ಪರೀಕ್ಷೆ- ಪ್ರವೇಶಗಳಲ್ಲಿ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದ ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರದ ಅಂಕುಶ, ಏಕರೂಪ ವೇಳಾಪಟ್ಟಿಗೆ ಆದೇಶ

ಪ್ರಾತಿನಿಧಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗಳಾಗುವುದು ಹಾಗೂ ಫಲಿತಾಂಶ ಬರುವುದೇ ಒಂದು ದೊಡ್ಡ ಸರ್ಕಸ್ಸಾಗಿರುವುದು ಪತ್ರಿಕೆಗಳ ಓದುಗರ ಓಲೆ ಗಮನಿಸುವವರಿಗೆಲ್ಲ ವೇದ್ಯ ಸಂಗತಿ. ಇನ್ನೂ ಫಲಿತಾಂಶವೇ ಬಂದಿಲ್ಲ, ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಪರೀಕ್ಷೆಯ ಟೈಮ್ ಟೇಬಲ್ ಸಿಕ್ಕಿಲ್ಲ ಎಂದೆಲ್ಲ ವಿದ್ಯಾರ್ಥಿಗಳ ಆತಂಕ ಹೊತ್ತ ಪತ್ರಗಳು ಸಾಮಾನ್ಯವಾಗಿವೆ. ಬೆಂಗಳೂರು ವಿಶ್ವವಿದ್ಯಾಲಯವಂತೂ ಇದರಲ್ಲಿ ಕುಖ್ಯಾತಿಯನ್ನೇ ಪಡೆದಿದೆ.

ಇದೀಗ ರಾಜ್ಯ ಸರ್ಕಾರ ಇದನ್ನು ತಡೆಯುವ ನಿಟ್ಟಿನಲ್ಲಿ ಉತ್ತಮ ಆದೇಶವೊಂದನ್ನು ಹೊರಟಿಸಿದೆ. ಆ ಪ್ರಕಾರ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಏಕಕಾಲದಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ಫಲಿತಾಂಶಕ್ಕೆ ಸಹ ದಿನಾಂಕ ನಿಗದಿ ಆಗಬೇಕು. ಈ ಆದೇಶ ಉಲ್ಲಂಘಿಸಿದರೆ ಅಂತಹ ವಿಶ್ವವಿದ್ಯಾಲಯದ ಉಪಕುಲಪತಿ, ಕುಲಸಚಿವ ಹಾಗೂ ಪರೀಕ್ಷಾ ವಿಭಾಗದ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಬೆಂಗಳೂರು ಮೈಸೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ 23 ವಿಶ್ವವಿದ್ಯಾಲಯಗಳ ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸಬೇಕು. ವಾರ್ಷಿಕ ಶೈಕ್ಷಣಿಕ ಪ್ರವೇಶ ಆರಂಭಕ್ಕೂ ದಿನಾಂಕ ನಿಗದಿ ಮಾಡಬೇಕು. ಇದುವರೆಗೂ ಪ್ರತೀ ವಿಶ್ವವಿದ್ಯಾಲಯ ತಮ್ಮ ನಿಯಮಾನುಸಾರ ಪ್ರವೇಶ ಮತ್ತು ಪರೀಕ್ಷೆಗಳನ್ನು ನಡೆಸಿಕೊಂಡುಬರುತ್ತಿತ್ತು. ಇದರಿಂದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ, ಉದ್ಯೋಗಕ್ಕೆ ತೊಂದರೆಯಾಗುತ್ತಿತ್ತು. ಇದು ಭ್ರಷ್ಟಾಚಾರಕ್ಕೂ ಎಡೆಮಾಡಿಕೊಟ್ಟಿತ್ತು.

ಬರುವ ಶೈಕ್ಷಣಿಕ ಅಂದರೆ 2017-18ನೇ ಸಾಲಿನಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಪ್ರತಿವರ್ಷ ಕಡ್ಡಾಯವಾಗಿ ಸ್ನಾತಕ, ಪದವಿ ಫಲಿತಾಂಶವನ್ನು ಮೇ 31 ರೊಳಗಾಗಿ ಹಾಗೂ ಸ್ನಾತಕೋತ್ತರ ಪದವಿ ಫಲಿತಾಂಶವನ್ನು ಜೂನ್ 30 ರೊಳಗಾಗಿ ಪ್ರಕಟಿಸಬೇಕು. ಈ ಸೂಚನೆ ಪಾಲಿಸದಿದ್ದಲ್ಲಿ, ಆಯಾ ವಿಶ್ವವಿದ್ಯಾಲಯದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.

ಪದವಿ ಕಾಲೇಜುಗಳು ಜೂನ್ 1 ರಂದು ಆರಂಭಗೊಳ್ಳಬೇಕು. 1,3 ಹಾಗೂ 5ನೇ ಸೆಮಿಸ್ಟರ್ ತರಗತಿಗಳು 15 ಮತ್ತು 30ನೇ ಜೂನ್ ಒಳಗೆ ಆರಂಭಗೊಳ್ಳಬೇಕು.

ಮೊದಲನೇ ಸೆಮಿಸ್ಟರ್‍ನ ಪ್ರವೇಶ ಪ್ರಕ್ರಿಯೆ ಜುಲೈ 30ಕ್ಕೆ ಪೂರ್ಣಗೊಳ್ಳಬೇಕು. 1,3 ಹಾಗೂ 5ನೇ ಸೆಮಿಸ್ಟರ್ ಅಕ್ಟೋಬರ್ 22ಕ್ಕೆ ಅಂತ್ಯಗೊಂಡು, 15ನೇ ಅಕ್ಟೋಬರ್ ನಿಂದ ನವೆಂಬರ್ 2ಕ್ಕೆ ಪೂರ್ಣಗೊಳ್ಳಬೇಕು ಎಂದು ತಿಳಿಸಿದೆ.

Leave a Reply