ಪ್ರತಿವರ್ಷವೂ ಹೆಚ್ಚುತ್ತಿದೆ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ, ನೀವು ನಿಲ್ಲೋದು ಯಾರ ಪರ?

 

ಭಾಗ -2

author-ananthramuಬಿಹಾರದಲ್ಲಿ ನೀಲ್‍ಗಾಯ್ ಹತ್ಯೆಗೆ ಸರ್ಕಾರವೇ ಕುಮ್ಮಕ್ಕು ಕೊಟ್ಟಾಗ ಮಧ್ಯಪ್ರದೇಶ ಶುರುಮಾಡಿತು. ಅಲ್ಲಿನ ಒಂದು ಜನಹಿತ ಸಂಸ್ಥೆ `ನಮ್ಮ ಬೆಳೆ ನಷ್ಟವನ್ನು ತುಂಬಿಸಿಕೊಡಿ ಇಲ್ಲವೇ ನೀಲ್ ಗಾಯ್ ಕೊಲ್ಲಿ’ ಎಂದು ಉಪವಾಸ ಮುಷ್ಕರಕ್ಕೆ ಮುಂದಾಯಿತು. ಬಿಹಾರಕ್ಕೆ ಕೊಟ್ಟ ರಿಯಾಯತಿ ನಮಗೂ ಬೇಕು ಎಂದಿತು. ಕೇಂದ್ರದ ಕೃಷಿ ಸಚಿವಾಲಯ ಯಾವ ಯಾವ ರಾಜ್ಯದಲ್ಲಿ ನೀಲ್‍ಗಾಯ್ ಎಷ್ಟೆಷ್ಟು ಬೆಳೆ ನಾಶಮಾಡಿದೆ ಎಂಬ ಅಂಕಿ ಅಂಶ ಮುಂದಿಟ್ಟಿತ್ತು. 2007ರಲ್ಲೇ ಗುಜರಾತ್ 3,475 ಗ್ರಾಮ ಪಂಚಾಯತಿಗಳಿಗೆ ನೀಲ್‍ಗಾಯ್ ಕೊಲ್ಲಲು ಅನುಮತಿ ಕೊಟ್ಟಿತು. ಸರ್ಕಾರ ಕೊಟ್ಟ ಈ ಶ್ರೀರಕ್ಷೆ ಬಳಸಿಕೊಂಡು ಒಂದೊಂದುರಾಜ್ಯವೂ ಯಾವ ವನ್ಯಜೀವಿ ಕಂಟಕವಾಗಿದೆ ಎಂಬುದನ್ನು ಮುಂದುಮಾಡುತ್ತ ಅನುಮತಿ ಕೇಳತೊಡಗಿದವು. ಹಾಗಾದರೆ ವನ್ಯಜೀವಿ ಸಂರಕ್ಷಣಾ ಕಾನೂನಿನ ಗತಿ?

ಎಂದೂ ಒಳ್ಳೆಯದಕ್ಕೆ ಚೈನ್ ರಿಯಾಕ್ಷನ್ ಇರುವುದಿಲ್ಲ. ಆದರೆ ಕೆಟ್ಟದ್ದನ್ನು ಅನುಕರಿಸುವುದು ಸುಲಭ. ಬಿಹಾರ ಹಾಕಿದ ಮೇಲ್ಪಂಕ್ತಿ ನೀಲ್‍ಗಾಯ್ ಹತ್ಯೆಗೆ ಅದೆಷ್ಟು ಪ್ರಭಾವ ಬೀರಿತೆಂದರೆ ಯಾವ ವನ್ಯಮೃಗವೇ ಆಗಲಿ, ಕಾಡುಬಿಟ್ಟು ನಾಡಿಗೆ ಬಂದಾಗ ಅವನ್ನೇಕೆ ಕೊಲ್ಲಬಾರದು ಎಂಬ ವಿಕೃತ ಮನಸ್ಸು ಜನರಮನದಲ್ಲಿ ಹುಟ್ಟಿತು. ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಕಾಡುಹಂದಿಗಳನ್ನು ಸಿಕ್ಕಿಸಲು ಈಗಲೂ ಸಿಡಿ ಬಳಸುತ್ತಿರುವುದುಂಟು. ನಮ್ಮ ಶೇಂಗಾ ನಾಶಕ್ಕೆ ಬೆಲೆ ಕೊಡುವವರು ಯಾರು ಎಂಬುದು ರೈತರ ಕೋಪ.

ಈಗ ರಾಜ್ಯಗಳು ಕೇಂದ್ರದ ಈ ಆದೇಶವನ್ನುಪಯೋಗಿಸಿಕೊಂಡು `ನಮ್ಮದೇನಿಲ್ಲ, ಎಲ್ಲ ಕೇಂದ್ರ ಸರ್ಕಾರ ನಿರ್ದೇಶಿಸಿದ ಹಾಗೆ’ ಎನ್ನುತ್ತಿವೆ. ಇತ್ತ ಪೂರ್ವ ಭಾರತದಲ್ಲಿ ವಿಶೇಷವಾಗಿ ಒಡಿಶ್ಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಆನೆಗಳ ದಾಂಧಲೆ ಹೆಚ್ಚುತ್ತಿದೆ ಎನ್ನುವ ಕಾರಣಕೊಟ್ಟು ಅವುಗಳನ್ನು ಕೊಲ್ಲಲು ಪರವಾನಗಿಕೊಡಿ ಎನ್ನುತ್ತಿವೆ. ಆದರೆ ಆನೆಗಳ ವಿಚಾರದಲ್ಲಿ ತೀರ್ಮಾನ ಕೊಡುವುದು ಸುಲಭವಲ್ಲ. ಏಕೆಂದರೆ ಅವು ಷೆಡ್ಯೂಲ್-1ರಲ್ಲಿ ನಮೂದಿತವಾಗಿರುವ ಪ್ರಾಣಿಗಳು. ನಾಶಭೀತಿ ಎದುರಿಸುತ್ತಿರುವ ಪ್ರಾಣಿಗಳಲ್ಲಿ ಆನೆ ಮತ್ತು ಹುಲಿಗಳು ಈ ಷೆಡ್ಯೂಲ್‍ನಲ್ಲೇ ಸೇರಿವೆ. ವಾಸ್ತವವಾಗಿ ಆನೆ, ಹುಲಿ, ಸಿಂಹಗಳಿಗೆ ಸಿಕ್ಕಿರುವಷ್ಟುಕಾನೂನು ರಕ್ಷಣೆ ಬೇರೆ ವನ್ಯಜೀವಿಗಳಿಗಿಲ್ಲ. ಕೋತಿಗಳು, ಊಸರವಳ್ಳಿಗಳು, ಕೀಟಗಳು ಉಳಿದ ಸ್ತನಿಗಳು ಮತ್ತು ಸರೀಸೃಪಗಳು ಕೂಡ ಸಂರಕ್ಷಣೆಯ ಹಣೆಪಟ್ಟಿ ಧರಿಸಿ ನಿಂತಿವೆ. ಆದರೆ ಅವುಗಳ ಲೆಕ್ಕ ಸಿಕ್ಕಿಲ್ಲ. ನಿಮಗೆ ಆಶ್ಚರ್ಯವಾಗಬಹುದು ಕಾಗೆ, ಹಣ್ಣುಬಾವಲಿ, ಇಲಿಗಳು ಸಂರಕ್ಷಿತ ಜೀವಿಗಳು ಎನ್ನುತ್ತವೆ ಕಾನೂನು. ಆದರೆ ಅವುಗಳನ್ನು ಕೊಂದರೆ ಅದು ದೊಡ್ಡ ಅಪರಾಧವಾಗಿ ಕಾಣುತ್ತಿಲ್ಲ. ಏಕೆಂದರೆ ಸದಾ ಇವುಗಳನ್ನು ಮಾನವನ ಶತ್ರು ಎಂದೇ ನೋಡಲಾಗುತ್ತಿದೆ. ಕಾಗೆಗೇಕೆ ಈ ಪಟ್ಟಿಯಲ್ಲಿ ಸ್ಥಾನ?

ನಾವು ನವಿಲನ್ನು ಷಣ್ಮುಖನ ವಾಹನ ಎನ್ನುತ್ತೇವೆ. ನಾಟ್ಯ ಮಯೂರಿ ಎಂದು ಸಮೀಕರಿಸಿ ಹೇಳುತ್ತೇವೆ. ಕಂಡೊಡನೆ ಕ್ಲಿಕ್ಕಿಸಿ ಫೇಸ್ ಬುಕ್‍ಗೆ ಅಪ್‍ಲೋಡ್ ಮಾಡುತ್ತೇವೆ. ಕರ್ನಾಟಕ, ಗೋವಾ, ತಮಿಳುನಾಡು, ರಾಜಸ್ತಾನ, ಗುಜರಾತ್ ನವಿಲುಗಳಿಗೆ ಹೆಸರುವಾಸಿ. ನಮ್ಮಲ್ಲೇ ನವಿಲುಧಾಮವಿದೆ-ಆದಿಚುಂಚನಗಿರಿಕ್ಷೇತ್ರದಲ್ಲಿ. ಅದು ನಮ್ಮ ರಾಷ್ಟ್ರೀಯ ಪಕ್ಷಿಯೂ ಹೌದು. ಆದರೆ ಗೋವಾದಲ್ಲಿ ಅವು ಬೆಳೆ ಹಾಳುಮಾಡುತ್ತವೆ ಎಂದು ದೊಡ್ಡ ದನಿ ಎತ್ತಿದಾಗ, ಅಲ್ಲಿನ ಕೃಷಿ ಸಚಿವರು ಕೋವಿಯನ್ನು ಕೈಗೆತ್ತಿಕೊಳ್ಳಿ ಎಂದು ಹೇಳಿ ಭಾರಿ ವಿವಾದ ಎದುರಿಸಬೇಕಾಯಿತು. ವಾಸ್ತವವಾಗಿ ಹುಲಿ, ಚಿರತೆ, ಆನೆಗಳನ್ನು ಕೊಂದಾಗ ಆಗುವಷ್ಟುದೊಡ್ಡ ಸುದ್ದಿ ನವಿಲುಗಳನ್ನು ಕೊಂದಾಗ ಆಗುವುದಿಲ್ಲ. ಅವುಗಳ ಆವಾಸವೇ ಗದ್ದೆ ಬದಿಗಳು ಮತ್ತು ತೆರೆದ ಕಾಡು. ಅದು ಷೆಡ್ಯೂಲ್-1ರಲ್ಲಿ ನಮೂದಿಸಿರುವ ಸಂರಕ್ಷಿತ ಪಕ್ಷಿ. ಗೋವಾದ ಜನ ಅಪಸ್ವರವೆತ್ತಿದಾಗ ಸರ್ಕಾರ ಸುಮ್ಮನಾಯಿತು. ಆದರೆ ರೈತರು ಸದ್ದಿಲ್ಲದೆ ನವಿಲುಗಳನ್ನು ಕೊಲ್ಲುತ್ತಲೇ ಹೋದರು.

ವನ್ಯಜೀವಿ ಸಂರಕ್ಷಣೆಯ ಉನ್ನತ ಅಧಿಕಾರಿಗಳ ಸಮಸ್ಯೆಯೇ ಬೇರೆ. ನಮ್ಮ ಕಾನೂನಿನಲ್ಲಿ ಸಂರಕ್ಷಣೆ ಕುರಿತು ಸ್ಪಷ್ಟ ವ್ಯಾಖ್ಯೆ ಇದೆ. ಆದರೆ ನಿರ್ವಹಣೆ ಕುರಿತು ಯಾವುದೇ ಸೂಚನೆಗಳಿಲ್ಲ. ಹಾಗಾಗಿ ನಾವು ಕಾನೂನಿನಲ್ಲಿ ಬಂಧಿಯಾಗಿದ್ದೇವೆ ಎನ್ನುತ್ತಾರೆ. 1995ರಲ್ಲಿ ಗುಜರಾತಿನಲ್ಲಿ 40,000 ನೀಲ್‍ಗಾಯ್‍ಗಳುಇದ್ದುವಂತೆ. 2015ರ ಹೊತ್ತಿಗೆ 1,86,000ಕ್ಕೆ ಏರಿವೆ. ಸಂರಕ್ಷಣೆಯೇನೋ ಫಲಕೊಟ್ಟಿದೆ. ಆದರೆ ಅವುಗಳ ಅತಿ ಸಂತಾನವೋ ಅಥವಾ ಆವಾಸಕ್ಕೆ ಆಗಿರುವ ಧಕ್ಕೆಯೋ ಅಂತೂ ನೀಲ್‍ಗಾಯ್‍ಗಳು ಬೆಳೆ ನಷ್ಟಮಾಡುತ್ತಿರುವುದಂತೂ ದಿಟ ಎನ್ನುವುದು ಅವರ ಇನ್ನೊಂದು ಮಾತು.

ವಾಸ್ತವವಾಗಿ ಆನೆಗಳು ಕಬ್ಬಿನ ಗದ್ದೆ ಮತ್ತು ಬತ್ತದ ಗದ್ದೆ, ಬಾಳೆತೋಟವನ್ನು ಹೊಕ್ಕು ಧ್ವಂಸಮಾಡಿದಾಗ ಎಷ್ಟು ಎಕರೆ ನಷ್ಟವಾಗಿದೆ ಎಂಬ ನಿಜವಾದ ಸಮೀಕ್ಷೆ ಎಂದೂ ಆಗಿರುವುದೇ ಇಲ್ಲ. ಪರಿಹಾರ ಕೇಳುವಾಗ ಈ ಅಂಶವನ್ನು ಸ್ಪಷ್ಟಪಡಿಸುವುದೂ ಇಲ್ಲ. ಕೆಲವು ವೇಳೆ ಉತ್ಪ್ರೇಕ್ಷಿತ ಅಂಕಿ ಅಂಶಗಳಿರುತ್ತವೆ. ಯಾವರೈತನೂ ವನ್ಯಜೀವಿಗಳ ಆಕ್ರಮಣದಿಂದ ಬೆಳೆ ನಾಶವಾಯಿತೆಂದು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ನಮ್ಮಲ್ಲಿಲ್ಲ. ಆದರೆ ಸರ್ಕಾರ ಬಹುಬೇಗ ಸ್ಪಂದಿಸುವುದು ಅವುಗಳ ಆಕ್ರಮಣದ ಸಂದರ್ಭದಲ್ಲಿ ಮನುಷ್ಯರ ಪರವಾಗಿ ಎನ್ನುವುದು ಬಹುತೇಕ ಪರಿಸರ ಚಿಂತಕರ ಮಾತು. ಅವರು ಮತ್ತೊಂದು ಸಂಗತಿಯನ್ನೂಬಿಚ್ಚಿಡುತ್ತಾರೆ. ಎಲ್ಲ ರಾಜ್ಯಗಳಲ್ಲೂ ಶೇ.33 ಭಾಗ ಕಾಡಿರಬೇಕೆಂದು ಅರಣ್ಯ ಕಾಯ್ದೆ ಸೂಚಿಸುತ್ತದೆ. ಎಲ್ಲಿದೆ? ಎಷ್ಟು ಒತ್ತುವರಿಯಾಗಿದೆ ಎಂಬ ನಿರ್ದಿಷ್ಟ ಲೆಕ್ಕವೂ ಸಿಕ್ಕುವುದಿಲ್ಲ. ಇದರ ಅರ್ಥ ಬೇಟೆಗಾಗಿ ಅವು ಹೊರಬರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಒಂದು ಸಮಸ್ಯೆ ಉಲ್ಬಣಿಸುತ್ತದೆ. ಒಂದು ನಿರ್ದಿಷ್ಟವನ್ಯಜೀವಿಯನ್ನು ಕೊಲ್ಲಲು ಅನುಮತಿ ಕೋರಿ ಶಿಕಾರಿ ಮಾಡುವಾಗ ಅವೆಷ್ಟೋ ಬೇರೆ ಜೀವಿಗಳು ಬಲಿಯಾಗುತ್ತವೆ. ಇದನ್ನು ತಡೆಯುವುದು ಹೇಗೆ? ವಿದ್ಯುತ್ ತಂತಿ ಬೇಲಿಯನ್ನು ಹಾಕಿ ವನ್ಯಜೀವಿಗಳನ್ನು ನಿಭಾಯಿಸುತ್ತೇವೆ ಎಂಬುದು ಫಲಿಸುತ್ತಿಲ್ಲ. ಎಷ್ಟೋ ವೇಳೆ ಸಾಕುಪ್ರಾಣಿಗಳೂ ಅವುಗಳ ಸಂಪರ್ಕಕ್ಕೆ ಬಂದಾಗಸತ್ತಿರುವುದುಂಟು. ಇಂಥವು ದೊಡ್ಡ ಸುದ್ದಿಯಾಗುವುದೇ ಇಲ್ಲ.

ಹುಲಿಯ ವಿಚಾರದಲ್ಲೂ ಅಷ್ಟೇ. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ದೆಹಲಿಯಲ್ಲಿ `ಟೈಗರ್ ಸಮಿಟ್’ ಆಗಿತ್ತು. ಸರ್ಕಾರದ ಲೆಕ್ಕಾಚಾರದಂತೆ ಈಗ 2226 ಹುಲಿಗಳಿವೆ. ಈ ಕುರಿತು ಪ್ರಧಾನ ಮಂತ್ರಿಯೂ ಎದೆಸೆಟೆಸಿ ಹೇಳಿದ್ದರು. ಸರ್ಕಾರ ಮತ್ತು ಸಾರ್ವಜನಿಕರ ಸಹಕಾರವಿದ್ದರೆ ಈ ಯಶಸ್ಸು ಸಾಧ್ಯ ಎಂದೂಹೆಮ್ಮೆಯಿಂದ ಹೇಳಿದ್ದರು. ಆದರೆ ಹುಲಿ ತಜ್ಞರು ಇದು ಉತ್ಪ್ರೇಕ್ಷಿತ ಸಂಖ್ಯೆ ಎನ್ನುತ್ತಿದ್ದಾರೆ. ಮೊದಲೆಲ್ಲ ಹುಲಿ ಹೆಜ್ಜೆ ಹಿಡಿದು ಗಣತಿ ಮಾಡುತ್ತಿದ್ದ ತಜ್ಞರು ಈಗ ಉಲ್ಲಾಸ ಕಾರಂತರು ತೋರಿಸಿಕೊಟ್ಟ ಕ್ಯಾಮೆರಾ ಟ್ರಾಪ್ ಬಳಸಿ ವೈಜ್ಞಾನಿಕವಾಗಿಯೇ ಹುಲಿ ಗಣತಿ ಮಾಡುತ್ತಿದ್ದಾರೆ. ಜೊತೆಗೆ ಹುಲಿಯ ಲದ್ದಿಗೆ ಅಂಟಿಕೊಂಡಕೂದಲಿನ ಡಿ.ಎನ್.ಎ. ಪರೀಕ್ಷೆ ಮಾಡಿ ಕೂಡ ಹುಲಿಗಣನೆ ಮಾಡಬಹುದು ಎಂಬುದನ್ನು ಕಂಡುಕೊಂಡಿದ್ದಾರೆ. ಇಷ್ಟೆಲ್ಲಾ ಸಾಧ್ಯವಿದ್ದರೂ ಹುಲಿಗಳ ನಿರ್ದಿಷ್ಟ ಸಂಖ್ಯೆ ಎಷ್ಟು ಎಂದರೆ ಸರಿಯಾದ ಉತ್ತರವಿಲ್ಲ. ಷೆಡ್ಯೂಲ್-1ರಲ್ಲಿ ಬರುವ ಹುಲಿಗಳ ಕುರಿತೇ ಇಷ್ಟೊಂದು ಗೊಂದಲವಿರುವಾಗ ಇನ್ನು ಕಾಡುಹಂದಿಯನ್ನುಗಣತಿ ಮಾಡುವವರು ಯಾರು? ವ್ಯಾಪಕ ಪ್ರದೇಶದಲ್ಲಿ ಅವು ಹಾವಳಿ ಮಾಡಿರುವುದರಿಂದ ದೊಡ್ಡ ಸಂಖ್ಯೆಯಲ್ಲೇ ಅವು ಇರಬೇಕು ಎಂದು ಉತ್ತರಾಖಂಡ ಜಾರಿಕೆಯ ಉತ್ತರ ಕೊಡುತ್ತದೆ.

ಇದು ಭಾರತದ್ದಷ್ಟೇ ಸಮಸ್ಯೆಯಲ್ಲ. ಬಿಲಕರಡಿ (ಬ್ಯಾಡ್ಜರ್) ದನಗಳ ಕ್ಷಯಕ್ಕೆ ಕಾರಣವಾಗುತ್ತದೆಂದು ಇಂಗ್ಲೆಂಡ್ ಆರು ವರ್ಷಗಳಲಿ 1861 ಬಿಲಕರಡಿಗಳನ್ನು ಕೊಂದಿದೆ. ಕಾಡ್ ಮೀನುಗಳ ಉತ್ಪನ್ನಕ್ಕೆ ಕುತ್ತು ತರುತ್ತದೆಂದು ಕೆನಡ ಸೀಲ್‍ಗಳನ್ನು ಕೊಲ್ಲುತ್ತಿದೆ. ಈ ವರ್ಷದ ಟಾರ್ಗೆಟ್ 4,68,000 ಸೀಲ್‍ಗಳು. ಹಣ್ಣುಹಂಪಲನ್ನು ತಿಂದು ನಷ್ಟಮಾಡುತ್ತವೆಂದು ಮಾರಿಷಸ್ ಈ ಬಾರಿ 18,000 ಬಾವಲಿಗಳನ್ನು ಕೊಲ್ಲಲು ಸೂಚಿಸಿದೆ. ಇನ್ನು ಆಸ್ಟ್ರೇಲಿಯದ ರಾಷ್ಟ್ರೀಯ ಪ್ರಾಣಿ ಎಂದೇ ಕರೆಸಿಕೊಂಡಿರುವ ಕಾಂಗರೂಗೂ ಉಳಿಗಾಲವಿಲ್ಲ. ಪ್ರತಿವರ್ಷ ಮೇ ತಿಂಗಳಲ್ಲಿ 2,000 ಕಾಂಗರೂಗಳನ್ನು ಗುಂಡಿಕ್ಕಿ ಕೊಲ್ಲುವುದು ಸಂಪ್ರದಾಯವೆಂಬಂತೆ ನಡೆದುಬಂದಿದೆ.

ಈಗ ಹೇಳಿ, ನೀವು ಯಾರ ಪರ?

1 COMMENT

  1. ಲೇಖನದ ಮೊದಲ ಭಾಗ ನನ್ನ ಗಮನಕ್ಕೆ ಬಾರದೇ ಹೋಯ್ತು – ಕ್ಷಮಿಸಿ. ನವಿಲು ಈಗ ಇಲ್ಲಿ ಕೊಳಚೆ ಪ್ರದೇಶಗಳಲ್ಲಿ ನಾಯಿ, ಕಾಗೆಗಳಿಗೆ ಸ್ಪರ್ಧೆಕೊಡುವಷ್ಟು `ಧಾರಾಳ’ ಇವೆ. ಕೆಂಜಳಿಲು ಇಂದು ಅಡಿಕೆ ತೋಟದವರಿಗೆ ಬಲು ದೊಡ್ಡ `ಪೀಡೆ’ಯಾಗಿದೆ. ನನ್ನ ಹೆಂಡತಿಯ ತವರ್ಮನೆ ಪಾಣಾಜೆವಲಯದಲ್ಲಿ ತೋಟಗದ್ದೆಗಳನ್ನು ಸುಮಾರು ಎಂಟು ಕಾಟಿಗಳ ಹಿಂಡೊಂದು ಖಾಯಂ ಚರಾವಿನ ನೆಲೆ ಮಾಡಿಕೊಂಡಿವೆ. ಮಡಿಕೇರಿ ಒತ್ತಿನಲ್ಲೇ ಇರುವ ನನ್ನಜ್ಜನ ತೋಟದ ಮನೆ ವಲಯದಲ್ಲಿ ಈಗ ಖಾಯಂ ನೆಂಟರಿಷ್ಟರಾಗಿ ಆನೆಗಳ ಹಿಂಡೊಂದು ಠಿಕಾಣಿ ಹೂಡಿರುವುದರಿಂದ ನಾವೆಲ್ಲ `ಬಹಿಷ್ಕೃತರು.’ ಪಟ್ಟಿ ಎಷ್ಟುದ್ದವೂ ಬೆಳೆಸಬಹುದು, `ಹಾನಿ’ ಬಹುಬೆಲೆಯುಳ್ಳದ್ದೂ ನಿಜ – ಆದರೂ ಅಲ್ಲಿನ ನಷ್ಟಜೀವನದಲ್ಲೂ ಬುದ್ಧಿಯಿದ್ದವರೆಲ್ಲ ವನ್ಯಜೀವಿಗಳ ಪರವೇ ಇರುವಾಗ ನಾನು ಹೇಗೆ ಬೇರೆ ನಿಲ್ಲಲಿ! ಇನ್ನು ಸರಕಾರೀ ಕ್ರಮಗಳೆಲ್ಲಕ್ಕೂ (`ಹೊರತುಪಡಿಸಿ’ ಎಂದು ಹೆಸರಿಸಲು ಒಂದೂ ಕಲಾಪವಿಲ್ಲದಂತೆ) ಸಾಯಿನಾಥರ ಖ್ಯಾತ ಪುಸ್ತಕದ ಶೀರ್ಶಿಕೆಯೇ ಸಾಕು – Everybody loves a good draught 🙁

Leave a Reply