ಒಲಿಂಪಿಕ್ಸ್ ನಲ್ಲಿಂದು ಸ್ಪರ್ಧಿಸಲಿರುವ ಭಾರತದ ಪ್ರಮುಖ ಸ್ಪರ್ಧಿಗಳಾರು ಗೊತ್ತಾ?

ದೀಪಾ ಕರ್ಮಾಕರ್…

ಡಿಜಿಟಲ್ ಕನ್ನಡ ಟೀಮ್:

ಐದು ಜಿಮ್ನಾಸ್ಟಿಕ್ ವಿಭಾಗಗಳಲ್ಲಿ ಭಾರತದ ಏಕೈಕ ಸ್ಪರ್ಧಿ ದೀಪಾ ಕರ್ಮಾಕರ್ ಸೆಣಸು.. ಭಾರತ ವನಿತೆಯರ ಹಾಕಿ ತಂಡದ ಮೊದಲ ಪಂದ್ಯ.. ಮಹಿಳಾ ಆರ್ಚರಿ ತಂಡದ ಪ್ರಿಕ್ವಾರ್ಟರ್ ಫೈನಲ್ ಪಂದ್ಯ.. ಶೂಟಿಂಗ್ ನಲ್ಲಿ ಹೀನಾ ಮತ್ತು ಮಾನವ ಜಿತ್ ಸ್ಪರ್ಧೆ.. ಈ ಭಾನುವಾರದ ವಿಕೆಂಡ್ ನಲ್ಲಿ ನೀವು ಸವಿಯಬಹುದಾದ ಒಲಿಂಪಿಕ್ಸ್ ನಲ್ಲಿ ಭಾರತದ ಪ್ರಮುಖ ಪಂದ್ಯಗಳಿವು.

ಈ ಪಂದ್ಯಗಳ ಬಗೆಗಿನ ಕಿರು ವಿವರ ಹೀಗಿವೆ…

  • ಶುಭಾರಂಭದ ಕಾತರದಲ್ಲಿ ಮಹಿಳಾ ಹಾಕಿ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 36 ವರ್ಷಗಳ ನಂತರ ಪ್ರವೇಶ ಪಡೆದಿರುವ ಭಾರತ ಮಹಿಳಾ ಹಾಕಿ ತಂಡ ಭಾನುವಾರ ಗುಂಪು ಹಂತದ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಪದಕದ ನಿರೀಕ್ಷೆ ಇಲ್ಲದಿದ್ದರು ತಂಡ ಯಾವ ಮಟ್ಟದವರೆಗೆ ಸಾಗಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು. ಪಂದ್ಯ ರಾತ್ರಿ 7.30ಕ್ಕೆ ಆರಂಭ.
  • ಶೂಟಿಂಗ್ ನಲ್ಲಿ ಹೀನಾ, ಮಾನವ್ ಜಿತ್ ಸ್ಪರ್ಧೆ: ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಭರವಸೆಯ ಶೂಟರ್ ಹೀನಾ ಸಿಧು ಸ್ಪರ್ಧಿಸಲಿದ್ದಾರೆ. ಅರ್ಹತಾ ಸುತ್ತು ಸಂಜೆ 5.30ಕ್ಕೆ ಆರಂಭವಾಗಲಿದ್ದು, ರಾತ್ರಿ 7.30ಕ್ಕೆ ಪ್ರಶಸ್ತಿ ಸುತ್ತು ನಡೆಯಲಿದೆ. ಪುರುಷರ ಟ್ರಾಪ್ ಶೂಟಿಂಗ್ ನ ಅರ್ಹತಾ ಸುತ್ತಿನಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಹಾಗೂ ಕಿನಾನ್ ಚೆನೈ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ಸಂಜೆ 6 ಗಂಟೆಗೆ ನಡೆಯಲಿದೆ.
  • ಜಿಮ್ನಾಸ್ಟಿಕ್ ನಲ್ಲಿ ದೀಪಾ ಕರ್ಮಾಕರ್ ಕಣಕ್ಕೆ: ಜಿಮ್ನಾಸ್ಟಿಕ್ ನ ಮಹಿಳೆಯರ ಅನ್ಈವನ್ ಬಾರ್ಸ್, ಫ್ಲೋರ್ ಎಕ್ಸರ್ಸೈಸ್, ಬೀಮ್, ವಾಲ್ಟ್ ಮತ್ತು ವೈಯಕ್ತಿಕ ಆಲ್ರೌಂಡ್ ವಿಭಾಗಗಳಲ್ಲಿ ಭಾರತದ ಭರವಸೆಯ ಅಥ್ಲೀಟ್ ದೀಪಾ ಕರ್ಮಾಕರ್ 3ನೇ ಅರ್ಹತಾ ಸುತ್ತಿನಲ್ಲಿ ಸೆಣಸಲಿದ್ದು ಈ ಸ್ಪರ್ಧೆಗಳು ರಾತ್ರಿ 11ಕ್ಕೆ ನಡೆಯಲಿವೆ.
  • ಆರ್ಚರಿ ಪ್ರಿಕ್ವಾರ್ಟರ್ ನಲ್ಲಿ ಭಾರತ ವನಿತೆಯರ ತಂಡ: ದೀಪಿಕಾ ಕುಮಾರಿ, ಬೊಂಬೈಲಾ ದೇವಿ ಮತ್ತು ಲಕ್ಷ್ಮಿರಾಣಿ ಅವರನ್ನೊಳಗೊಂಡ ಭಾರತ ಮಹಿಳೆಯರ ಆರ್ಚರಿ ತಂಡ ಪ್ರಿಕ್ವಾರ್ಟರ್ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ರಾತ್ರಿ 6.45ಕ್ಕೆ ನಡೆಯಲಿದೆ.

ಇನ್ನು ಶನಿವಾರ ತಡರಾತ್ರಿ ನಡೆದ ಪಂದ್ಯಗಳ ಫಲಿತಾಂಶ ಹೀಗಿವೆ…

  • ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೌಮ್ಯಜಿತ್ ಘೋಶ್ 8-11, 6-11, 14-12, 6-11, 11-13 ಗೇಮ್ ಗಳ ಅಂತರದಲ್ಲಿ ಥೈಯ್ಲೆಂಡಿನ ಪಡಸಾಕ್ ವಿರುದ್ಧ ಸೋತರು.
  • ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೌಮ ದಾಸ್ 11-2, 11-7, 11-7, 11-3 ಗೇಮ್ ಗಳಿಂದರೊಮೇನಿಯಾದ ಡೇನಿಯಲ ಡುಡಾನ್ ವಿರುದ್ಧ ಸೋತರೆ, ಮತ್ತೊಬ್ಬ ಆಟಗಾರ್ತಿ ಮನಿಕಾ ಬಾತ್ರಾ12-10, 6-11, 12-14, 11-8, 4-11, 12-14 ಗೇಮ್ ಗಳಿಂದ ಪರಾಭವಗೊಂಡರು.
  • ಇನ್ನು ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಭಾಯಿ ಚಾನು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಸ್ನ್ಯಾಚ್ ವಿಭಾಗದಲ್ಲಿ 82 ಕೆ.ಜಿ ಎತ್ತುವ ಮೂಲಕ 6ನೇಸ್ಥಾನದಲ್ಲಿದ್ದ ಚಾನು, ಕ್ಲೀನ್ ಮತ್ತು ಜೆರ್ಕ್ ವಿಭಾಗದಲ್ಲಿ ಮೂರೂ ಅವಕಾಶಗಳಲ್ಲೂ ಎಡವಿದರು.
  • ಟೆನಿಸ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ಪ್ರಾರ್ಥನಾ ತೊಂಬಾರೆ ಜೋಡಿ ಚೀನಾದ ಜೆಂಗ್ ಮತ್ತು ಪೆಂಗ್ ಜೋಡಿ ವಿರುದ್ಧ 2-1 ಸೆಟ್ ಗಳ ಸೋಲನುಭವಿಸಿತು. ಮೊದಲ ದಿನದ ಇತರೆ ಪಂದ್ಯಗಳ ಫಲಿತಾಶ ಇಲ್ಲಿ ನೋಡಬಹುದು.

ಇನ್ನು ಪದಕಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ 3 ಪದಕ(2 ಚಿನ್ನ, 1 ಕಂಚು) ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Leave a Reply