ಲೆಫ್ಟಿನಂಟ್ ಗವರ್ನರ್ ರಾಜ್ಯ ಸರ್ಕಾರದ ಮಾತು ಕೇಳಬೇಕಿಲ್ಲ ಅಂತು ದಿಲ್ಲಿ ಹೈಕೋರ್ಟ್, ಎಎಪಿಗೆ ಮುಖಭಂಗ

ಡಿಜಿಟಲ್ ಕನ್ನಡ ಟೀಮ್:

ದೆಹಲಿ ಸಚಿವ ಸಂಪುಟದ ಸಲಹೆ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ತನ್ನ ನಿರ್ಧಾರಗಳನ್ನು ಕೈಗೊಳ್ಳಬೇಕು.. ಎಂಬ ಆಮ್ ಆದ್ಮಿ ಪಕ್ಷದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಇದರೊಂದಿಗೆ ಕೇಜ್ರಿವಾಲ್ ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಆಮ್ ಆದ್ಮಿ ಪಕ್ಷದ ಈ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.  ‘ದೆಹಲಿ ಕೇವಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು. ಹೀಗಾಗಿ ಅಲ್ಲಿ ಲೆಫ್ಟಿನೆಂಟ್ ಗವರ್ನರ್ ರಾಜ್ಯ ಸಚಿವ ಸಂಪುಟದ ಸಲಹೆ ಮೇರೆಗೆ ಕಾರ್ಯ ನಿರ್ವಹಿಸಲಾಗದು’ ಎಂದು ವಾದಿಸಿತ್ತು.

ಈ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗುರುವಾರ ಹೇಳಿದಿಷ್ಟು:

‘ಲೆಫ್ಟಿನೆಂಟ್ ಗವರ್ನರ್ ದೇಶದ ರಾಜಧಾನಿ ಪ್ರದೇಶದ ಆಡಳಿತ ಮುಖ್ಯಸ್ಥ. ಹೀಗಾಗಿ ರಾಜ್ಯ ಸಚಿವ ಸಂಪುಟದ ಸಲಹೆ ಮೇರೆಗೆ ಅವರು ಕಾರ್ಯನಿರ್ವಹಿಸಬೇಕು ಎಂಬ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ದೆಹಲಿಯ ಸಚಿವ ಸಂಪುಟವೇ ಲೆಫ್ಟಿನೆಂಟ್ ಗವರನರ್ ಅವರ ಸಲಹೆ ಪಡೆಯದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.’

ಎಎಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರಿಗಳ ನೇಮಕ ಮತ್ತು ಪೊಲೀಸ್ ಅಧಿಕಾರಿಗಳ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೂ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದರಿಂದ ಬೇಸತ್ತಿದ್ದ ಎಎಪಿ, ಪ್ರಜಾಪ್ರಭುತ್ವದಲ್ಲಿ ಎರಡು ಆಡಳಿತ ಅಧಿಕಾರಗಳು ಇರಲು ಸಾಧ್ಯವಿಲ್ಲ ಎಂಬ ವಾದವನ್ನಿಟ್ಟುಕೊಂಡು ಒಟ್ಟು ಒಂಬತ್ತು ಅರ್ಜಿಗಳನ್ನು ಸಲ್ಲಿಸಿತ್ತು. ಆದರೆ, ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿದೆ ಎಂಬ ಕೇಂದ್ರ ಸರ್ಕಾರ ವಾದ ಈ ಜಿದ್ದಾಜಿದ್ದಿನಲ್ಲಿ ಮೇಲುಗೈ ಸಾಧಿಸಿದೆ.

ಹೈಕೋರ್ಟ್ ನ ಈ ನಿರ್ಧಾರದಿಂದ ದೆಹಲಿ ಮುಖ್ಯಮಂತ್ರಿ ಕಚೇರಿಯ ಅಧಿಕಾರವನ್ನು ಹೆಚ್ಚಿಸಿ, ಲೆಫ್ಟಿನೆಂಟ್ ಗವರ್ನರ್ ಸಚಿವ ಸಂಪುಟದ ಸಲಹೆ ಮೇರೆಗೆ ನಡೆದುಕೊಳ್ಳುವಂತೆ ಮಾಡುವ ಕೇಜ್ರಿವಾಲರ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕೋರ್ಟ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ, ಈ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದೆ.

ಆಪ್ ನ ಹಳೆ ಸದಸ್ಯರು ಸಹ ಈ ವಿಷಯದಲ್ಲಿ ಕೇಜ್ರಿವಾಲರನ್ನೇ ದೂಷಿಸುತ್ತಿರುವುದು ಗಮನಾರ್ಹ. ಈ ಹಿಂದೆ ಆಪ್ ನಲ್ಲಿದ್ದ ಯೋಗೇಂದ್ರ ಯಾದವ್ ‘ಆಡಳಿತದ ವ್ಯಾಕರಣ ಗೊತ್ತಿಲ್ಲದೇ ಆಡಳಿತ ನಡೆಸಲು ಹೋದಾಗ ಹೀಗಾಗುತ್ತದೆ’ ಎಂದು ಟ್ವಿಟ್ಟರಿನಲ್ಲಿ ಕುಟುಕಿದ್ದಾರೆ.

Leave a Reply