ರಾಜ್ಯಗಳ ಮಂತ್ರಿಗಳ ಪೈಕಿ ಡಿಕೆಶಿ 2ನೇ ದೊಡ್ಡ ಶ್ರೀಮಂತ, ರಾಹುಲ್ ಗಾಂಧಿಗೆ ಅಸ್ಸಾಂ ಕೋರ್ಟ್ ಸಮನ್ಸ್, ಎನ್ಐಎ ಮಾಹಿತಿ ಮೇರೆಗೆ ಕುವೈತ್ ನಲ್ಲಿ ಉಗ್ರನ ಬಂಧನ

Inauguration of flower show ahead of Independance Day at Lalabagh in Bengaluru on Saturday.

ಸ್ವಾತಂತ್ರ್ಯೋತ್ಸವ ದಿನ ಸಮೀಪಿಸುತ್ತಿದ್ದಂತೆ ಬೆಂಗಳೂರಿನ ಲಾಲ್ಭಾಗ್ ಪುಷ್ಪ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿದೆ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದ ಇಂಧನ ಸಚಿವ ಡಿ.ಕೆ ಶಿವಕುಮಾರ್ ದೇಶದ ರಾಜ್ಯ ಸರ್ಕಾರಗಳ ಮಂತ್ರಿಗಳ ಪೈಕಿ ಎರಡನೇ ಅತಿ ಶ್ರೀಮಂತ ಸಚಿವ. ಹೀಗೆಂದು ಹೇಳ್ತಿರೋದು ಅಸೊಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಅಧ್ಯಯನದ ವರದಿ.

ಹೌದು, ವಿವಿಧ ರಾಜ್ಯಗಳಲ್ಲಿರುವ ಮಂತ್ರಿಗಳ ಆಸ್ತಿಗಳ ವಿವರ ಪಟ್ಟಿಯ ಆಧಾರದ ಮೇಲೆ ಎಡಿಆರ್ ಈ ಅಧ್ಯಯನ ನಡೆಸಿದ್ದು, ದೇಶದ ವಿವಿಧ ರಾಜ್ಯ ಸರ್ಕಾರದಲ್ಲಿರುವ ಶೇ.76 ರಷ್ಟು ಮಂತ್ರಿಗಳು ಕೋಟಿಯ ಒಡೆಯರು ಎಂದು ತಿಳಿಸಿದೆ.

ರಾಜ್ಯಗಳ ಶೇ.34ರಷ್ಟು ಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್ ವಿಚಾರಣೆಯ ಹಂತದಲ್ಲಿದ್ದರೆ, ಶೇ.76ರಷ್ಟು ಸಚಿವರು ಕೋಟ್ಯಧಿಪತಿಗಳು ಎಂಬ ಅಂಶ ಹೊಸ ಅಧ್ಯಯನದ ಮೂಲಕ ಬಹಿರಂಗವಾಗಿದೆ. ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಸಚಿವ ಪೊಂಗುರು ನಾರಾಯಣ ₹496 ಕೋಟಿ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಡಿ.ಕೆ ಶಿವಕುಮಾರ್ ₹ 251 ಕೋಟಿ ಆಸ್ತಿಯೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ರಾಜ್ಯದ 32 ಮಂತ್ರಿಗಳ ಪೈಕಿ 31 ಮಂತ್ರಿಗಳು ಕೋಟ್ಯಧೀಶರೆ. ಕರ್ನಾಟಕದ ಸಂತೋಷ್ ಲಾಡ್ ₹ 186 ಕೋಟಿ ಆಸ್ತಿಯೊಂದಿಗೆ ಮೂರನೇ ಸ್ಥಾನ. ₹ 136 ಕೋಟಿ ಹೊಂದಿರುವ ಎಂ.ಆರ್ ಸೀತಾರಾಂ ಆರನೇ ಸ್ಥಾನದಲ್ಲಿದ್ದಾರೆ.

ಇನ್ನು ನಮ್ಮ ರಾಜಕೀಯ ನಾಯಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ಪೈಕಿ ಶೇ.34ರಷ್ಟು ಮಂತ್ರಿಗಳ ವಿರುದ್ಧ ಕೇಸ್ ವಿಚಾರಣೆಯ ಹಂತದಲ್ಲಿವೆ. 29 ರಾಜ್ಯಗಳಿಂದ 609 ಸಚಿವರ ಪೈಕಿ 210 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇನ್ನು ಕೇಂದ್ರದ 78 ಸಚಿವರ ಪೈಕಿ 24 (ಶೇ.31) ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ರಾಜ್ಯ ವಿಧಾನಸಭೆಗಳ ಒಟ್ಟು 113 ಸಚಿವರ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧದ ಆರೋಪ ಸೇರಿ ಗುರುತರವಾದ ಪ್ರಕರಣಗಳು ದಾಖಲಾಗಿವೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಸಾಲುಗಳು…

  • ಮಹಾತ್ಮ ಗಾಂಧಿಯನ್ನು ಕೊಂದಿದ್ದು ಆರೆಸ್ಸೆಸ್ ನವರು ಎಂದು ಹೇಳಿ ಮಾನಹಾನಿ ಪ್ರಕರಣದಲ್ಲಿ ಮುಖಭಂಗ ಅನುಭಸಿರುವ ರಾಹುಲ್ ಗಾಂಧಿಗೆ ಮತ್ತೊಂದು ಪ್ರಕರಣದಲ್ಲಿ ಹಿನ್ನಡೆಯಾಗಿದೆ. ಕಳೆದ ವರ್ಷ ಬರ್ಪೇಟಾದಲ್ಲಿ ದೇವಸ್ಥಾನಕ್ಕೆ ಪ್ರವೇಶ ಸಂಬಂದ ರಾಹುಲ್ ಗಾಂಧಿ ಆರೆಸ್ಸೆಸ್ ವಿರುದ್ಧ ನೀಡಿದ್ದ ಹೇಳಿಕೆಗೆ ಅಪರಾಧ ಮಾನಹಾನಿ ಪ್ರಕರಣದ ತನಿಖೆ ಎದುರಿಸುವಂತೆ ಅಸ್ಸಾಂ ನ್ಯಾಯಾಲಯ ಸಮನ್ಸ್ ನೀಡಿದೆ. ಸೆ.21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
  • ಭಾರತದ ರಾಷ್ಟ್ರೀಯ ತನಿಖಾ ದಳದ ಮಾಹಿತಿ ಆಧಾರದ ಮೇರೆಗೆ ಇಸಿಸ್ ಸಂಘಟನೆಗೆ ಸಂಬಂಧಿಸಿದ ಉಗ್ರನನ್ನು ಕುವೈತ್ ನಲ್ಲಿ ಬಂಧಿಸಲಾಗಿದೆ. ಅಬ್ದುಲ್ಲಾ ಹಡಿ ರೆಹಮಾನ್ ಎಂಬಾತ ಬಂಧಿತನಾಗಿದ್ದು, ಈತ ಇಸಿಸ್ ಸಂಘಟನೆ ಬಗ್ಗೆ ಒಲವು ಹೊಂದಿದ್ದವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಎನ್ನಲಾಗಿದೆ.
  • ಫ್ರಾನ್ಸ್ ನ ಬಾರ್ ನಲ್ಲಿ ಹುಟ್ಟುಹಬ್ಬದ ಆಚರಣೆ ವೇಳೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು 13 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಪೊಲೀಸರು ಬಾರ್ ನಲ್ಲಿದ್ದ 6 ಮಂದಿಯನ್ನು ರಕ್ಷಿಸಿದ್ದಾರೆ.
  • ಭಾರತ ಮತ್ತು ಪಾಕಿಸ್ತಾನ ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ಪರಸ್ಪರ ಉತ್ತಮ ಸಹಕಾರ ನೀಡಬೇಕು ಎಂದು ಅಮೆರಿಕ ಕರೆ ನೀಡಿದೆ. ದಕ್ಷಿಣ ಏಷ್ಯಾದ ಈ ಎರಡು ರಾಷ್ಟ್ರಗಳ ನಡುವಣ ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲೇ ಅಮೆರಿಕ ಈ ಹೇಳಿಕೆ ನೀಡಿದೆ.

Leave a Reply