ವೆಂಕಟಸುಬ್ಬಯ್ಯನವರಿಗೆ ಪತ್ನಿ ವಿಯೋಗ, ಒಂದು ಅಕ್ಷರ ನೆನಕೆ

ಡಿಜಿಟಲ್ ಕನ್ನಡ ಟೀಮ್:

ಒಬ್ಬ ವ್ಯಕ್ತಿಯ ಸಾಧನೆ ಎಂದ ತಕ್ಷಣವೇ ಅದಕ್ಕೆ ಸಹಾಯಕವಾಗಿ ನಿಂತ ಕುಟುಂಬದ ಪರಿಗಣನೆ ಅಂತರ್ಗತವಾಗಿಯೇ ಇದ್ದಿರುತ್ತದೆ. ಎಲ್ಲೋ ಕೆಲ ಅಪವಾದಗಳಿದ್ದಿರಬಹುದಷ್ಟೆ.

ಇದರ ಪ್ರಸ್ತಾಪವೇಕೆಂದರೆ, ಮಂಗಳವಾರ ಜಿ. ವಿ. ಲಕ್ಷ್ಮೀ (93) ನಿಧನರಾದರು. ನಮ್ಮ ನಡುವಿನ ಕನ್ನಡ ವಿದ್ವಾಂಸ, ಶತಾಯುಷಿ ಜಿ. ವೆಂಕಟಸುಬ್ಬಯ್ಯನವರ ಪತ್ನಿ ಇವರು. ಎಂಟು ವರ್ಷಗಳ ಹಿಂದೆ ಬಿದ್ದು ಪೆಟ್ಟಾದ ನಂತರ ಸ್ವತಂತ್ರವಾಗಿ ನಡೆದಾಡುವುದಕ್ಕೆ ಆಗುತ್ತಿರಲಿಲ್ಲ. ಇವರನ್ನು ನಿದ್ರೆಯಲ್ಲಿದ್ದಾಗಲೇ ಕರೆದೊಯ್ದಿದೆ ಸಾವು.

ಸಾರ್ವಜನಿಕ ಜೀವನ ಹಾಗೂ ಸಾಹಿತ್ಯದಲ್ಲಿ ತಾವೇನೇ ಸಾಧನೆ ಮಾಡಿದ್ದರೂ ಅದಕ್ಕೆ ಪತ್ನಿಯ ನಿರಂತರ ಸಹಕಾರ ಕಾರಣ ಎಂದು ವೆಂಕಟಸುಬ್ಬಯ್ಯನವರು ನೆನೆಯುತ್ತಾರೆ. ಇಷ್ಟಕ್ಕೂ ಇವರದ್ದು ಸುದೀರ್ಘ 80 ವರ್ಷಗಳ ದಾಂಪತ್ಯ. ಹಿಂದೆಲ್ಲ ಚಿಕ್ಕಂದಿನಲ್ಲೇ ಮದುವೆ ಆಗಿಬಿಡುತ್ತಿತ್ತಲ್ಲ… ಅಂತೆಯೇ ಲಕ್ಷ್ಮೀ ಅವರು 11 ವರ್ಷದವರಿದ್ದಾಗಲೇ ಮದುವೆ ಆಯಿತು.

ವೆಂಕಟಸುಬ್ಬಯ್ಯನವರ ಮನೆಯ ಸಂಪರ್ಕ ಹೊಂದಿದ್ದವರು ಲಕ್ಷ್ಮೀ ಅವರ ಆತಿಥ್ಯವನ್ನು ನೆನೆಯುತ್ತಾರೆ. ಮುಖ್ಯವಾಗಿ ಇವರು ಅತ್ಯುತ್ತಮ ಓದುಗರಾಗಿದ್ದರು. ಹೀಗಾಗಿ ಪತಿಯೊಂದಿಗೆ ಸಾಹಿತ್ಯಿಕ ವಿಚಾರಗಳ ಚರ್ಚೆಯಲ್ಲೂ ತೊಡಗಿಕೊಳ್ಳುತ್ತಿದ್ದರು.

1955-60ರ ಸಮಯದಲ್ಲಿ ವಿಶ್ವೇಶ್ವರಪುರಂನಲ್ಲಿ ಪ್ರಾರಂಭಗೊಂಡ ವನಿತಾ ಸೇವಾ ಸಮಾಜದ ಸ್ಥಾಪಕ ಕಾರ್ಯದರ್ಶಿ ಆಗಿದ್ದರು. ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡು ನಡೆಯುತ್ತಿದ್ದ ಹಲವು ಚಟುವಟಿಕೆಗಳ ವೇದಿಕೆಯಾಗಿದ್ದ ಇದನ್ನು ಜಯಚಾಮರಾಜ ಒಡೆಯರ್ ಉದ್ಘಾಟಿಸಿದ್ದರು.

ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು, 5 ಮೊಮ್ಮಕ್ಕಳು ಮತ್ತು 5 ಮರಿ ಮೊಮ್ಮಕ್ಕಳನ್ನು ಅಗಲಿದೆ ಈ ಜೀವ.

Leave a Reply