ಜಿಎಸ್ಟಿ ಸಮರ ಗೆದ್ದ ಮೋದಿ ಸರ್ಕಾರ ಹೊಡೆಯಬಹುದೇ ಪಟಾಕಿ? ತಪ್ಪದೇ ಓದಿ… ಪಿಕ್ಚರ್ ಅಭೀ ಬಾಕಿ!

ಡಿಜಿಟಲ್ ಕನ್ನಡ ಟೀಮ್:

ಹಲವು ವರ್ಷಗಳ ರಾಜಕೀಯ ಅಭಿಪ್ರಾಯ ಏರಿಳಿತಗಳ ನಂತರ ಬುಧವಾರ ರಾಜ್ಯಸಭೆಯಲ್ಲಿ ಜಿಎಸ್ಟಿ ಸಂವಿಧಾನ ತಿದ್ದುಪಡಿ ವಿಧೇಯಕ ಪಾಸಾಗಿದೆ.

ಲೋಕಸಭೆಯಲ್ಲಿ ಅದಾಗಲೇ ಪಾಸಾಗಿದ್ದ ವಿಧೇಯಕ ರಾಜ್ಯಸಭೆಯಲ್ಲಿ ಅನುಮೋದನೆಗೊಳಗಾಗುವಲ್ಲಿ ತಡವಾಗಿತ್ತು. ಏಕೆಂದರೆ ಇದೊಂದು ಸಾಂವಿಧಾನಿಕ ತಿದ್ದುಪಡಿಯ ವಿಧೇಯಕವಾದ್ದರಿಂದ 2/3ರ ಬಹುಮತದ ಅವಶ್ಯವಿತ್ತು. ಬುಧವಾರದ ಕಲಾಪದಲ್ಲಿ ತಮಿಳುನಾಡಿನ ಎಐಎಡಿಎಂಕೆ ಮತದಾನದ ಸಂದರ್ಭದಲ್ಲಿ ಸಭಾತ್ಯಾಗ ಮಾಡಿದ್ದು ಬಿಟ್ಟರೆ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲರೂ ಜಿಎಸ್ಟಿಯನ್ನು ಬೆಂಬಲಿಸಿದ್ದರಿಂದ 16 ವರ್ಷಗಳಿಂದ ಹಾಗೆಯೇ ಉಳಿದಿದ್ದ ಈ ತೆರಿಗೆ ಸುಧಾರಣೆ ನಡೆಗೆ ಮುನ್ನುಡಿ ಬರೆದಂತಾಯಿತು.

ಕಾಂಗ್ರೆಸ್ ನೇತೃತ್ವದ ಯುಪಿಎ ಸಾಧಿಸಲಾಗದ್ದನ್ನು ಬಿಜೆಪಿ ಸಾಧಿಸಿತಾದ್ದರಿಂದ ಇದು ಮೋದಿ ವಿಜಯವಾಗುವುದಿಲ್ಲವೇ? ಕಾಂಗ್ರೆಸ್ ಇಷ್ಟೆಲ್ಲ ಚೌಕಾಶಿ ಮಾಡಿ ಒಪ್ಪಿಕೊಂಡಿದ್ದೇಕೆ? ಎಂಬುದೆಲ್ಲ ರಾಜಕೀಯ ಕೌತುಕದ ಪ್ರಶ್ನೆಗಳು.

ಇದು ಮೋದಿ ಸರ್ಕಾರದ ವಿಜಯವಾದರೂ ಇದರ ರಾಜಕೀಯ ಲಾಭ ಪಡೆಯುವುದು ಅಷ್ಟು ಸುಲಭದಲ್ಲಿಲ್ಲ. ಏಕೆಂದರೆ ಜಿಎಸ್ಟಿ ಕಾಯ್ದೆಯ ಅನುಷ್ಠಾನಕ್ಕೇ ಸುದೀರ್ಘ ಕಾಲ ಹಿಡಿಯಲಿದೆ. ಹಾಗೆಂದೇ, ತಮಗೆ ಕೇಂದ್ರವು ಐದು ವರ್ಷಗಳ ಕಾಲ ಆಗಬಹುದಾದ ತೆರಿಗೆ ನಷ್ಟವನ್ನು ತುಂಬಿಕೊಟ್ಟರಷ್ಟೇ ಇದಕ್ಕೆ ಒಪ್ಪುತ್ತೇವೆ ಎಂದು ಕೇಂದ್ರವನ್ನು ಮಣಿಸಿಯೇ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದಾರೆಲ್ಲರು. ಹೀಗಾಗಿ 2019ಕ್ಕೆ ಚುನಾವಣೆಗೆ ಹೋದಾಗ ‘ನೋಡಿ, ನಾವು ಜಿಎಸ್ಟಿ ಪಾಸು ಮಾಡಿದೆವು’ ಎಂದು ನರೇಂದ್ರ ಮೋದಿ ಭಾಷಣ ಮಾಡಿದರೆ, ಅದರಿಂದ ಜನಸಾಮಾನ್ಯರ ಜೀವನದಲ್ಲಿ ಸುಧಾರಣೆ ಆಗಿದೆ ಎಂಬಂಥ ಅನುಭವ ಇನ್ನೂ ಆಗಿರುವುದಿಲ್ಲವಾದ್ದರಿಂದ ಅಂಥ ಮಾತುಗಳು ನಾಟುವುದಿಲ್ಲ. ವಾಸ್ತವದಲ್ಲಿ ಜಿಎಸ್ಟಿ ಅನುಷ್ಠಾನದ ಹಾದಿಯಲ್ಲಿ ಪ್ರಾರಂಭದಲ್ಲಿ ಕೆಲ ವಸ್ತು- ಸೇವೆಗಳ ಬೆಲೆ ಏರುವುದೆಂದು ಪರಿಣತರು ಅಭಿಪ್ರಾಯಪಡುತ್ತಿರುವುದರಿಂದ, ದೀರ್ಘಾವಧಿಯಲ್ಲಿ ಮೋದಿ ಸರ್ಕಾರಕ್ಕೆ ಇದು ಶ್ರೇಯಸ್ಸು ತರಬಲ್ಲದಾದರೂ ಮುಂದಿನ ಲೋಕಸಭೆ ಚುನಾವಣೆಗೆ ಇದರ ರಾಜಕೀಯ ಲಾಭ ಬಿಜೆಪಿಗೆ ಸಿಗದು ಎಂಬುದು ಖಾತ್ರಿಯಾಗುತ್ತಲೇ ಕಾಂಗ್ರೆಸ್ ಮೆದುವಾಯಿತು. ಅಲ್ಲದೇ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸೇರಿದಂತೆ ಹೆಚ್ಚಿನ ರಾಜ್ಯಗಳ ಮುಖ್ಯಮಂತ್ರಿಗಳೆಲ್ಲ ಏಕ ರೂಪದ ತೆರಿಗೆ ವ್ಯವಸ್ಥೆ ರೂಪಿಸುವಲ್ಲಿ ಸಂವಿಧಾನ ತಿದ್ದುಪಡಿಗೆ ಒಪ್ಪಿದ್ದರು. ಹೀಗಾಗಿ, ದೇಶದ ಅರ್ಥ ಪರಿಣತರು ಮತ್ತು ಉದ್ಯಮವಲಯವೆಲ್ಲ ಜಿಎಸ್ಟಿಗೆ ಕಾತರದಿಂದಿರುವಾಗ ತಾನು ಏಕಾಂಗಿಯಾಗಿ ನಕಾರದಲ್ಲಿ ಉಳಿಯಬಾರದೆಂದು ಕಾಂಗ್ರೆಸ್ ನಿರ್ಧರಿಸಿದಂತಿದೆ.

ವಿಧೇಯಕ ಪಾಸಾಯ್ತು ಅಂದ್ಮೇಲೆ ಎಲ್ಲ ಸುಸಂಪನ್ನವಾ?

ಖಂಡಿತ ಇಲ್ಲ. ಈ ಪ್ರಕ್ರಿಯೆ ಬಹು ಸಮಯವನ್ನೇ ತೆಗೆದುಕೊಳ್ಳುತ್ತದೆ. ಸಂವಿಧಾನದಲ್ಲಿ ಸ್ಥಳೀಯ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರಗಳು ವಿಧಿಸಬಹುದಾದ ತೆರಿಗೆಯ ಕುರಿತ ನಿಯಮಗಳಿವೆ. ಇದನ್ನು ಅಮೂಲಾಗ್ರವಾಗಿ ಬದಲಿಸಿ ಹೊಸ ತೆರಿಗೆ ಪರ್ವವೊಂದನ್ನು ಬೇರೆಯದೇ ನಿಯಮಗಳ ಅಡಿಗಲ್ಲಿನಲ್ಲಿ ನಿಲ್ಲಿಸುವುದಕ್ಕೆ ಸಂವಿಧಾನದಲ್ಲೇ ತಿದ್ದುಪಡಿ ಆಗಬೇಕಿತ್ತು. ಬುಧವಾರ ರಾಜ್ಯಸಭೆಯಲ್ಲಿ ಆಗಿರುವಂಥದ್ದು- ಈ ತಿದ್ದುಪಡಿ ಪ್ರಕ್ರಿಯೆಗೆ ಬಹುಮತದ ಅನುಮೋದನೆ ಸಿಕ್ಕಿದೆ ಅಷ್ಟೆ. ಇದನ್ನು ರಾಜ್ಯಗಳ ಶೇ. 50ರಷ್ಟು ವಿಧಾನಸಭೆಗಳಲ್ಲಿ ಅನುಮೋದಿಸಬೇಕಾಗುತ್ತದೆ.

ವಸ್ತು ಮತ್ತು ಸೇವೆ ತೆರಿಗೆಯ ನಿಖರ ನಿಯಮಗಳು ಹಾಗೂ ವಿವರಣೆಗಳು ಇನ್ನಷ್ಟೇ ರೂಪುಗೊಳ್ಳುತ್ತವೆ. ಇದರ ಕರಡು ರೂಪಿಸುವಿಕೆಯಲ್ಲಿ ಎಲ್ಲ ಪಕ್ಷಗಳಿಗೆ ಪ್ರಾತಿನಿಧ್ಯವಿರುತ್ತದೆ. ಈಗ ಜಿಎಸ್ಟಿ ಎಂದು ಎಲ್ಲರ ಬಾಯಲ್ಲೂ ಸಾಮಾನ್ಯವಾಗಿ ನಲಿದಾಡಿಕೊಂಡಿರುವ ಶಬ್ದದಲ್ಲೂ ಸಿಕ್ಕುಗಳಿವೆ. ಸಿಜಿಎಸ್ಟಿ (ಸೆಂಟ್ರಲ್ ಜಿಎಸ್ಟಿ), ಐಜಿಎಸ್ಟಿ (ಇಂಟಿಗ್ರೆಟೆಡ್ ಜಿಎಸ್ಟಿ), ಎಸ್ ಜಿಎಸ್ಟಿ (ಸ್ಟೇಟ್ ಜಿಎಸ್ಟಿ) ಹೀಗೆಲ್ಲ ಕವಲುಗಳಿದ್ದು, ಇಲ್ಲಿ ಯಾರ ವ್ಯಾಪ್ತಿ ಏನು ಎಂಬುದೆಲ್ಲ ವಿವರವಾದ ಚರ್ಚೆಗೆ ಒಳಗಾಗಿ ನಿಜವಾದ ಜಿಎಸ್ಟಿ ವಿಧೇಯಕ ರೂಪುಗೊಳ್ಳುತ್ತದೆ. ಅದು ಮತ್ತೆ ಲೋಕಸಭೆ/ ರಾಜ್ಯಸಭೆಗಳ ಎದುರು (ನವೆಂಬರ್ ನಲ್ಲಿ) ಬರುತ್ತದೆ.

ಜೇಟ್ಲಿ ವರ್ಸಸ್ ಚಿದು ವಿದ್ವತ್ಪೂರ್ಣ ಜಟಾಪಟಿ

ಬುಧವಾರದ ಸಂವಿಧಾನಿಕ ತಿದ್ದುಪಡಿ ಚರ್ಚೆ ವೇಳೆ ಗಮನ ಸೆಳೆದಿದ್ದು ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ನಡುವಿನ ವಿದ್ವತ್ಪೂರ್ಣ ವಾಗ್ವಾದಗಳು. ಬರೀ ಗದ್ದಲವಲ್ಲದೇ ವಿಷಯಾಧಾರಿತ ಚರ್ಚೆಯಲ್ಲಿ ಆಸಕ್ತರಾಗಿರುವವರು ಗಮನಿಸಬೇಕಾದಂಥ ವಾದ-ಪ್ರತಿವಾದಗಳು ಇವಾಗಿದ್ದವು. ‘ಈ ಬಾರಿ ಮಸೂದೆ ಮಂಡಿಸುತ್ತಿರುವ ವಿತ್ತ ಸಚಿವರ ಧ್ವನಿ ಮೆದುವಾಗಿದ್ದು, ಎಲ್ಲರ ಸಮ್ಮತಿ ಬಯಸುತ್ತಿರುವ ಸಂಧಾನದ ಧಾಟಿಯಲ್ಲಿರುವುದು ಉತ್ತಮ ಬೆಳವಣಿಗೆ’ ಅಂತ ಚಿದಂಬರಂ ಹೇಳಿದರೆ, ‘ಮಾಜಿ ವಿತ್ತ ಸಚಿವರಾಗಿ ಮಾತಾಡುವುದು ವೈಭೋಗದ ಸಂಗತಿ, ಆದರೆ ವಿತ್ತ ಸಚಿವನ ಸ್ಥಾನದಲ್ಲಿ ಜಿಎಸ್ಟಿ ಅನುಷ್ಠಾನಕ್ಕೆ ನಿಂತಾಗ ಕಷ್ಟ ಗೊತ್ತಾಗುತ್ತದೆ’ ಅಂತ ಜೇಟ್ಲಿ ಪ್ರತಿಪೆಟ್ಟು ನೀಡಿದರು. ಅಲ್ಲದೇ, ಕಾಂಗ್ರೆಸ್ ಈ ಹಿಂದೆ ಮೂಡಿಸಲಾಗದ ಸಮ್ಮತಿಯನ್ನು ತಾವು ಮೂಡಿಸಿರುವುದಕ್ಕೆ ಕಾರಣವನ್ನೂ ಜೇಟ್ಲಿ ತೆರೆದಿಟ್ಟರು. ‘ಕೇಂದ್ರದ ಫಂಡುಗಳನ್ನು ಬಿಡುಗಡೆಗೊಳಿಸದೇ ಹಿಂದಿನ ಸರ್ಕಾರ ವಿಶ್ವಾಸ ಕೆಡಿಸಿಕೊಂಡಿದ್ದರಿಂದ ರಾಜ್ಯಗಳು ಇವರನ್ನು ನಂಬಲಿಲ್ಲ. ನಾನು ಮೂರು ಹಂತಗಳಲ್ಲಿ ಅದನ್ನು ಬಿಡುಗಡೆ ಮಾಡಿದ ನಂತರವೇ ಜಿಎಸ್ಟಿ ವಿಷಯದಲ್ಲಿ ಚರ್ಚೆಗೆ ಒಪ್ಪಿದರು. ಜಿಎಸ್ಟಿ ಜಾರಿಯಿಂದ ತತ್ ಕ್ಷಣಕ್ಕೆ ರಾಜ್ಯಗಳಿಗೆ ನಷ್ಟವಾದರೆ ಮೊದಲ ಮೂರು ವರ್ಷಗಳಿಗೆ ಕೇಂದ್ರ ನಷ್ಟ ತುಂಬಿಕೊಡುತ್ತದೆ ಎಂದು ಒಪ್ಪಿಸುವವನಿದ್ದೆ. ಆದರೆ ಹಿಂದಿನ ಸರ್ಕಾರ ಮೂಡಿಸಿರುವ ಅವಿಶ್ವಾಸದಿಂದ, ರಾಜ್ಯಗಳು 5 ವರ್ಷದ ಅವಧಿ ನೀಡಲೇಬೇಕೆಂದವು’ ಎಂದು ಜೇಟ್ಲಿ ಈ ಸರ್ಕಾರವು ಜಿಎಸ್ಟಿ ವಿಧೇಯಕಕ್ಕೆ ಸಹಮತ ಮೂಡಿಸಿದ ಕೆಲವು ಜಲಕುಗಳನ್ನು ತೆರೆದಿಟ್ಟರು.

ಇಲ್ಲೇ ಬಂತು ನೋಡಿ ಕಾಂಗ್ರೆಸ್ಸಿನ ಮನಿ/ಫೈನಾನ್ಸ್ ಬಿಲ್ ತರ್ಕ…

ಮೇಲಿನವೆಲ್ಲ ಮಾತಿನ ಮೇಲಾಟಗಳಾದವು. ಇಡೀ ಚರ್ಚೆಯಲ್ಲಿ ಪಿ. ಚಿದಂಬರಂ ಅವರ ಮೂಲಕ ಕಾಂಗ್ರೆಸ್ ಪಟ್ಟು ಹಿಡಿದ ವಿಷಯವೇನೆಂದರೆ, ‘ನಾವು ಸಂವಿಧಾನ ತಿದ್ದುಪಡಿ ಪ್ರಸ್ತಾಪದ ಪರವೇ ಮತ ಹಾಕಿ ಸರ್ಕಾರವನ್ನು ಬೆಂಬಲಿಸುತ್ತೇವೆ. ಆದರೆ ಜಿಎಸ್ಟಿ ವಿಧೇಯಕವು ಅಂತಿಮವಾಗಿ ಸಂಸತ್ತಿನೆದುರು ಬಂದಾಗ ಅದು ಮನಿ ಬಿಲ್ ಆಗಿರದೆ ಫೈನಾನ್ಸ್ ವಿಧೇಯಕ ಆಗಿರಬೇಕು’ ಎಂಬುದು. ಈ ಭರವಸೆಯನ್ನು ನೀಡುವುದಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ನಿರಾಕರಿಸಿದಾಗ ತುಸು ಗದ್ದಲವೇರ್ಪಟ್ಟಿತು.

ವಿಷಯವಿಷ್ಟೆ. ಮನಿ ಬಿಲ್ ಎಂದು ತಂದಾಗ ಲೋಕಸಭೆಯಲ್ಲಿ ಪಾಸಾದರೆ ಸಾಕು. ಆದರೆ ಫೈನಾನ್ಸ್ ವಿಧೇಯಕವು ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ವಿಸ್ತೃತ ಚರ್ಚೆ ಮೂಲಕ ಅನುಮೋದನೆ ಪಡೆಯಬೇಕಾಗುತ್ತದೆ. ರಾಜ್ಯಸಭೆಯು ತಿದ್ದುಪಡಿಗಳನ್ನು ಸೂಚಿಸಿದಾಗ ಒಪ್ಪಬೇಕಾಗುತ್ತದೆ. ಹೀಗಾಗಿ, ಲೋಕಸಭೆಯಲ್ಲಿ ಸರ್ಕಾರಕ್ಕೆ ಹೇಗೂ ಬಹುಮತವಿರುವಾಗ, ರಾಜ್ಯಸಭೆಯಲ್ಲಿ ತನ್ನ ನಿಯಂತ್ರಣ ಇರಿಸಿಕೊಳ್ಳುವುದು ಸಹಜವಾಗಿಯೇ ಕಾಂಗ್ರೆಸಿನ ಆಸೆ.

‘ವಿಧೇಯಕ ರೂಪಿಸುವ ತಂಡದಲ್ಲಿ ಕಾಂಗ್ರೆಸ್ ಸದಸ್ಯರೂ ಇರುತ್ತಾರೆ. ಇನ್ನೂ ಅಂತಿಮವಾಗಿ ರೂಪುಗೊಂಡಿರದ ವಿಧೇಯಕವೊಂದು ಮನಿ ಬಿಲ್ ಆಗುತ್ತದೋ ಫೈನಾನ್ಸ್ ಬಿಲ್ ಆಗುತ್ತದೋ ಎಂದು ಈಗಲೇ ಹೇಗೆ ಹೇಳಲು ಸಾಧ್ಯ?  ಯಾವ ವಿಧೇಯಕ ಎಂಥ ಸ್ವರೂಪದಲ್ಲಿರಬೇಕು ಎಂಬುದಕ್ಕೆ ಸಾಂವಿಧಾನಿಕ ಕಟ್ಟಳೆಗಳಿವೆ. ಅದನ್ನು ಪಾಲಿಸುತ್ತೇವೆ. ಈ ಬಹುಮುಖ್ಯ ವಿಧೇಯಕವನ್ನು ಚರ್ಚೆಯಿಲ್ಲದೇ ಪಾಸು ಮಾಡುವುದಿಲ್ಲ ಎಂಬ ಭರವಸೆ ಮಾತ್ರವೇ ನಾನು ಕೊಡಬಲ್ಲೆ’ ಎಂದರು ಅರುಣ್ ಜೇಟ್ಲಿ.

ಇಷ್ಟಕ್ಕೂ ಕಾಂಗ್ರೆಸ್ ಸಿದ್ಧಮಾಡಿಕೊಂಡಿರುವ ತಕರಾರುಗಳೇನು?

ಜಿಎಸ್ಟಿಯನ್ನು ಶೇ. 18ಕ್ಕೆ ಮಿತಿಗೊಳಿಸಬೇಕು. ಇಲ್ಲದಿದ್ದರೆ ಹಣದುಬ್ಬರ ಹೆಚ್ಚುತ್ತದೆ ಎಂಬುದು ಕಾಂಗ್ರೆಸ್ ಆಗ್ರಹ. ವಾಸ್ತವವಾಗಿ ಕಾಂಗ್ರೆಸ್ ಈ ಅಂಶವನ್ನು ಇವತ್ತಿನ ತಿದ್ದುಪಡಿ ಪ್ರಸ್ತಾವದಲ್ಲೇ ಸೇರಿಸಬೇಕೆಂಬ ನಿಲುವು ಹೊಂದಿತ್ತಾದರೂ ಬೆಂಬಲ ಸಿಗಲಿಲ್ಲ. ಇವತ್ತಿನ ತಿದ್ದುಪಡಿಯಲ್ಲೇ ಸೇರಿಸಿಬಿಟ್ಟಿದ್ದರೆ ಕಷ್ಟ ಏನಾಗುತ್ತಿತ್ತು ಎಂದರೆ- ಈ 18 ಶೇಕಡವನ್ನು ಚೂರೇ ಏರಿಸುವುದಿದ್ದರೂ ಮತ್ತೆ ಸಾಂವಿಧಾನಿಕ ತಿದ್ದುಪಡಿಯನ್ನೇ ತರಬೇಕು! ಈ ಸರ್ಕಸ್ಸನ್ನು ಕಾಂಗ್ರೆಸ್ ಬಿಟ್ಟರೆ ಮತ್ಯಾರೂ ಬೆಂಬಲಿಸಲು ತಯಾರಿಲ್ಲ.

ಜಿಎಸ್ಟಿ ವಿಧೇಯಕದಲ್ಲಾದರೂ ಈ ಶೇ. 18ರ ಮಿತಿಯನ್ನು ಸ್ಪಷ್ಟಪಡಿಸಲಿ ಎಂಬುದು ಚಿದಂಬರಂ ಅವರ ಆಗ್ರಹವಾಗಿತ್ತು. ಅದಕ್ಕೂ ಜೇಟ್ಲಿ ಅಸಮ್ಮತಿಯ ಉತ್ತರವನ್ನೇ ನೀಡಿದರು. ‘ಆಯಾ ಪರಿಸ್ಥಿತಿಗನುಗುಣವಾಗಿ ಜಿಎಸ್ಟಿ ಮಿತಿ ಏರಿಕೆ ಅಥವಾ ಇಳಿಕೆಯ ಅಧಿಕಾರವನ್ನು ಜಿಎಸ್ಟಿ ಕೌನ್ಸಿಲ್ ಗೆ ಕೊಡುವುದಕ್ಕೆ ಈ ಹಿಂದೆ ರಾಜ್ಯಗಳ ಮಟ್ಟದಲ್ಲಿ ನಡೆಸಿದ ಸಭೆ ಒಪ್ಪಿದೆ. ಈ ಕೌನ್ಸಿಲ್ ನಲ್ಲಿ ಕೇವಲ ಕೇಂದ್ರದ ಮಾತು ಮಾತ್ರವೇ ನಡೆಯುವುದಿಲ್ಲ. ಅಲ್ಲದೇ ತೆರಿಗೆಗೆ ಮಿತಿ ಹೇರಿಲ್ಲ ಅಂತ ಬೇಕಾಬಿಟ್ಟಿ ಏರಿಸಿದರೆ ಜನರು ಅಂಥ ಪಕ್ಷಗಳ ವಿರುದ್ಧ ರಾಜ್ಯದಲ್ಲಿ ಮತ ಹಾಕುತ್ತಾರೆ. ಈ ಎಲ್ಲ ಸಮತೋಲನಗಳು ಕೆಲಸ ಮಾಡುವಾಗ, ವಿಧೇಯಕದಲ್ಲೇ ಶೇ. 18ರ ಮಿತಿ ಹೇರಿಕೆ ಭರವಸೆ ಕೊಡಲಾಗದು.’ ಎಂದರು ಜೇಟ್ಲಿ.

ಉಳಿದಂತೆ…

ಅಪರೋಕ್ಷ ತೆರಿಗೆಗಳಿಗೆ ತಡೆ ಇರಬೇಕು ಅಂತಲೂ ಕಾಂಗ್ರೆಸ್ ಆಗ್ರಹಿಸಿತು. ಇತ್ತ, ಎನ್ಡಿಎ ಪಾಳೆಯದಲ್ಲೇ ಇರುವ ಶಿವಸೇನೆಯ ಸಂಜಯ್ ರಾವತ್ ಮಾತನಾಡುತ್ತ, ‘ಆಕ್ಟರಾಯ್ ಹಾಗೂ ಪ್ರವೇಶ ತೆರಿಗೆಗಳೇ ಮುಂಬೈ ಮಹಾನಗರಪಾಲಿಕೆಯ ಆದಾಯ ಮೂಲಗಳಾಗಿವೆ. ಇದನ್ನು ಕಿತ್ತುಕೊಂಡರೆ ಆ ನಷ್ಟವನ್ನು ಕೇಂದ್ರ ಹೇಗೆ ತುಂಬಿಕೊಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಬೇಕು’ ಎಂದು ಆಗ್ರಹಿಸಿದರು. ಹಿತಾಸಕ್ತರೊಂದಿಗೆ ಚರ್ಚಿಸಿ ಇದಕ್ಕೊಂದು ಕಾರ್ಯಸಾಧು ಮಾರ್ಗವನ್ನು ಸೂಚಿಸುವುದಾಗಿ ವಿತ್ತ ಸಚಿವರು ಭರವಸೆ ನೀಡಿದರು.

ಒಟ್ನಲ್ಲಿ ಹೇಳೋದಾದ್ರೆ…

ಜಿಎಸ್ಟಿಗೆ ಪೂರಕ ಸಾಂವಿಧಾನಿಕ ತಿದ್ದುಪಡಿಗೆ ಅನುಮೋದನೆ ತೆಗೆದುಕೊಳ್ಳುವಲ್ಲಿ ಬಿಜೆಪಿ ನಿಸ್ಸಂಶಯವಾಗಿ ವಿಜಯಿಯಾಗಿದೆ. ರಾಜ್ಯಸಭೆಯ ಈ ವಿಜಯೀ ಕಲಾಪ ಮುಗಿಯುತ್ತಲೇ ವಿತ್ತ ಸಚಿವರು ತಮ್ಮ ಸಹೋದ್ಯೋಗಿಗಳಿಂದ ಆವೃತರಾಗಿ ಕೇಕ್ ತಿನ್ನುತ್ತಿದ್ದ ದೃಶ್ಯಗಳು ಬಿತ್ತರವಾದವು. ಆದರೆ ಬಿಯರ್ ಬಾಟಲಿಯನ್ನೋ, ವಿಸ್ಕಿ ಗ್ಲಾಸುಗಳನ್ನೋ ಹೊರತೆಗೆಯುವುದಕ್ಕೆ ಇನ್ನೂ ಸಮಯವಿದೆ.

Leave a Reply