ರಾಷ್ಟ್ರಗೀತೆ ಇಸ್ಲಾಂ ವಿರೋಧಿ ಎಂದು ನಿರ್ಬಂಧಿಸಿದ್ದ ಅಲಹಾಬಾದ್ ಶಾಲೆಯ ವ್ಯವಸ್ಥಾಪಕನ ಬಂಧನ

ಡಿಜಿಟಲ್ ಕನ್ನಡ ಟೀಮ್:

ಅಲಹಾಬಾದಿನ ಸರಿಯಾಬಾದ್ ಪ್ರಾಂತ್ಯದ ಎಂಎ ಕಾನ್ವೆಂಟ್ ಸ್ಕೂಲ್ ನಲ್ಲಿ ರಾಷ್ಟ್ರಗೀತೆ ಹಾಡುವುದು ಇಸ್ಲಾಮಿಗೆ ವಿರುದ್ಧ ಎಂದು ನಿರ್ಬಂಧಿಸಿದ್ದ ವ್ಯವಸ್ಥಾಪಕ ಮೊಹ್ಮದ್ ಜಿಯಾ ಉಲ್ ಹಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

ವಂದೇ ಮಾತರಂ ಹಾಗೂ ಸರಸ್ವತಿ ವಂದನೆಗಳನ್ನು ಈ ಶಾಲೆಯಲ್ಲಿ ಯಾವತ್ತೋ ನಿಲ್ಲಿಸಲಾಗಿತ್ತು. ರಾಷ್ಟ್ರಗೀತೆ ಹೇಗೆ ಇಸ್ಲಾಂ ವಿರೋಧಿ ಆಗಿಹೋಯಿತು ಎಂಬುದಕ್ಕೆ, ಎಂ. ಎ. ಕಾನ್ವೆಂಟ್ ಸ್ಕೂಲ್ ಎಂಬ ಆ ಶಾಲೆಯ ಮ್ಯಾನೇಜರ್ ಮೊಹ್ಮದ್ ಜಿಯಾ ಉಲ್ ಹಕ್, ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗೆ  ನೀಡಿರುವ ವಿವರಣೆ ಹೇಗಿದೆ ನೋಡಿ… ‘ತಮ್ಮ ಮಕ್ಕಳು ರಾಷ್ಟ್ರಗೀತೆ ಹಾಡುವುದು ಇಸ್ಲಾಮಿಗೆ ಮಾಡುವ ಅಪಚಾರವಾಗುತ್ತದೆ ಎಂದು ಮುಸ್ಲಿಂ ಮಕ್ಕಳ ಪಾಲಕರು ದೂರಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಜನಗಣಮನದಲ್ಲಿ ‘ಭಾರತ ಭಾಗ್ಯ ವಿಧಾತಾ’ ಎಂಬ ಸಾಲಿದೆ. ನಮ್ಮ ಭಾಗ್ಯವನ್ನು ಅಲ್ಲಾಹು ಅಲ್ಲದೇ ಮತ್ಯಾರೋ ನಿರೂಪಿಸುತ್ತಾರೆ ಎಂದು ಒಪ್ಪಿಕೊಳ್ಳುವುದು ಇಸ್ಲಾಮಿಗೆ ವಿರುದ್ಧ. ಅದೂ ಅಲ್ಲದೇ ದೇಶವೆಂಬುದು ಧರ್ಮ ಮತ್ತು ದೇವರಿಗೂ ಮಿಗಿಲಾದದದ್ದು ಎಂಬ ಆಶಯವನ್ನು ರಾಷ್ಟ್ರಗೀತೆ ಹೊಂದಿದೆ. ಇದನ್ನು ಒಪ್ಪಿಕೊಳ್ಳಲಾಗದು..’

ಇಲ್ಲೆಲ್ಲ ಕಡೆಯೂ ಧರ್ಮದ ಬಡಬಡಿಕೆಯನ್ನೇ ಮಾಡಿ ತನ್ನ ನಿಲುವಿನ ಸಮರ್ಥನೆಗೆ ಮಾತ್ರ ಸಂವಿಧಾನವನ್ನು ಉಲ್ಲೇಖಿಸುತ್ತಾರೆ ಮೊಹ್ಮದ್ ಜಿಯಾ ಉಲ್ ಹಕ್. ಧರ್ಮಕ್ಕೆ ವಿರುದ್ಧವಾದದನ್ನು ಯಾರ ಮೇಲೂ ಹೇರಬಾರದು ಅಂತ ಸಂವಿಧಾನವೇ ಹೇಳಿದೆಯಲ್ಲ ಎನ್ನುವ ಈ ಉಲ್ ಹಕ್ ಗೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನಗಳಿಗೆ ಗೌರವ ತೋರುವುದನ್ನು ಸಂವಿಧಾನದಲ್ಲಿ ಕರ್ತವ್ಯವಾಗಿಸಲಾಗಿದೆ ಅಂತ ತಿಳಿ ಹೇಳುವವರಾದರೂ ಯಾರು?

ಶಾಲೆಯ ಮ್ಯಾನೇಜ್ಮೆಂಟ್ ಕ್ರಮದಿಂದ ರೊಚ್ಚಿಗೆದ್ದು ಪ್ರಾಂಶುಪಾಲರು ಸೇರಿದಂತೆ ಎಂಟು ಶಿಕ್ಷಕರು ರಾಜಿನಾಮೆ ಕೊಟ್ಟಿದ್ದಾರೆ. ಶಾಲೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಯತ್ನದಲ್ಲಿರುವುದಾಗಿಯೂ ಪ್ರಾಂಶುಪಾಲರು ಹೇಳಿದ್ದಾರೆ. ಉಲ್ ಹಕ್ ಮಾತ್ರ ಇವರೆಲ್ಲ ಬಿಟ್ಟು ಹೋಗಿರುವುದೇ ಬೇರೆ ಕಾರಣಕ್ಕೆ ಅಂತ ಪ್ರತಿಪಾದಿಸುತ್ತಿದ್ದಾರೆ.

ಮುಸ್ಲಿಂ ಪ್ರಾಬಲ್ಯದ ಆ ಪ್ರದೇಶದಲ್ಲಿ ಶಾಲೆಯ 330 ವಿದ್ಯಾರ್ಥಿಗಳ ಪೈಕಿ 200 ಮಂದಿ ಹಿಂದುಗಳೇ ಎಂಬುದೂ ಗಮನಿಸಬೇಕಾದ ಸಂಗತಿ. ಧರ್ಮ ಕಾರಣದಿಂದ ರಾಷ್ಟ್ರಗೀತೆಗೆ ವಿರೋಧ ವ್ಯಕ್ತಪಡಿಸುವುದೇ ಅಪರಾಧ. ಅದರಲ್ಲೂ ಅಲ್ಪಸಂಖ್ಯಾತ ತುಷ್ಟೀಕರಣಕ್ಕೆ ಬಹುಸಂಖ್ಯಾತ ಹಿಂದು ವಿದ್ಯಾರ್ಥಿಗಳಿಗೂ ರಾಷ್ಟ್ರಗೀತೆ ಹಾಡುವ ಅವಕಾಶ ತಪ್ಪಿಸುತ್ತಿರುವ, ಆ ಮೂಲಕ ಎಳವೆಯಿಂದಲೇ ದೇಶಪ್ರೇಮ ವಿಮುಖರಾಗಿಸುತ್ತಿರುವ ಇವರು ಅದೆಂಥ ವಿಧ್ವಂಸದ ಮಾನಸಿಕತೆ ಹೊಂದಿದ್ದಾರೆ ಎಂಬುದನ್ನು ಗಮನಿಸಿ.

ಇದೀಗ ಹಕ್ ಬಂಧನದೊಂದಿಗೆ, ಮುಂದಿನ ವಿಚಾರಣೆಗಳನ್ನು ಮಾಡಲಾಗುವುದು ಎಂದು ಸ್ಥಳೀಯಾಡಳಿತ ತಿಳಿಸಿದೆ.

Leave a Reply