ಜಯದ ಹೊಸ್ತಿಲಲ್ಲಿ ಟೀಂ ಇಂಡಿಯಾ, ಮತ್ತೆ ಆತಿಥೇಯರ ರಕ್ಷಣೆಗೆ ನಿಂತ ಮಳೆ

 

ಡಿಜಿಟಲ್ ಕನ್ನಡ ಟೀಮ್:

ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಆತಿಥೇಯ ವೆಸ್ಟ್ ಇಂಡೀಸ್ ತಂಡ ಮತ್ತೆ ತತ್ತರಿಸಿದೆ. ಪರಿಣಾಮ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆದರೆ, ಕಳೆದೆರಡು ದಿನಗಳ ಆಟಕ್ಕೆ ಅಡ್ಡಿಯಾದ ವರುಣ ವಿಂಡೀಸ್ ತಂಡದ ಸೋಲನ್ನು ಮುಂದೂಡುತ್ತಿದ್ದಾನೆ.

ನಿಜ, ಜಮೈಕಾದ ಸಬೀನಾ ಪಾರ್ಕ್ ನಲ್ಲಿ ನಡೆಯುತ್ತಿರುವ ದ್ವಿತೀಯ ಪಂದ್ಯದಲ್ಲಿ ಮಳೆಯಿಂದ ಅಡಚಣೆಯಾಗದಿದ್ದರೆ ಭಾರತ ಇಷ್ಟು ಹೊತ್ತಿಗಾಗಲೇ ಮತ್ತೊಂದು ಇನಿಂಗ್ಸ್ ಗೆಲುವಿನೊಂದಿಗೆ ಸಂಭ್ರಮಿಸುತ್ತಿತ್ತು. ಆದರೆ, ಪಂದ್ಯದ ಮೂರನೇ ದಿನದಾಟದ ಒಂದು ಅವಧಿ ಮತ್ತು ನಾಲ್ಕನೇ ದಿನದ ಬಹುತೇಕ ಆಟವನ್ನು ತಿಂದು ಹಾಕಿದ ಮಳೆ ವೆಸ್ಟ್ ಇಂಡೀಸ್ ಸೋಲಿನ ಕ್ಷಣವನ್ನು ಐದನೇ ದಿನಕ್ಕೆ ತಳ್ಳಿದೆ. ಅಂತಿಮ ದಿನವೂ ಮಳೆ ವಿಂಡೀಸ್ ರಕ್ಷಣೆಗೆ ನಿಲ್ಲುವುದೇ ಅಥವಾ ಆಟಕ್ಕೆ ಅವಕಾಶ ಮಾಡಿಕೊಡುವುದೇ ಎಂಬುದನ್ನು ಕಾದು ನೋಡಬೇಕು.

ಮೂರನೇ ದಿನದಾಟದಲ್ಲಿ ಮಳೆ ಅಡಚಣೆಯಿಂದ ಆಟ ನಿಂತಾಗ ಭಾರತ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ಗೆ 500 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಅದರೊಂದಿಗೆ ಭಾರತ ಪಡೆದ ಮುನ್ನಡೆ 304 ರನ್. ನಾಲ್ಕನೇ ದಿನ ಆತಿಥೇಯರು ಎರಡನೇ ಇನಿಂಗ್ಸ್ ಆರಂಭಿಸಿದರು. ದಿನದಾಟದಲ್ಲಿ ಆಡಿದ್ದು ಕೇವಲ 15.5 ಓವರ್ ಮಾತ್ರವಾದರೂ ಈ ಅವಧಿಯಲ್ಲಿ ಭಾರತ, ವಿಂಡೀಸ್ ಪಡೆಯನ್ನು 48 ರನ್ ಗಳಿಗೆ 4 ವಿಕೆಟ್ ಪಡೆದು ನಿಯಂತ್ರಿಸಿತು. ಅಂತಿಮ ದಿನ ಉಳಿದ ಆರು ವಿಕೆಟ್ ಕಬಳಿಸಬೇಕಿದೆ. ಮಳೆ ಅಡಚಣೆಯಾಗದಿದ್ದರೆ, ಇದು ಭಾರತಕ್ಕೆ ಕಠಿಣ ಸವಾಲೇನಲ್ಲ. ಹೀಗಾಗಿ ಭಾರತಕ್ಕೆ ಈಗ ವೆಸ್ಟ್ ಇಂಡೀಸ್ ತಂಡಕ್ಕಿಂತ ಮಳೆಯೇ ದೊಡ್ಡ ಸವಾಲಾಗಿದೆ.

ಎರಡನೇ ಇನಿಂಗ್ಸ್ ಆರಂಭಿಸಿರೋ ವಿಂಡೀಸ್ ಯಾವುದೇ ಹಂತದಲ್ಲೂ ಭಾರತದ ದಾಳಿಯನ್ನು ಎದುರಿಸುವಲ್ಲಿ ಸಫಲವಾಗಲಿಲ್ಲ. ಈ ಅವಧಿಯಲ್ಲಿ ಭಾರತದ ಪರ ಆರ್.ಅಶ್ವಿನ್ ಮತ್ತು ಉಮೇಶ್ ಯಾದವ್ ಹೊರತು ಪಡಿಸಿ ಕೇವಲ ಮೂವರು ಬೌಲರ್ ಗಳು ಬೌಲಿಂಗ್ ಮಾಡಿದ್ದು, ಶಮಿ 2, ಇಶಾಂತ್ ಶರ್ಮಾ ಹಾಗೂ ಅಮಿತ್ ಮಿಶ್ರಾ ತಲಾ 1 ವಿಕೆಟ್ ಪಡೆದಿದ್ದಾರೆ.

ವಿಂಡೀಸ್ ಪರ ಆರಂಭಿಕ ದಾಂಡಿಗರಾದ ಬ್ರಾಥ್ ವೈಟ್ 23, ಚಂದ್ರಿಕಾ 1, ಬ್ರಾವೊ 20, ಸ್ಯಾಮುಯಲ್ಸ್ 0 ಗೆ ನಿರ್ಗಮಿಸಿದ್ದಾರೆ. ಹೀಗಾಗಿ ಇನ್ನು 256 ರನ್ ಗಳ ಹಿನ್ನಡೆಯಲ್ಲಿರುವ ವೆಸ್ಟ್ ಇಂಡೀಸ್ ಅಂತಿಮ ದಿನ ಮಳೆಯ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್: (ನಾಲ್ಕನೇ ದಿನದಾಟ ಮುಕ್ತಾಯಕ್ಕೆ)

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ (196, 52.3 ಓವರ್)

ಬ್ರಾಥ್ ವೈಟ್ 1, ಚಂದ್ರಿಕಾ 5, ಡಾರೆನ್ ಬ್ರಾವೊ 0, ಮರ್ಲಾನ್ 37, ಬ್ಲಾಕ್ ವುಡ್ 62, ಚೇಸ್ 10, ಡೌರಿಚ್ 5, ಹೋಲ್ಡರ್ 13, ಬಿಶೂ 12, ಕಮಿನ್ಸ್ ಅಜೇಯ 24, ಗೆಬ್ರಿಯಲ್ 15, ಇತರೆ 12. (ಅಶ್ವಿನ್ 52ಕ್ಕೆ5, ಶಮಿ 23ಕ್ಕೆ 2, ಇಶಾಂತ್ 53ಕ್ಕೆ 2, ಮಿಶ್ರಾ 38ಕ್ಕೆ 1)

ಭಾರತ ಮೊದಲ ಇನಿಂಗ್ಸ್ (500ಕ್ಕೆ 9 ಡಿಕ್ಲೇರ್, 171.1 ಓವರ್)

ಕೆ.ಎಲ್.ರಾಹುಲ್ 158, ಧವನ್ 27, ಪೂಜಾರಾ 46, ಕೊಹ್ಲಿ 44, ರಹಾನೆ ಅಜೇಯ 108, ಅಶ್ವಿನ್ 3, ಸಾಹ 47, ಮಿಶ್ರಾ 21, ಶಮಿ 0, ಉಮೇಶ್ 19 ಇತರೆ 27. (ಚೇಸ್ 121ಕ್ಕೆ 5, ಗೆಬ್ರಿಯಲ್ 62ಕ್ಕೆ 1, ಬಿಶೂ 107ಕ್ಕೆ 1, ಹೋಲ್ಡರ್ 72ಕ್ಕೆ 1)

ವೆಸ್ಟ್ ಇಂಡೀಸ್ ದ್ವಿತೀಯ ಇನಿಂಗ್ಸ್ (48ಕ್ಕೆ 4, 15.5 ಓವರ್)

ಕ್ರೇಗ್ ಬ್ರಾಥ್ ವೈಟ್ 23, ಚಂದ್ರಿಕಾ 1, ಬ್ರಾವೊ 20, ಸ್ಯಾಮುಯೆಲ್ಸ್ 0, ಬ್ಲಾಕ್ ವುಡ್ ಅಜೇಯ 3, ಇತರೆ 1 (ಶಮಿ 25ಕ್ಕೆ 2, ಅಮಿತ್ ಮಿಶ್ರಾ 4ಕ್ಕೆ 1, ಇಶಾಂತ್ 19ಕ್ಕೆ 1)

Leave a Reply