ಉ.ಪ್ರ.ದ ಕಾನ್ಪುರ ಗುಜರಾತಿನ ಉನಾ ಅಲ್ಲ, ಕಮಲ್ ವಾಲ್ಮೀಕಿ ಪೊಲೀಸ್ ಹತ್ಯೆ ಸಮಾಜವಾದಿಗಳನ್ನು ದಲಿತ ವಿರೋಧಿಯಾಗಿಸುವುದಿಲ್ಲ!

ಪ್ರವೀಣ್ ಕುಮಾರ್

25ರ ದಲಿತ ಯುವಕನೊಬ್ಬನ ಲಾಕಪ್ ಡೆತ್ ಆಗಿದೆ. ಗುರುವಾರ ಬೆಳಗ್ಗೆ ಕಮಲ್ ವಾಲ್ಮೀಕಿ ಎಂಬ ಯುವಕ ಜೈಲಿನಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡಿದ್ದಾನೆ. ಅಲ್ಲಿನ ಎಲ್ಲ 15 ಪೊಲೀಸರನ್ನು ಅಮಾನತುಗೊಳಿಸಿ ಅವರ ವಿರುದ್ಧ ಕೊಲೆ ಆರೋಪ ಹೊರೆಸಲಾಗಿದೆ. ಈ ಪೈಕಿ ಹಲವರು ತಲೆಮರಿಸಿಕೊಂಡಿದ್ದಾರೆ.

ಯೆಸ್.. ಬನ್ನಿ ಈ ದಲಿತ ದೌರ್ಜನ್ಯದ ಬಗ್ಗೆ ಚರ್ಚೆ ಮಾಡೋಣ. ಹೆಚ್ಚುತ್ತಿರುವ ದಲಿತ ದೌರ್ಜನ್ಯ ವಿರೋಧಿಸಿ ಮೋದಿ ಸರ್ಕಾರದ ವಿರುದ್ಧ ಟೌನ್’ಹಾಲಿನೆದುರೂ ಪ್ರತಿಭಟನೆ ಮಾಡೋಣ…

ಓಹ್… ನಿಲ್ಲಿ, ನಿಲ್ಲಿ. ಘಟನೆ ನಡೆದಿರುವುದೆಲ್ಲಿ?

ಸಮಾಜವಾದಿ ಸಾಮ್ರಾಟ ಅಖಿಲೇಶ ಯಾದವರ ಉತ್ತರ ಪ್ರದೇಶದ ಕಾನ್ಪುರದಲ್ಲಿ…

ಹಂಗಾದರೆ ನಿಧಾನಿಸಿ. ಬಿಜೆಪಿ ಆಡಳಿತದ ರಾಜ್ಯ ಇದಲ್ಲ ಎಂದಾದ ಮೇಲೆ, ಮತ್ತೇನಾದರೂ ಕಾರಣಗಳಿದ್ದಿರಬೇಕು. ಕೇಂದ್ರ ಸಚಿವರು ಅಥವಾ ಬಿಜೆಪಿಯ ವ್ಯಕ್ತಿಗಳ್ಯಾರಾದರೂ ಇದರೊಂದಿಗೆ ತಳುಕು ಹಾಕಿಕೊಂಡಿದ್ದಾರೆಯೇ? ಪ್ರಕರಣದ ವಿವರಗಳೇನು?

ಸದ್ಯಕ್ಕೆ ಅಂಥ ಲಿಂಕುಗಳೇನೂ ಕಾಣುತ್ತಿಲ್ಲ. ಕಮಲ್ ವಾಲ್ಮೀಕಿ ಮತ್ತವನ ಸಹೋದರನನ್ನು ದರೋಡೆ ಪ್ರಕರಣದ ಆರೋಪದ ಮೇಲೆ ಮಂಗಳವಾರ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕಮಲ್ ತಮ್ಮನಾದ ನಿರ್ಮಲ್ ಹೇಳುವ ಪ್ರಕಾರ ಇಬ್ಬರಿಗೂ ಕಬ್ಬಿಣದ ಸಲಾಕೆಯಲ್ಲಿ ಹೊಡೆಯುತ್ತ, ಅವಮಾನಿಸುತ್ತ ಕೃತ್ಯ ಒಪ್ಪಿಕೊಳ್ಳುವಂತೆ ಬೆದರಿಸಲಾಯಿತು. ನಮ್ಮನ್ನು ಫುಟ್ಬಾಲ್ ಥರ ಬೆಂಡೆತ್ತಲಾಯಿತು ಅಂದಿರುವ ನಿರ್ಮಲ್, ಕೃತ್ಯ ಒಪ್ಪಿಕೊಳ್ಳದಿದ್ದರೆ ನಿನ್ನ ಅಣ್ಣನನ್ನು ಸಾಯಿಸುತ್ತೇವೆ ಅಂತಲೂ ಬೆದರಿಸಿ ಮನೆಗೆ ಹೋಗಲು ಬಿಟ್ಟಿದ್ದರು ಎಂದಿದ್ದಾರೆ.

ಜೈಲಿನಲ್ಲಿ ನೇಣು ಹಾಕಿಕೊಳ್ಳುವುದಕ್ಕೆ ಕಮಲ್ ವಾಲ್ಮೀಕಿಗೆ ಹಗ್ಗ ಸಿಕ್ಕಿದ್ದು ಹೇಗೆ? ಅಲ್ಲದೇ ಪೋಸ್ಟ್ ಮಾರ್ಟಂನಲ್ಲಿ ಕಮಲ್ ಹೆಸರಿನ ಬದಲಿಗೆ ರಾಜು ಮಿಸ್ತ್ರಿ ಎಂಬ ಹೆಸರು ದಾಖಲಾಗಿದೆ. ಈ ಹೆಸರಿನವನನ್ನೂ ಹುಡುಕುತ್ತಿದ್ದೇವಾದ್ದರಿಂದ ಅಕಸ್ಮಾತ್ ಹೆಸರು ತಪ್ಪಾಗಿಬಿಟ್ಟಿದೆ ಎಂಬ ಪೊಲೀಸರ ವ್ಯಾಖ್ಯಾನ ಎಷ್ಟರಮಟ್ಟಿಗೆ ಒಪ್ಪಲಾದೀತು?

ವಿವರಗಳು ಹೀಗಿರುವಾಗ…

ಸೆಕ್ಯುಲರ್ ಪಾಳೆಯದ ಹೃದಯ ಮಿಡಿತ ಇಕ್ಕಟ್ಟಿಗೆ ಸಿಲುಕುತ್ತದೆ. ಆದರೂ ಸಮರ್ಥನೆಗಳನ್ನು ಹುಡುಕಿಕೊಳ್ಳುವುದು ಕಷ್ಟವಾಗುವುದಿಲ್ಲ. ಲಾಕಪ್ ಹತ್ಯೆ ಖಂಡನಾರ್ಹ ಮತ್ತು ಶಿಕ್ಷಾರ್ಹವೇ ಆದರೂ ಇದು ದರೋಡೆ ಪ್ರಕರಣವಾಗಿದ್ದರಿಂದ ದಲಿತ ಐಡೆಂಟಿಟಿ ಪ್ರಸ್ತುತವಾಗುವುದಿಲ್ಲ ಎನ್ನಬಹುದು. ಅಲ್ಲದೇ ಆರೋಪಿಗಳ ವಿರುದ್ಧ ತ್ವರಿತ ಕ್ರಮ ಜರುಗಿದೆಯಲ್ಲ ಎಂದೂ ಹೇಳಬಹುದು.

ಆದರೆ…

ಒಂದೊಮ್ಮೆ ಬಿಜೆಪಿ ಆಡಳಿತದ ರಾಜ್ಯದಲ್ಲಿ ಇಂಥದ್ದೇನಾದರೂ ನಡೆದಿದ್ದರೆ ಮೇಲಿನ ಸಮರ್ಥನೆಗೆ ಜಾಗವೇ ಇರುತ್ತಿರಲಿಲ್ಲ. ದಲಿತ ದೌರ್ಜನ್ಯದ ಜಾಗಟೆಯನ್ನು ದೇಶಾದ್ಯಂತ ಬಾರಿಸಲಾಗುತ್ತಿತ್ತು. ಕಮಲ್ ವಾಲ್ಮೀಕಿ ಪ್ರಕರಣದಲ್ಲಿ ದೇಶಾದ್ಯಂತ ಪ್ರಗತಿಪರರೆಲ್ಲ ಬಾವುಟ ಪಟಪಟಿಸಲಿದ್ದಾರಾ? ಮೊಂಬತ್ತಿ ಹಚ್ಚಲಿದ್ದಾರಾ? ಉತ್ತರಕ್ಕಾಗಿ ಕಾಯೋಣವೇ?

ರೋಹಿತ್ ವೆಮುಲ ತನ್ನ ಆತ್ಮಹತ್ಯೆ ಚೀಟಿಯಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದು, ಹೊಡೆದುಹಾಕಿದ ಸಾಲುಗಳಲ್ಲಿ ತನ್ನ ಸೈದ್ಧಾಂತಿಕ ಸಂಗಾತಿಗಳನ್ನೇ ದೂರಿದ್ದರೂ ಬಿಜೆಪಿ ಸಚಿವರನ್ನೇ ಕಟಕಟೆಯಲ್ಲಿ ನಿಲ್ಲಿಸುವ ಬುದ್ಧಿಜೀವಿ ಹೋರಾಟಗಳು ಈಗೇಕೆ ಅಖಿಲೇಶ್ ಯಾದವ್ ರಾಜಿನಾಮೆ ಕೇಳುವುದಿಲ್ಲ?

ಗುಜರಾತಿನ ಉನಾದಲ್ಲಾದ ಘಟನೆ ಖಂಡನೀಯ ಹಾಗೂ ಅಲ್ಲಿ ದಲಿತರನ್ನು ಥಳಿಸಿದವರಿಗೆ ಶಿಕ್ಷೆಯಾಗಬೇಕು ಎಂಬುದರಲ್ಲಿ ಬಿಜೆಪಿ- ಆರೆಸ್ಸೆಸ್ ಸೇರಿದಂತೆ ಯಾರಲ್ಲೂ ಎರಡು ಮಾತಿಲ್ಲ. ಇಲ್ಲಿ ಆರೋಪಿಗಳ್ಯಾರನ್ನೂ ರಕ್ಷಿಸುವ ಕೆಲಸವನ್ನೇನೂ ಅಲ್ಲಿನ ಸರ್ಕಾರ ಮಾಡಿಲ್ಲ. ಹಾಗಿದ್ದೂ ಈ ಘಟನೆಯ ಸಾರಾಂಶವೇ ಬಿಜೆಪಿ ದಲಿತ ವಿರೋಧಿ ಅನ್ನುವುದಾದರೆ ಸಮಾಜವಾದಿ ಪಕ್ಷಕ್ಕೆ ಅಂಥ ಹೊಣೆಗಾರಿಕೆ ಸೋಕುವುದೇ ಇಲ್ಲವೇ? ದಲಿತ ಮತಗಳು ಶೇ. 26 ಇರುವ ಉತ್ತರ ಪ್ರದೇಶದ ವಿಷಯದಲ್ಲಿ ದಲಿತ ರಾಜಕಾರಣ ಮಾಡುವ ಹೃದಯಗಳು ಮಿಡಿಯುವಲ್ಲಿ ಚೌಕಾಶಿ ತೋರಿಸುತ್ತಿರುವುದೇಕೆ?

ಈ ಪ್ರಕರಣ ಬಿಟ್ಟು ಯೋಚಿಸುವುದಾದರೂ ನ್ಯಾಷನಲ್ ಕ್ರೈಂ ರಿಕಾರ್ಡ್ ಬ್ಯೂರೊ ಪ್ರಕಾರ ದಲಿತರ ವಿರುದ್ಧ ದೌರ್ಜನ್ಯದಲ್ಲಿ ಉತ್ತರ ಪ್ರದೇಶವೇ ಮೊದಲಿಗ. ಗುಜರಾತಿನ ಒಂದು ಘಟನೆಯಿಂದ ಬಿಜೆಪಿ ದಲಿತ ವಿರೋಧಿ ಆಗುವುದಾದರೆ, ಉತ್ತರ ಪ್ರದೇಶಗಳನ್ನು ಆಳಿಕೊಂಡು ಬಂದಿರುವ ಪಕ್ಷಗಳೇನಾಗುತ್ತವೆ?

ಇಲ್ಲೂ ಒಂದು ವಾದ ಬರುತ್ತದೆ. ಈ ಮೊದಲು ದಲಿತ ದೌರ್ಜನ್ಯಗಳು ವರದಿಯೇ ಆಗುತ್ತಿರಲಿಲ್ಲ. ಬಿಎಸ್ಪಿ- ಎಸ್ಪಿಗಳ ಸೆಕ್ಯುಲರ್ ದರ್ಬಾರಿನಲ್ಲಿ ದಲಿತರಿಗೆ ಆ ಶಕ್ತಿ ಬಂದಿದೆ ಅಂತ. ಇರಬಹುದು. ಆದರೆ ಈ ತರ್ಕವನ್ನು ಬಿಜೆಪಿ ಆಡಳಿತದ ರಾಜ್ಯಗಳಿಗೆ ಅನ್ವಯಿಸುವಾಗ ಮಾತ್ರ ‘ಅಸ್ಪೃಶ್ಯ’ ಭಾವ ಜಾಗೃತವಾಗಿಬಿಡುತ್ತದಲ್ಲ…

ಅದು ಗುಜರಾತ್ ಇದ್ದಿರಬಹುದು, ಬಿಹಾರ, ಉತ್ತರ ಪ್ರದೇಶಗಳೇ ಇರಬಹುದು. ಜಾತಿ ಆಧಾರದಲ್ಲಿ ಆಗುತ್ತಿರುವ ದೌರ್ಜನ್ಯ- ಶೋಷಣೆಗಳನ್ನು ಕಟುಧ್ವನಿಯಲ್ಲಿ ವಿರೋಧಿಸಬೇಕಿರುವುದು ಇಂದಿನ ತುರ್ತು. ಆದರೆ ‘ದಲಿತ’ ಉದಾಹರಣೆಗಳನ್ನೆಲ್ಲ ಪೇರಿಸಿಕೊಂಡು ಪಕ್ಷವೊಂದರ ವಿರುದ್ಧ ಮಾತ್ರ ಪೋಸ್ಟರ್ ಹಿಡಿಯುವುದಕ್ಕೆ ಹೋದರೆ ಪ್ರಾರಂಭಿಕ ಪ್ರಚಾರ ಸಿಗಬಹುದಾದರೂ ನಂತರದಲ್ಲಿ ಅರಗಿಸಿಕೊಳ್ಳಲಾಗದ ಪ್ರಶ್ನೆಗಳು ಎದುರಾಗಿ ವಿಚಾರವಾಧಿಗಳ ಪೊಳ್ಳುತನ ಬಯಲಾಗುವುದರಲ್ಲಿ ಸಂಶಯವಿಲ್ಲ.

Leave a Reply