಯ ಸೇನೆ ‘ರಾಷ್ಟ್ರೀಯ ಏಕತೆ ಯಾತ್ರೆ’ಯೊಂದನ್ನು ಪೂರೈಸಿದೆ. ಏನಿದು? ಜಮ್ಮು-ಕಾಶ್ಮೀರದ ಜನಸಂಖ್ಯೆಯಲ್ಲಿ ಕೆಲವರನ್ನು ಆಯ್ದು ಸೇನೆಯೇ ಅವರನ್ನು ಭಾರತದ ಬೇರೆ ಬೇರೆ ಭಾಗಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತದೆ. ಭಾರತದ ಬೇರೆ ಜನ ಸಮುದಾಯಗಳೊಂದಿಗೆ ಮುಖಾಮುಖಿಯಾಗಿಸಿ ಮಾತುಕತೆಗೆ ಕೂರಿಸುತ್ತದೆ. ಆ ಮೂಲಕ ಬೆಳೆಯುತ್ತಿರುವ ಭಾರತದ ಭಾವನಾತ್ಮಕ ಅಂಗವಾಗುವುದಕ್ಕೆ, ತಮ್ಮ ಮಹತ್ವಾಕಾಂಕ್ಷೆ ಯೋಚನಾಧಾರೆಗಳನ್ನೂ ಹಿಗ್ಗಿಸಿಕೊಳ್ಳುವುದಕ್ಕೆ ಜಮ್ಮು-ಕಾಶ್ಮೀರಿಗರಿಗೆ ವೇದಿಕೆ ಒದಗಿಸುತ್ತದೆ ಇದು. ಇಂಥ ಎಷ್ಟೋ ಯಾತ್ರೆಗಳಾಗಿವೆ. ಲಢಾಕಿನ ನುಬುರ್ ಕಣಿವೆಯಿಂದ 15 ಹಿರಿಯ ಮಹಿಳೆಯರ ತಂಡ ನಿರ್ಮಿಸಿ ಅವರನ್ನು ಚಂಡಿಗಡ, ಹಿಮಾಚಲ ಪ್ರದೇಶಗಳನ್ನೆಲ್ಲ ಓಡಾಡಿಸಿ ಆಗಸ್ಟ್ 1ಕ್ಕೆ ಮತ್ತೆ ಮನೆಗೆ ಮರಳಿಸಿದೆ ಸೇನೆ. 25-30 ಜನರ ಗುಂಪಿನ 70-100 ಯಾತ್ರೆಗಳು ಪ್ರತಿವರ್ಷ ನೆರವೇರುತ್ತವೆ ಎಂದು ಸೇನೆಯ ಜಾಲತಾಣ ತಿಳಿಸುತ್ತದೆ.

kupwara

  • ಜಮ್ಮು-ಕಾಶ್ಮೀರದಲ್ಲಿ 46 ‘ಆರ್ಮಿ ಗುಡ್ ವಿಲ್ ಸ್ಕೂಲ್’ (ಸೇನಾ ಸದ್ಭಾವನಾ ಶಾಲೆ)ಗಳಿವೆ. ಅಲ್ಲದೇ ಸರ್ಕಾರದ ಬೇರೆ ಶಾಲೆಗಳ ಮೂಲಸೌಕರ್ಯ ನಿರ್ವಹಣೆಗೂ ಸೇನೆ ಸಹಕರಿಸುತ್ತಲೇ ಬಂದಿದೆ. ಇಲ್ಲಿನ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರಾಥಮಿಕ- ಪ್ರೌಢ ಶಿಕ್ಷಣ ಪೂರೈಸುತ್ತಲೇ ದೇಶದ ಬೇರೆ ಭಾಗಗಳ ಸಂಸ್ಥೆಗಳಲ್ಲಿ ಅಧ್ಯಯನ ಕೈಗೊಳ್ಳುವುದಕ್ಕೆ ಮಾರ್ಗದರ್ಶನ ಸಹ ಸೇನೆ ಪೂರೈಸುತ್ತಿದೆ. ಉದಾರವಾದಿಗಳ ‘ಕೊಲ್ಲುವ’ ವ್ಯಾಖ್ಯಾನಕ್ಕೊಳಗಾಗಿರುವ ಸೇನೆಗೆ ಇವೆಲ್ಲಯಾಕೆ ಬೇಕಿತ್ತು ಹೇಳಿ…

sadbhavana

  • 1990ರ ಪ್ರತ್ಯೇಕತಾವಾದಿ ಉಗ್ರರ ಉಪಟಳದಲ್ಲಿ ಜಮ್ಮು-ಕಾಶ್ಮೀರದ ಮೂಲಸೌಕರ್ಯಕ್ಕೆ ಸಾಕಷ್ಟು ಹಾನಿಯಾಗಿತ್ತು. ಈ ಎರಡು ದಶಕಗಳಲ್ಲಿ ಚಿಕ್ಕ ಚಿಕ್ಕ ಸೇತುವೆಗಳು, ವಿದ್ಯುದೀಕರಣ ಇಂಥ ಸಮುದಾಯಕ್ಕೆ ನೆರವಾದ ಅನೇಕ ಕಾರ್ಯಗಳೆಲ್ಲ ಯೋಧರ ಬೆವರ ಸುಗಂಧವನ್ನು ಮೆತ್ತಿಕೊಂಡಿವೆ ಎಂಬುದನ್ನು ಟೀಕಾಕಾರರು ಏಕೆ ಮರೆಯುತ್ತಾರೋ..
  • 1,27,019 ಇದು 2014-15ರ ಹಣಕಾಸು ವರ್ಷದಲ್ಲಿ ಸೇನೆಯ ಆರೋಗ್ಯ ಶಿಬಿರಗಳಿಂದ ಚಿಕಿತ್ಸೆ ಪಡೆದುಕೊಂಡಿರುವ ಜಮ್ಮು-ಕಾಶ್ಮೀರಿಗರ ಸಂಖ್ಯೆ. ಆರೋಗ್ಯ ಪಾಲನೆ, ಸ್ವಚ್ಛತೆ ಇತ್ಯಾದಿ ವಿಷಯಗಳಲ್ಲಿ ಹಳ್ಳಿಗರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಸೇನೆಯ ಆರೋಗ್ಯ ಶಿಬಿರಗಳು ಮಾಡುತ್ತವಲ್ಲದೇ, ಸರ್ಕಾರಿ ಪಶುವೈದ್ಯ ಆಸ್ಪತ್ರೆಗಳೊಂದಿಗೆ ಕೈಜೋಡಿಸಿ ಸಾಕುಪ್ರಾಣಿಗಳ ಚಿಕಿತ್ಸೆಯಲ್ಲೂ ಸಹಯೋಗ ನೀಡಿವೆ.

sadbhavana1

  • ಹೊಲಿಗೆ, ಕಂಪ್ಯೂಟರ್, ಪಶುಪಾಲನೆ, ಮೆಕಾನಿಕ್, ಕಂಪ್ಯೂಟರ್ ಇಂಥ ವಿಷಯಗಳಲ್ಲಿ ಆಗಾಗ ತರಬೇತು ಶಿಬಿರಗಳನ್ನು ಹಮ್ಮಿಕೊಂಡು ಸ್ಥಳೀಯ ಸಮುದಾಯವನ್ನು ಒಳಗೊಳ್ಳುವ ಕೆಲಸವನ್ನೂ ಸೇನೆ ಮಾಡುತ್ತದೆ.

ಹಾಗಾದರೆ ಸೇನೆಯೇನು ದೇವರೇ? ಅವರಿಂದ ತಪ್ಪುಗಳೇ ಆಗುವುದಿಲ್ಲವೇ?

ಹಾಗೇನಿಲ್ಲ. ಸೇನೆಯಲ್ಲಿರುವವರು ನಮ್ಮ ನಡುವಿನಿಂದಲೇ ಎದ್ದುಹೋಗಿ ಒಂದು ಶಿಸ್ತಿನ ವ್ಯವಸ್ಥೆಗೆ ಒಳಪಟ್ಟವರು. ಅಲ್ಲಿ ಲೋಪಗಳಿಲ್ಲ, ಅವರಿಂದ ದೌರ್ಜನ್ಯಗಳೇ ಆಗುವುದಿಲ್ಲ ಎಂಬ ವಾದವೇನೂ ಬೇಕಿಲ್ಲ. ಆದರೆ ತುಂಬ ಮುಖ್ಯವಾಗಿ ಗಮನಿಸಬೇಕಿರುವುದು ಅಲ್ಲಾಗುವ ತಪ್ಪುಗಳಿಗೆ ನಿರ್ದಾಕ್ಷಿಣ್ಯ ಶಿಕ್ಷೆಯಿದೆ.

2010ರಲ್ಲಿ ಜಮ್ಮು-ಕಾಶ್ಮೀರದ ಮಾಚಿಲ್ ಎಂಬ ಪ್ರದೇಶದಲ್ಲಿ ಎನ್ಕೌಂಟರ್ ಒಂದನ್ನು ಸೇನೆ ನಡೆಸಿತು. ಆದರೆ ನಂತರದಲ್ಲಿ, ಈ ಎನ್ಕೌಂಟರಿನಲ್ಲಿ ಕಾಶ್ಮೀರಿ ನಾಗರಿಕರನ್ನು ಉಗ್ರರೆಂದು ಬಿಂಬಿಸಿ ಕೊಲ್ಲಲಾಗಿದೆ ಎಂಬುದು ಬಯಲಿಗೆ ಬಂತು. ಮಿಲಿಟರಿ ನ್ಯಾಯಾಲಯದಲ್ಲೇ ವಿಚಾರಣೆ ನಡೆದು, 2015ರ ವೇಳೆಗೆ ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೇನೆಯ ಆರೂ ಮಂದಿಗೆ ಜೀವಾವಧಿ ಸಜೆಯಾಗಿದೆ.

ಈಗ ಹೇಳಿ, ನಾವಿಲ್ಲಿ ದಶಕಗಳನ್ನೇ ವ್ಯಯಿಸಿದ ನಂತರವೂ ಉದ್ಯಾನದಲ್ಲಿ ಸಾರಂಗ ಕೊಂದವನು, ಫುಟ್ಪಾತಿನಲ್ಲಿ ಕಾರು ಹಾಯಿಸಿ ಜನರನ್ನು ಕೊಂದವನು ಯಾರೆಂಬ ತೀರ್ಮಾನಕ್ಕೇ ಬರಲಾಗುವುದಿಲ್ಲ. ಅಂಥದ್ದರಲ್ಲಿ ತ್ವರಿತ ವಿಚಾರಣೆ ನಡೆಸಿ ತನ್ನವರನ್ನೇ ಜೀವಾವಧಿ ಸಜೆಗೆ ದೂಡಿದ ಸೇನೆಯ ಶಿಸ್ತನ್ನು ಪ್ರಶಂಸಿಸಬೇಕೋ ಅಥವಾ ವಿಕೃತ ದೂಷಣೆಯಲ್ಲಿ ತೊಡಗಬೇಕೋ? 2013ರ ವರದಿಯೊಂದರ ಪ್ರಕಾರ, ಸೇನೆಯ ನಾರ್ದನ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಮಾನವ ಹಕ್ಕು ಉಲ್ಲಂಘನೆ ವಿಷಯದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ 41 ಅಧಿಕಾರಿಗಳೂ ಸೇರಿದಂತೆ 124 ಸೇನಾ ಯೋಧರಿಗೆ ನಾನಾ ಬಗೆಯ ಶಿಕ್ಷೆ ವಿಧಿಸಲಾಗಿದೆ.

ಆದರೆ…

1990ರಲ್ಲಿ ಪಂಡಿತರನ್ನು ಹೊರದಬ್ಬುವ ಹಿಂಸಾತ್ಮಕ ಕಾರ್ಯದಲ್ಲಿ ಪ್ರತ್ಯೇಕತಾವಾದಿಗಳು ಶ್ರೀನಗರದ ನರ್ಸ್ ಸರಳಾ ಭಟ್ ಎಂಬಾಕೆಯನ್ನು ಗ್ಯಾಂಗ್ರೇಪ್ ಮಾಡಿ ನಡುಬೀದಿಯಲ್ಲಿ ಕೊಂದು ಒಗೆದರಲ್ಲ… ಇಂಥದೇ ಅತ್ಯಾಚಾರ- ಹತ್ಯೆಗಳ ಸರಣಿಯಲ್ಲೇ ತೊಡಗಿಸಿಕೊಂಡರಲ್ಲ.. ಇವರಲ್ಲಿ ಯಾವನಾದರೂ ಒಬ್ಬನಿಗೆ ಶಿಕ್ಷೆ ಆಗಿದ್ದರೆ ತೋರಿಸಲಿ!

ಭಾರತೀಯ ಸೇನೆಯ ಅಂತಃಸತ್ವವನ್ನು ಅರಿಯಬೇಕಿರುವುದು ಹೀಗೆ. ಪ್ರತ್ಯೇಕತಾವಾದಿಗಳ ಕಲ್ಲು ತೂರಾಟ, ಉದಾರವಾದಿಗಳ ನಿಂದನೆಗಳ ಮಳೆಗೆ ಸೇನೆ ಕುಗ್ಗುವ ಪ್ರಶ್ನೆಯೇ ಇಲ್ಲ. ಏಕೆಂದರೆ ಅದರ ಬಳಿ ಕೇವಲ ಶಸ್ತ್ರಬಲ ಮಾತ್ರವಿಲ್ಲ, ನಮ್ಮಲ್ಲಿ ಬಹುತೇಕರಿಗೆ ಇಲ್ಲದಿರುವ ನೈತಿಕ ಬಲವೂ ಅವರಲ್ಲಿದೆ.

assam army

ಅಸ್ಸಾಂ ಮತ್ತು ಬಿಹಾರಗಳ ಪ್ರವಾಹದಲ್ಲಿ ಸೇನೆಯ ರಕ್ಷಣಾ ಕಾರ್ಯ…

Leave a Reply