ಮನುಷ್ಯನ ಸಾವು ಮರೆಯಲ್ಲಿದ್ದು, ಅವನ ಜೀವನ ಸಾರ್ವಜನಿಕವಾದ್ರೆ ಉತ್ತಮ

People during the worship of Pithru Tharpana on the festival of “Bheemana Amavase” held at Ulsoor Lake in Bengaluru on Tuesday. Organized by Karnataka Nair Service Society.

author-geetha‘ನಮ್ಮ ತಂದೆ ಹೋಗ್ಬಿಟ್ರು..’

‘ಓ! ಸಾರಿ… ಏನಾಗಿತ್ತು?’

‘ಏಳೆಂಟು ತಿಂಗಳಿಂದ ಹುಷಾರಿರಲಿಲ್ಲ, ವಯಸ್ಸಾಗಿತ್ತು. ತೊಂಬತ್ತರ ಮೇಲಾಗಿತ್ತು ಅಪ್ಪನಿಗೆ..’

‘ನಿಮ್ಮ ಅಣ್ಣಂದಿರೆಲ್ಲಾ ಬಂದಿದ್ದಾರಾ? ಎಷ್ಟು ಹೊತ್ತಿಗೆ ತೊಗೊಂಡು ಹೊಗ್ತಾರೆ ಕ್ರಿಮಿಟೋರಿಯಂಗೆ..? ಈಗ ಹೊರಟರೂ ನಾನು ಬರೋದಕ್ಕೆ ಒಂದೂವರೆ ಗಂಟೆ ಆಗುತ್ತೆ..’

‘ಬೇಡ ಕಣೇ ಬರೋದೇನು ಬೇಡ..’

‘ಯಾಕೆ ಹಾಗನ್ತಿಯಾ? ಹಿರಿಯರು.. ಒಂದು ನಮಸ್ಕಾರ ಮಾಡಬೇಕು.. ನಮಗೆ ಶ್ರೇಯಸ್ಸಲ್ಲವೇ?’

‘ಮನೆಯಾಚೆ ಬಂದು ಸೂರ್ಯನಿಗೆ ಕೈಮುಗಿದು ಒಳಗೆ ಹೋಗಿ, ನಿನ್ನ ಕೆಲಸ ನೀನು ಮುಂದುವರಿಸ್ಕೊ..’

‘ಏನೋ ಹೇಳ್ತಾ ಇದ್ಯಾ?..’

‘ನಾನಲ್ಲ ಹೇಳ್ತಾ ಇರೋದು. ನಮ್ಮಪ್ಪ ಬರೆದಿಟ್ಟದ್ದು ಹೇಳ್ತಾ ಇದೇನೆ ಅಷ್ಟೇ. ಯಾರೂ ಅವರ ಕೆಲಸ ಕಾರ್ಯ ಬಿಟ್ಟು ನನ್ನ ಮೃತದೇಹ ನೋಡೋಕ್ಕೆ ಬರೋದು ಬೇಡ. ಕಣ್ಣು ದಾನ ಮಾಡಬೇಕು.. ದೇಹ ಆಸ್ಪತ್ರೆಗೆ ದಾನ ಮಾಡಬೇಕು ಅಂತ ಬರೆದಿಟ್ಟಿದ್ದಾರೆ ಕಣೇ.. ಅಮ್ಮ ಹೋದಾಗಲೂ ಅವಳ ದೇಹ ದಾನ ಮಾಡಿದ್ವಿ, ನೆನಪಿಲ್ವಾ ನಿನಗೆ? ನನ್ನಣ್ಣ ಅದಕ್ಕೆ ಓಡಾಡ್ತಾ ಇದ್ದಾನೆ. ನಾನು ಎಲ್ಲರಿಗೂ ಫೋನ್ ಮಾಡ್ತಾ ಕೂತೆ.. ನಿಧಾನಕ್ಕೆ ಮಾತಾಡ್ತೀನಿ..’

ನನ್ನ ಗೆಳತಿ ಫೋನ್ ಕಟ್ ಮಾಡಿದ ಮೇಲೂ ನಾನು ಕೈಯಲ್ಲಿ ಫೋನ್ ಹಿಡಿದು ಕುಳಿತೇ ಇದ್ದೆ.

ಟಿ.ವಿ ಆನ್ ಆಗಿತ್ತು. ಫೋನ್ ಕರೆ ಸ್ವೀಕರಿಸಲು ಮ್ಯೂಟ್ ಮಾಡಿದ್ದೆ. ಮುಖ್ಯಮಂತ್ರಿಗಳ ಮಗನ ಅಂತಿಮ ಯಾತ್ರೆಯ ಅಂತಿಮ ದರ್ಶನದ ದೃಶ್ಯಾವಳಿಗಳು ಪ್ರಸಾರವಾಗುತಿತ್ತು. ಜನರ ನೂಕು ನುಗ್ಗಲು.. ಪೊಲೀಸರ ಹರಸಾಹಸ (ಜನಜಂಗುಳಿಯನ್ನು ನಿಯಂತ್ರಿಸಲು)… ದುಃಖತಪ್ತ ಸಿ.ಎಂ ಮುಖ, ಕೆಲವರೊಂದಿಗೆ ಕಟ್ಟೆಯೊಡೆದ ದುಃಖ.. ಯಾರ್ಯಾರು ಬಂದರು ಎಂದು ಲೆಕ್ಕವಿಡುತ್ತಿದ್ದ, ಹೆಸರಿಸುತ್ತಿದ್ದ ಕೆಳಬರಹ.. ಬಂದವರೆಲ್ಲರಿಗೂ ಸಿ.ಎಂ ಅವರನ್ನು ಸಂತೈಸುವ ಹಂಬಲ. ಅವರ ಕೈಕುಲಕಬೇಕು, ಬೆನ್ನು ಸವರಬೇಕು.. ದುಃಖವೆಷ್ಟೇ ಇದ್ದರೂ ತುಮುಲ, ಸಂಕಟ, ಸುಸ್ತು ಏನೇ ಇದ್ದರೂ ತೋರಿಸಿಕೊಳ್ಳಬಾರದು ಎಂಬ ಮನಸ್ಥಿತಿ ಸಿಎಂಗೆ. ಎಲ್ಲೆಲ್ಲೂ ಟಿ.ವಿ ಕ್ಯಾಮೆರಾಗಳು, ಜನ.. ಜನ.. ಜನ!

ಟಿ.ವಿ ಆರಿಸಿ ಪೇಪರ್ ಕೈಗೆತ್ತಿಕೊಂಡರೂ ಅದೇ ಸುದ್ದಿ. ಅಂತಿಮ ದರ್ಶನ ಯಾರ್ಯಾರು ಪಡೆದರು? ಯಾರು ಬರಲಿಲ್ಲ. ಅಂತ್ಯ ಸಂಸ್ಕಾರ ಎಲ್ಲಿ? ಹೇಗಾಯಿತು? ಏನೇನು ಮಾಡಿದರು? ಯಾರ ನೇತೃತ್ವದಲ್ಲಿ ನೆರವೇರಿತು, ಶಾಸ್ತ್ರಗಳೇನು? ಯಾವ ಮತದ ಶಾಸ್ತ್ರ? ಹಾಲು ಮೊದಲಾ? ತುಪ್ಪ ಮೊದಲಾ? ಸಾವನ್ನು ಗಂಭೀರವಾಗಿ, ಮೌನವಾಗಿ ಸ್ವೀಕರಿಸಲು ಏಕೆ ಸಾಧ್ಯವಿಲ್ಲ ನಮಗೆ? ನಮ್ಮ ಮಾಧ್ಯಮಕ್ಕೆ.. ಯಾವುದನ್ನು ಎಷ್ಟು ತೋರಿಸಬೇಕು ಎಂಬ ನಿಯಂತ್ರಣ ಏಕಿಲ್ಲ?

ದುಃಖಿಸುತ್ತಾರೆ.. ಕ್ಯಾಮೆರಾ ತಿರುಗಿದ ತಕ್ಷಣ.. ದುಃಖದ ಮೂಡ್ ಆಫ್ ಮಾಡಿಕೊಂಡು ಬೇರೆ ಹರಟೆಯಲ್ಲಿ ನಿರತರಾಗುತ್ತಾರೆ.

ಆಡಿಕೊಳ್ಳಬೇಕು ಎಂದು ನಿರ್ಧರಿಸಿದವರಿಗಂತೂ ಸುಗ್ಗಿ. ಸತ್ಯ ಸುಳ್ಳುಗಳ ವಿಮರ್ಶೆ ಮಾಡದೆ, ಸುದ್ದಿ ಹಬ್ಬಿಸಿ, ವಿವಾದ ಸೃಷ್ಟಿಸಿ ಇವರನ್ನು ಅವರು, ಅವರನ್ನು ಇವರು ಆಡಿಕೊಂಡು, ಬೈದುಕೊಂಡು ರಾಡಿ ಮಾಡಿ ಇಡುತ್ತಾರೆ ಜಾಲತಾಣಗಳನ್ನು.

ಹುಟ್ಟು, ಸಾವು ಮರೆಯಲ್ಲಿ ಇರಲಿ. ಬದುಕು ಸಾರ್ವಜನಿಕವಾಗಿರಲಿ, ಪಾರದರ್ಶಕವಾಗಿರಲಿ. ನಾಲ್ಕು ಜನ ಒಪ್ಪುವಂತೆ, ನಾಲ್ಕು ಜನಕ್ಕೆ ಹಿತವಾಗುವಂತೆ ಬದುಕಿದರೆ ಸಾಕು. ಅಂತಹ ಬದುಕನ್ನು ಪ್ರದರ್ಶನಕ್ಕೆ ಇಡಲಿ.. ಸಾವನ್ನು ವಿಜೃಂಭಿಸುವುದು ಸರಿಯಲ್ಲ.

ಸಾವು ನಿಗೂಢ. ಸತ್ತ ಮೇಲೆ ಏನು.. ಬಲ್ಲವರಾರು ಇಲ್ಲ. ದೆವ್ವ, ಪುನರ್ಜನ್ಮ, ಸ್ವರ್ಗ, ನರಕ.. ಎಲ್ಲ ನಮ್ಮ ಕಲ್ಪನೆ. ತುಂಬಾ ಆಸೆ ಇಟ್ಟುಕೊಂಡು ಸತ್ತರೆ, ಅಕಾಲಿಕವಾಗಿ ಸತ್ತರೆ ದೆವ್ವವಾಗುತ್ತಾರೆ.. ಬಂಧ ಮುಕ್ತರಾಗಿಲ್ಲದೆ ಹೋದರೆ ಪುನರ್ಜನ್ಮ.. ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಸ್ವರ್ಗ, ಕೆಟ್ಟ ಕೆಲಸ ಮಾಡಿದ್ದರೆ ನರಕ ಹೀಗೆ ನಂಬಿಕೆಗಳು.

ಜನ ಒಳ್ಳೆಯವರಾಗಿ ಬಾಳಲಿ.. ಸ್ವರ್ಗದ ಆಸೆಗೋ ಅಥವಾ ನರಕದ ಹೆದರಿಕೆಗೋ.. ನೆಟ್ಟಗೆ ಬೇರೆಯವರಿಗೆ ಅನ್ಯಾಯ ಮಾಡದೆ ಬಾಳಲಿ.. ಎಂದೇ ಸ್ವರ್ಗ, ನರಕ ಕಲ್ಪನೆಗಳು ಹುಟ್ಟಿಕೊಂಡಿರಬಹುದು..

ತಮ್ಮವರ ಹೆಣವನ್ನು ಸರಿಯಾಗಿ ಮಣ್ಣು ಮಾಡಲಿ ಅಥವಾ ದಹನ ಮಾಡದಿದ್ದರೆ ಖಾಯಿಲೆಗಳು ಹರಡಬಹುದು ಎಂದು ಕೆಲವು ವಿಧಿವಿಧಾನಗಳನ್ನು ರೂಪಿಸಿದ್ದಿರಬಹುದು. ಕಾಲಕ್ಕೆ ತಕ್ಕಂತೆ ಮಾರ್ಪಾಡಾಗದ ವಿಧಿವಿಧಾನಗಳೇ ಮೂಢನಂಬಿಕೆಯಲ್ಲವೇ?

ಸತ್ತವರು ದೆವ್ವವಾಗಬಾರದು ಎಂದು ಅಷ್ಟದಿಗ್ಬಂಧನ ಎಂದೇನೊ ಒಂದು ವಿಧಿ. ಅದನ್ನು ಮಾಡುವುದು ಮೂಢನಂಬಿಕೆಯಲ್ಲವೇ? ಯಾರಿಗಾದರೂ ಹಾನಿಯಾಗುವುದನ್ನು ಆಚರಿಸಿದರೆ ಮಾತ್ರ ಮೂಢನಂಬಿಕೆಯೇ? ದೊಡ್ಡವರು ಮಾಡಿದ್ದನ್ನು ಸಾಲ ಮಾಡಿಯಾದರೂ ಮಾಡುತ್ತಾರೆ ಅವರ ಹಿಂಬಾಲಕರು. ಮೂಢನಂಬಿಕೆ ವಿರೋಧಿಸಬೇಕಾಗಿರುವುದು ಈ ವಿಚಾರವಾಗಿ ಕೂಡ. ನಮ್ಮ ನಾಯಕರ, ಸಿನಿಮಾ ನಟರ, ರಾಜಕೀಯ ಮುಖಂಡರ ನಡವಳಿಕೆ, ಜೀವನ ವೈಯಕ್ತಿಕವಾಗಿ ಉಳಿಯಲಾರದು. ಅವರ ಸ್ಥಾನಕ್ಕೆ ಅವರು ತೆರೆಬೇಕಾದ ಬೆಲೆಯೂ ಅದೇ.. ವೈಯಕ್ತಿಕವಾಗಿ ಏನೂ ಉಳಿಯುವುದಿಲ್ಲ. ತೆರೆದ ಪುಸ್ತಕ ಅವರ ಬದುಕು. ಹಾಗಾಗಿ ಸದಾ ಎಚ್ಚರವಾಗಿ ಇರಬೇಕಾಗುತ್ತದೆ… ಮಾದರಿಯಾಗಿ ಇರಬೇಕಾಗುತ್ತದೆ. ಆ ಜವಾಬ್ದಾರಿಯಿಂದ ಕೊಡವಿಕೊಳ್ಳಲು ಸಾಧ್ಯವಿಲ್ಲ. ಅವರ ಮಾತಿನ, ನಡತೆಯ, ನಡವಳಿಕೆಯ, ನಂಬಿಕೆ (ಅಥವಾ ಮೂಢನಂಬಿಕೆ)ಯ ಪ್ರಭಾವದ ಬಗ್ಗೆ ಅವರು ಸದಾ ಎಚ್ಚರಿಕೆಯಿಂದ ಇರಬೇಕು.

ಇಲ್ಲಿ ನನ್ನ ಸ್ನೇಹಿತೆಯ ತಂದೆ, ತೊಂಬತ್ತೆರೆಡು ವರ್ಷದ ವಯೋವೃದ್ಧರು.. ಮೆಡಿಕಲ್ ರೀಸರ್ಚಿಗೆ ತಮ್ಮ ದೇಹ ದಾನ ಮಾಡಿದವರು ಮುಖ್ಯರಾಗುತ್ತಾರೆ. ಸೂರ್ಯನಿಗೆ ನಮಸ್ಕರಿಸಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಅಂದರಲ್ಲಾ.. ಆ ಮಾತು ಮುಖ್ಯವಾಗುತ್ತದೆ.

ನನಗೆ ತಿಳಿದ ಮಟ್ಟಿಗೆ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಾ, ನಾಲ್ಕು ಮಕ್ಕಳ ಕುಟುಂಬವನ್ನು ಪೋಷಿಸುತ್ತಾ ಸಾಧಾರಣ ಜೀವನ ನಡೆಸಿದವರು ಅವರು. ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಂಡಿದ್ದವರು. ಅವರ ಹಣೆಯಲ್ಲಿ ವಿಭೂತಿ ನೋಡದ ದಿನವಿರಲಿಲ್ಲ. ತೊಂಬತ್ತು ವರ್ಷ ಜೀವಿಸಿ, ಸಾವು ಬಂದ ಮೇಲೆ ಏನೇನು ಮಾಡಬೇಕು ಎಂದು ಬರೆದಿಟ್ಟು, ಆಪ್ತರಲ್ಲಿ ಹೇಳಿ ಸತ್ತರೆಂದರೆ ಅದೆಷ್ಟು ಧೀಮಂತರು ಆತ. ಕರ್ಮದ ಕೆಲಸವಿಲ್ಲ, ಅಸ್ಥಿ ಕದಡುವುದಿಲ್ಲ, ತಿಥಿಯಿಲ್ಲ, ವೈಕುಂಠ ಸಮಾರಾಧನೆಯಿಲ್ಲ.

ಕಣ್ಣಿಲ್ಲದವರಿಗೆ ಕಣ್ಣು, ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ದೇಹ, ಎರಡೋ ಮೂರೋ ಅನಾಥಾಶ್ರಮದ ಮಕ್ಕಳಿಗೆ ಒಂದು ದಿನದ ಊಟ, ಇಬ್ಬರು ಅರ್ಹ ವಿದ್ಯಾರ್ಥಿಗಳಿಗೆ (ಅನಾಥ ವಿದ್ಯಾರ್ಥಿಗಳು) ಫೀಸು, ಊಟ, ವಸತಿ ವ್ಯವಸ್ಥೆ (ದಾನಗಳ ಬದಲು).

ಲೇಖನ ಬರೆದು ಮುಗಿಸುವ ವೇಳೆಗೆ ಕತ್ತಲಾಗಿದೆ. ಆಕಾಶದಲ್ಲಿ ಸೂರ್ಯನಿಲ್ಲ.. ಹಾಗಾಗಿ ನಕ್ಷತ್ರಗಳಿಗೆ ನಮನ! ನಕ್ಷತ್ರಗಳೆಲ್ಲಾ ಸೂರ್ಯನಿಗಿಂತ ದೊಡ್ಡವಂತೆ!

Leave a Reply