ಮಹದಾಯಿ ವಿಶೇಷ ಮೇಲ್ಮನವಿಗೆ ಚಿಂತನೆ, ಸಿಬಿಐ ಮುಂದೆ ಕೆಂಪಯ್ಯ- ಓಂ ಪ್ರಕಾಶ್, ಚಾಲಕರಿಗೆ ವಿಮೆ, ವಿಜಯ್ ರೂಪಾನಿ ಗುಜರಾತ್ ಮುಮಂ

Members of Karnataka Rakshana Vedhike during Torch Rally from Town Hall to SBM Circle to protest against Mahadhayi issue and Police atrocities on Navalgundh Farmers, in Bengaluru on Thursday.

ಮಹದಾಯಿ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ರೈತರು ಪ್ರತಿಭಟಿಸುತ್ತಿದ್ದಾಗ ನವಲಗುಂದದಲ್ಲಿ ಅವರ ಮೇಲಾದ ಪೊಲೀಸ್ ದೌರ್ಜನ್ಯದ ವಿರುದ್ಧ ಆ. 4ರ ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ದೊಂದಿ ಪ್ರತಿಭಟನೆ.

ಡಿಜಿಟಲ್ ಕನ್ನಡ ಟೀಮ್:

ಮಹದಾಯಿ ನೀರಿಗಾಗಿ ವಿಶೇಷ ಮೇಲ್ಮನವಿಗೆ ಸರ್ಕಾರ ನಿರ್ಧಾರ

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣದ ಮಧ್ಯಂತರ ತೀರ್ಪನ್ನು ಪುನರ್ ಪರಿಶೀಲನೆ ನಡೆಸುವಂತೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಭಾನುವಾರ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಸದ್ಯ ಕಾನೂನು ತಜ್ಞರ ಸಲಹೆಯಂತೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಬದಲು ಮತ್ತೊಮ್ಮೆ  ನ್ಯಾಯಾಧಿಕರಣದ ಮುಂದೆ ವಿಶೇಷ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿದೆ ಸರ್ಕಾರ. 1957 ರ ಅಂತರ ರಾಜ್ಯ ನದಿನೀರು ವಿವಾದ ಕಾಯ್ದೆ ಸೆಕ್ಷನ್ 5 ಉಪನಿಯಮ 3ರಡಿ ನ್ಯಾಯಾಧಿಕರಣದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಮತ್ತೊಮ್ಮೆ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ನ್ಯಾಯಾಧಿಕರಣಕ್ಕೆ ಕೋರಲಿದೆ.

ಮಹದಾಯಿ ನದಿಯಿಂದ ಕಳಸಾ-ಬಂಡೂರಿ ನಾಲಾ ಮೂಲಕ 7.5 ಟಿಎಂಸಿ ನೀರನ್ನು ಕುಡಿಯುವ ನೀರಿನ ಯೋಜನೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಉಳಿದಂತೆ ಕೃಷಿ ಚಟುವಟಿಕೆಗಳಿಗೆ ಬಳಕೆಯಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಈ ಭಾಗದ ಸುತ್ತಮುತ್ತ ಸುಮಾರು 25 ಲಕ್ಷಕ್ಕೂ ಹೆಚ್ಚು ಜನ ಕುಡಿಯುವ ನೀರಿಗಾಗಿ ಇದನ್ನೇ ಅವಲಂಬಿಸಿದ್ದಾರೆ. ನವಲಗುಂದ, ನರಗುಂದ, ಬಾದಾಮಿ, ಸವದತ್ತಿ ಸೇರಿದಂತೆ ಸುಮಾರು 400 ಹಳ್ಳಿಗಳಿಗೆ ಈ ಯೋಜನೆಯಿಂದ ಕುಡಿಯುವ ನೀರು ಒದಗಿಸಲಾಗುವುದು. ಈ ಹಿಂದೆ ತೆಲುಗು ಗಂಗಾ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ಇದೇ ರೀತಿ ಅರ್ಜಿ ತಿರಸ್ಕರಿಸಿದಾಗ ಪುನಃ ಮರುಪರಿಶೀಲನಾ ಅರ್ಜಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ.

ಮತ್ತೊಂದೆಡೆ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಮೋಹನ್ ಖಾತರಕಿ ‘ಮಹದಾಯಿ ನ್ಯಾಯಾಧೀಕರಣದ ಅಂತಿಮ ತೀರ್ಪು ಬರುವವರೆಗೂ ನಿರೀಕ್ಷೆ ಮಾಡಬೇಕು. ಪ್ರಧಾನಿ ಅವರ ಮಧ್ಯಪ್ರವೇಶಕ್ಕೆ ಒತ್ತಾಯಿಸುವುದು ಸರಿಯಲ್ಲ’ ಎಂದು ಹೇಳಿರುವುದನ್ನು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಖಂಡಿಸಿದ್ದಾರೆ.

ಸಿಬಿಐ ವಿಚಾರಣೆಯಲ್ಲಿ ಕೆಂಪಯ್ಯ, ಓಂ ಪ್ರಕಾಶ್

ರಾಜ್ಯದಲ್ಲಿ ಹೆಚ್ಚು ಸದ್ದು ಮಾಡಿದ್ದ ಒಂದಂಕಿ ಲಾಟರಿ ಹರಗಣದ ತನಿಖೆ ನಡೆಸುತ್ತಿರುವ ಸಿಬಿಐ, ರಾಜ್ಯ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಈ ಸಂಬಂಧ ಸಿಬಿಐ ಈ ಇಬ್ಬರಿಗೂ ನೋಟಿಸ್ ಜಾರಿ ಮಾಡಿತ್ತು. ಹೀಗಾಗಿ ಗುರುವಾರ ರಾತ್ರಿಯೇ ದೆಹಲಿಗೆ ತೆರಳಿದ ಕೆಂಪಯ್ಯ ಹಾಗೂ ಓಂ ಪ್ರಕಾಶ್ ಶುಕ್ರವಾರ ವಿಚಾರಣೆಗೆ ಹಾಜರಾದರು. ಸಿಬಿಐ ಅಧಿಕಾರಿಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿತು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 35ಕ್ಕೂ ಹೆಚ್ಚು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ.

ಗುಜರಾತ್ ಸಿಎಂ ಆದ್ರು ವಿಜಯ್ ರೂಪಾನಿ

rupaniಬಿಜೆಪಿ ನಾಯಕಿ ಆನಂದಿ ಬೆನ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ವಿಜಯ್ ರೂಪಾನಿ ಅವರನ್ನು ಆಯ್ಕೆ ಮಾಡಿದೆ. ಆರಂಭದಲ್ಲಿ ಈ ಸ್ಥಾನಕ್ಕೆ ನಿತೀನ್ ಪಟೇಲ್ ಅವರು ಆಯ್ಕೆಯಾಗುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅಂತಿಮ ಕ್ಷಣದಲ್ಲಿ ಬಿಜೆಪಿ ವಿಜಯ್ ರೂಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಹಾಗೂ ನಿತೀನ್ ಪಟೇಲ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿದೆ. ಆನಂದಿಬೆನ್ ಸಂಪುಟದಲ್ಲಿ ಸಾರಿಗೆ, ನೀರು ಪೂರೈಕೆ, ಕಾರ್ಮಿಕ ಮತ್ತು ಉದ್ಯೋಗ ಖಾತೆಗಳನ್ನು ನಿರ್ವಹಿಸುತ್ತಿದ್ದರು ರುಪಾನಿ. ಭಾನುವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಸಾಲುಗಳು..

  • ಬಸ್, ಟ್ರಕ್, ಲಾರಿ, ರಿಕ್ಷಾ ಸೇರಿದಂತೆ 25 ಲಕ್ಷ ಚಾಲಕರಿಗೆ ವಿಮಾ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೆ ಲಾರಿ ಮತ್ತು ಟ್ರಕ್ ಕ್ಲೀನರ್ ಗಳಿಗೂ ಈ ಸೌಲಭ್ಯ ಕಲ್ಪಿಸಲು ನಿರ್ಧರಿಸಿದ್ದು, ಇವರು ಮಾತ್ರ ಪ್ರತಿವರ್ಷ ಕ್ಲೀನರುಗಳಾಗಿ ದುಡಿಯುತ್ತಿರುವುದರ ಕುರಿತು ತಾವು ಕೆಲಸ ಮಾಡುತ್ತಿರುವ ವಾಹನಗಳ ಮಾಲೀಕರಿಂದ ಪ್ರಮಾಣ ಪತ್ರ ಸಲ್ಲಿಸಬೇಕು.
  • ಬೆಂಗಳೂರು ಮೂಲದ ಸಬೀಲ್ ಅಹ್ಮದ್ ಎಂಬ ಉಗ್ರನನ್ನು ಸೌದಿ ಅರೆಬಿಯಾದಲ್ಲಿ ಬಂಧಿಸಲಾಗಿದೆ. ಈತ ಲಷ್ಕರ್ ಎ ತೊಯ್ಬಾ ಮತ್ತು ಅಲ್ ಖೈದಾ ಉಗ್ರ ಸಂಘಟನೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದ ಎಂದು ಮಾಹಿತಿಗಳು ಬಂದಿವೆ.
  • ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೇಲೆ ಪುಸ್ತಕ ಬರೆಯಲು ಮುಂದಾಗಿದ್ದ ಕಾರಣಕ್ಕೆ ಹಿರಿಯ ಪತ್ರಕರ್ತ ಜೋತಿರ್ಮೋಯ್ ಡೇ ಅವರನ್ನು 2011 ರಲ್ಲಿ ಹತ್ಯೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ನ್ಯಾಯಾಲಯದಲ್ಲಿ ಶುಕ್ರವಾರ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಮತ್ತೊಬ್ಬ ಪಾತಕಿ ಚೋಟಾ ರಾಜನ್ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಅಂಶ ಬೆಳಕಿಗೆ ಬಂದಿದೆ.

Leave a Reply