ಮಣ್ಣು ತಿನ್ನಬೇಕಾದ ದೈನ್ಯಕ್ಕೆ ಸಿಲುಕಿದ್ದವಳೀಗ ಒಲಿಂಪಿಕ್ಸ್ ಬಣ್ಣದಂಗಳದಲ್ಲಿ ನಿಂತಿದ್ದಾಳೆ… ಜೈಶಾಳಿಗೆ ಜೈ ಎನ್ನೋಣ!

ಭಾರತದ ಮ್ಯಾರಥಾನ್ ಓಟಗಾರ್ತಿ ಒ.ಪಿ ಜೈಶಾ…

ಡಿಜಿಟಲ್ ಕನ್ನಡ ಟೀಮ್:

ಸದ್ಯ ಎಲ್ಲೆಡೆ ಒಲಿಂಪಿಕ್ಸ್ ಹವಾ ಹೆಚ್ಚಾಗಿದೆ. ಈ ಬಾರಿ ನಮ್ಮ ದೇಶದಿಂದ ನೂರಾರು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತನ್ನ ದೇಶವನ್ನು ಪ್ರತಿನಿಧಿಸಬೇಕು ಅನ್ನೋದು ಪ್ರತಿಯೊಬ್ಬ ಕ್ರೀಡಾಪಟುವಿನ ದೊಡ್ಡ ಕನಸು. ಈ ಕನಸನ್ನು ಈಡೇರಿಸಲು ಅವರು ಪಡುವ ಪರಿಶ್ರಮ, ಅವರು ಎದುರಿಸುವ ಸಮಸ್ಯೆ, ನೋವುಗಳ ಬಗ್ಗೆ ಅವರಿಗಷ್ಟೇ ಗೊತ್ತು. ಹೀಗೆ ಪ್ರತಿಯೋಬ್ಬ ಕ್ರೀಡಾಪಟುವಿನ ಜೀವನದ ಹಾದಿಯೂ ಒಂದೊಂದು ರೋಚಕ ಕತೆ ಇರುತ್ತೆ. ಇಂತಹ ರೋಚಕ ಕಥೆಗಳ ಪೈಕಿ ನಾವಿಂದು ನಿಮಗೆ ಹೇಳುತ್ತಿರೋದು ಭಾರತದ ಮ್ಯಾರಥಾನ್ ರನ್ನರ್ ಒಪಿ ಜೈಶಾ ಅವರ ಜೀವನದ ಹಾದಿಯನ್ನು.

ನಮ್ಮ ದೇಶದ ಖ್ಯಾತ ಮಹಿಳಾ ಕ್ರೀಡಾಪಟುಗಳೆಂದರೆ ತಟ್ಟನೆ ಹೇಳೋದು ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್, ಪಿ.ವಿ ಸಿಂಧು ಹೀಗೆ ಖ್ಯಾತಿ ಪಡೆದ ಸಾಧಕಿಯರ ಹೆಸರನ್ನು. ಆದರೆ, ಬಹುತೇಕರಿಗೆ ನಮ್ಮಲ್ಲಿ ಒ.ಪಿ ಜೈಶಾ ಎಂಬ ಮ್ಯಾರಥಾನ್ ಓಟಗಾರ್ತಿ ಇದ್ದಾಳೆ ಎಂಬುದೇ ಗೊತ್ತಿಲ್ಲ…

16 ವರ್ಷಗಳ ಹಿಂದೆ ಕೇರಳದ ಯುವತಿಯೊಬ್ಬಳು ತಾನು ಸ್ಪರ್ಧಿಸುತ್ತಿದ್ದ ಕ್ರೀಡೋತ್ಸವಕ್ಕೆ ಆಗಮಿಸುವಂತೆ ತನ್ನ ಪೋಷಕರಿಗೆ ಒತ್ತಾಯಿಸುತ್ತಾಳೆ. ಆ ಕ್ರೀಡೋತ್ಸವದಲ್ಲಿ 800 ಮೀ. ಓಟದಲ್ಲಿ ಭಾಗವಹಿಸಿದ ಯುವತಿ ಇತರ ಸ್ಪರ್ಧಿಗಳ ಜತೆ ಬರಿಗಾಲಿನಲ್ಲಿ ಪೈಪೋಟಿಗಿಳಿಯುತ್ತಾಳೆ. ಆ ಸ್ಪರ್ಧೆಯಲ್ಲಿ ಮಿಕ್ಕ ಸ್ಪರ್ಧಿಗಳನ್ನು 100 ಮೀ. ಅಂತರದಿಂದ ಮಣಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾಳೆ. ಆಕೆ ಬೇರೆ ಯಾರೂ ಅಲ್ಲ.. ಭಾರತದ ಈಗಿನ ಲಾಂಗ್ ಡಿಸ್ಟನ್ಸ್ ರನ್ನರ್ ಒಪಿ ಜೈಶಾ.

ಸದ್ಯ ಜೈಶಾ ಮ್ಯಾರಥಾನ್ ಓಟದಲ್ಲಿ ತನ್ನ ರಾಷ್ಟ್ರೀಯ ದಾಖಲೆಗಳನ್ನು ತಾನೇ ಮುರಿಯುತ್ತಾ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಭಾರತೀಯ ಅಥ್ಲೆಟಿಕ್ಸ್ ವಲಯದಲ್ಲಿ ಈಕೆಯ ಹೆಸರು ಚಿರಪರರಿಚಿತವಾದರೂ ಹೆಚ್ಚಿನ ಅಭಿಮಾನಿಗಳನ್ನು ತಲುಪಿಲ್ಲದಿರುವುದು ಬೇಸರದ ಸಂಗತಿ. 19 ವರ್ಷಗಳ ಹಿಂದೆ ತಾನೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಕಳೆದ ವರ್ಷ ಜೈಶಾ ಉತ್ತಮಗೊಳಿಸುವ ಮೂಲಕ ಗಮನ ಸೆಳೆದಿದ್ದರು (ನೂತನ ದಾಖಲೆ: 2:34:43, ಹಳೇಯ ದಾಖಲೆ: 2:37:29). ಈಗ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ಈಕೆಯ ಸಂಕಷ್ಟದ ಹಾದಿ ಅನೇಕ ಯುವಕರಿಗೆ ಮಾದರಿಯಾಗಿ ನಿಲ್ಲುವುದರಲ್ಲಿ ಅನುಮಾನವಿಲ್ಲ.

ಜೈಶಾ ಹುಟ್ಟಿದ್ದು ಬಡ ಕುಟುಂಬದಲ್ಲಿ. ಆಕೆಯ ತಂದೆ ದಿನಗೂಲಿ ಮಾಡುತ್ತಿದ್ದರು. ಜೈಶಾ ಐದು ವರ್ಷದ ಮಗುವಾಗಿದ್ದಾಗ ಬಸ್ ಅಪಘಾತದಿಂದ ಆತ ಹಾಸಿಗೆ ಹಿಡಿಯಬೇಕಾಯಿತು. ಗಂಡನ ಈ ಪರಿಸ್ಥಿತಿ ನೋಡಲಾರದೆ ನಿಧಾನವಾಗಿ ತಾಯಿಯೂ ಖಿನ್ನತೆಗೆ ಒಳಗಾದಳು. ಮನೆಯನ್ನು ನಡೆಸಲು ಯಾರು ದಿಕ್ಕಿಲ್ಲದ ಪರಿಣಾಮ ಬಡತನ ಮತ್ತಷ್ಟು ಕ್ರೂರಿಯಾಯಿತು. ಅವರು ಸಾಕಿದ್ದ ಹಸು ಕೂಡ ಇದ್ದಕ್ಕಿದಂತೆ ಸತ್ತು ಹೋಯಿತು. ಇಂತಹ ಪರಿಸ್ಥಿತಿಯಲ್ಲಿ ತಿನ್ನಲು ಅನ್ನ ಸಿಗದಿದ್ದಾಗ ಜೈಶಾ ಜೀವಿಸಲು ತಿಂದದ್ದು ಮಣ್ಣನ್ನು.. ಗಂಜಿಯೇ ಆಕೆಯ ಪಾಲಿನ ಮೃಷ್ಟಾನ್ನ ಭೋಜನ ಎನ್ನುವಂತಹ ಪರಿಸ್ಥಿತಿ ಎದುರಾಯಿತು. ಇಂತಹ ಪರಿಸ್ಥಿತಿಯಲ್ಲಿ ಜೈಶಾ ತಾಯಿ ತಾವಿದ್ದ ಮನೆಯನ್ನು ಒತ್ತೆಯಿಟ್ಟು ಹಸುಗಳನ್ನು ಸಾಕಿದರು.

ಈ ಸಂದರ್ಭದಲ್ಲಿ ಬೆಳಗ್ಗೆ ಎದ್ದು ಹಾಲು ಕರೆಯುತ್ತಾ ಅದನ್ನು ಎರಡು ಕಿ.ಮೀ ದೂರದಲ್ಲಿರುವ ಸೊಸೈಟಿಗೆ ಹೋಗಿ ಕೊಡುತ್ತಿದ್ದಳು ಜೈಶಾ. ಬೆಳಗ್ಗೆ ಮತ್ತು ಸಂಜೆ ಈ ಕೆಲಸ ನಿಭಾಯಿಸುತ್ತಿದ್ದ ಜೈಶಾ, ಮನೆಗೆ ಹಿಂತಿರುಗುವಾಗ ಓಡುತ್ತಲೇ ಬರುತ್ತಿದ್ದಳು. ಅಲ್ಲಿಂದ ಆಕೆ ಓಡುವುದನ್ನು ಅಭ್ಯಾಸ ಮಾಡಿದಳು. ತನಗೆ ತಿಳಿಯದೇ 2500 ಮೀಟರ್ ದೂರವನ್ನು ವೇಗವಾಗಿಯೇ ಓಡಲಾರಂಭಿಸಿದಳು.

ವಿದ್ಯಾಭ್ಯಾಸ ನೀಡಲು ತಾಯಿಯಿಂದ ಸಾಧ್ಯವಾಗಲಿಲ್ಲ. ಆಗ ಛಲ ಬಿಡದ ಜೈಶಾ, ಒಂದು ಜೊತೆ ಬಟ್ಟೆಯೊಂದಿಗೆ ಮನೆಯಿಂದ ಹೊರಬಂದಳು. ಈ ಸಂದರ್ಭದಲ್ಲಿ ಆಕೆ ಭೇಟಿ ಮಾಡಿದ್ದು ಕೋಚ್ ಮೆನನ್ ಮತ್ತು ನಿನಮ್ಮರನ್ನು. ಅವರು ಜೈಶಾಳನ್ನು ತಮ್ಮ ಮಗಳಂತೆ ನೋಡಿಕೊಂಡರು. ಆಕೆಗೆ ಆತ್ಮಸ್ಥೈರ್ಯ ತುಂಬಿ ಆಕೆ ಓಟಗಾರ್ತಿಯಾಗಲು ಪ್ರೋತ್ಸಾಹಿಸಿದರು. ಆಕೆಯ ತರಬೇತಿಗೆ ಬೇಕಾದ ಶೂ ಮತ್ತು ಕಿಟ್ ಕೊಡಿಸಿದರು. ಇದೇ ಮೊದಲ ಬಾರಿಗೆ ಜೈಶಾ ಓಟಗಾರ್ತಿಯಾಗಲು ಮೊದಲು ತರಬೇತಿ ಪಡೆದಿದ್ದು. ಅಥ್ಲೆಟಿಕ್ಸ್ ನಲ್ಲೇ ತನ್ನೆಲ್ಲಾ ಪರಿಶ್ರಮವನ್ನು ಹಾಕಿದ ಜೈಶಾ, ತನಗೆ ಸಿಕ್ಕ ಎಲ್ಲ ಅವಕಾಶವನ್ನು ಬಳಸಿಕೊಂಡಳು. 2005ರ ಯುನಿವರ್ಸಿಟಿ ಗೇಮ್ಸ್ ಸ್ಪರ್ಧೆಯಲ್ಲಿ 1,500 ಮೀ, 5000 ಮೀ, ಮತ್ತು 10,000 ಮೀ. ವಿಭಾಗದಲ್ಲಿ ಚಿನ್ನದ ಪದಕ ಸಂಪಾದಿಸಿ ಎಲ್ಲರ ಗಮನ ಸೆಳೆದಳು. ತಕ್ಷಣವೇ ಜೈಶಾ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದರು. ಅಲ್ಲಿ ಬೆಲಾರಸ್ ನ ಸ್ನೆಸರೇವ್ ಅವರ ಮಾರ್ಗದರ್ಶನ ಪಡೆದ ಜೈಶಾ 2006ರ ಏಷ್ಯನ್ ಗೇಮ್ಸ್ ನಲ್ಲಿ 5000 ಮೀ. ವಿಭಾಗದಲ್ಲಿ ಕಂಚಿನ ಪದಕ ಪಡೆದಳು. ಈ ಹಂತದಲ್ಲಿ ತನ್ನ ಗಾಯದ ಸಮಸ್ಯೆಯನ್ನು ನಿಭಾಯಿಸುವುದರ ಜತೆಗೆ, ತನ್ನ ಸಹೋದರಿಯರ ಮದುವೆಗೆ ತಾನು ಗೆದ್ದ ಹಣವನ್ನು ಖರ್ಚು ಮಾಡಿದರು… ನಂತರ 2014ರ ಇಂಚಾನ್ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಪಡೆದು ಮತ್ತೊಂದು ಸಾಧನೆ ಮಾಡಿದರು.

ಈಗ 33 ವರ್ಷದ ಒ.ಪಿ. ಜೈಶಾ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮ್ಯಾರಥಾನ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಥಿಯೋಪಿಯಾ, ಕೀನ್ಯಾ ಸ್ಪರ್ಧಿಗಳ ಪ್ರಾಬಲ್ಯದ ಮುಂದೆ ಈಕೆ ಪದಕ ಗೆಲ್ಲುತ್ತಾಳೊ ಬಿಡುತ್ತಾಳೊ… ತನ್ನ ಜೀವನದ ಹಾದಿಯಲ್ಲಿ ಅತ್ಯಂತ ಕಠಿಣ ಸವಾಲುಗಳನ್ನು ಮೆಟ್ಟಿನಿಂತು ಇಲ್ಲಿಯವರೆಗೂ ಸಾಗಿ ಬಂದಿರುವ ಈಕೆ ನಿಜಕ್ಕೂ ಒಬ್ಬ ಚಾಂಪಿಯನ್. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಅಗ್ರ 8 ರಲ್ಲಿ ಸ್ಥಾನ ಪಡೆಯಬೇಕೆನ್ನುವುದು ಈಕೆಯ ಗುರಿ.

ಬನ್ನಿ, ಆಗಸ್ಟ್ 14ರಂದು ನಡೆಯಲಿರುವ ಮ್ಯಾರಥಾನ್ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿರುವ ಜೈಶಾಗೆ ನಾವೆಲ್ಲರೂ ಬೆಂಬಲಿಸಿ ಹಾರೈಸೋಣ.

Leave a Reply