ಜಾಗತಿಕವಾಗಿ ಭಾರತ ಬಲವಾಗುತ್ತಿದೆ ಎಂಬ ಅಭಿಪ್ರಾಯ ಒಲಿಂಪಿಕ್ಸ್ ಪದಕ ಪರಾಕ್ರಮದಲ್ಲೂ ಸಾಬೀತಾಗುವುದೇ?

ಡಿಜಿಟಲ್ ಕನ್ನಡ ಟೀಮ್:

ಒಲಿಂಪಿಕ್ಸ್ ಈಗ ಕೇವಲ ಕ್ರೀಡಾ ಉತ್ಸವವಾಗಷ್ಟೇ ಉಳಿದಿಲ್ಲ… ವಿಶ್ವದ ಪ್ರತಿಯೊಂದು ರಾಷ್ಟ್ರ ಕ್ರೀಡಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸೋ ಒಂದು ವೇದಿಕೆಯಾಗಿದೆ. ಇಲ್ಲಿ ಅಮೆರಿಕ, ಚೀನಾ ಅಗ್ರಸ್ಥಾನಕ್ಕೆ ಪ್ರಮುಖ ಸ್ಪರ್ಧಿಗಳು. ಈ ಪಟ್ಟಿಯಲ್ಲಿ ಭಾರತ ಎಲ್ಲಿದೆ ಎಂದು ನೋಡುವುದಾದರೆ, ನಮಗೆ ಸಿಗೋದು ನಿರಾಸೆಯ ಫಲಿತಾಂಶ.

ಕಳೆದ ಲಂಡನ್ ಒಲಿಂಪಿಕ್ಸ್ ಪದಕಗಳ ಪಟ್ಟಿಯನ್ನೇ ನೋಡುವುದಾದ್ರೆ ಭಾರತ 6 ಪದಕಗಳೊಂದಿಗೆ ಗಳಿಸಿದ್ದು 55ನೇ ಸ್ಥಾನ. ಭಾರತದ ಪಾಲಿಗೇ ಇದೇ ಅತಿಹೆಚ್ಚಿನದಾಗಿತ್ತು. ಭಾರತಕ್ಕಿಂತ ಚಿಕ್ಕ ಪುಟ್ಟ ರಾಷ್ಟ್ರಗಳಾದ ಹಂಗೇರಿ, ಜಪಾನ್, ಉಕ್ರೇನ್, ಕ್ಯೂಬಾ ಅಗ್ರ 20ರಲ್ಲಿ ಸ್ಥಾನ ಪಡೆದಿದ್ದವು. ಈ ಸಣ್ಣ ರಾಷ್ಟ್ರಗಳಿಗಿಂತಾ ಭಾರತ ಏಕೆ ಇಷ್ಟು ಹಿಂದೆ ಉಳಿದಿದೆ ಅಂತಾ ಕೇಳಿದ್ರೆ, ಸಿಗೋ ಉತ್ತರ…  ಭಾರತದಲ್ಲಿನ ಕ್ರೀಡಾ ಸಂಸ್ಕೃತಿ ಹಿಂದುಳಿದಿರುವಿಕೆ.

ಈಗ ಮತ್ತೊಂದು ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಭಾರತ ಸಜ್ಜಾಗಿದೆ. ಇಂದೆಂದಿಗಿತಲೂ ಹೊಸ ಉತ್ಸಾಹ, ಹುರುಪು ಹೊಂದಿದೆ. ಕಾರಣ, ಈ ಬಾರಿ ಭಾರತದಿಂದ 118 ಅಥ್ಲೀಟ್ ಗಳ ಕಣಕ್ಕಿಳಿಯುತ್ತಿದ್ದಾರೆ. ಭಾರತದ ಪಾಲಿಗೆ ಇದು ದಾಖಲೆಯ ಭಾಗವಹಿಸುವಿಕೆ. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಕ್ರೀಡೆಯತ್ತ ಮತ್ತಷ್ಟು ಯುವಕರನ್ನು ಸೆಳೆದು ಭಾರತದಲ್ಲಿ ಕ್ರೀಡೆಗೆ ಸೂಕ್ತ ಮನ್ನಣೆ ಸಿಗುವಂತೆ ಮಾಡುವುದು ಹಾಗೂ ಅದರೊಂದಿಗೆ ಕ್ರೀಡಾ ಸಂಸ್ಕೃತಿ ಹೆಚ್ಚಿಸುವ ಗುರಿ ಭಾರತೀಯ ಅಥ್ಲೀಟ್ ಗಳದ್ದು.

ಈ ಬಾರಿ ದೀಪಾ ಕರ್ಮಾಕರ್, ಸೈನಾ ನೆಹ್ವಾಲ್, ಪಿ.ವಿ ಸಿಂಧು, ಕೆ.ಶ್ರೀಕಾಂತ್, ನರಸಿಂಗ್ ಯಾದವ್, ಯೋಗೇಶ್ವರ್ ದತ್, ಭಜರಂಗ್ ಪುನಿಯಾ, ಅಭಿನವ್ ಬಿಂದ್ರಾ, ಜೀತು ರೈ, ಹೀನಾ ಸಿಧು, ಗಗನ್ ನಾರಂಗ್, ವಿಜಯ್ ಕುಮಾರ್, ಶಿವಥಾಪ, ಮನೋಜ್ ಕುಮಾರ್, ಸಾನಿಯಾ ಮಿರ್ಜಾ, ದೀಪಿಕಾ ಕುಮಾರಿ, ವಿಕಾಸ್ ಗೌಡ, ಲಿಯಾಂಡರ್- ಬೋಪಣ್ಣ ಜೋಡಿ, ಭಾರತ ಪುರುಷರ ಹಾಕಿ ತಂಡ ಹೀಗೆ ಪದಕದ ನಿರೀಕ್ಷೆ ಹುಟ್ಟಿಸಿರೋ ಅಥ್ಲೀಟ್ ಗಳ ದಂಡೇ ಇದೆ. ಇವರು ತಮ್ಮ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಂಡಿದ್ದೇ ಆದಲ್ಲಿ ಭಾರತದ ಪದಕದ ಬೇಟೆ ಜೋರಾಗಿಯೇ ಇರಲಿದೆ. ಅದರೊಂದಿಗೆ ದೇಶದಲ್ಲಿ ಕ್ರೀಡಾ ಕ್ಷೇತ್ರ ಬದಲಾವಣೆಯ ದಿಕ್ಕಿನತ್ತ ಸಾಗಲು ದಾರಿ ಮಾಡಿಕೊಟ್ಟಂತಾಗಲಿದೆ.

ಹೀಗೆ.. ಉತ್ಸಾಹದ ಅಲೆಯಲ್ಲಿ ಭಾರತದ ಅಥ್ಲೀಟ್ ಗಳು ತೇಲುತ್ತಿರುವಾಗ, ಭಾರತ ಒಲಿಂಪಿಕ್ಸ್ ನಲ್ಲಿ ಈವರೆಗೂ ಸಾಗಿ ಬಂದಿರುವ ಹಾದಿಯಲ್ಲಿನ ಜಯದ ಕ್ಷಣಗಳನ್ನೊಮ್ಮೆ ಮೆಲುಕು ಹಾಕೋಣ… ಅಂದಹಾಗೇ.. ಭಾರತ ಈವರೆಗೂ ಒಲಿಂಪಿಕ್ಸ್ ನಲ್ಲಿ ಗೆದ್ದಿರೋದು 9 ಚಿನ್ನ, 6 ಬೆಳ್ಳಿ, 11 ಕಂಚು ಸೇರಿದಂತೆ ಒಟ್ಟು 26 ಪದಕ.

ಒಲಿಂಪಿಕ್ಸ್ ನಲ್ಲಿ ಶತಮಾನದ ಹಾದಿ…

ಭಾರತ ಒಲಿಂಪಿಕ್ಸ್ ನಲ್ಲಿ ಮೊದಲು ಕಾಣಿಸಿಕೊಂಡಿದ್ದು 1900 ರಲ್ಲಿ. ಆಗ ಭಾರತದ ಪರ ಕಣಕ್ಕಿಳಿದಿದ್ದು ಏಕೈಕ ಸ್ಪರ್ಧಿ. ಅದು ನೋರ್ಮನ್ ಪ್ರಿಟ್ಚರ್ಡ್ ಎಂಬ ಅಥ್ಲೀಟ್. ನೋರ್ಮನ್ ಈ ಕ್ರೀಡಾಕೂಟದಲ್ಲಿ ಎರಡು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಶುಭಾರಂಭ ದೊರಕಿಸಿ ಕೊಟ್ಟರು. ನಂತರ ಭಾರತ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ತನ್ನ ಸ್ಪರ್ಧಿಗಳ ತಂಡವನ್ನು ಕಳುಹಿಸಿದ್ದು 1920 (6 ಸ್ಪರ್ಧಿಗಳು) ರಲ್ಲಿ. ಇನ್ನು 1924 ರಲ್ಲಿ ಭಾರತದಿಂದ ಸ್ಪರ್ಧಿಸಿದ ಕ್ರೀಡಾಪಟುಗಳ ಸಂಖ್ಯೆ 14. 1990 ರಲ್ಲಿ ಪದಕ ಬಂದ ನಂತರ 1924ರ ವರೆಗೂ ಭಾರತಕ್ಕೆ ಯಾವುದೇ ಯಶಸ್ಸು ಸಿಗಲಿಲ್ಲ.

 • 1928 ರಿಂದ ಹಾಕಿ ಸ್ವರ್ಣಯುಗ..

ಸುದೀರ್ಘ 28 ವರ್ಷಗಳ ನಂತರ ಭಾರತ ಮತ್ತೆ ಒಲಿಂಪಿಕ್ಸ್ ಪದಕ ಪಡೆದಿದ್ದು 1928 ರಲ್ಲಿ. ಅದು ಹಾಕಿ ತಂಡದ ಯಶಸ್ಸಿನಿಂದಾಗಿ.  ವಿಶ್ವ ಹಾಕಿಯಲ್ಲಿ ಭಾರತ ಸಾರ್ವಭೌಮನಾಗಿ ಮೆರೆದ ಕಾಲವದು. ವಿಶ್ವದ ಹಾಕಿ ದಂತಕತೆ ಧ್ಯಾನ್ ಚಂದ್ ಹಾಕಿ ಮೈದಾನದಲ್ಲಿ ತನ್ನ ವಿರಾಟ ರೂಪ ತೋರುತ್ತಿದ್ದರೆ, ಎದುರಾಳಿ ತಂಡಗಳು ತರಗೆಲೆಗಳಂತೆ ಉದುರಿಹೋಗುತ್ತಿದ್ದವು. ಅದರಲ್ಲೂ 1936 ರಲ್ಲಿ ಜರ್ಮನಿಯಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಧ್ಯಾನ್ ಚಂದ್ ಆಟ ನೋಡಿದ್ದ ಸರ್ವಾಧಿಕಾರಿ ಹಿಟ್ಲರ್ ನಿಬ್ಬೆರಗಾಗಿದ್ದರು. ಅಲ್ಲದೆ ಜರ್ಮನಿ ತಂಡಕ್ಕೆ ಬಂದು ಸೇರಿಕೊಳ್ಳಲು ಧ್ಯಾನ್ ಚಂದ್ ಗೆ ಸ್ವತಃ ಹಿಟ್ಲರ್ ಆಹ್ವಾನ ನೀಡಿದ್ದ.

1928 ರಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನ ಬಾಚಲು ಆರಂಭಿಸಿದ ಭಾರತ ಹಾಕಿ ತಂಡ 1956ರ ವರೆಗೂ ಸತತವಾಗಿ 6 ಬಾರಿ ಸ್ವರ್ಣಕ್ಕೆ ಕೊರಳೊಡ್ಡಿತು. ಇನ್ನು ಸ್ಪರ್ಧಿಗಳ ಭಾಗವಹಿಸುವಿಕೆ ನೋಡುವುದಾದ್ರೆ 1928 ರಲ್ಲಿ 21, 1932 ರಲ್ಲಿ 30, 1936 ರಲ್ಲಿ 27, 1948 ರಲ್ಲಿ 79 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಿದ್ದರು.

 • 1952 ರಲ್ಲಿ ದಾಖಲೆ ಬರೆದ್ರು ಕೆ.ಡಿ ಜಾಧವ್..

ಈ ಒಲಿಂಪಿಕ್ಸ್ ನಲ್ಲೂ ಹಾಕಿ ತನ್ನ ಚಿನ್ನದ ಭೇಟೆ ಮುಂದುವರಿಸಿತ್ತು. ಇಲ್ಲಿ ಭಾರತ 59 ಸ್ಪರ್ಧಿಗಳನ್ನು ಕಣಕ್ಕಿಳಿಸಿತ್ತು. ಈ ಕ್ರೀಡಾಕೂಟದಲ್ಲಿ ಕುಸ್ತಿಪಟು ಕೆ.ಡಿ ಜಾದವ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದರು. ಅಲ್ಲದೇ, ಭಾರತ ಸ್ವಾತಂತ್ರದ ನಂತರ ವೈಯಕ್ತಿಕ ಪದಕ ಗೆದ್ದ ಮೊದಲ  ಕ್ರೀಡಾಪಟು ಎಂಬ ಇತಿಹಾಸ ಬರೆದರು.

 • 1960 ಮೊದಲ ಬಾರಿಗೆ ಕೈತಪ್ಪಿದ ಚಿನ್ನ

ಈ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಪಾಕಿಸ್ತಾನ ವಿರುದ್ಧ 0-1 ಅಂತರದಿಂದ ಸೋತು, ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತವಾಗಬೇಕಾಯಿತು. ಒಟ್ಟು 52 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಿದ್ದರು ಭಾರತಕ್ಕೆ ಹಾಕಿಯಲ್ಲಿ ಬಂದ ಬೆಳ್ಳಿಯೇ ಗಟ್ಟಿಯಾಯಿತು.

 • 1964 ರಲ್ಲಿ ಮತ್ತೆ ಚಿನ್ನ ಗೆದ್ದ ಹಾಕಿ

ಟೊಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಮತ್ತೆ ತನ್ನ ಅಗ್ರಸ್ಥಾನವನ್ನು ಅಲಂಕರಿಸೋ ಮೂಲಕ ಚಿನ್ನದ ಪದಕ ಗೆದ್ದುಕೊಂಡಿತು. ಈ ಒಲಿಂಪಿಕ್ಸ್ ನಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಸ್ಪರ್ಧಿಗಳ ಸಂಖ್ಯೆ 53 ಇದ್ದರು ಹಾಕಿ ಹೊರತಾಗಿ ಯಾವುದೇ ಗಮನಾರ್ಹ ಪ್ರದರ್ಶನ ಹೊರಬರಲಿಲ್ಲ.

 • 1968 ಮತ್ತು 1972 ರಲ್ಲಿ ಹಾಕಿಗೆ ಕಂಚು..

1968ರ ಮೆಕ್ಸಿಕೊ ಒಲಿಂಪಿಕ್ಸ್ ನಲ್ಲಿ ಭಾರತದಿಂದ ಪ್ರತಿನಿಧಿಸಿದ ಸ್ಪರ್ಧಿಗಳ ಸಂಖ್ಯೆ 25ಕ್ಕೆ ಕುಸಿದಿತ್ತು. ಇನ್ನು 1972 ರಲ್ಲಿ ಸ್ಪರ್ಧಿಗಳ ಸಂಖ್ಯೆ 41 ಆಗಿತ್ತು. ಈ ಎರಡರಲ್ಲೂ ಭಾರತಕ್ಕೆ ನಿರಾಸೆಯೇ ಹೆಚ್ಚಾಗಿತ್ತು. ಕಾರಣ ಈ ಎರಡು ಕ್ರೀಡಾಕೂಟದಲ್ಲೂ ಭಾರತ ಹಾಕಿ ಕಂಚಿಗೆ ತೃಪ್ತಿಪಟ್ಟಿದ್ದು ಬಿಟ್ಟರೆ ಬೇರೆ ಸ್ಪರ್ಧಿಗಳಿಂದ ಸ್ಮರಣೀಯ ಫಲಿತಾಂಶ ಬರಲಿಲ್ಲ.

 • 1980 ರಲ್ಲಿ ಭಾರತಕ್ಕೆ ಕಡೇ ಚಿನ್ನ..

1976 ರಲ್ಲಿ ಭಾರತ ಯಾವುದೇ ಪದಕ ಗೆಲ್ಲದೆ ಬರಿಗೈಯಲ್ಲಿ ಮರಳಿತ್ತು. ಆದರೆ 1980 ರಲ್ಲಿ ಭಾರತ ಹಾಕಿ ತಂಡ ಮತ್ತೆ ತನ್ನ ಸಾಮರ್ಥ್ಯ ಮೆರೆದು ಚಿನ್ನದ ಪದಕ ಪಡೆಯಿತು. ಅಷ್ಟೇ ಅಲ್ಲದೆ ಇದು ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಗಳಿಸಿದ ಕಡೇಯ ಪದಕವಾಗಿ ಉಳಿದಿದೆ.

 • 16 ವರ್ಷಗಳ ಪದಕದ ಬರ…

80 ರ ದಶಕದಿಂದ 90ರ ದಶಕದ ಆರಂಭಿಕ ಅವಧಿಯಲ್ಲಿ ಭಾರತ ಕ್ರೀಡಾ ಕ್ಷೇತ್ರ ಸಂಪೂರ್ಣವಾಗಿ ಮಂಕಾಗಿತ್ತು. 1984 ರಲ್ಲಿ ಭಾರತದ ಖ್ಯಾತ ಮಹಿಳಾ ಮಹಿಳಾ ಅಥ್ಲೀಟ್ ಪಿ.ಟಿ ಉಷಾ 400 ಮೀ. ಹರ್ಡಲ್ಸ್ ನಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ವಂಚಿತರಾದ್ರು, ಇದು ಭಾರತ ಕಂಡ ಶ್ರೇಷ್ಠ ಪ್ರದರ್ಶನವಾಗಿತ್ತು. ಇನ್ನು 1988 ಮತ್ತು 1992 ರಲ್ಲಿ ಭಾರತಕ್ಕೆ ಒಂದೇ ಒಂದು ಪದಕ ಲಭಿಸಲಿಲ್ಲ. ಇದರೊಂದಿಗೆ ಸತತ ಮೂರು ಒಲಿಂಪಿಕ್ಸ್ ನಲ್ಲಿ ಭಾರತ ಬರಿಗೈನಲ್ಲಿ ಮರಳಿತ್ತು.

 • 1996 ರಲ್ಲಿ ಪದಕದ ಬರ ನೀಗಿಸಿದ್ದು ಲಿಯಾಂಡರ್ ಪೇಸ್..

ಸತತ ನಿರಾಸೆಯಿಂದ ಸಾಗಿದ್ದ ಭಾರತ ಕ್ರೀಡೆಗೆ ಹೊಸ ಚೈತನ್ಯ ತುಂಬಿದ್ದು ಭಾರತದ ಟೆನಿಸ್ ದಂತಕತೆ  ಲಿಯಾಂಡರ್ ಪೇಸ್. 1996 ರಲ್ಲಿ ಪೇಸ್ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ರು. ಪುರುಷರ ಸಿಂಗಲ್ಸ್ ನಲ್ಲಿ ಅಚ್ಚರಿಯ ಪ್ರದರ್ಶನ ತೋರಿದ ಪೇಸ್ ಕಂಚಿನ ಪದಕ ಗೆದ್ದು 16 ವರ್ಷಗಳ ಭಾರತದ ಪದಕ ಬರ ನೀಗಿಸಿದ್ರು.

 • 2000 ರಲ್ಲಿ ಕಂಚು ತಂದ ಕರ್ಣಂ ಮಲ್ಲೇಶ್ವರಿ ಇತಿಹಾಸ..

2000 ದ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಭಾರತ ಹೊಸ ಇತಿಹಾಸಕ್ಕೆ ಸಾಕ್ಷಿಯಾಯ್ತು. ಮಹಿಳೆಯರ ವೇಟ್ ಲಿಫ್ಟಿಂಗ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆಲ್ಲುವುದರೊಂದಿಗೆ, ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಅಥ್ಲೀಟ್ ಆದರು.

 • 2004 ರಲ್ಲಿ ಬೆಳ್ಳಿಗೆ ಶೂಟ್ ಮಾಡಿದ ರಾಥೋರ್..

ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಭಾರತ ಮತ್ತೆ ಬರಿಗೈಲಿ ವಾಪಸ್ಸಾಗುವ ಲಕ್ಷಣ ಗೋಚರಿಸಿತ್ತು. ಆದರೆ, ಈ ನಿರಾಸೆಯನ್ನು ತಪ್ಪಿಸಿದ್ದು, ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋರ್. ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ ರಾಥೋರ್ ಬೆಳ್ಳಿ ಪದಕ ಬಾಚಿದ್ದರು.

 • 2008 ರಲ್ಲಿ ಇತಿಹಾಸ ಬರೆದ್ರು ಬಿಂದ್ರಾ..

ಭಾರತದ ಕ್ರೀಡಾ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿದ್ದು 2008ರ ಬೀಜಿಂಗ್ ಒಲಿಂಪಿಕ್ಸ್. ಭಾರತದ ಶೂಟರ್ ಅಭಿನವ್ ಬಿಂದ್ರಾ 10 ಮೀ. ಏರ್ ರೈಫಲ್ ನಲ್ಲಿ ಚಿನ್ನ, ಕುಸ್ತಿಪಟು ಸುಶೀಲ್ ಕುಮಾರ್ 66 ಕೆ.ಜಿ ವಿಭಾಗದಲ್ಲಿ ಹಾಗೂ ಬಾಕ್ಸರ್ ವಿಜೇಂದ್ರ ಸಿಂಗ್ 75 ಕೆ.ಜಿ ವಿಭಾಗದಲ್ಲಿ ತಲಾ ಕಂಚಿನ ಪದಕ ಪಡೆದರು. ಇದರೊಂದಿಗೆ ಭಾರತ 3 ಪದಕ ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಖ್ಯಾತಿ ಬಿಂದ್ರಾ ಅವರದಾಯಿತು.

 • ಲಂಡನ್ ನಲ್ಲಿ ಚಿನ್ನ ಸಿಗದಿದ್ರು ತೃಪ್ತಿದಾಯಕ ಪ್ರದರ್ಶನ…

2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಗಲಿಲ್ಲ. ಆದರೂ ಭಾರತ 2 ಬೆಳ್ಳಿ ಹಾಗೂ 4 ಕಂಚಿನ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಪದಕಗಳ ಬೇಟೆ ಹೆಚ್ಚಾಗಿತ್ತು. ಶೂಟರ್ ವಿಜಯ್ ಕುಮಾರ್ 25 ಮೀ. ರಾಪಿಡ್ ಫೈರ್ ನಲ್ಲಿ, ಕುಸ್ತಿಪಟು ಸುಶೀಲ್ ಕುಮಾರ್ 66 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು. ಇನ್ನು ಶೂಟರ್ ಗಗನ್ ನಾರಂಗ್ 10 ಮೀ. ಏರ್ ರೈಫಲ್, ಮಹಿಳೆಯರ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್, ಮಹಿಳೆಯರ ಬ್ಯಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್, ಕುಸ್ತಿಯಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದರು.

ಕಳೆದ ಮೂರು ಒಲಿಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನ ಏರುಮುಖವಾಗಿ ಸಾಗುತ್ತಿದೆ. ಈ ಬಾರಿ ಸೈನಾ ನೆಹ್ವಾಲ್, ಯೋಗೇಶ್ವರ್ ದತ್, ವಿಜಯ್ ಕುಮಾರ್, ಗಗನ್ ನಾರಂಗ್ ಎರಡನೇ ಒಲಿಂಪಿಕ್ಸ್ ಪದಕ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಗಳಿಂದಲೂ ಕಠಿಣ ಸವಾಲು ಎದುರಾಗಿರುವುದು ಅಷ್ಟೇ ವಾಸ್ತವ. ಈ ಬಾರಿ ಕುಸ್ತಿ, ಶೂಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್ ಮಾತ್ರವಲ್ಲದೇ ಜಿಮ್ನಾಸ್ಟಿಕ್, ಆರ್ಚರಿ, ಅಥ್ಲೆಟಿಕ್ಸ್, ಟೆನಿಸ್ ಹಾಗೂ ಭಾರತೀಯ ಪುರುಷರ ಹಾಕಿ ತಂಡ ಪದಕ ತರುವ ನಿರೀಕ್ಷೆ ಹುಟ್ಟಿಸಿರುವುದು ಅಭಿಮಾನಿಗಳ ಉತ್ಸಾಹವನ್ನು ದುಪ್ಪಟ್ಟು ಮಾಡಿದೆ. ತಮಗೆ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಿ ಪೋಡಿಯಂ ಮೇಲೆ ನಿಂತು ರಾಷ್ಟ್ರಗೀತೆ ಮೊಳಗಿಸುವ ಛಲ ನಮ್ಮ ಕ್ರೀಡಾಪಟುಗಳದ್ದಾಗಿದೆ.

Leave a Reply