ಒಲಿಂಪಿಕ್ಸ್ ಮೊದಲ ದಿನ ನೀವು ಮಿಸ್ ಮಾಡಬಾರದ ಸ್ಪರ್ಧೆಗಳಾವುವು ಗೊತ್ತಾ?

ಭಾರತಕ್ಕೆ ಪದಕದ ನಿರೀಕ್ಷೆಯಾಗಿರೋ ಶೂಟರ್ ಜೀತು ರೈ..

ಡಿಜಿಟಲ್ ಕನ್ನಡ ಟೀಮ್:

ಶೂಟಿಂಗ್, ರೋಯಿಂಗ್, ಟೆನಿಸ್, ಟೇಬಲ್ ಟೆನಿಸ್ ಹಾಗೂ ಹಾಕಿ… ಇವಿಷ್ಟೂ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವಾದ ಶನಿವಾರ ಭಾರತೀಯ ಸ್ಪರ್ಧಿಗಳು ತಮ್ಮ ಅಭಿಯಾನ ಆರಂಭಿಸುತ್ತಿರುವ ಕ್ರೀಡೆಗಳು. ಯಾರು ಯಾರ ವಿರುದ್ಧ ಆಡಲಿದ್ದಾರೆ, ಎಷ್ಟೊತ್ತಿಗೆ ಪಂದ್ಯ ನಡೆಯಲಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ…

  • ಪದಕದ ಮೇಲೆ ಶೂಟರ್ ಗಳ ಗುರಿ: ಭಾರತದ ಮಹಿಳಾ ಶೂಟರ್ ಅಯೋನಿಕಾ ಪೌಲ್ ಹಾಗೂ ಅಪೂರ್ವಿ ಚಾಂಡೆಲಾ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಅಭಿಯಾನವನ್ನು ಆರಂಭಿಸಲಿದ್ದಾರೆ. ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಈ ಸ್ಪರ್ಧೆ ಆರಂಭವಾಗಲಿದ್ದು, ಅರ್ಹತಾ ಸುತ್ತಿನಲ್ಲಿ ಒಟ್ಟು 51 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಫೈನಲ್ ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ.
    ಇನ್ನು ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆ ಭಾರತದ ಪದಕದ ನಿರೀಕ್ಷೆ ಹೆಚ್ಚಿದ್ದು, ರಾತ್ರಿ 9.30ಕ್ಕೆ ಈ ಸ್ಪರ್ಧೆ ನಡೆಯಲಿದೆ. ಈ ವಿಭಾಗದಲ್ಲಿ ಭಾರತದ ಭರವಸೆಯ ಶೂಟರ್ ಜೀತು ರೈ ಹಾಗೂ ಗುರ್ಪ್ರೀತ್ ಸಿಂಗ್ ಸೆಣಸಲಿದ್ದಾರೆ. ಈ ವಿಭಾಗದ ಫೈನಲ್ ಸುತ್ತು ರಾತ್ರಿ 12 ಗಂಟೆಗೆ ಆರಂಭವಾಗಲಿದೆ.
  • ಐರ್ಲೆಂಡ್ ವಿರುದ್ಧ ಭಾರತದ ಅಭಿಯಾನ ಶುರು: ಈ ಬಾರಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿರೋ ಪುರುಷರ ಹಾಕಿ ತಂಡ ಐರ್ಲೆಂಡ್ ವಿರುದ್ಧ ಬಿ ಗುಂಪಿನ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದ್ದು, ಈ ಪಂದ್ಯ ಮುಂದಿನ ಪಂದ್ಯಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಬಹುಮುಖ್ಯವಾಗಿದೆ.
  • ಶುಭಾರಂಭಕ್ಕೆ ಟೆನಿಸ್ ಜೋಡಿಗಳ ಕಾತರ: ಇನ್ನು ಭಾರತದ ಪುರುಷರ ಟೆನಿಸ್ ಜೋಡಿ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಮೊದಲ ಸುತ್ತಿನಲ್ಲಿ ತಮ್ಮ ಪಂದ್ಯವನ್ನಾಡಲಿದ್ದು ಪೊಲೆಂಡ್ ನ ಮಟ್ಕೊವಸ್ಕಿ- ಕುಬೊಟ್ ಜೋಡಿಯನ್ನು ಎದುರಿಸಲಿದೆ. ಇನ್ನು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಾರ್ಥನಾ ತೊಂಬಾರೆ ಮತ್ತು ಸಾನಿಯಾ ಮಿರ್ಜಾ ಜೋಡಿ ಮೊದಲ ಸುತ್ತಿನಲ್ಲಿ ಚೀನಾದ ಎಸ್.ಜಾಂಗ್ ಮತ್ತು ಎಸ್.ಪೆಂಗ್ ಜೋಡಿ ವಿರುದ್ಧ ಸೆಣಸಲಿದೆ. ಪುರುಷರ ಪಂದ್ಯ ರಾತ್ರಿ 7.30ಕ್ಕೆ ಆರಂಭವಾದ್ರೆ, ಮಹಿಳೆಯರ ಪಂದ್ಯ ರಾತ್ರಿ 1.30ಕ್ಕೆ ಆರಂಭವಾಗಲಿದೆ.
  • ಟಿಟಿಯಲ್ಲಿ ಸಿಂಗಲ್ಸ್ ಕಾದಾಟ: ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೌಮ್ಯಜಿತ್ ಘೋಶ್ ಥಾಯ್ಲೆಂಡ್ ನ ಪಡಸಾಕ್ ವಿರುದ್ಧ ಮೊದಲ ಸುತ್ತಿನಲ್ಲಿ ಸೆಣಸಲಿದ್ದು, ಪಂದ್ಯ ರಾತ್ರಿ 12.30ಕ್ಕೆ ಆರಂಭವಾಗಲಿದೆ. ಶರತ್ ಕಮಲ್ ತಮ್ಮ ಪ್ರತಿಸ್ಪರ್ಧಿ ರೊಮೇನಿಯಾದ ಆಡ್ರಿಯಾನ್ ಕ್ರಿಸನ್ ವಿರುದ್ಧ ನಾಳೆ ಬೆಳಗಿನ ಜಾವ 3.30ಕ್ಕೆ ಸೆಣಸಲಿದ್ದಾರೆ.
    ಮಹಿಳೆಯರ ಸಿಂಗಲ್ಸ್ ನಲ್ಲಿ ಮನಿಕಾ ಬಾತ್ರಾ ಅವರು ಪೊಲೆಂಡ್ ನ ಕಟ್ರಾಜಿನಾ ಫ್ರಾಂಕ್ ವಿರುದ್ಧ ರಾತ್ರಿ 8.30ಕ್ಕೆ, ಮೌಮಾ ದಾಸ್ ಅವರು ರೊಮೇನಿಯಾದ ಡೇನಿಯಲ್ ಮೊಂಟೆರಿಯೋ ವಿರುದ್ಧ ರಾತ್ರಿ 7.45ಕ್ಕೆ ಸೆಣಸಲಿದ್ದಾರೆ.
  • ಇನ್ನು ಸಂಜೆ 5 ಗಂಟೆಗೆ ನಡೆಯಲಿರುವ ರೋಯಿಂಗ್ ಸ್ಪರ್ಧೆಯ ಮೊದಲ ಹೀಟ್ಸ್ ನಲ್ಲಿ ಭಾರತದ ದತ್ತು ಬಬನ್ ಭೊಕನಲ್ ಸ್ಪರ್ಧಿಸಲಿದ್ದಾರೆ.

ಎಲ್ಲ ಪಂದ್ಯಗಳ ಸಮಯ ಭಾರತೀಯ ಕಾಲಮಾನದಲ್ಲಿ ನೀಡಲಾಗಿದೆ..

ಆರ್ಚರಿಯಲ್ಲಿ ಅತನು ಶುಭಾರಂಭ…

ಇನ್ನು ಶುಕ್ರವಾರ ರಾತ್ರಿ ನಡೆದ ಆರ್ಚರಿ ಸ್ಪರ್ಧೆಯ ಶ್ರೇಯಾಂಕಿತ ಸುತ್ತಿನಲ್ಲಿ ಭಾರತದ ಅತನು ದಾಸ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ದಾಸ್ 683 ಅಂಕಗಳನ್ನು ಸಂಪಾದಿಸುವ ಮೂಲಕ 5ನೇ ಸ್ಥಾನ ಪಡೆದರು. 64 ಸ್ಪರ್ಧಿಗಳ ಈ ಸುತ್ತಿನಲ್ಲಿ 5ನೇ ಶ್ರೇಯಾಂಕ ಪಡೆದಿರುವ ಅತನು ದಾಸ್ ಮುಂದಿನ ಸುತ್ತಿನಲ್ಲಿ ನೇಪಾಳದ ಜಿತ್ಬಹುದ್ದುರ್ ಮುಕ್ತಾನ್ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯ ಆ.8 ರಂದು ನಡೆಯಲಿದೆ.

ಇನ್ನು ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ 640 ಅಂಕಗಳೊಂದಿಗೆ 20ನೇ, ಬೊಂಬೈಲಾ ದೇವಿ 638 ಅಂಕಗಳೊಂದಿಗೆ 24ನೇ ಹಾಗೂ ಲಕ್ಷ್ಮಿರಾಣಿ 614 ಅಂಕಗಳೊಂದಿಗೆ 43ನೇ ಸ್ಥಾನ ಗಳಿಸಿದರು. ಮುಂದಿನ ಸುತ್ತಿನ ಪಂದ್ಯ ಆ.11 ರಂದು ನಡೆಯಲಿದೆ. ಇನ್ನು ತಂಡದ ವಿಭಾಗದಲ್ಲಿ ಈ ಮೂವರ ತಂಡ 1892 ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದೆ. ಮುಂದಿನ ಪಂದ್ಯ ಭಾನುವಾರ ಸಂಜೆ 5.55ಕ್ಕೆ ಆರಂಭವಾಗಲಿದೆ.

Leave a Reply