ಗುಡ್ ನ್ಯೂಸ್: ಉಗ್ರರ ವಿರುದ್ಧ ಹೋರಾಡದ ಪಾಕಿಸ್ತಾನಕ್ಕೆ ಅಮೆರಿಕದ ಹಣ ಕಡಿತ

ಅಮೆರಿಕ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್…

ಡಿಜಿಟಲ್ ಕನ್ನಡ ಟೀಮ್:

ಸಾರ್ಕ್ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ‘ನಾವು ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರಿ ಪ್ರಯತ್ನ ಮಾಡಿದ್ದೇವೆ’ ಎಂದು ಭಾಷಣ ಮಾಡುತ್ತಿರುವಾಗಲೇ, ಅತ್ತ ಅಮೆರಿಕವು ಪಾಕಿಸ್ತಾನಕ್ಕೆ ‘ಉಗ್ರವಾದ ಹತ್ತಿಕ್ಕುವಲ್ಲಿ ನಿರೀಕ್ಷಿತ ಪ್ರಯತ್ನ ಕಂಡುಬರುತ್ತಿಲ್ಲ’ ಎಂದು ಮಿಲಿಟರಿ ಸಹಾಯಧನ ಕಡಿತಗೊಳಿಸಿದೆ.

ಕಳೆದ ಒಂದು ದಶಕದಿಂದ ಉಗ್ರರ ವಿರುದ್ಧ ಹೋರಾಟ ನಡೆಸುವಲ್ಲಿ ಪಾಕಿಸ್ತಾನದ ನಿರಾಸಕ್ತಿಯನ್ನು ನೋಡಿ ನೋಡಿ, ಅಮೆರಿಕಕ್ಕೂ ಸುಸ್ತ್ ಆಗಿದೆ. ಪಾಕಿಸ್ತಾನದ ಈ ಬೇಜವಾಬ್ದಾರಿ ನಡೆಗೆ ಮುನಿಸಿಕೊಂಡಿರುವ ಅಮೆರಿಕ ಪ್ರತಿ ವರ್ಷ ನೀಡುತ್ತಿದ್ದ ಮಿಲಿಟರಿ ಭತ್ಯೆಯನ್ನು ನಿಲ್ಲಿಸಿದೆ. ಅದೂ 300 ಮಿಲಿಯನ್ ಡಾಲರ್..

ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡಲಿ ಅಂತಲೇ ಅಮೆರಿಕ 2002 ರಿಂದ ಈ ವರೆಗೂ ಸರಿಸುಮಾರು 14 ಬಿಲಿಯನ್ ಡಾಲರ್ ನಷ್ಟು ಹಣವನ್ನು ಸಮ್ಮಿಶ್ರ ಬೆಂಬಲ ನಿಧಿ (ಸಿಎಸ್ಎಫ್) ಮೂಲಕ ಸಹಾಯಾರ್ಥಕ ರೂಪದಲ್ಲಿ ನೀಡಿದೆ. ಉಗ್ರರ ವಿರುದ್ಧ ಹೋರಾಡಲು ಅಮೆರಿಕದಿಂದ ಅತಿ ಹೆಚ್ಚು ನೆರವು ಪಡೆದಿರುವ ದೇಶ ಪಾಕಿಸ್ತಾನವೇ ಆಗಿದೆ. ಆದರೆ ವಾಸ್ತವದ ಚಿತ್ರಣವೇ ಬೇರೆ. ಅಫ್ಘಾನಿಸ್ತಾನದ ತಾಲಿಬಾನ್ ಮತ್ತು ಹಕ್ಕಾನಿ ಉಗ್ರ ಸಂಪರ್ಕ ಜಾಲವನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನ ಯಾವುದೇ ಆಸಕ್ತಿ ತೋರಿಲ್ಲ.

ಪಾಕಿಸ್ತಾನದ ಈ ನಿರಾಸಕ್ತಿಯಿಂದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಅಮೆರಿಕ ಕಾಂಗ್ರೆಸ್ ಗೆ ಸೂಕ್ತ ಮಾಹಿತಿ ನೀಡದಿರಲು ನಿರ್ಧರಿಸಿದ್ದಾರೆ.

‘ಸದ್ಯ ಪಾಕಿಸ್ತಾನಕ್ಕೆ ಸಿಎಸ್ಎಫ್ ಮೂಲಕ ನೀಡುವ ಸಹಾಯ ಧನವನ್ನು ನೀಡಲು ಸಾಧ್ಯವಿಲ್ಲ. ಕಾರಣ, ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಟ ನಡೆಸಲು ಹಾಗೂ ಹಕ್ಕಾನಿ ಸಂಪರ್ಕ ಮಟ್ಟ ಹಾಕಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಈವರೆಗೂ ಯಾವುದೇ ಪ್ರಮಾಣಪತ್ರ ನೀಡಿಲ್ಲ. ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನ ಉಗ್ರರ ನಿಗ್ರಹಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ನೀಡುವವರೆಗೂ ಈ ನೆರವನ್ನು ನೀಡಲು ಸಾಧ್ಯವಿಲ್ಲ.’ ಎಂದಿದ್ದಾರೆ ಪೆಂಟಗಾನಿನ ವಕ್ತಾರ ಆಡಮ್ ಸ್ಟಂಪ್.

ಇದಕ್ಕೆ ವಾಶಿಂಗ್ಟನ್ ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯೂ ಸಮರ್ಥನೆಯನ್ನು ಕೊಟ್ಟಿದೆ. ಅದು ಹೀಗಿದೆ:

‘ಉಗ್ರರ ನಿಗ್ರಹಕ್ಕೆ ಅಮೆರಿಕ ಮತ್ತು ಪಾಕಿಸ್ತಾನ ನಡುವಣ ಸಿಎಸ್ಎಫ್ ಆರ್ಥಿಕ ನೆರವು ಪ್ರಮುಖವಾದುದ್ದು. ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿಲ್ಲ. ಪಾಕಿಸ್ತಾನ ಉಗ್ರರನ್ನು ಹತ್ತಿಕ್ಕಲು ವಿವಿಧ ಸಂಘಟನೆಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಈ ಹೋರಾಟಕ್ಕೆ ಪ್ರತಿಯಾಗಿ ಉಗ್ರ ಸಂಘಟನೆಗಳು ನಮ್ಮ ನೆಲದಲ್ಲಿ ಉಗ್ರಕೃತ್ಯಗಳ ಮೂಲಕ ದಾಳಿ ಮಾಡುತ್ತವೆ. ಹೀಗಾಗಿ ಈ ಕಾರ್ಯದಲ್ಲಿ ನಮಗೆ ನಮ್ಮದೇ ಆದ ಇತಿಮಿತಿಗಳಿವೆ.’

ಪಾಕಿಸ್ತಾನದ ಇಂತಹ ಯಾವುದೇ ಸಬೂಬನ್ನು ಕೇಳಲು ಅಮೆರಿಕ ಸಿದ್ಧವಿಲ್ಲ. ಹೀಗಾಗಿ ಕೆಲ ತಿಂಗಲ ಹಿಂದಷ್ಟೇ ಕಡಿಮೆ ಮೊತ್ತಕ್ಕೆ ಎಫ್-16 ಫೈಟರ್ ಜೆಟ್ ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿದ್ದ ಅಮೆರಿಕ ತನ್ನ ನಿರ್ಧಾರವನ್ನು ಬದಲಿಸಿತ್ತು. ಈಗ ಆರ್ಥಿಕ ನೆರವಿಗೂ ಕತ್ತರಿ ಹಾಕಿದೆ. ಇದರೊಂದಿಗೆ ಉಗ್ರರ ವಿರುದ್ಧ ಹೋರಾಡದ ಹೊರತಾಗಿ ಯಾವುದೇ ನೆರವು ಸಿಗುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ.

Leave a Reply