ಹಾಕಿಯಲ್ಲಿ ಶುಭಾರಂಭದ ಖುಷಿಯಾದ್ರೆ, ಜೀತು ಮತ್ತು ಪೇಸ್- ಬೋಪಣ್ಣ ಸೋಲು ನಿರಾಸೆ ಮೂಡಿಸ್ತು..

ಐರ್ಲೆಂಡ್ ವಿರುದ್ಧ ಗೋಲು ಬಾರಿಸಿದ ಸಂಭ್ರಮದಲ್ಲಿ ರೂಪಿಂದರ್ ಪಾಲ್ ಸಿಂಗ್…

ಡಿಜಿಟಲ್ ಕನ್ನಡ ಟೀಮ್:

ಮೊದಲ ದಿನವೇ ಪದಕದ ಖಾತೆ ತೆರೆಯುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಸಿಕ್ಕಿದ್ದು ನಿರಾಸೆ. ಕಾರಣ, ಭಾರತದ ಪದಕದ ಭರವಸೆಯಾಗಿದ್ದ ಶೂಟರ್ ಜೀತು ರೈ 10 ಮೀ. ಏರ್ ಪಿಸ್ತೂಲ್ ಶೂಟಿಂಗ್ ನ ಫೈನಲ್ ನಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇನ್ನು ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಜೋಡಿಯು ಪುರುಷರ ಟೆನಿಸ್ ಡಬಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸೋತು ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.

ಜೀತು ಸೋಲು ಭಾರತದ ಪಾಲಿಗೆ ಆಘಾತ ಅಂತಲೇ ಹೇಳಬಹುದು. ಕಳೆದ ಎರಡು ವರ್ಷಗಳಲ್ಲಿ ಇವರ ಪ್ರದರ್ಶನ ಹಾಗೂ ಅವರು ಬಾಚಿದ ಪದಕಗಳ ಸಂಖ್ಯೆ ಇವರ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದವು. ಶನಿವಾರವೇ ನಡೆದ ಅರ್ಹತಾ ಸುತ್ತಿನಲ್ಲಿ 580 ಅಂಕಗಳನ್ನು ಸಂಪಾದಿಸಿದ ಜೀತು ರೈ, 5ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ರು. ಆದರೆ, ಪ್ರಶಸ್ತಿ ಸುತ್ತಿನ ಆರಂಭದಲ್ಲಿ ಅನುಭವಿಸಿದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಜೀತು ಹೊರನಡೆದಿದ್ದು ಭಾರತದ ಪದಕದ ಆಸೆಗೆ ತಣ್ಣೀರೆರೆಚಿತು. ಅಂದಹಾಗೆ, ಜೀತು ರೈ ಒಲಿಂಪಿಕ್ಸ್ ನಲ್ಲಿ ತಮ್ಮ ಅಭಿಯಾನವನ್ನು ಸಂಪೂರ್ಣವಾಗಿ ಮುಗಿಸಿಲ್ಲ. ಆ.10 ರಂದು 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಇನ್ನು ಟೂರ್ನಿಗೂ ಆರಂಭಕ್ಕೂ ಮುನ್ನವೇ ತಕರಾರಿನೊಂದಿಗೆ ಜತೆಯಾಗಿ ಆಡಲು ಒಪ್ಪಿದ್ದ ರೋಹನ್ ಬೋಪಣ್ಣ ಹಾಗೂ ಪೇಸ್ ಜೋಡಿ ಪೋಲೆಂಡ್ ನ ಮಟ್ಕೊವಸ್ಕಿ ಮತ್ತು ಕುಬೊಟ್ ವಿರುದ್ಧ 0-2 ಸೆಟ್ ಗಳ ಅಂತರದಲ್ಲಿ ಮಣಿದರು.

ಉಳಿದಂತೆ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಾಂಡೆಲಾ (411.6 ಅಂಕ) 34ನೇ ಹಾಗೂ ಅಯೋನಿಕಾ ಪೌಲ್ (403 ಅಂಕ) 47ನೇ ಸ್ಥಾನ ಪಡೆದು ಅರ್ಹತಾ ಸುತ್ತಿನಲ್ಲೇ ತಮ್ಮ ಹೋರಾಟ ಅಂತ್ಯಗೊಳಿಸಿದ್ರು.

ಈ ಎಲ್ಲ ನಿರಾಸೆಯ ನಡುವೆ ಭಾರತೀಯ ಅಭಿಮಾನಿಗಳು ಮುಖದಲ್ಲಿ ಕೊಂಚ ಮಂದಹಾಸ ಮೂಡುವಂತೆ ಮಾಡಿದ್ದು, ಭಾರತ ಪುರುಷರ ಹಾಕಿ ತಂಡದ ಶುಭಾರಂಭ. ಬಿ ಗುಂಪಿನ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣಸಿದ ಭಾರತ 3-2 ಗೋಲುಗಳ ಅಂತರದಲ್ಲಿ ಜಯಿಸಿತು. ಅದರೊಂದಿಗೆ ಟೂರ್ನಿಯಲ್ಲಿ ಮುಂದಿನ ಪಂದ್ಯಗಳಿಗೆ ಆತ್ಮವಿಶ್ವಾಸದ ಹೆಚ್ಚಿಸಿಕೊಂಡಿತು. ಭಾರತದ ಪರ ವಿ.ಆರ್ ರಘುನಾಥ್ 25ನೇ, ರೂಪಿಂದರ್ ಪಾಲ್ ಸಿಂಗ್ 27 ಮತ್ತು 49ನೇ ನಿಮಿಷದಲ್ಲಿ ಗೋಲು ಬಾರಿಸಿದ್ರು. ಐರ್ಲೆಂಡ್ ಪರ ಜಾನ್ ಜೆರ್ಮಿನ್ 45ನೇ ಮತ್ತು ಕೊನೊರ್ ಹರ್ಟ್ 56ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಇನ್ನು ರೋಯಿಂಗ್ ನ ಪುರುಷರ ಸಿಂಗಲ್ ಸ್ಕಲ್ ವಿಭಾಗದ ಮೊದಲ ಹೀಟ್ಸ್ ನಲ್ಲಿ 7:21.67 ನಿಮಿಷದಲ್ಲಿ ಗುರಿ ಸೇರಿದ ಭಾರತದ ದತ್ತು ಬಬನ್ ಭೋಕನಲ್ ಒಟ್ಟಾರೆಯಾಗಿ 15ನೇ ಸ್ಥಾನ ಪಡೆದು ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

Leave a Reply