ಪ್ರಾಣ ಉಳಿಸಿಕೊಳ್ಳಲು ಈಜಿದ್ದ ಸಿರಿಯಾ ನಿರಾಶ್ರಿತೆ ಯುಸ್ರಾ ಈಗ ಒಲಿಂಪಿಕ್ಸ್ ಸ್ಪರ್ಧಿಯಾದ ರೋಚಕ ಕತೆ

 

ಡಿಜಿಟಲ್ ಕನ್ನಡ ಟೀಮ್:

ಬದುಕಿನ ಹಾದಿಯೇ ಒಂದು ವಿಚಿತ್ರ… ಯಾವಾಗ ಯಾವ ತಿರುವು ಸಿಕ್ಕು ಎತ್ತ ಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಒಂದು ಸೂಕ್ತ ಉದಾಹರಣೆ ಕಳೆದ ವರ್ಷ ಸಿರಿಯಾದಿಂದ ನಿರಾಶ್ರಿತಳಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಯುಸ್ರಾ ಮರ್ದಿನಿ, ಈಗ ಒಲಿಂಪಿಕ್ಸ್ ಸ್ಪರ್ಧಿಯಾಗಿರೋದು.

ಹೌದು, ಈ ಬಾರಿಯ ರಿಯೋ ಒಲಿಂಪಿಕ್ಸ್ ನ ವಿಶೇಷಗಳಲ್ಲಿ ಸಾಕಷ್ಟು ಗಮನಸೆಳೆದಿರುವುದು ನಿರಾಶ್ರಿತ ಅಥ್ಲೀಟ್ ಗಳ ತಂಡಕ್ಕೆ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿರೋದು. ಸಿರಿಯಾ ಸೇರಿದಂತೆ ಇತರೆ ರಾಷ್ಟ್ರಗಳಿಂದ ನಿರಾಶ್ರಿತರಾಗಿ ಬೇರೆ ದೇಶಗಳನ್ನು ಸೇರಿಕೊಂಡಿರುವರಲ್ಲಿ ಅತ್ಯುತ್ತಮ ಅಥ್ಲೀಟ್ ಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಹುಡುಕಿ ನಿರಾಶ್ರಿತರ ತಂಡವನ್ನು ಕಟ್ಟಿದೆ. ಅಲ್ಲದೆ ಈ ಬಾರಿಯ ಕ್ರೀಡಾಕೂಟದಲ್ಲಿ ಈ ತಂಡ ಭಾಗವಹಿಸಲು ಅವಕಾಶ ನೀಡಿದೆ. ಇದರೊಂದಿಗೆ ಎರಡನೇ ವಿಶ್ವಯುದ್ಧದ ನಂತರದ ನಿರಾಶ್ರಿತರ ಸಮಸ್ಯೆ ಕುರಿತಂತೆ ವಿಶ್ವಕ್ಕೆ ಅರಿವು ಮೂಡಿಸುವ ಪ್ರಯತ್ನ ಐಒಸಿಯದ್ದಾಗಿದೆ.

ಈ ತಂಡದಲ್ಲಿ 43 ಅಥ್ಲೀಟ್ ಗಳು ಭಾಗವಹಿಸುತ್ತಿದ್ದು, 10 ಮಂದಿ ಸಿರಿಯಾದ ಅಥ್ಲೀಟ್ ಗಳಿದ್ದಾರೆ. ಆ ಪೈಕಿ ಯುಸ್ರಾ ಮರ್ದಿನಿ ಸಹ ಒಬ್ಬರು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಮಾರು 25 ದಿನಗಳ ಕಾಲ ದಿಕ್ಕುದೆಸಿ ಇಲ್ಲದೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಈಕೆ ನಡೆಸಿದ ಹೋರಾಟ ನಿಜಕ್ಕೂ ಒಂದು ಹೋರಾಟವೇ ಸರಿ. ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಒಲಿಂಪಿಕ್ಸ್ ವೇದಿಕೆವರೆಗೂ ಸಾಗಿ ಬಂದ ಈಕೆಯ ಹಾದಿ ನಿಜಕ್ಕೂ ಶ್ಲಾಘನೀಯ. ಪದಕ ಗೆಲ್ಲುತ್ತಾಳೊ ಬಿಡುತ್ತಾಳೊ ಆದ್ರೆ, ಈ ಸಂಕಷ್ಟದ ಸವಾಲನ್ನು ಗೆದ್ದಿರುವ ಈಕೆ ನಿಜಕ್ಕೂ ಚಾಂಪಿಯನ್…

ಹಲವು ವರ್ಷಗಳಿಂದ ಸಿರಿಯಾದಲ್ಲಿನ ನಾಗರೀಕ ಯುದ್ಧದ ಪರಿಣಾಮ ಅಲ್ಲಿನ ಜನರ ಬದುಕು ದುಸ್ಥರವಾಗಿತ್ತು. ಕಳೆದ ವರ್ಷ ಲಕ್ಷಾಂತರ ಮಂದಿ ಸಿರಿಯಾದಿಂದ ವಿಶ್ವದ ನಾನಾ ಭಾಗಗಳಿಗೆ ನಿರಾಶ್ರಿತರಾಗಿ ವಲಸೆ ಹೋದರು. ನಿಮಗೆ ನೆನಪಿರಬೇಕಲ್ಲ 6 ವರ್ಷದ ಮಗುವೊಂದು ಸಮುದ್ರ ತೀರದಲ್ಲಿ ಸತ್ತು ಬಿದ್ದಿದ್ದ ಫೋಟೊ ನಮ್ಮೆಲ್ಲರ ಕರುಳು ಕಿತ್ತುಬರುವಂತೆ ಮಾಡಿದ್ದು. ಹೀಗೆ ನಿರಾಶ್ರಿತರ ಪೈಕಿ ಹಲವರು ಪ್ರಾಣ ಕಳೆದುಕೊಂಡರೆ, ಮತ್ತೆ ಕೆಲವರು ಪ್ರಾಣ ಉಳಿಸಿಕೊಂಡು ಬೇರೆಡೆ ಹೊಸ ಜೀವನ ಆರಂಭಿಸುವಲ್ಲಿ ಯಶಸ್ವಿಯಾದ್ರು.

ಹೀಗೆ ಪ್ರಾಣ ಉಳಿಸಿಕೊಂಡು ಹೊಸ ಬದುಕನ್ನು ಹುಡುಕುತ್ತಾ ಜರ್ಮನಿಗೆ ಬಂದು ಸೇರಿದ ಮರ್ದಿನಿಯ ಹಾದಿ ಹೇಗಿತ್ತು ಅಂತಾ ನೋಡೋಣ ಬನ್ನಿ…

18 ವರ್ಷದ ಯುಸ್ರಾ ಮರ್ದಿನಿ ಚಿಕ್ಕ ವಯಸ್ಸಿನಿಂದಲೇ ಸ್ಪರ್ಧಾತ್ಮಕ ಈಜುಗಾರ್ತಿ. ಸಿರಿಯಾದಲ್ಲಿನ ನಾಗರೀಕ ಯುದ್ಧದ ಪರಿಣಾಮ ಈಕೆಯ ಕುಟುಂಬ ಬೀದಿಗೆ ಬಿತ್ತು. ಅಲ್ಲಿಂದ ಬೇರೆಡೆಗೆ ಸಾಗುವ ಸಂದರ್ಭದಲ್ಲಿ ಯುಸ್ರಾ ಮತ್ತು ಆಕೆಯ ಸಹೋದರಿ ತಮ್ಮ ಕುಟುಂಬ ಸದಸ್ಯರ ಸಂಪರ್ಕವನ್ನು ಕಳೆದುಕೊಂಡರು.

ಸಿರಿಯಾದಿಂದ ಯುರೋಪ್ ನತ್ತ ತೆರಳಲು 20 ಜನರಿದ್ದ ಬೋಟ್ ಹತ್ತಿದರು. ಟರ್ಕಿಯ ಗ್ರೀಕ್ ನ ದ್ವೀಪವಾಗಿರುವ ಲೆಸ್ಬೋಸ್ ಗೆ ತಲುಪುವಾಗ ರಾತ್ರಿಯ ಕಗ್ಗತ್ತಲಲ್ಲಿ ಇವರಿಗೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಹಾದಿ ಕಾಣಲಿಲ್ಲ. ಈ ಹಂತದಲ್ಲಿ ಇವರಿದ್ದ ಬೋಟ್ ನ ಯಂತ್ರ ಕೈಕೊಟ್ಟು ನಿಂತಿತು. ಇದರಲ್ಲಿದ್ದ 20 ಮದಿಯ ಪೈಕಿ ಯುಸ್ರಾ ಸಹೋದರಿಯರು ಸೇರಿದಂತೆ ಕೇವಲ ಮೂರ್ನಾಲ್ಕು ಮಂದಿಗೆ ಮಾತ್ರ ಈಜು ಗೊತ್ತಿತ್ತು.

ಈ ಹಂತದಲ್ಲಿ ಭಯ ಬೀಳದ ಯುಸ್ರಾ, ‘ಪ್ರಾಣ ಹೋಗಬೇಕಿದ್ದರೆ ಯಾವಾಗ ಬೇಕಾದರು ಹೋಗಬಹುದು. ಆದರೆ, ಇದು ಭಯದಿಂದ ಕೂರುವ ಸಮಯವಲ್ಲ. ಒಂದು ಪ್ರಯತ್ನ ಮಾಡಲೇಬೇಕು’ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ನೀರಿಗೆ ದುಮುಕಿದಳು ಮರ್ದಿನಿ. ಈಜುವ ಮೂಲಕವೇ ಬೋಟನ್ನು ಗ್ರೀಸ್ ನ ಕಡಲ ತೀರದವರೆಗೂ ತಂದು ಮುಟ್ಟಿಸಿದರು. ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕಾರಣ ರಾತ್ರಿಯ ವೇಳೆ ಮೂರು ಗಂಟೆಗಳ ಕಾಲ ಸಮುದ್ರದಲ್ಲಿ ಈಜುವ ಮೂಲಕ ಬೋಟ್ ಅನ್ನು ದಡ ಸೇರಿಸಿದರು. ನಂತರ ಇವರು ಗ್ರೀಸ್ ನಿಂದ ಮಸೆಡೊನಿಯಾ ಮಾರ್ಗವಾಗಿ, ಸೆರ್ಬಿಯಾ, ಹಂಗೇರಿ ಮತ್ತು ಆಸ್ಟ್ರಿಯಾ ಮೂಲಕ ಕೊನೆಗೆ ಜರ್ಮನಿ ತಲುಪಿದರು. ಅದು ಕಾಲ್ನಡಿಗೆಯಲ್ಲಿ… ಹೀಗೆ ಜರ್ಮನಿ ತಲುಪಲು ಬೇಕಾಗಿದ್ದು ಬರೋಬ್ಬರಿ 25 ದಿನ.

ಬರ್ಲಿನ್ ನಲ್ಲಿರುವ ನಿರಾಶ್ರಿತರ ಶಿಬಿರ ಸೇರುತ್ತಿದ್ದಂತೆ ಯುಸ್ರಾ ಹಾಗೂ ಆಕೆಯ ಸಹೋದರೆ, ತಮ್ಮ ತಂದೆಯನ್ನು ಹುಡುಕಿ ಅವರನ್ನು ಸೇರಿಕೊಂಡರು. ನಂತರ ಅಲ್ಲಿದ್ದ ಸ್ಥಳೀಯ ಸ್ವಿಮ್ಮಿಂಗ್ ಕ್ಲಬ್ ನಲ್ಲಿ ಜಾಗ ಪಡೆದರು.

ಒಂದೆಡೆ ಆತ್ಮವಿಶ್ವಾಸ ಕಳೆದುಕೊಳ್ಳದೇ ಹೋರಾಡುವ ಮನೋಭಾವ, ಮತ್ತೊಂದೆಡೆ ಗೊತ್ತುಗುರಿ ಇಲ್ಲದ ದೇಶದಲ್ಲಿ ಅಪರಿಚಿತರ ಸಹಾಯದೊಂದಿಗೆ ತನ್ನ ಹಾದಿ ಮುಂದುವರಿಸಿದ ಯುಸ್ರಾ ಇಂದು ಒಲಿಂಪಿಕ್ಸ್ ಸ್ಪರ್ಧಿ. ಶನಿವಾರ ನಡೆಯಲಿರುವ 100 ಮೀ. ಬಟರ್ ಫ್ಲೈ ವಿಭಾಗದ ಸ್ಪರ್ಧೆ ಈಕೆಯ ಮೊದಲ ಸವಾಲು.

ಈಕೆಯ ಜರ್ಮನ್ ಕೋಚ್ ಹೇಳೋ ಪ್ರಕಾರ ಆರಂಭದಲ್ಲಿ ಈಕೆಯ ಗುರಿ 2020 ರ ಟೋಕಿಯೊ ಒಲಿಂಪಿಕ್ಸ್ ಆಗಿತ್ತು. ಆದರೆ, ಐಒಸಿಯ ಈ ನಿರ್ಧಾರದಿಂದ ಯುಸ್ರಾ ಈ ಒಲಿಂಪಿಕ್ಸ್ ನಲ್ಲೇ ಭಾಗವಹಿಸುತ್ತಿದ್ದಾಳೆ. ಸದ್ಯ ಈಕೆ ಉತ್ತಮ ಫಾರ್ಮ್ ನಲ್ಲಿ ಇಲ್ಲದಿರಬಹುದು. ಆದರೆ, ಮುಂದಿನ ಒಲಿಂಪಿಕ್ಸ್ ವೇಳೆಗೆ ಈಕೆ ಸಾಧನೆಯ ಹಾದಿಯಲ್ಲಿ ಸಾಗುವ ವಿಶ್ವಾಸ ಈಕೆಯ ಕೋಚ್ ರದ್ದು.

Leave a Reply