
ಮಹದಾಯಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನಿಂದ ರಾಜ್ಯಕ್ಕೆ ಆಗಿರುವ ಹಿನ್ನಡೆ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಭಾನುವಾರ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಸದಾನಂದಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು..
ಡಿಜಿಟಲ್ ಕನ್ನಡ ಟೀಮ್:
ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧವಾಗಿ ಮುಂದೆ ಏನು ಮಾಡಬೇಕು ಎಂಬ ನಿಷ್ಕರ್ಷೆಗೆ ಭಾನುವಾರ ವಿಧಾನ ಸೌಧದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಜನರ ಹಿತಕಾಪಾಡುವ ದೃಷ್ಟಿಯಿಂದ ರಾಜಕೀಯವನ್ನು ಪಕ್ಕಕ್ಕಿಟ್ಟು ಎಲ್ಲರು ಒಟ್ಟಾಗಿ ಹೋರಾಟ ಮಾಡಲು ಎಲ್ಲ ಪಕ್ಷದ ನಾಯಕರು ಒಪ್ಪಿಗೆ ನೀಡಿದರು. ನಾರಿಮನ್ ಅವರ ನೇತೃತ್ವದ ರಾಜ್ಯ ಕಾನೂನು ತಜ್ಞರ ಸಮಿತಿಯ ಮಾರ್ಗದರ್ಶನದಂತೆ ಮುಂದಿನ ಹೆಜ್ಜೆ ಇಡಲು ಎಲ್ಲರು ಸಮ್ಮತಿ ಸೂಚಿಸಿದ್ರು.
ಸಭೆ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಿಷ್ಟು:
‘ಈ ಸಮಿತಿಯು ಸರ್ಕಾರದ ಮುಂದಿರುವ ಎರಡು ಅವಕಾಶಗಳ ಕುರಿತು ಮಾಹಿತಿ ನೀಡಿದೆ. ಅದೇನಂದ್ರೆ, ಈ ಮಧ್ಯಂತರ ತೀರ್ಪಿನ ಬಗ್ಗೆ ಅಂತರ ರಾಜ್ಯ ನೀರಿನ ವಿವಾದ ಕಾಯ್ದೆ 1956ರ ಯ ಸೆಕ್ಷನ್ 5(3) ಅಡಿಯಲ್ಲಿ ತೀರ್ಪಿನ ಸ್ಪಷ್ಟಿಕರಣ ಕೇಳಲು ಅವಕಾಶವಿದೆ. ಮತ್ತೊಂದು ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಎಸ್ಎಲ್ಪಿ ಮೂಲಕ ಪ್ರಶ್ನಿಸುವುದು. ನಾವು ಕಾವೇರಿ ವಿಷಯದಿಂದ ಎಲ್ಲ ವಿಚಾರದಲ್ಲೂ ಕಾನೂನು ತಜ್ಞರ ಸಲಹೆ ಮೇರೆಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಈ ಸಮಿತಿ ಮೇಲೆ ನಮ್ಮೆಲ್ಲರಿಗೂ ನಂಬಿಕೆ ಇದೆ. ಈ ವಿಚಾರದಲ್ಲೂ ಈ ಸಮಿತಿ ಸಲಹೆಯಂತೆ ಮುಂದಿನ ಹೆಜ್ಜೆ ಇಡುತ್ತೇವೆ.’
ಮಾಧ್ಯಮಗಳಲ್ಲಿ ಪ್ರಧಾನಿ ಮಧ್ಯಪ್ರವೇಶದ ಒತ್ತಾಯ ಇಡುತ್ತಿದ್ದ ಬಿಜೆಪಿಯೇತರ ಪಕ್ಷಗಳು, ಕೊನೆಯಲ್ಲಿ ಕಾನೂನು ಹೋರಾಟವೊಂದೇ ಪರಿಹಾರ ಮಾರ್ಗ ಎಂಬಂಥ ತೀರ್ಮಾನಕ್ಕೆ ಬಂದಿರುವುದು ನಿಚ್ಚಳವಾಗಿದೆ.
ತೆಲಂಗಾಣದಲ್ಲಿ ಮೋದಿ- ಚಂದ್ರಶೇಖರರ ಭರ್ಜರಿ ಫ್ರೆಂಡ್ಶಿಪ್ ಡೇ!
ಇದೇ ಮೊದಲ ಬಾರಿಗೆ ತೆಲಂಗಾಣಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉಷ್ಣವಿದ್ಯುತ್ ಸ್ಥಾವರದ ಕಾಮಗಾರಿಗೆ ಚಾಲನೆ ನೀಡಿದರು. ಮೆಡಕ್ ಜಿಲ್ಲೆಯಲ್ಲಿ ₹ 10 ಸಾವಿರ ಕೋಟಿ ವೆಚ್ಚದಲ್ಲಿ ಉಷ್ಣವಿದ್ಯುತ್ ಸ್ಥಾವರ ನಿರ್ಮಿಸಲಾಗುತ್ತಿದ್ದು, ಈಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಸ್ಥಾವರದಿಂದ 2/800 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ. ಇದೇ ವೇಳೆ ಮೆಡಕ್ ನ ಗಜ್ವೆಲ್ ಪ್ರದೇಶದಲ್ಲಿ ‘ಮಿಷನ್ ಭಗೀರಥ’ ಎಂಬ ಕುಡಿಯುವ ನೀರಿನ ಯೋಜನೆಗೂ ಚಾಲನೆ ನೀಡಲಿದ್ದಾರೆ.
ವಿಶೇಷವೆಂದರೆ, ಎನ್ಡಿಎ ಕೂಟದಲ್ಲೇನೂ ಚಂದ್ರಶೇಖರರ ತೆಲಂಗಾಣ ರಾಷ್ಟ್ರೀಯ ಸಮಿತಿ ಗುರುತಿಸಿಕೊಂಡಿಲ್ಲವಾದರೂ ಪರಸ್ಪರರ ನಡೆಯಲ್ಲಿ ‘ಸ್ನೇಹದಿನ’ದ ಬಿಂಬ ಭರ್ಜರಿ ಎಂಬಂತೆ ಕಾಣುತ್ತಿತ್ತು. ನಿರಂತರ ರೈತ ಆತ್ಮಹತ್ಯೆಗಳಿಂದ ಟೀಕೆಗೊಳಗಾಗಿರುವ ತಮ್ಮ ಮೆಡಕ್ ಕ್ಷೇತ್ರಕ್ಕೆ ಮರು ವರ್ಚಸ್ಸು ತರುವ ದೃಷ್ಟಿಯಿಂದಲೋ ಏನೋ ಟಿಆರ್ ಎಸ್ ಪಕ್ಷವು ಲಕ್ಷಗಟ್ಟಲೇ ಜನರನ್ನು ಸೇರಿಸಿತ್ತು.
ಈ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಮೋದಿ, ಚಂದ್ರಶೇಖರ್ ರಾವ್ ನೇತೃತ್ವದ ಟಿ ಆರ್ ಎಸ್ ಸರ್ಕಾರವನ್ನು ಶ್ಲಾಘಿಸಿದರು. ಕೇಂದ್ರದಿಂದ ಎಲ್ಲ ಬಗೆಯ ಸಹಕಾರ ಕೊಡುವುದಾಗಿ ಹೇಳಿದರು. ಇತ್ತ ಚಂದ್ರಶೇಖರ್ ಸಹ ಮೋದಿ ಆಡಳಿತವನ್ನು ಪ್ರಶಂಸಿಸುತ್ತ, ಪಿಯೂಶ್ ಗೊಯೆಲ್ ಅವರಂಥ ಅತ್ಯುತ್ತಮ ಇಂಧನ ಸಚಿವರು ಹಾಗೂ ಸುರೇಶ್ ಪ್ರಭು ಅವರಂಥ ಅತಿದಕ್ಷ ರೈಲು ಸಚಿವರನ್ನು ಹೊಂದಿರುವುದಕ್ಕೆ ಮೋದಿಯವರನ್ನು ಕೊಂಡಾಡಿದರು.
ಇದು ಒಂದು ಹಂತವಾದರೆ, ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲೂ ನಕಲಿ ಗೋರಕ್ಷಕರ ಬಗ್ಗೆ ತಮ್ಮ ದಾಳಿ ಮುಂದುವರಿಸಿದರು. ಆದರೆ ಶನಿವಾರದ ಕಾರ್ಯಕ್ರಮದ ಕಟುಮಾತುಗಳು ಗೋರಕ್ಷಣೆಯ ಪರಿಕಲ್ಪನೆಯನ್ನೇ ಪ್ರಧಾನಿ ಪ್ರಶ್ನಿಸಿದ್ದಾರೆ ಎಂಬಂಥ ಸಂದೇಶ ಹೋಗಿರುವ ಸಾಧ್ಯತೆಗೆ ಎಚ್ಚೆತ್ತುಕೊಂಡಿದ್ದು ಸ್ಪಷ್ಟವಾಗಿತ್ತು. ‘ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚುವುದಕ್ಕೆ ನಿಜವಾದ ಗೋಸೇವಕರು ಸಹಕರಿಸಬೇಕು. ಇಲ್ಲವಾದಲ್ಲಿ ಕೆಲವರ ಕೆಟ್ಟ ಕೆಲಸ ಗೋಸಂರಕ್ಷಣೆ ಉದ್ದೇಶವನ್ನೇ ಹಾಳು ಮಾಡುತ್ತದೆ’ ಎಂದರು. ‘ದಲಿತ ಸಹೋದರರನ್ನು ನಮ್ಮವರನ್ನಾಗಿಸಿಕೊಳ್ಳದೇ ವಸುಧೈವ ಕುಟುಂಬಕಂ ಎಂದರೆ ಅರ್ಥವಿಲ್ಲ’ ಎನ್ನುವ ಮೂಲಕ ತಮ್ಮ ಸಂದೇಶವನ್ನು ಸ್ಪಷ್ಟವಾಗಿಸಿದರು.