ಪ್ರಧಾನಿ ಮೋದಿಯ ಪೌರಸಭೆ, ಮಾಧ್ಯಮ ಮತ್ತು ಜನರನ್ನು ಪಳಗಿಸುವ ಹೊಸಬಗೆ!

 

ಚೈತನ್ಯ ಹೆಗಡೆ

‘ದೇಶದಲ್ಲಿನ ಎಲ್ಲ ಘಟನೆಗಳಿಗೆ ಪ್ರಧಾನಿ ಉತ್ತರ ಕೊಡಬೇಕು ಎಂದು ಬಯಸುವುದು ಟಿಆರ್ಪಿ ದೃಷ್ಟಿಯಿಂದ ಸರಿ ಆಗಬಹುದಷ್ಟೆ..’ ಶನಿವಾರದ ಟೌನ್ಹಾಲ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದ ಪ್ರಾರಂಭಿಕ ಮಾತುಗಳಲ್ಲೊಂದು.

ಮಾತು ಮುಂದುವರಿಸುತ್ತ ಮೋದಿ ಬಂದು ತಲುಪಿದ್ದು ‘ಜನ ಭಾಗಿದಾರಿಕೆ’ಯ ಪ್ರಜಾಪ್ರಭುತ್ವ ಪರಿಕಲ್ಪನೆಗೆ. ಮತ ಚಲಾಯಿಸಿದ ನಂತರ ನಮ್ಮ ಕರ್ತವ್ಯ ಮುಗಿದುಹೋಯಿತು ಎಂದುಕೊಳ್ಳಲೇಬಾರದು. ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಇರಬೇಕು ಎನ್ನುತ್ತ, ಟೌನ್ಹಾಲ್ ಕಾರ್ಯಕ್ರಮವು ಆಯೋಜನೆಯಾಗಿರುವುದೇ ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವುದಕ್ಕೆ ಎಂಬುದನ್ನವರು ನಿರೂಪಿಸಿದರು.

ಇಲ್ಲಿ ಪ್ರಧಾನಿ ಮೋದಿಯ ಮಾಧ್ಯಮ ನಿಭಾವಣೆಯನ್ನು ಗಮನಿಸಬೇಕು. ನಾನು ಜನರೊಂದಿಗೆ ನೇರವಾಗಿಯೇ ಸಂವಹನ ಮಾಡುವ ಹಂತದಲ್ಲಿರುವುದರಿಂದ ನಿಮ್ಮ ಟಿಆರ್ಪಿ ಸರ್ಕಸ್ಸುಗಳ ಭಾಗವಾಗಿ ನನ್ನನ್ನು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯೇನೂ ನನಗಿಲ್ಲ ಎಂಬ ಸಂದೇಶವನ್ನು ಮಾಧ್ಯಮಕ್ಕೆ ಸ್ಪಷ್ಟವಾಗಿ ರವಾನಿಸಿರುವ ರೀತಿ ಇದು.

ಗುಜರಾತ್ ದಂಗೆಗಳ ನಂತರ ಸಾಂಪ್ರದಾಯಿಕ ಮಾಧ್ಯಮ ಹೆಚ್ಚಿನದಾಗಿ ನರೇಂದ್ರ ಮೋದಿಯವರನ್ನು ತುಚ್ಛವಾಗಿಯೇ ಚಿತ್ರಿಸಿದ್ದು, ಪ್ರಧಾನಿ ಗಾದಿಗೆ ಹವಾ ಸೃಷ್ಟಿಯಾದಾಗಲೂ ಅದರ ಹೆಚ್ಚಿನ ಶ್ರೇಯಸ್ಸು ಸಾಮಾಜಿಕ ಮಾಧ್ಯಮಕ್ಕೆ ಸಂದಿರುವುದು… ಇವೆಲ್ಲ ಗೊತ್ತಿರುವ ಸಂಗತಿಗಳೇ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹಂತದಲ್ಲಿ ಹಾಗೂ ಬಂದ ನಂತರ ಸಾಂಪ್ರದಾಯಿಕ ಮಾಧ್ಯಮವನ್ನು ಮೋದಿ ನಿಭಾಯಿಸಿದ ರೀತಿ ಕುತೂಹಲಕಾರಿ. ದೊಡ್ಡದೊಂದು ಇವೆಂಟ್ ಅನ್ನು ಸೃಷ್ಟಿಸಿ ಅಲ್ಲಿ ತಮ್ಮ ಮಾತುಗಳನ್ನು ಆಕರ್ಷಣೀಯವಾಗಿ ಇಡುವ ದಾರಿಯನ್ನು ಮೋದಿ ಮತ್ತವರ ಕ್ರಿಯಾಶೀಲ ತಂಡ ಕಂಡುಕೊಂಡಿತು. ಜನಪ್ರಿಯತೆ ದೃಷ್ಟಿಯಿಂದ ಇಂಥ ಇವೆಂಟ್ ಗಳನ್ನು ಉಪೇಕ್ಷಿಸುವ ಸ್ಥಿತಿಯಲ್ಲಿ ಮಾಧ್ಯಮ ಇರಲಿಲ್ಲ. ನಂತರ ‘ಮನ್ ಕಿ ಬಾತ್’ ಹಾದಿ ತೆರೆದುಕೊಂಡಿತು. ಇವೆಲ್ಲ ಪ್ರಧಾನಿ ತಮ್ಮ ಮಾತನ್ನು ಯಾವ ಗದ್ದಲಕ್ಕೆಡೆ ಇಲ್ಲದೇ ಜನರ ಮುಂದಿಡುವ ಅವಕಾಶವನ್ನು ಕೊಟ್ಟಿತಾದರೂ, ಪ್ರಧಾನಿ ಮೋದಿ ಭಾಷಣ ನೀಡುತ್ತಿದ್ದಾರೆಯೇ ಹೊರತು ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಮಾಧ್ಯಮವರ್ಗದ ಗೌಜನ್ನು ಹೆಚ್ಚಿಸಿತು. ಇದನ್ನೂ ಮೀರುವ ಹೆಜ್ಜೆಯಾಗಿ ಮೂಡಿಬಂದಂತಿದೆ ಪ್ರಧಾನಿ ಮೋದಿಯ ಮೊದಲ ಟೌನ್ಹಾಲ್ ಕಾರ್ಯಕ್ರಮ.

‘ಇದೋ ನೋಡಿ. ನಾನು ಸಂವಾದಕ್ಕೆ ತೆರೆದುಕೊಳ್ಳುತ್ತಿದ್ದೇನೆ. ಪ್ರಶ್ನೋತ್ತರಕ್ಕೆ ತೆರೆದುಕೊಳ್ಳುವುದು ಅಂದರೆ ಪ್ರತಿಷ್ಠಿತ ಪತ್ರಕರ್ತರ ಎದುರು ತಮ್ಮನ್ನು ಒಡ್ಡಿಕೊಳ್ಳುವುದು ಎಂದೇಕೆ ಆಗಬೇಕು? ಇಗೋ ನಾನು ಜನರಿಂದಲೇ ಪ್ರಶ್ನೆಗಳನ್ನು ಸ್ವೀಕರಿಸುತ್ತಿದ್ದೇನೆ. ಮಾಧ್ಯಮದ ಕೆಲಸವೂ ಅದೇ ತಾನೇ? ಜನರ ಪರವಾಗಿ ಪ್ರಶ್ನೆಗಳನ್ನು ಕೇಳುವುದು? ಅವರ ಪರ ನೀವು ಕೂರುವುದಕ್ಕಿಂತ, ಇಗೋ ನಾನೇ ಜನರ ನಡುವೆ ಹೋಗುತ್ತೇನೆ’- ಹೀಗಂತ ಹೇಳಿಕೆಯನ್ನೇನೂ ಕೊಡದಿದ್ದರೂ ಶನಿವಾರದ ಕಾರ್ಯಕ್ರಮದ ಮೂಲಕ ನರೇಂದ್ರ ಮೋದಿ ನಿರೂಪಿಸುತ್ತಿರುವುದು ಇದನ್ನೇ.

ಟೌನ್ಹಾಲ್ ಎಂಬುದು ಶತಮಾನಗಳ ಹಿಂದಿನಿಂದಲೇ ಪಶ್ಚಿಮ ದೇಶಗಳಲ್ಲಿದ್ದ ಪರಿಕಲ್ಪನೆ. ಜನಪ್ರತಿನಿಧಿ ಆಯಾ ಪಟ್ಟಣದ ಜನರೊಂದಿಗೆ ವಿಷಯವೊಂದರ ಸಂವಾದಕ್ಕೆ ಬೆರೆಯುತ್ತಿದ್ದ ಸಭೆ, ಪಟ್ಟಣದ ಪುರಭವನಗಳಲ್ಲಿ ನಡೆಯುತ್ತಾದ್ದರಿಂದ, ಇಂಥ ಎಲ್ಲ ಮಾದರಿ ಕಾರ್ಯಕ್ರಮಗಳಿಗೆ ಟೌನ್ಹಾಲ್ ಕಾರ್ಯಕ್ರಮ ಅಂಥ ಕರೆಯುವ ರೂಢಿ ಬಂತು. ತೀರ ಇತ್ತೀಚೆಗೆ ಫೇಸ್ಬುಕ್ ಒಡೆಯ ಜುಕರ್ಬರ್ಗ್ ಮತ್ತು ಮೋದಿ ನಡುವಣ ಸಾರ್ವಜನಿಕ ಸಂವಾದವೂ ಟೌನ್ಹಾಲ್ ಕಾರ್ಯಕ್ರಮ ಎಂಬ ಹಣೆಪಟ್ಟಿಯಲ್ಲೇ ನಡೆದಿದ್ದು ನೆನಪಿದ್ದೀತು.

ನರೇಂದ್ರ ಮೋದಿ ಮಾತ್ರವಲ್ಲದೇ ಇಡೀ ಬಿಜೆಪಿ ಪರಿವಾರವೇ ಡಿಜಿಟಲ್ ಮಾಧ್ಯಮದ ಅಭಿವ್ಯಕ್ತಿಯಲ್ಲಿ ಹೆಚ್ಚು ಆಸಕ್ತವಾಗಿದೆ ಎಂಬುದಂತೂ ಸ್ಪಷ್ಟ. ಏಕೆಂದರೆ, ಪ್ರಿಂಟ್- ಸುದ್ದಿವಾಹಿನಿ ಇಂಥವನ್ನು ಎಡಪಂಥಕ್ಕೆ ಹೊರತಾದ ಮಾದರಿಯಲ್ಲಿ ರೂಪುಗೊಳಿಸಬೇಕೆಂದರೆ ಅದಕ್ಕೊಂದು ದೀರ್ಘ ಅವಧಿ ಹಿಡಿಯುತ್ತದೆ. ಕೇವಲ ಹಣದ ಹೂಡಿಕೆ ಮಾತ್ರದಿಂದಲೇ ಸಂಸ್ಥೆಗಳನ್ನು ಕಟ್ಟಲಾಗುವುದಿಲ್ಲ. ಆರು ದಶಕಗಳ ಕಾಲ ಭಾರತದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯೇತರ ರಾಜಕೀಯ ಪಡೆಯ ಕಾರಣದಿಂದ ಸಾಂಪ್ರದಾಯಿಕ ಮಾಧ್ಯಮ ಬಲಪಂಥಕ್ಕೆ ಹೊರತಾದ ವ್ಯಾಖ್ಯಾನ ಮೈಗೂಡಿಸಿಕೊಂಡು ಆಳವಾದ ಬೇರುಗಳಲ್ಲಿ ನಿಂತಿದೆ ಎಂಬುದು ವಾಸ್ತವ. ಹೀಗಾಗಿ, ಕೆಲ ವರ್ಷಗಳಿಂದ ಕಣ್ಣುಬಿಡುತ್ತಿರುವ ಹೊಸ ಮಾಧ್ಯಮದಲ್ಲಿ ತನ್ನ ವ್ಯಾಖ್ಯಾನವನ್ನು ನೆಲೆಗೊಳಿಸುವುದಕ್ಕೆ ಬಿಜೆಪಿ ಆಸಕ್ತಿ ವಹಿಸಿದೆ.

ಹಾಗಂತ, ಸಾಂಪ್ರದಾಯಿಕ ಮಾಧ್ಯಮವನ್ನು ತನ್ನದಲ್ಲ ಎಂದು ದೂರ ಸರಿಸಿದೆಯೇ? ಭಕ್ತರು ಹೌದ್ಹೌದು ಎಂದುಬಿಟ್ಟಾರು. ಆದರೆ ಅಂಥದ್ದೇನಿಲ್ಲ. ಬಹು ದಶಕಗಳಿಂದ ತನ್ನ ಪ್ರಭಾವ ಕಕ್ಷೆಯಿಂದ ದೂರವಿದ್ದು ಅದಕ್ಕೆ ಬೇಕಂತೆ ಬೆಳೆದಿರುವ ಈ ಮಾಧ್ಯಮಗಳನ್ನು ಬಿಜೆಪಿ ನಿಧಾನವಾಗಿ ಪಳಗಿಸಿಕೊಳ್ಳುತ್ತಿದೆ. ಈ ಪಳಗಿಸುವಿಕೆ ಪ್ರಕ್ರಿಯೆಯಲ್ಲಿ ಧ್ವನಿ ಎತ್ತರಿಸುವುದು, ಮರುಘಳಿಗೆಯಲ್ಲೇ ಬೆನ್ನು ಸವರಿ ಪುಳಕಗೊಳಿಸುವುದು ಸಹಜ ಪ್ರಕ್ರಿಯೆ. ಹೀಗಾಗಿಯೇ ಪ್ರಧಾನಿ ಸೇರಿದಂತೆ ಸರ್ಕಾರದ ಮೇಲುಸ್ತರದಲ್ಲಿರುವವರು ಟಿವಿ- ಪತ್ರಿಕೆಗಳಿಗೆ ಸಂದರ್ಶನಗಳನ್ನು ಕೊಡುತ್ತಿದ್ದಾರೆ. ಆದರೆ ಅದಕ್ಕೊಂದು ನಿಯಂತ್ರಿತ ಮಾದರಿಯಿದೆ. ರಾಷ್ಟ್ರೀಯ ಮಾಧ್ಯಮದ ಬೆರಳೆಣಿಕೆ ಅಭಿಪ್ರಾಯ ನಿರೂಪಕರು, ತಾವು ಮೈಕ್ ಹಿಡಿದೊಡನೇ ಮಾತಾಡಬೇಕಾದದ್ದು ಅಧಿಕಾರದಲ್ಲಿರುವವರ ಕರ್ತವ್ಯ ಎಂದು ಭಾವಿಸಿದ್ದರು. ಈ ‘ಸುಲಭ ಸಂಪರ್ಕ’ವನ್ನು ಮೋದಿ ಸರ್ಕಾರ ನಿರಾಕರಿಸುತ್ತಿದೆ. ಹೀಗೆ ಬರಕ್ಕೆ ಬೀಳಿಸಿದ ನಂತರ ಚಿಮ್ಮಿಸುವ ನಾಲ್ಕೈದೇ ಹನಿಗಳಿಗೂ ಎಲ್ಲಿಲ್ಲದ ಮಹತ್ವ ಇರುತ್ತದೆ. ಇದು ಅರ್ನಾಬ್ ಜತೆಗಿನ ಮೋದಿ ಸಂದರ್ಶನದಿಂದ ಹಿಡಿದು ಹಲವೆಡೆ ನಿಚ್ಚಳವಾಗಿದೆ. ಸಂದರ್ಶನ ತೆಗೆದುಕೊಳ್ಳುವವನಿಗಿಂತ ಕೊಡುವವನ ಪ್ರಾಮುಖ್ಯ ಹೆಚ್ಚಾಗಿದ್ದ ಸ್ಥಿತಿ ಪ್ರಧಾನಿಯ ಎಲ್ಲ ಮಾಧ್ಯಮ ಸಂದರ್ಶನಗಳಲ್ಲೂ ದಟ್ಟವಾಗಿದೆ.

ಇವೆಲ್ಲದರ ನಡುವೆಯೂ, ಇದು ಪಳಗಿಸುವಿಕೆ ಪ್ರಕ್ರಿಯೆಯೇ ಹೊರತು ನಿರಾಕರಣೆಯಲ್ಲ ಎಂಬುದಕ್ಕೆ, ಮಾಧ್ಯಮ ಜಾಹೀರಾತುಗಳಿಗೆ ಮೋದಿ ಸರ್ಕಾರ ಈವರೆಗೆ ಹಲವು ಕೋಟಿ ರುಪಾಯಿಗಳನ್ನು ವ್ಯಯಿಸಿರುವುದೇ ಸಾಕ್ಷಿ. ಭಕ್ತರು ಯಾವುದನ್ನೆಲ್ಲ ಪೇಡ್ ಮೀಡಿಯಾ ಎಂದು ಬಯ್ದುಕೊಂಡಿದ್ದಾರೋ ಅವುಗಳಿಗೇ ಈ ಗಂಟಿನ ಹೆಚ್ಚಿನ ಪಾಲು ಸಂದಿದೆ ಎಂಬುದೂ ಸತ್ಯ.

‘ಮೊದಲಿನಂತೆ ಉಪದೇಶ ಕೊಟ್ಟು ಬಚಾವಾಗಿಬಿಡುವ ಭಾಗ್ಯ ಈಗಿಲ್ಲ. ನಾನೇನೇ ಹೇಳಿದರೂ, ಕೆಲವೇ ಕ್ಷಣಗಳಲ್ಲಿ- ಇದೇನೋ ಸರಿ, ಆದರೆ ಹತ್ತು ವರ್ಷದ ಹಿಂದೆ ಹೀಗೆ ಹೇಳಿದ್ದಿರಿ- ಅಂತ ಮೊಬೈಲ್ ಫೋನ್ ಮಾಧ್ಯಮದಿಂದಲೇ ಪ್ರತಿಪ್ರಶ್ನಿಸುವ ಅಧಿಕಾರ ಜನರಿಗೆ ಸಿಕ್ಕಿದೆ’ ಅಂತ ಪರೋಕ್ಷವಾಗಿ ಸಾಂಪ್ರದಾಯಿಕ ಮಾಧ್ಯಮಕ್ಕೆ ಎದಿರಾಗಿ ಸಾಮಾಜಿಕ ಮಾಧ್ಯಮವನ್ನು ಮೋದಿ ಹೊಗಳಿದರೆಂಬುದು ಗಮನಾರ್ಹ. ಆದರೆ ಈ ಮಾಧ್ಯಮ ನಿರ್ವಹಣೆ ಕೌತುಕದ ಜತೆಗೇ ಮೋದಿ ಜನರನ್ನೂ ಪಳಗಿಸಲು ಹೊರಟಿರುವುದು ಶನಿವಾರದ ಪೌರಸಭಾಪರ್ವದ ಇನ್ನೊಂದು ಮುಖ್ಯಾಂಶ.

ಪತ್ರಕರ್ತರ ಧಾಟಿಯಲ್ಲೇ ನೀವೂ ಪ್ರಶ್ನಿಸಿಬಿಟ್ಟರಾಗಲಿಲ್ಲ, ಪರಿಹಾರಕ್ಕೆ ನಿಮ್ಮ ನೆಲೆಯಲ್ಲಿ ಏನು ಮಾಡುತ್ತಿದ್ದೀರಿ ಎಂಬುದೂ ಮುಖ್ಯ ಎಂಬುದನ್ನು ಪ್ರಧಾನಿ ಅಡಿಗಡಿಗೂ ಒತ್ತಿ ಹೇಳಿದ್ದಾರೆಂಬುದನ್ನು ನಿರ್ಲಕ್ಷಿಸುವಂತಿಲ್ಲ. ಈ ಮೂಲಕ ‘ಇದೋ… ಸರ್ಕಾರದ ವತಿಯಿಂದ ನಿಮ್ಮೆಲ್ಲರ ಸಮಸ್ಯೆ ಪರಿಹರಿಸಲು ನಾನು ಬಂದಿರುವೆ’ ಎಂಬರ್ಥದ ಪಟ್ಟದಿಂದ ಇಳಿದು ನಿಲ್ಲುವ ಬುದ್ಧಿವಂತಿಕೆಯೂ ಪ್ರದರ್ಶಿತವಾಗಿದೆ.

ಹಾಗೆಂದೇ, ಜನರ ಭಾಗಿದಾರಿಕೆ ಬಗ್ಗೆ ಮಾತನಾಡುತ್ತ, ಸರ್ಕಾರ ಏನು ಮಾಡುತ್ತಿದೆ ಎಂದು ಸಾರುತ್ತಲೇ ಜನ ಮಾಡಬೇಕಿರುವುದೇನೆಂಬ ಜವಾಬ್ದಾರಿ ಭಾರವನ್ನೂ ಏರಿಸುವ ಕೆಲಸ ಮಾಡಿದ್ದಾರೆ ಪ್ರಧಾನಿ. ಜನರನ್ನೇ ಜವಾಬ್ದಾರರನ್ನಾಗಿ ಮಾಡುವ ಅವರ ಕೆಲ ಮಾತುಗಳು ಹೀಗಿವೆ.

  • ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಎಷ್ಟೇ ಖರ್ಚು ಮಾಡಿದರೂ ನಿರೀಕ್ಷಿತ ಫಲಿತಾಂಶ ಏಕಿಲ್ಲವೆಂದರೆ ಜನರು ಆರೋಗ್ಯದ ಕುರಿತು ಮುನ್ನಚ್ಚೆರಿಕೆ ವಹಿಸುತ್ತಿಲ್ಲ. ಕಾಯಿಲೆ ಬಂದಾಗಲಷ್ಟೇ ಸ್ವಾಸ್ಥ್ಯದ ಬಗ್ಗೆ ಎಚ್ಚೆತ್ತುಕೊಳ್ಳುವುದಲ್ಲ. ಸಮಗ್ರ ಆರೋಗ್ಯ ಪರಿಕಲ್ಪನೆ ಬೇಕು. ಯೋಗದಂಥ ಕಾರ್ಯಕ್ರಮಗಳನ್ನು ಪ್ರಚುರಪಡಿಸುತ್ತಿರುವ ಉದ್ದೇಶವೇ ಇದನ್ನು ಸಾಧಿಸುವುದಕ್ಕೆ.
  • ಸಾವಿರಾರು ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದರೆ, ನಮ್ಮ ಸಾಂಸ್ಕೃತಿಕ ಪರಂಪರೆ ಆರ್ಥಿಕ ಕ್ಷೇತ್ರವಾಗಿ ಬದಲಾಗುತ್ತದೆ. ಇಂದು ತಾಜ್ ಮಹಲ್ ಅನೇಕ ಜನರ ಆರ್ಥಿಕ ಮೂಲವಾಗಿ ನಿಂತಿದೆ. ಹೀಗಾಗಿ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಪ್ರತಿ ವರ್ಷ 5 ವಿದೇಶಿಗರು ಭಾರತ ಪ್ರವಾಸ ಮಾಡುವಂತೆ ಪ್ರೇರೇಪಿಸಿದರೆ ಸಾಕು. ನಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲಿದೆ.
  • ನಾವು ನಮ್ಮ ಬಟ್ಟೆಗಾಗಿ ಮಾಡುವ ಖರ್ಚಿನಲ್ಲಿ ಶೇ.5ರಷ್ಟನ್ನು ಕೈಮಗ್ಗ ಮತ್ತು ಖಾದಿ ಬಟ್ಟೆಗಳಿಗೆ ವ್ಯಯಿಸಿದರೆ ಸಾಕು, ಅನೇಕ ಬಡವರ ಜೀವನವನ್ನು ಬದಲಿಸಬಹುದು. ಹೀಗಾಗಿ ಖಾದಿ ಫಾರ್ ನೇಷನ್ ಮತ್ತು ಖಾದಿ ಫಾರ್ ಫ್ಯಾಶನ್ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು.
  • ಒಂದನ್ನು ಪೂರೈಸಿದರೆ, ಇನ್ನೊಂದೇಕಿಲ್ಲ ಅಂತ ಕೇಳುವುದು ರಾಜಕೀಯದ ಚರ್ಚೆ. ಹೀಗಾಗಿಯೇ ಸ್ಮಾರ್ಟ್ ಸಿಟಿ ಅಂದಕೂಡಲೇ ಸ್ಮಾರ್ಟ್ ಹಳ್ಳಿಗಳೇಕಿಲ್ಲ ಅಂತ ಕೇಳ್ತಾರೆ. ನಗರಕ್ಕಿರುವ ಯೋಜನೆಯನ್ನೇ ಹಳ್ಳಿಗಳಿಗೆ ತರಲಾಗುವುದಿಲ್ಲ. ನಮ್ಮ ‘ರರ್ಬನ್’ ಪರಿಕಲ್ಪನೆ ಅರ್ಬನ್ (ನಗರ) ಸೌಲಭ್ಯಗಳನ್ನು ರೂರಲ್ (ಹಳ್ಳಿ)ಗಳಲ್ಲೂ ಕೊಡುವುದಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಗ್ರಾಮ ವ್ಯವಸ್ಥೆಯ ಪರಂಪರೆಗೆ ಹಾನಿಯಾಗಬಾರದು. ಏಕೆಂದರೆ, ಹಳ್ಳಿಯಲ್ಲಿ ಒಬ್ಬರ ಮನೆಗೆ ಬಂದ ಅತಿಥಿ ಎಲ್ಲರ ಅತಿಥಿಯಾಗುವ, ಒಂದು ಮನೆಯ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳುವ ವ್ಯವಸ್ಥೆ ಇದೆ. ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಾಗುತ್ತದೆ.

ಹೀಗೆ ಮೋದಿ ಪೌರಸಭಾ ಕಾರ್ಯಕ್ರಮ ಸಂವಾದ- ಪ್ರಶ್ನೋತ್ತರಗಳ ಮರುವ್ಯಾಖ್ಯಾನ ಮಾಡುತ್ತ, ಮಾಧ್ಯಮ ಮತ್ತು ಜನ ಇವೆರಡನ್ನೂ ಒಂದರ್ಥದಲ್ಲಿ ಪಳಗಿಸುತ್ತಿರುವ ಪ್ರಕ್ರಿಯೆ.

Leave a Reply