‘ರಾಜೇಶ್ ಖನ್ನಾ ಪೂರ್ ಆ್ಯಕ್ಟರ್’ ಎಂಬ ನಾಸಿರುದ್ದೀನ್ ಷಾರ ವಿವಾದಾತ್ಮಕ ಹೇಳಿಕೆ ಒಪ್ಪಲು ಹೇಗೆ ಸಾಧ್ಯ?

author-ssreedhra-murthyಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರು ಮಾಡಿರುವ ನಾಸಿರುದ್ದೀನ್‍ ಷಾ ಇತ್ತೀಚಿನ ಸಂದರ್ಶನದಲ್ಲಿ ‘ರಾಜೇಶ್‍ ಖನ್ನಾ  ಅವರನ್ನು ಪೂರ್ ಆ್ಯಕ್ಟರ್’ ಎಂದು ಕರೆದು ವಿವಾದಕ್ಕೆ ಗುರಿಯಾದರು. 1970ರಲ್ಲಿ ಮಿಡಿಯೋಕರ್‍ ಸಂಸ್ಕೃತಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿತು. ಅದಕ್ಕೆ ಕಾರಣರಾದವರು ರಾಜೇಶ್‍ ಖನ್ನಾ. ಅಲ್ಲಿಂದ ಮುಂದೆ ಬಾಲಿವುಡ್‍ ತಾಂತ್ರಿಕವಾಗಿ ಬೆಳೆಯಿತೇ ಹೊರತು ಮೀಡಿಯೋಕರ್ ಒತ್ತಡಗಳಿಂದ ಹೊರ ಬರದೇ ನಿಂತಲ್ಲೇ ನಿಂತು ಬಿಟ್ಟಿದೆ ಎನ್ನುವುದು ನಾಸಿರುದ್ದೀನ್‍ ವಾದ.

ನಾಸಿರುದ್ದೀನ್ ಮೀಡಿಯೋಕರ್ ಎಂದು ಯಾವುದನ್ನು ಕರೆಯುತ್ತಾರೆ ಎನ್ನುವುದನ್ನು ಗಮನಿಸೋಣ. ರಾಜೇಶ್ ಖನ್ನಾ ಬರುವುದಕ್ಕೆ ಮೊದಲೇ ಸಾಕಷ್ಟು ಅಮರ ಪ್ರೇಮ ಕಥನಗಳು ಬಾಲಿವುಡ್‍ನಲ್ಲಿ ಬಂದಿದ್ದವು. ರಾಜ್‍ ಕಪೂರ್ ಅಂತಹ ಪರಂಪರೆಯನ್ನೇ ಸೃಷ್ಟಿಸಿ ಬಿಟ್ಟಿದ್ದರು. ಅವರ ಚಿತ್ರಗಳು ಮಾತ್ರವಲ್ಲದೆ ಅರವತ್ತರ ದಶಕದಲ್ಲಿ ಬಂದ ಪ್ಯಾಸಾ, ಮಧುಮತಿ, ಕಾಶ್ಮೀರ್‍ ಕಿ ಕಲಿ, ಚೋರಿ ಚೋರಿ ಮೊದಲಾದ ಚಿತ್ರಗಳು ಸರ್ವಕಾಲಿಕ ಶ್ರೇಷ್ಠ ಪ್ರೇಮಕಥನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮುಂದೆ  1969ರಿಂದ 1971ರ ನಡುವೆ ರಾಜೇಶ್‍ ಖನ್ನಾ ಸತತ ಹದಿನೈದು ಸೂಪರ್ ಹಿಟ್‍ ಚಿತ್ರಗಳನ್ನು ಕೊಟ್ಟರು. ಅವುಗಳಲ್ಲಿ ಪ್ರೇಮ ಚಿತ್ರಗಳೇ ಹೆಚ್ಚು. ಈ ಸರಣಿ ಗೆಲುವು ಇಂದಿಗೂ ದಾಖಲೆಯಾಗೇ ಉಳಿದಿವೆ. ‘ಆರಾಧನಾ’ ಭಾರತೀಯ ಚಿತ್ರರಂಗದ ಸ್ವರೂಪವನ್ನೇ ಬದಲಾಯಿಸಿದ ಅಮರ ಪ್ರೇಮಿಯನ್ನು ಸೃಷ್ಟಿಸಿತು. ಉಳಿದ ಚಿತ್ರಗಳಲ್ಲೂ ರಾಜೇಶ್‍ ಖನ್ನಾ ನಿರ್ವಹಿಸಿದ ಪಾತ್ರಗಳು ಹಿಂದಿನ ಪ್ರೇಮ ಚಿತ್ರಗಳಿಗಿಂತ  ವಸ್ತುವಿನಲ್ಲಿ ಅನೇಕ ಭಿನ್ನತೆಯನ್ನು ಹೊಂದಿದ್ದವು.

ಇಲ್ಲಿನ ಪ್ರೇಮಿ ಆದರ್ಶವಾದಿ ಮಾತ್ರವಾಗಿರದೆ ಭಾವನಾತ್ಮಕತೆಯನ್ನು ತನ್ನ ಜೀವನ ಶೈಲಿಯನ್ನಾಗಿಸಿಕೊಂಡ ಮಧ್ಯಮ ವರ್ಗದ ಪ್ರತಿನಿಧಿಯಾಗಿದ್ದ. ಜೊತೆಗೆ ಇಲ್ಲಿ ಚಿತ್ರಗೀತೆಗಳು ಪ್ರೇಮದ ಅಭಿವ್ಯಕ್ತಿಯ ಅವಿಭಾಜ್ಯ ಅಂಗವಾಗಿದ್ದವು. ಇಂತಹ ಜನಪ್ರಿಯತೆಗೆ ಈ ಚಿತ್ರಗಳಲ್ಲಿನ ಬಹುತೇಕ ಗೀತೆಗಳನ್ನು ಹಾಡಿದ ಕಿಶೋರ್ ಕುಮಾರ್ ಅವರ ಸಿರಿಕಂಠ ಕೂಡ ಕಾರಣವಾಗಿತ್ತು. ಇನ್ನೊಂದು ಕುತೂಹಲಕರ ಅಂಶವನ್ನು ‘ರಾಜೇಶ್‍ ಖನ್ನಾ: ದಿ ಅನ್ ಟೋಲ್ಡ್ ಸ್ಟೋರಿ ಅಫ್ ಇಂಡಿಯಾಸ್ ಫಸ್ಟ್ ಸೂಪರ್ ಸ್ಟಾರ್’ ಕೃತಿಗೆ ಮುನ್ನುಡಿ ಬರೆದಿರುವ ಶರ್ಮಿಳಾ ಠಾಕೂರ್ ಗುರುತಿಸಿದ್ದಾರೆ. ಅದೆಂದರೆ ‘ಈ ಚಿತ್ರಗಳಲ್ಲಿ ನಾಯಕಿಯರ ಭಾವನೆಗಳಿಗೂ ಕೂಡ ಮಹತ್ವವಿತ್ತು. ಅಲ್ಲಿಯವರೆಗೆ ಪ್ರೇಮ ಚಿತ್ರಗಳಲ್ಲಿ ನಾಯಕಿಯರು ಕೇವಲ ತಮ್ಮ ಸೌಂದರ್ಯದಿಂದ ನಾಯಕರನ್ನು ಸೆಳೆಯುವವರು ಮಾತ್ರ ಆಗಿದ್ದರು.

ಕಟಿ ಪತಂಗ್‍, ಅಮರ್ ಪ್ರೇಮ್‍ ಹಾಗೆ ನೋಡಿದರೆ ನಾಯಕಿ ಪ್ರಧಾನ ಚಿತ್ರಗಳೇ ಆಗಿದ್ದವು. ಇದನ್ನು ನಾಸಿರುದ್ದೀನ್ ಷಾ ಮೀಡಿಯೋಕರ್ ಎನ್ನುತ್ತಿದ್ದಾರೆಯೆ? ಹಾಗಿದ್ದರೆ ಅವರು ಸಿನಿಮಾ ಕೇವಲ ವೈಚಾರಿಕ ಕಾರಣಗಳಿಗಾಗಿಯೇ ರೂಪುಗೊಳ್ಳುತ್ತದೆ ಎಂದು ನಂಬಿದ್ದಾರೆ ಎಂದಾಯಿತು. ಭಾವನಾತ್ಮಕ ಕಾರಣಗಳಿಗಾಗಿ ಕೂಡ ಸಿನಿಮಾ ರೂಪುಗೊಳ್ಳುತ್ತದೆ. ಈ ಮೂಲಕ ಕೋಟ್ಯಾಂತರ ಜನ ತಮ್ಮ ಸಂವೇದನೆಗಳ ಪ್ರತಿಫಲನವನ್ನು ಅಲ್ಲಿ ಕಂಡುಕೊಳ್ಳುತ್ತಾರೆ ಎನ್ನುವುದನ್ನು ಅವರು ಒಪ್ಪುವುದಿಲ್ಲ ಎಂದಾಯಿತು. ಹಾಗಿದ್ದರೆ ಅವರು ಕೇವಲ ರಾಜೇಶ್ ಖನ್ನಾ ಅವರನ್ನು ಮಾತ್ರವಲ್ಲ ಭಾರತೀಯ ಚಿತ್ರರಂಗದ ಪ್ರಧಾನವಾಹಿನಿಯನ್ನೇ ಪೂರ್ ಎನ್ನಬೇಕಾದೀತು. ಅಷ್ಟೇ ಅಲ್ಲ ಚಿತ್ರಗೀತೆಗಳ ಇಡೀ ಪರಂಪರೆಯನ್ನೇ ಮೀಡಿಯೋಕರ್ ಸಾಲಿನಲ್ಲಿ ನಿಲ್ಲಿಸಬೇಕಾದೀತು!.

Rajesh khanna-3

ನಾಸಿರುದ್ದೀನ್‍ ಅವರ ವಾದದ ಕೆಲವು ಭಾಗಗಳನ್ನು ಮಾತ್ರ ಒಪ್ಪುತ್ತೇನೆ ಎಂದಿರುವ ಇನ್ನೊಬ್ಬ ಕಲಾವಿದ ಓಂಪುರಿ ‘ರಾಜೇಶ್‍ ಖನ್ನಾ ಸೀಮಿತ ಸಾಧ್ಯತೆಗಳ ಸ್ಟಿರಿಯೋ ಟೈಪ್ ಕಲಾವಿದ. ಆದರೆ ಅವರ ಅಭಿನಯ ಕ್ರಮ ಮಾದರಿಯಾಗಿ ಬೆಳೆದು  ಹಿಂದಿ ಚಿತ್ರರಂಗದ ಸಾಧ್ಯತೆಗಳನ್ನು ಕುಗ್ಗಿಸಿತು ಎಂದಿದ್ದಾರೆ.’  ಇದೂ ಕೂಡ ಸಮರ್ಥಿಸಲಾಗದ ವಾದವೇ! ರಾಜೇಶ್ ಖನ್ನಾ ಅವರ ಬಹು ಜನಪ್ರಿಯ ‘ಮೇರಿ ಸಪನೋಂಕಿ ರಾಣಿ’ ಗೀತೆಯ ಚಿತ್ರೀಕರಣದಲ್ಲಿ ನಾಯಕಿ ಶರ್ಮಿಳಾ ಠಾಕೂರ್ ಭಾಗವಹಿಸಿಯೇ ಇಲ್ಲ. ಅವರು ಕಾಣಿಸಿಕೊಳ್ಳುವ ದೃಶ್ಯಗಳನ್ನು ನಂತರ ಜೋಡಿಸಲಾಗಿತ್ತು. ರಾಜೇಶ್ ಖನ್ನಾ ಸ್ಟಿರಿಯೋ ಟೈಪ್ ಕಲಾವಿದನಾಗಿದ್ದರೆ ನಾಯಕಿಯೇ ಇಲ್ಲದ ಕಡೆ ಇದ್ದಾಳೆ ಎಂದು ಭಾವಿಸಿ ಅಂತಹ ಅವಿಸ್ಮರಣೀಯ ಅಭಿನಯ ನೀಡಲು ಸಾಧ್ಯವಿತ್ತೆ? ಅಷ್ಟೇ ಅಲ್ಲ ರಾಜೇಶ್ ಖನ್ನಾ ಏಕತಾನತೆ ಮೀರಲು ಪ್ರಯತ್ನಿಸುತ್ತಲೇ ಇದ್ದರು ಎನ್ನುವುದಕ್ಕೆ ಅನೇಕ ಉದಾಹರಣೆಗಳು  ‘ಡಾರ್ಕ ಸ್ಟಾರ್‍; ದಿ ಲೋನ್ಲಿನೆಸ್‍ ಅಫ್ ಬೀಯಿಂಗ್ ರಾಜೇಶ್ ಖನ್ನಾ’ ಕೃತಿಯಲ್ಲಿ ದೊರಕುತ್ತವೆ.

ಬಸು ಭಟ್ಟಾಚಾರ್ಯ ಅವರಲ್ಲಿ ತನಗೆ ವಿಭಿನ್ನ ಮಾದರಿ ಪಾತ್ರ ಬೇಕು ಎಂದು ರಾಜೇಶ್ ಖನ್ನಾ ಕೇಳಿ ಕೊಂಡಿದ್ದರಿಂದಲೇ ‘ಅವಿಷ್ಕಾರ್’ ರೂಪುಗೊಂಡಿತು.  ಈ ಚಿತ್ರದಲ್ಲಿ ಅವರು ಪ್ರಜ್ಞಾಪೂರ್ವಕವಾಗಿ ಅವರು ತಮ್ಮ ಸೂಪರ್ ಸ್ಟಾರ್ ಭಾರವನ್ನು ಕಳಚಿಕೊಂಡಿದ್ದರು. ‘ಜಂಜೀರ್’ ನಲ್ಲೂ ಕೂಡ ತಮ್ಮ ಶೈಲಿಗಿಂತಲೂ ಭಿನ್ನವಾಗಿ ಅಂದರೆ ಆ್ಯಂಗ್ರಿ ಯಂಗ್ ಮ್ಯಾನ್‍ ಆಗಿ ಕಾಣಿಸಿಕೊಂಡಿದ್ದರು. ಎಂಬತ್ತರ ದಶಕದಲ್ಲಂತೂ ‘ರೆಡ್ ರೋಸ್‍’ ನಲ್ಲಿ ಸೈಕೊಪಾತ್ ಆಗಿ ಕಾಣಿಸಿಕೊಂಡಿದ್ದರು.

‘ಸೌತೇನ್‘ ಪ್ರೇಮ ಕಥಾನಕದ ಲಕ್ಷಣಗಳನ್ನೇ ಮುರಿದು ಕಟ್ಟಿದ ಪ್ರಯೋಗಶೀಲ ಚಿತ್ರವಾಗಿತ್ತು. ಅಷ್ಟೇ ಅಲ್ಲ ಮುಂದಿನ ಸೂಪರ್ ಸ್ಟಾರ್‍ಗಳ ಚಿತ್ರಗಳಲ್ಲಾದಂತೆ ಇಮೇಜ್‍ಗೆ ತಕ್ಕ ಕಥೆಗಳು, ಪ್ರತಿ ಸೀನ್‍ಗಳಲ್ಲೂ ಕಾಣಿಸಕೊಳ್ಳುವ ಚಪಲ, ಹೆಸರಿಗೆ ಮಾತ್ರ ನಾಯಕಿಯರು, ಕಾಮೆಡಿಯನ್ನರಿಗೂ ಅವಕಾಶವಿಲ್ಲದಂತಹ ಏಕವ್ಯಕ್ತಿ ಪ್ರದರ್ಶನ ಇವೆಲ್ಲಾ ರಾಜೇಶ್ ಖನ್ನಾ ಅವರ ಕೆಟ್ಟ ಚಿತ್ರದಲ್ಲಿ ಕೂಡ ಸಿಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ನಾಸಿರುದ್ದೀನ್ ಷಾ ಅವರ ಮೂರನೇ ಆಕ್ಷೇಪವಂತೂ ಹಾಸ್ಯಸ್ಪದ. ರಾಜೇಶ್‍ ಖನ್ನಾ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಅದರಲ್ಲೂ ಹೆಚ್ಚಾಗಿ ಮಹಿಳಾ ಅಭಿಮಾನಿಗಳನ್ನು ಹೊಂದಿದ ಸ್ಟಾರ್.  ಇದು ಬಾಲಿವುಡ್ ಮೀಡಿಯೋಕರ್ ಅಂಶಗಳನ್ನು ಪಡೆಯಲು ಕಾರಣವಾಯಿತು ಎನ್ನುತ್ತಾರೆ ನಾಸಿರುದ್ದೀನ್.

ಇದರ ಅರ್ಥ ಮಹಿಳೆಯರು ಸಿನಿಮಾ ನೋಡುವುದು ಅಲ್ಲಿ ತಮ್ಮ ಭಾವನೆಗಳಿಗೆ ನೆಲೆಯನ್ನು ಕಂಡು ಕೊಳ್ಳುವುದು ಅಪರಾಧ ಎನ್ನುವುದಾಗಿರಬಹುದೆ? ಹಾಗಿದ್ದರೆ, ನಾಸಿರುದ್ದೀನ್ ಷಾ ಕ್ಷಮಿಸಿ, ನೀವು ಕೇವಲ ಟ್ವಿಂಕಲ್ ಖನ್ನಾ ಅವರನ್ನು ಮಾತ್ರ ಕೆಣಕುತ್ತಿಲ್ಲ.

Leave a Reply