ಕುಡಿದೋಡಿಸಿದರೆ ದಂಡ ಹತ್ತು ಸಾವಿರವಾ ಅಂತ ಹುಬ್ಬೇರಿಸೋ ಬದಲು ಪರಿಹಾರ 8ಪಟ್ಟು ಹೆಚ್ಚಿರೋದು ನೋಡ್ರಿ, ಒಳ್ಳೆ ಉದ್ದೇಶದ ಸ್ಟ್ರಿಕ್ಟ್ ಮೇಷ್ಟ್ರಂತೆ ಕಾಣ್ತಿದಾರೆ ನಿತಿನ್ ಗಡ್ಕರಿ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸಚಿವ ಸಂಪುಟವು ‘ಮೋಟಾರ್ ವೆಹಿಕಲ್ (ತಿದ್ದುಪಡಿ)ವಿಧೇಯಕ 2016’ನ್ನು ಅಂಗೀಕರಿಸಿದೆ. ಇದು ಕಾಯ್ದೆಯಾಗಿ ಬರುತ್ತಲೇ ನಿಮ್ಮ ಜೀವನವನ್ನು ಹೇಗೆಲ್ಲ ಪ್ರಭಾವಿಸಲಿದೆ ಗೊತ್ತೇ?

ನೀವು ಹೆಲ್ಮೆಟ್ ಇಲ್ಲದೇ, ಡ್ರಿಂಕ್ ಅಂಡ್ ಡ್ರೈವ್ ಮಾಡುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವ ಮುನ್ನ ನಿಮ್ಮ ಜೇಬಿನ ಬಗ್ಗೆ ಯೋಚಿಸಿ. ಯಾಕೆ ಅಂತೀರಾ? ಕೇಂದ್ರ ಸರ್ಕಾರ ಈಗ ಅನುಮತಿ ನೀಡಿರುವ ಮೊಟಾರ್ ಮಸೂದೆ (ತಿದ್ದುಪಡಿ) 2016 ರಲ್ಲಿ ನಿಗದಿಪಡಿಸಿರೋ ದಂಡದ ಪ್ರಮಾಣ ನೋಡಿದ್ರೆ ನೀವು ಗಾಬರಿಯಾಗೋದು ಖಂಡಿತಾ. ಕಾರಣ, ಇನ್ಮೇಲೆ ಹೆಲ್ಮೆಟ್ ಇಲ್ಲ ಅಂದ್ರೆ ₹1 ಸಾವಿರ, ಕುಡಿದು ಗಾಡಿ ಚಲಾಯಿಸಿದರೆ  ₹ 10 ಸಾವಿರ ದಂಡ ಫಿಕ್ಸ್.

ಕೇವಲ ಕುಡಿದು ಗಾಡಿ ಓಡಿಸುವವರಿಗೆ ಹಾಗೂ ಹೆಲ್ಮೆಟ್ ಧರಿಸದವರಿಗೆ ಮಾತ್ರ ಭಾರಿ ದಂಡದ ಬರೆ ಎಂದು ತಿಳ್ಕೋಬೇಡಿ. ರಸ್ತೆ ಅಪಘಾತದ ಸಂತ್ರಸ್ತರಿಗೆ ಕೊಡುವ ಪರಿಹಾರವನ್ನೂಗಣನೀಯವಾಗಿ ಏರಿಸಿದೆ ಸರ್ಕಾರ. ಚಲ್ತಾ ಹೈ ಎಂಬಂತೆ ವೀಲಿಂಗ್ ಸರ್ಕಸ್, ಅಡ್ಡಾದಿಡ್ಡಿ ಚಾಲನೆಗಳ ಮೂಲಕ ರಸ್ತೆಯಲ್ಲಿರುವ ಇತರರ ಜೀವಕ್ಕೆ, ನೆಮ್ಮದಿಗೆ ಕುತ್ತು ತರುತ್ತಿರುವವರನ್ನು ಹತ್ತಿಕ್ಕುವ ಹಲವು ಉಪಕ್ರಮಗಳು ಈ ವಿಧೇಯಕದಲ್ಲಿವೆ.

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಇಷ್ಟು ದಿನ ಪರಿಹಾರದ ಮೊತ್ತ ಇದ್ದದ್ದು ₹25 ಸಾವಿರ. ಈಗ ಇದರ ಪ್ರಮಾಣವನ್ನು 8 ಪಟ್ಟು ಹೆಚ್ಚಿಸಿದ್ದು, ಕನಿಷ್ಠ ₹ 2 ಲಕ್ಷ ನೀಡಬೇಕು. ಅಷ್ಟೇ ಅಲ್ಲ ಇದು ₹ 10 ಲಕ್ಷದವರೆಗೂ ಹೆಚ್ಚುವ ಅವಕಾಶವಿದೆ.

ಉಳಿದಂತೆ ಇತರೆ ನಿಯಮ ಉಲ್ಲಂಘನೆಗೆ ವಿಧಿಸಲಾಗಿರುವ ದಂಡ ಹಾಗೂ ಶಿಕ್ಷೆ ಪ್ರಮಾಣ ಹೀಗಿವೆ…

  • ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವವರಿಗೆ ದಂಡದ ಪ್ರಮಾಣ ಹತ್ತು ಪಟ್ಟು ಹೆಚ್ಚಾಗಿದೆ. ಅಂದರೆ, ₹500 ರಿಂದ ₹ 5000ಕ್ಕೆ ಹೆಚ್ಚಿದೆ.
  • ಹೆಲ್ಮೆಟ್ ಹಾಕದೇ ಕದ್ದು ಮುಚ್ಚಿ ಓಡಾಡುವವರಂತೂ ಇನ್ಮುಂದೆ ಹುಷಾರಾಗಿರಬೇಕು. ಕಾರಣ, ಹೆಲ್ಮೆಟ್ ಹಾಕದೇ ಗಾಡಿ ಓಡಿಸಿದರೆ, ₹1 ಸಾವಿರ ದಂಡ ಹಾಗೂ 3 ತಿಂಗಳ ಕಾಲ ಲೈಸೆನ್ಸ್ ರದ್ದು. ಲೈಸೆನ್ಸ್ ರದ್ದಾದ ನಂತರ ಗಾಡಿ ಓಡಿಸಿ ಸಿಕ್ಕಾಕೊಂಡ್ರೆ ಅದಕ್ಕೂ ದಂಡ. ಈ ಹಿಂದೆ ಇದಕ್ಕೆ ದಂಡ ಪ್ರಮಾಣ ಇದ್ದದ್ದು ಕೇವಲ ₹100.
  • ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಲ್ಲ ಅಂದ್ರೆ ‍₹1 ಸಾವಿರ ದಂಡ ಕಟ್ಟಬೇಕು. ಈವರೆಗೂ ಇದರ ಪ್ರಮಾಣ ₹100 ಇತ್ತು.
  • ಸಣ್ಣ ಮಕ್ಕಳಿಗೆ ಗಾಡಿ ಕೊಟ್ಟು ಕಳುಹಿಸುತ್ತಿದ್ದ ಪೋಷಕರೂ ಈ ಮಸೂದೆಯಿಂದ ಎಚ್ಚೆತ್ತುಕೊಳ್ಳಬೇಕು. ಕಾರಣ ಅಪ್ರಾಪ್ತ ಮಕ್ಕಳು ಗಾಡಿ ಓಡಿಸಿ ಅಪಘಾತ ಮಾಡಿದರೆ, ಆ ಪ್ರಕರಣದಲ್ಲಿ ತಪ್ಪಿತಸ್ಥರಾಗುವುದು ಮಕ್ಕಳಲ್ಲ, ಗಾಡಿಯ ಮಾಲೀಕರು ಅಥವಾ ಪೋಷಕರು. ಈ ಪ್ರಕರಣದಲ್ಲಿ ₹ 25 ಸಾವಿರ ದಂಡವಷ್ಟೇ ಅಲ್ಲ, 3 ವರ್ಷ ಜೈಲು ಶಿಕ್ಷೆಯೂ ಇದೆ.
  • ವೇಗದ ಚಾಲನೆಗಾಗಿ ಸಣ್ಣ ವಾಹನಗಳಿಗಿದ್ದ ದಂಡವನ್ನು ₹400 ರಿಂದ ₹1 ಸಾವಿರಕ್ಕೆ, ಮಧ್ಯಮ ಗಾತ್ರದ ವಾಹನಗಳಿಗೆ ₹2 ಸಾವಿರಕ್ಕೆ ಹೆಚ್ಚಳ.
  • ಪರವಾನಿಗೆ ರದ್ದಾದ ನಂತರ ಗಾಡಿ ಓಡಿಸಿದರೆ, ₹ 10 ಸಾವಿರ.
  • ವೀಲಿಂಗ್ ಸೇರಿದಂತೆ ಅಪಾಯಕಾರಿಯಾಗಿ ವಾಹನ ಚಲಾಯಿಸಿದರೆ ₹ 5 ಸಾವಿರ.
  • ಅನುಮತಿ ಇಲ್ಲದ ವಾಹನ ಚಾಲನೆಗೆ ₹ 10 ಸಾವಿರ.
  • ಅತಿಯಾದ ಸರಕು ಸಾಗಣೆಗೆ ಕನಿಷ್ಟ ₹ 20 ಸಾವಿರ, ನಂತರ ಪ್ರತಿ ಟನ್ನಿಗೆ 2 ಸಾವಿರ ಹೆಚ್ಚಾಗುತ್ತದೆ. ಇನ್ನು ಅತಿಯಾದ ಪ್ರಯಾಣಿಕರನ್ನು ಹೊಂದಿದ್ದರೆ ಪ್ರತಿ ಪ್ರಯಾಣಿಕನಿಗೆ ₹ 1 ಸಾವಿರ.
  • ತುರ್ತು ವಾಹನಗಳಿಗೆ ಹಾದಿ ಮಾಡಿಕೊಡದಿದ್ದರೆ ₹ 10 ಸಾವಿರ ದಂಡ ಕಟ್ಟಬೇಕು.

ಈಗ ನೀವೇ ಯೋಚಿಸಿ. ಸಂಚಾರಿ ನಿಯಮವನ್ನು ಪಾಲಿಸುತ್ತೀರೋ ಅಥವಾ ಉಲ್ಲಂಘಿಸಿ ಭಾರಿ ಮೊತ್ತದ ದಂಡ ತೆರುತ್ತೀರೋ…

ಯಾಕಪ್ಪಾ ಸರ್ಕಾರ ಈ ಪರಿ ದಂಡ ಹೆಚ್ಚಿಸಿ, ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದೆ ಅಂತಾ ಯೋಚಿಸ್ತಿದ್ದೀರಾ… ಕಾರಣ ಇದೆ. ಅದೇನಂದ್ರೆ, ಪ್ರತಿ ವರ್ಷ ಸಾವಿರಾರು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಅದರಿಂದ ಪ್ರತಿ ವರ್ಷ ಮೃತರಾಗುತ್ತಿರುವವರ ಸರಾಸರಿ ಪ್ರಮಾಣ 1.5 ಲಕ್ಷ. ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ಶೇ.50 ರಷ್ಟು ರಸ್ತೆ ಅಪಘಾತ ಪ್ರಮಾಣವನ್ನು ತಡೆಯಲು ಸರ್ಕಾರ ಪಣ ತೊಟ್ಟಿದೆ. ಹೀಗಾಗಿ ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ದಂಡವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸುವ ಮಾರ್ಗವನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ.

ಪ್ರತಿವರ್ಷ ರಸ್ತೆಯಲ್ಲಿ ಈ ಪರಿ ಜನ ಸಾಯುತ್ತಿರುವ ಬಗ್ಗೆ ಕೆಲತಿಂಗಳ ಹಿಂದಷ್ಟೇ ಅಂಕಿಅಂಶ ಬಿಡುಗಡೆ ಮಾಡಿದ್ದ ರಸ್ತೆ ಮತ್ತು ಸಾಗಾಣಿಕೆ ಸಚಿವ ನಿತಿನ್ ಗಡ್ಕರಿ, ಇದನ್ನು ನಿಯಂತ್ರಿಸಲೇಬೇಕಾಗಿದೆ ಎಂದಿದ್ದರು. ಈ ಮಸೂದೆಯಲ್ಲಿ ಅಂಥ ಇಚ್ಛಾಶಕ್ತಿ ಗೊತ್ತಾಗುತ್ತಿದೆ. ಈ ಪ್ರಮಾಣದಲ್ಲಿ ಜನ ಸಾಯುತ್ತಿರುವುದು ಯಾವುದೋ ಉಗ್ರಕೃತ್ಯಗಳಿಂದಲ್ಲ, ಅಪಘಾತಗಳಿಂದ ಎಂದು ಸಚಿವರು ಸೋಜಿಗಪಟ್ಟಿದ್ದರ ವಿವರಗಳನ್ನು ಇಲ್ಲಿ ಓದಿಕೊಳ್ಳಬಹುದು.

ಈ ಮಸೂದೆ ತಿದ್ದುಪಡಿಯಲ್ಲಿ ಕೇವಲ ದಂಡದ ಮೇಲಷ್ಟೇ ಗಮನ ಹರಿಸಿಲ್ಲ… ರಸ್ತೆ ಸುರಕ್ಷೆ, ಗ್ರಾಮೀಣ ಸಂಚಾರಿ ವ್ಯವಸ್ಥೆ ಮತ್ತು ಸಾರ್ವಜನಿಕ ಸಂಚಾರ ಬಲಪಡಿಸುವಿಕೆ, ಆನ್ ಲೈನ್ ಸರ್ವೀಸ್, ಪ್ರತಿ ಭಾಗಕ್ಕೂ ಸಂಚಾರ ವ್ಯವಸ್ಥೆ ತಲುಪುವಿಕೆಯ ಅಂಶಗಳಿಗೆ ಒತ್ತು ನೀಡಿದೆ. ಹೀಗಾಗಿ 28 ಹೊಸ ವರ್ಗಗಳನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ.

Leave a Reply