ಸಾರ್ಕ್ ಸಭೆಯಲ್ಲಿ ರಾಜನಾಥ ಸಿಂಗ್ ಮಾತುಗಳನ್ನು ವರದಿಯಾಗದಂತೆ ತಡೆದ ಪಾಕಿಸ್ತಾನ, ಇನ್ನಾದರೂ ಭಾಯಿಜಾನ್ ಗುಂಗಿಂದ ಹೊರಬಂದು ಬಿರಿಯಾನಿ ಬಟ್ಟಲನ್ನು ಪಕ್ಕ ಇರಿಸೀತಾ ಭಾರತ?

ಡಿಜಿಟಲ್ ಕನ್ನಡ ಟೀಮ್:

ಪ್ರಜಾಪ್ರಭುತ್ವ ರಾಷ್ಟ್ರದ ಗೃಹ ಸಚಿವರೊಬ್ಬರ ಮಾತು ಬಿತ್ತರವಾಗದಂತೆ ತಡೆದು ಅಸಹಿಷ್ಣುತೆ ಮೆರೆದಿದೆ ಪಾಕಿಸ್ತಾನ ಸರ್ಕಾರ. ಭಾರತ ಮಾತ್ರ ಪ್ರತಿವರ್ಷ ಒಂದಿಲ್ಲೊಂದು ವೇದಿಕೆಗೆ ಪಾಕಿಸ್ತಾನಿ ಪ್ರಮುಖರನ್ನು ಆಹ್ವಾನಿಸುತ್ತದೆ ಹಾಗೂ ಅವರ ಭಾರತ ವಿರೋಧಿ ಮಾತುಗಳಿಗೆ ಕಿವಿಯಾಗುತ್ತ ಸಹಿಷ್ಣುತೆಯ ಸರ್ಟಿಫಿಕೇಟ್ ಪಡೆದುಕೊಳ್ಳುತ್ತ ಬಂದಿದೆ. ಮುಖ್ಯವಾಗಿ, ಭಾರತದ ರಾಷ್ಟ್ರೀಯ ಮಾಧ್ಯಮಗಳು ಸೃಷ್ಟಿಸುವ ವೇದಿಕೆಗಳಲ್ಲಿ ಭಾರತದ ವಿರುದ್ಧ ಯುದ್ಧ ಸಾರಿದ, ಸ್ವಂತ ದೇಶದಲ್ಲೂ ಪ್ರಜಾಪ್ರಭುತ್ವ ಮೌಲ್ಯಕ್ಕೇನೂ ಬದ್ಧನಾಗಿರದ ಪರ್ವೇಜ್ ಮುಶರಫ್ ಅಂಥವರು ಬಂದು ಉಪದೇಶ ನೀಡಿ ಹೋಗುತ್ತಾರೆ.

ವ್ಯಂಗ್ಯ ನೋಡಿ, ಸಾರ್ಕ್ ಸಭೆಯಲ್ಲಿ ಭಾಗವಹಿಸಿದ ಭಾರತದ ಗೃಹ ಸಚಿವ ರಾಜನಾಥ ಸಿಂಗ್ ಅವರ ಮಾತುಗಳು ಸುದ್ದಿಯೇ ಆಗದಂತೆ ಸೆನ್ಸಾರ್ ಮಾಡಿದೆ ಆತಿಥೇಯ ದೇಶ ಪಾಕಿಸ್ತಾನ. ‘ಅಂಥದ್ದೇನೂ ಇಲ್ಲ. ಉದ್ಘಾಟನಾ ಭಾಷಣವನ್ನು ಮಾತ್ರ ಬಿತ್ತರಿಸಿ, ಉಳಿದಿದ್ದನ್ನು ಆಂತರಿಕವಾಗಿಡುವ ಪದ್ಧತಿ ಸಾರ್ಕ್ ಸಭೆಯದ್ದು’ ಅಂತ ಸರ್ಕಾರಿ ಮೂಲಗಳು ಹೇಳುತ್ತಿವೆಯಾದರೂ,  ಗೃಹ ಸಚಿವರು ಭೋಜನವನ್ನೂ ರದ್ದುಪಡಿಸಿಕೊಂಡು ಬಂದಿರುವುದು ಬೇರೆಯದೇ ಕತೆಯನ್ನು ಹೇಳುತ್ತಿದೆ.

ಪಾಕಿಸ್ತಾನಿ ಉಗ್ರರು ಬೆದರಿಕೆ ನೀಡಿದ್ದನ್ನು ಲೆಕ್ಕಿಸದೇ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಇಸ್ಲಾಮಾಬಾದಿನಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಮಾತುಕತೆಯಲ್ಲೇನೋ ಭಾಗವಹಿಸಿದರು. ಆದರೆ ಸಾರ್ಕ್ ಸಭೆಯಲ್ಲಿ ಇವರು ಆಡಿದ ಮಾತುಗಳು ಬಿತ್ತರವಾಗದಂತೆ ತಡೆದು ಪಾಕಿಸ್ತಾನ ತನ್ನ ಕುತ್ಸಿತ ಬುದ್ಧಿಯನ್ನು ಮೆರೆದಿದೆ.

ರಾಜನಾಥ ಸಿಂಗ್ ಅವರ ಭಾಷಣ ನಡೆಯುತ್ತಿದ್ದ ಸಭೆಗೆ ಪಾಕಿಸ್ತಾನ ಮತ್ತು ಇತರ ಮಾಧ್ಯಮಗಳಿಗೆ ಪ್ರವೇಶವನ್ನೇ ನೀಡಲಿಲ್ಲ. ಪಾಕಿಸ್ತಾನದ ಸರ್ಕಾರಿ ಮಾಧ್ಯಮಕ್ಕೆ ಪ್ರವೇಶ ಇತ್ತಾದರೂ ಅವು ರಾಜನಾಥ ಸಿಂಗ್ ಮಾತನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ವರದಿ ಮಾಡಿವೆ.

ಸಭೆಯ ನಂತರ ಆಯೋಜನೆಯಾಗಿದ್ದ ಭೋಜನ ವ್ಯವಸ್ಥೆಯಲ್ಲಿ ಸಹ ರಾಜನಾಥ ಸಿಂಗ್ ಅವರಿಗೆ ಮುಖಾಮುಖಿಯಾಗುವ ಅವಕಾಶವನ್ನೂ ಪಾಕಿಸ್ತಾನ ತಪ್ಪಿಸಿತು. ಪಾಕ್ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಹಾಜರಾಗಲೇ ಇಲ್ಲ.

ಆದರೆ ಸಭೆಯಲ್ಲಿ ಮಾತ್ರ ರಾಜನಾಥ ಸಿಂಗ್ ಪಾಕಿಸ್ತಾನದ ವಿರುದ್ಧ ಮುಲಾಜಿಲ್ಲದೇ ಮಾತನಾಡಿದರು.

‘ಭಯೋತ್ಪಾದನೆಯನ್ನು ಖಂಡಿಸುತ್ತೇವೆ ಎಂಬ ಬರಿ ಮಾತುಗಳಿಂದ ಪ್ರಯೋಜನವಿಲ್ಲ. ಹೀಗೆ ಹೇಳುತ್ತಲೇ ಉಗ್ರವಾದಿಗಳನ್ನು ಹುತಾತ್ಮರಂತೆ ಚಿತ್ರಿಸುತ್ತಿರುವುದನ್ನು ಪ್ರಶ್ನಿಸಬೇಕು. ಹೀಗೆ ಉಗ್ರವಾದಿಗಳಿಗೆ ಪ್ರೋತ್ಸಾಹ ನೀಡುತ್ತಿರುವವ ದೇಶವನ್ನು ಏಕಾಂಗಿಯಾಗಿಸಬೇಕು. ಭಯೋತ್ಪಾದನೆಯಲ್ಲಿ ಒಳ್ಳೇ ಭಯೋತ್ಪಾದನೆ- ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ’ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು ಗೃಹ ಸಚಿವ ರಾಜನಾಥ ಸಿಂಗ್.

ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರ ಬುರ್ಹನ್ ವಾನಿಯನ್ನು ಪಾಕಿಸ್ತಾನ ಬಹಿರಂಗವಾಗಿಯೇ ಬೆಂಬಲಿಸಿತ್ತಲ್ಲದೇ, ಅಲ್ಲಿನ ಉಗ್ರವಾದಿ ಸಂಘಟನೆಗಳು ರಾಜನಾಥ ಸಿಂಗ್ ಭೇಟಿ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು.

ಗುರುವಾರ ಸಭೆ ನಡೆಯುತ್ತಿದ್ದ ಹೊಟೇಲ್ ನಲ್ಲಿ ಉಭಯ ದೇಶಗಳ ನಾಯಕರು ಪರಸ್ಪರ ಕೈ ಸಹ ಕುಲುಕದೇ ಸಭೆಗೆ ಹೋದರು. ಆದರೆ ಭಾಷಣದ ಆರಂಭದಲ್ಲಿ ಮಾತ್ರ ರಾಜನಾಥ ಸಿಂಗ್ ಶಿಷ್ಟಾಚಾರ ಮೀರದೇ, ಸಾರ್ಕ್ ಸಮಾವೇಶವನ್ನು ಆಯೋಜಿಸಿ ತಮ್ಮ ನಿಯೋಗಕ್ಕೆ ಆತಿಥ್ಯ ನೀಡಿರುವ ಪಾಕಿಸ್ತಾನಕ್ಕೆ ಧನ್ಯವಾದ ಹೇಳಿದರು.

Leave a Reply