ಬಿಜೆಪಿಯನ್ನು ಗೆಲ್ಲಿಸಿದ್ದು ಗೋವಲ್ಲ ದಲಿತರು, ಮೋದಿ- ಆರೆಸ್ಸೆಸ್ ಅರಿತಿರುವ ಈ ಸತ್ಯಕ್ಕೆ ಭಕ್ತರೇಕೆ ಕುರುಡಾದರು?

ಚೈತನ್ಯ ಹೆಗಡೆ

‘ಇನ್ನು ಹಿಂದುಗಳ ಮತ ಮೋದಿಯವರಿಗಿಲ್ಲ..’

‘ಹಿಂದು ಮತಗಳನ್ನು ಪಡೆದು ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಈಗ ಸೆಕ್ಯುಲರ್ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ.’

ಪ್ರಧಾನಿ ನರೇಂದ್ರ ಮೋದಿ ನಕಲಿ ಗೋರಕ್ಷಕರ ವಿರುದ್ಧ ಹರಿಹಾಯುತ್ತಲೇ ಸಾಮಾಜಿಕ ತಾಣದಲ್ಲಿ ಭಕ್ತಗಣದ ಕೆಲವರು ಹತಾಶೆ ತೋರಿಸುತ್ತಿರುವ ಬಗೆ ಇದು.

ಈ ಪ್ರತಿಕ್ರಿಯೆಗಳಿಂದ ಒಂದಂತೂ ಸ್ಪಷ್ಟವಾಗಿದೆ. ಹೀಗೆ ಹಿಂದುಮತದ ಪರವಾಗಿ ಗುಡುಗುತ್ತಿರುವವರು ತಮ್ಮ ಹಿಂದುತ್ವದ ವ್ಯಾಖ್ಯೆಯಿಂದ ಎಸ್ಸಿ-ಎಸ್ಟಿ ವರ್ಗವನ್ನು ನಿರಾಯಾಸವಾಗಿ ಹೊರಗಿಟ್ಟುಬಿಟ್ಟಿದ್ದಾರೆ. ಇಲ್ಲದಿದ್ದರೆ, ಗುಜರಾತಿನ ಉನಾದಲ್ಲಿ ಸತ್ತ ಗೋವಿನ ಚರ್ಮ ಸುಲಿದರೆಂಬ ಕಾರಣಕ್ಕೆ ಈ ವರ್ಗಕ್ಕೆ ಸೇರಿದವರನ್ನು ವ್ಯಾನಿಗೆ ಕಟ್ಟಿ ಹೊಡೆದವರ ವಿರುದ್ಧ ಪ್ರಧಾನಿಯಾಗಲೀ ಮತ್ಯಾರೇ ಆಗಲೀ ಆಕ್ರೋಶಗೊಂಡರೆ, ಅಂಥ ಗೂಂಡಾಗಿರಿಯಲ್ಲಿ ತೊಡಗಿದವರ ಬಗ್ಗೆ ಕಠೋರ ಮಾತುಗಳನ್ನಾಡಿದರೆ ಇವರೇಕೆ ಹೀಗೆ ಪ್ರತಿಕ್ರಿಯಿಸಬೇಕು?

ನರೇಂದ್ರ ಮೋದಿ ಗೆಲುವಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾಟು ಬೀಸಿದವರು, ಹಿಂದುತ್ವಕ್ಕೆ ಒಳ್ಳೆಯದಾಗುತ್ತದೆಂಬ ಪರಿಕಲ್ಪನೆಯಿಂದ ಅವರ ಪರ ನಾನಾ ಕಡೆ ಪ್ರಚಾರಗಳಲ್ಲಿ ತೊಡಗಿಸಿಕೊಂಡವರು ಇವರೆಲ್ಲರ ಕೊಡುಗೆ ಇದ್ದಿರುವುದು ಹೌದು. ಆದರೆ ಬಿಜೆಪಿಯನ್ನು ಗೆಲ್ಲಿಸಿದ್ದು ಇವಿಷ್ಟೇ ಅಲ್ಲವಲ್ಲ? ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 73ನ್ನು ಬಿಜೆಪಿ (ಮಿತ್ರಪಕ್ಷ ಅಪ್ನಾದಳದ 2 ಸ್ಥಾನಗಳನ್ನೂ ಸೇರಿಸಿ) ಗೆಲ್ಲಬೇಕಿದ್ದರೆ ಸಂಘಟನಾಶಕ್ತಿಯ ಜತೆಗೆ ದಲಿತರು- ಹಿಂದುಳಿದವರ ಮತಗಳು ಬಂದಿರದಿದ್ದರೆ ಆಗುತ್ತಿತ್ತೇ? ದಲಿತ ಮತಗಳ ಪ್ರತಿನಿಧಿಯಾಗಿ ಬಿಂಬಿಸಿಕೊಂಡ ಮಾಯಾವತಿಯವರಿಗೆ ಒಂದೇ ಒಂದು ಲೋಕಸಭೆ ಸ್ಥಾನವೂ ಸಿಗಲಿಲ್ಲ. ಈ ಉದಾಹರಣೆಯನ್ನು ಬಿಜೆಪಿ ಗಳಿಕೆ ಜತೆ ತಾಳೆ ಹಾಕಿದಾಗ ಮತ ಬಂದಿದ್ದು ಎಲ್ಲಿಂದ ಎಂಬುದು ಸ್ಪಷ್ಟವಾಗುತ್ತದೆ. ಉತ್ತರ ಪ್ರದೇಶ ಒಂದು ಉದಾಹರಣೆ ಮಾತ್ರ. ಭಾರತದ ಬಹುಭಾಗದಲ್ಲಿ ಈ ವರ್ಗ ಕೈಹಿಡಿದಿದ್ದರಿಂದಲೇ ಕೇಂದ್ರದಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಬಂದಿದೆ.

ತೀರ ರಾಜಕೀಯ ಪಾಂಡಿತ್ಯವಿಲ್ಲದವರೂ ಸರಳ ಸತ್ಯವೊಂದನ್ನು ಕಂಡುಕೊಳ್ಳಬಹುದು. ಎಲ್ಲೆಲ್ಲ ಹಿಂದುಳಿದವರು- ದಲಿತರು-ಮುಸ್ಲಿಮರನ್ನು ಒಗ್ಗೂಡಿಸುವುದಕ್ಕೆ ಎದುರಾಳಿಗಳಿಗೆ ಸಾಧ್ಯವಾಗಿದೆಯೋ ಆಗೆಲ್ಲ ಬಿಜೆಪಿ ಹಿನ್ನಡೆ ಕಂಡಿದೆ. ಮುಸ್ಲಿಮರಿಂದ ದಲಿತ ಹಿಂದು ಮತಗಳ ಅಭಿಪ್ರಾಯವನ್ನು ಬೇರ್ಪಡಿಸಿ ತನ್ನೆಡೆಗೆ ಸೆಳೆದುಕೊಂಡಾಗಲೆಲ್ಲ ಬಿಜೆಪಿ ಗೆದ್ದಿದೆ. ಇತ್ತೀಚಿನ ಅಸ್ಸಾಂ ವಿಧಾನಸಭೆ ಗೆಲುವಿಗೆ ಬಿಜೆಪಿ ಬಳಿ ಹಲವು ಕಾರಣಗಳಿದ್ದಿರಬಹುದಾದರೂ, ಮುಸ್ಲಿಮರ ಬಾಹುಳ್ಯದಿಂದ ತೊಂದರೆ ಅನುಭವಿಸಬೇಕಾದ ಬುಡಕಟ್ಟುಗಳೆಲ್ಲ ಬಿಜೆಪಿ ಬೆನ್ನಿಗೆ ನಿಂತಿದ್ದು ದೊಡ್ಡ ಕಾರಣ.

ಸ್ಪಷ್ಟವಾಗಿ ಹೇಳಬೇಕೆಂದರೆ ಬಿಜೆಪಿಯನ್ನು ಕೇಂದ್ರದಲ್ಲಿ ಗೆಲ್ಲಿಸಿದ್ದು, ನಂತರದಲ್ಲಿ ಗೆಲ್ಲಿಸುತ್ತಿರುವುದು ಗೋವಲ್ಲ, ದಲಿತರು ಹಾಗೂ ದಲಿತರನ್ನೊಳಗೊಂಡಂತೆ ಹಿಂದುಗಳು!

ಹೀಗಿರುವಾಗ, ಇಂಥದೊಂದು ದಲಿತ ವರ್ಗದ ಮೇಲೆ ಗೋರಕ್ಷಣೆಯ ಹೆಸರಲ್ಲಿ ಹಲ್ಲೆಯಾಗುತ್ತಿದೆ ಎಂದಾದಾಗ, ಪ್ರಧಾನಿ ಹೇಳಿರುವ ಮಾತುಗಳಲ್ಲಿ ತಪ್ಪೇನಿದೆ? ಇದು ಕಾಳಜಿಯೋ, ಚುನಾವಣಾ ಒತ್ತಡವೋ ಎಂಬ ಒಣಚರ್ಚೆ ಬೇಕಾಗಿಯೇ ಇಲ್ಲ. ನಾಯಕನಾದವನು ತನ್ನ ಬೆಂಬಲ ಮೂಲವನ್ನು ಉಳಿಸಿಕೊಳ್ಳಬೇಕಾದದ್ದು ಅತ್ಯಂತ ಸಹಜ ಹಾಗೂ ಅಪೇಕ್ಷಿತ ನಡೆ. ಮೋದಿ ಮಾಡಿರುವುದು ಅದನ್ನೇ. ಯಾವುದನ್ನು ನರೇಂದ್ರ ಮೋದಿಯವರು ಆಕ್ರಮಣಕಾರಿ ರಾಜಕೀಯ ಭಾಷೆಯಲ್ಲಿ ಹೇಳಿದರೋ ಅದನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ತಾತ್ವಿಕ ಭಾಷೆಯಲ್ಲಿ ಹೇಳಿದೆ.

‘ದಲಿತ ಸಹೋದರರ ಮೇಲೆ ಆಕ್ರಮಣ ಮಾಡುವ ಬದಲು ನನ್ನ ಮೇಲೆ ಮಾಡಿ. ಗೋರಕ್ಷಣೆ ಹೆಸರಲ್ಲಿ ದಲಿತರಿಗೆ ಪೀಡಿಸುವ ಹಕ್ಕನ್ನು ಇವರಿಗೆ ಯಾರು ಕೊಟ್ಟಿದ್ದಾರೆ’ ಎಂದೆಲ್ಲ ಉಗ್ರವಾಗಿಯೇ ಪ್ರಧಾನಿ ಹೇಳಿದರೆ, ‘ದೇಶದ ಅನುಸೂಚಿತ ಜಾತಿಯ ಬಂಧುಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಸಂಘ ಕಟು ಶಬ್ದಗಳಲ್ಲಿ ಖಂಡಿಸುತ್ತದೆ. ಕಾನೂನನ್ನು ಕೈಗೆ ತೆಗೆದುಕೊಂಡು ತಮ್ಮದೇ ಸಮಾಜದ ಬಂಧುಗಳ ಮೇಲೆ ನಡೆಸುವ ದೌರ್ಜನ್ಯ ಕೇವಲ ಅನ್ಯಾಯವಷ್ಟೇ ಅಲ್ಲ ಅಮಾನವೀಯವೂ ಹೌದು…’ ಎಂದು ತುಂಬ ಶಾಸ್ತ್ರೀಯ ಭಾಷೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಕ್ರಿಯಿಸಿದೆ.

ಪೊಲಿಟಿಕಲ್ ಆಗಿ ಫಿಲಾಸಫಿಕಲ್ ಆಗಿ ಹೇಗೆ ನೋಡಿದರೂ ದಲಿತ ಎಂಬ ದೊಡ್ಡ ವರ್ಗದಡಿ ಬರುವ ಜನರನ್ನು ಹೊರತುಪಡಿಸಿದರೆ ಹಿಂದು ಎನ್ನುವುದಕ್ಕೆ ಉಳಿದುಕೊಳ್ಳುವುದಾದರೂ ಏನು?  ಹಿಂದು ಮೇಲ್ವರ್ಗಕ್ಕೆ ಖ್ಯಾತಿಯನ್ನೋ, ಕುಖ್ಯಾತಿಯನ್ನೋ ಕೊಟ್ಟುಬಿಡುವ ರಾಮಜನ್ಮಭೂಮಿ ಆಂದೋಲನ ಸಹ ಹಿಂದು ಸಮಾಜದ ಈ ವರ್ಗದ ಬೆಂಬಲವಿಲ್ಲದಿದ್ದರೆ ಅಷ್ಟು ದೊಡ್ಡಮಟ್ಟದಲ್ಲಿ ಆಗುತ್ತಿರಲಿಲ್ಲ.

ಹಾಗೆ ನೋಡಿದರೆ ಗೋಹತ್ಯೆಗೂ ದಲಿತ ಸಮುದಾಯಕ್ಕೂ ಸಂಬಂಧವಿಲ್ಲ. ಗೋವು ಸತ್ತ ನಂತರದ ಕಾರ್ಯಗಳಲ್ಲಿ ಸಮುದಾಯದ ಜಾತಿಗಳು ತೊಡಗಿಸಿಕೊಂಡಿದ್ದರೂ ತೀರ ‘ಬೀಫ್ ಫೆಸ್ಟಿವಲ್’ಗಳಲ್ಲಿ ಇವರನ್ನು ಬಳಸಿಕೊಳ್ಳುತ್ತಿರುವುದು ತಥಾಕಥಿತ ಸೆಕ್ಯುಲರ್ ರಾಜಕಾರಣದ ಇತ್ತೀಚಿನ ವಿದ್ಯಮಾನ. ಹಾಗೆಂದೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವ ಶೀಲಾ ದಿಕ್ಷಿತ್ ಸಹ ಗೋವಿನ ರಕ್ಷಣೆ ಅವಶ್ಯ ಎಂದು ಮಾತನಾಡುತ್ತಿದ್ದಾರೆ. ಯಾದವರ ಉತ್ತರ ಪ್ರದೇಶದಲ್ಲಿ ಗೋಮಾಂಸ ತಿನ್ನುವ ಸ್ವಾತಂತ್ರ್ಯ ವೈಭವೀಕರಿಸಿದರೆ ಮುಸ್ಲಿಮರಿಗೆ ಮಾತ್ರ ಖುಷಿಯಾಗಬಹುದಾಗಲೀ, ದಲಿತರಿಗೂ ಅಲ್ಲ ಎಂಬ ಸತ್ಯ ಕಾಂಗ್ರೆಸ್ಸಿಗೂ ಗೊತ್ತಿದೆ. ಕೃಷಿಯಲ್ಲಿ ಯಂತ್ರೋಪಕರಣಗಳು ಢಾಳಾಗಿ ಪರಿಚಯವಾಗದ ಉತ್ತರ ಪ್ರದೇಶದಲ್ಲಿ ಗೋವು ಕೃಷಿ ಆರ್ಥಿಕತೆಯಲ್ಲಿ ಇನ್ನೂ ಪ್ರಾಮುಖ್ಯ ಉಳಿಸಿಕೊಂಡಿರುವುದೂ ಇಂಥ ಅಭಿಪ್ರಾಯಕ್ಕೆ ಕಾರಣವಿದ್ದಿರಬಹುದು.

ಹೀಗಾಗಿ ಕೇವಲ ಉತ್ತರ ಪ್ರದೇಶ ಚುನಾವಣೆ ಕಣ್ಣಮುಂದಿರಿಸಿಕೊಂಡು ಪ್ರಧಾನಿ ಇಂಥ ಮಾತುಗಳನ್ನಾಡಿಲ್ಲವೆಂಬುದು ಸ್ಪಷ್ಟ. ಬಿಜೆಪಿಯ ಒಟ್ಟಾರೆ ದಲಿತ ಸ್ಪಂದನೆಯ ಕಾರ್ಯಕ್ರಮಗಳನ್ನು ಗುಜರಾತಿನ ಉನಾದಂಥ ಘಟನೆಗಳು ಹಾಳುಗೆಡವುತ್ತಿರುವ ಬಗ್ಗೆ ಪ್ರಧಾನಿಗೆ ಆಕ್ರೋಶವಿದೆ. ಕಾನೂನು ಕೈಗೆತ್ತಿಕೊಳ್ಳುವ ಗೋರಕ್ಷಕರ ಮೇಲೆ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಅಂತ ತೆಲಂಗಾಣದ ಕಾರ್ಯಕ್ರಮದಲ್ಲೂ ಪುನರುಚ್ಛರಿಸಿರುವುದರ ಕಾರಣ ಇದೇ. ಬಿಜೆಪಿ ತನ್ನ ಆಡಳಿತದಲ್ಲಿ ಅನುಸೂಚಿತ ಜಾತಿಗಳಿಗೆ ಪ್ರಾತಿನಿಧ್ಯ ಕೊಡುತ್ತ, ದಲಿತ ಉದ್ದಿಮೆಗಳನ್ನು ಪ್ರೋತ್ಸಾಹಿಸುವುದಕ್ಕೆ ಕ್ರಮಗಳನ್ನು ಕೈಗೊಳ್ಳುತ್ತ, ಅದೇ ಸಂದರ್ಭದಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಾಣದಂಥ ಕಾರ್ಯಗಳಲ್ಲಿ ತೊಡಗಿದ್ದರೂ ಉನಾ-ದಾದ್ರಿಗಳಂಥ ಘಟನೆಗಳನ್ನು ಮಾತ್ರವೇ ಎತ್ತಿಹಿಡಿದು, ಬಿಜೆಪಿಯನ್ನು ದಲಿತ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಎಂದು ಹುಯಿಲೆಬ್ಬಿಸಿ, ಚದುರಿಹೋಗಿದ್ದ ಮತ ಸಮೀಕರಣವನ್ನು ಮತ್ತೆ ಮರುಸ್ಥಾಪಿಸುವ ಕಾರ್ಯದಲ್ಲಿ ಕಾಂಗ್ರೆಸ್/ಸಮಾಜವಾದಿಗಳ ಪರವಾದ ಬೌದ್ಧಿಕ ವರ್ಗ ತುರುಸಿನಿಂದ ತೊಡಗಿಸಿಕೊಂಡಿದೆ. ಜಿಗ್ನೇಶ್ ಮೆವಾನಿಯಂಥ ಯುವ ದಲಿತ ಹೋರಾಟಗಾರ ಗುಜರಾತಿನಲ್ಲಿ ಉನಾ ಘಟನೆಯನ್ನು ಬಳಸಿಕೊಂಡು ಆಪ್ ನಾಯಕನಾಗಿ ಹೊರಹೊಮ್ಮುವ ಪ್ರಯತ್ನದಲ್ಲಿದ್ದಾರೆ. ಆ ಪ್ರಕರಣದಲ್ಲಿ ಆರೋಪಿಗಳೆಲ್ಲರನ್ನು ತ್ವರಿತವಾಗಿ ಬಂಧಿಸಿದ್ದರೂ ‘ದಲಿತರ ದೌರ್ಜನ್ಯ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಿಲ್ಲ’ ಎಂಬ ವ್ಯವಸ್ಥಿತ ಬೊಬ್ಬೆ ಇದೆ. ‘ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ’ ಎಂಬಂತಹ ಮಾತುಗಳನ್ನೇನೂ ಆಡದೇ ಪ್ರಧಾನಿಯಿಂದ ಕಟುಮಾತಿನ ಖಂಡನೆ- ಎಚ್ಚರಿಕೆಗಳು ಬಂದ ನಂತರವೂ ಸೋಮವಾರ ಕಾಂಗ್ರೆಸಿಗರು ಇದೇ ವಿಷಯದಲ್ಲಿ ಸಭಾತ್ಯಾಗ ಮಾಡಿದರು. ಹೀಗಿರುವಾಗ.. ಇಂಥ ಸಂಕಷ್ಟ ತಂದೊಡ್ಡಿರುವ, ಕಾನೂನು ಕೈಗೆತ್ತಿಕೊಳ್ಳುವ ಗೋರಕ್ಷಕರು ಯಾವ ಬಣಕ್ಕೆ ಸೇರಿದ್ದರೂ ಆ ಬಗ್ಗೆ ಪ್ರಧಾನಿ ಕಟುಮಾತುಗಳನ್ನಾಡಿರುವುದು ರಾಜಕೀಯವಾಗಿಯೂ ತಾತ್ವಿಕವಾಗಿಯೂ ಅತ್ಯಂತ ಸೂಕ್ತವಾದದ್ದೇ.

ಯಾವಾಗ ಗೋರಕ್ಷಣೆ ಎಂಬುದು ಒಂದು ಗುಂಪಿನ ಅಧಿಕಾರ ಎಂದು ಒಪ್ಪಿಕೊಳ್ಳಲಾಗುವುದೋ ಆಗ ರಾಜಕೀಯ ಹುನ್ನಾರಕ್ಕೂ ವೇದಿಕೆ ಮುಕ್ತವಾಗಿಸಿದಂತೆ. ಉನಾದಲ್ಲಿ ದಲಿತರಿಗೆ ಥಳಿಸಿದವರು ಬೇರೆ ಪಕ್ಷಗಳೊಂದಿಗೆ ತಳುಕು ಹಾಕಿಕೊಂಡಿರುವ ಸಾಧ್ಯತೆಗಳೂ ಇದ್ದಿರಬಹುದಲ್ಲ.. ಹೀಗೆಂದೇ ಗೋರಕ್ಷಣೆ ಹೆಸರಲ್ಲಿ ಪೀಡಿಸುವವರಿಗೆ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಹೇಳಿರುವುದು. ಇದು ತಮ್ಮದೇ ಬಣದ ಪುಂಡರಿಗೂ, ರಾಜಕೀಯ ಲಾಭಕ್ಕಾಗಿ ಎಳೆಸುವವರಿಗೂ ಏಕಕಾಲದಲ್ಲಿ ಎಚ್ಚರಿಕೆ ನೀಡುವ ಕ್ರಮ.

ನಿಜ. ಕರಾವಳಿಯ ಕೆಲವು ಭಾಗಗಳಲ್ಲಿ ಕಂಡುಬರುವಂತೆ ದನಗಳ್ಳತನದ ಸನ್ನಿವೇಶಗಳು ಇರುವುದು ಹೌದು. ಅಲ್ಲೆಲ್ಲ ಸಮುದಾಯ ಒಟ್ಟಾಗಿ ಪೊಲೀಸರು ಮತ್ತು ಸ್ಥಳೀಯಾಡಳಿತದ ಮೇಲೆ ಒತ್ತಡ ತರಬೇಕಲ್ಲದೇ ಯಾವುದೋ ಗುಂಪಿಗೆ ಈ ರಕ್ಷಣಾ ಕಾರ್ಯವನ್ನು ಹೊರಗುತ್ತಿಗೆ ಕೊಟ್ಟು ಸಮಸ್ಯೆಗೆ ಕಾರಣವಾಗುವುದಲ್ಲ. ಅಲ್ಲದೇ ಭಾರತದುದ್ದಕ್ಕೂ ಬಿಜೆಪಿಗರು ಒಂದಿಲ್ಲೊಂದು ಹಂತದಲ್ಲಿ ಅಧಿಕಾರದ ಜಾಗದಲ್ಲಿರುವುದರಿಂದ ಈಗಲೂ ‘ನಮ್ಮ ಮೇಲೆ ಆಕ್ರಮಣವಾಗುತ್ತಿದೆಯಾದ್ದರಿಂದ ಹಿಂಸಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದೇವೆ’ ಎಂಬ ಸಮಜಾಯಿಷಿ ಯಾರಿಗೂ ಒಪ್ಪಿಗೆಯಾಗುವುದಿಲ್ಲ.

ಉಳಿದಂತೆ ಗೋವನ್ನು ರಕ್ಷಿಸುವುದಕ್ಕೆ ಹೆಚ್ಚಿನ ಆಯ್ಕೆಗಳಿಲ್ಲ. ಅಧಿಕಾರದಲ್ಲಿರುವವರು ಗೋವು ಆರ್ಥಿಕವಾಗಿ ಪ್ರಸ್ತುತವಾಗುವಂತೆ ನೋಡಿಕೊಳ್ಳಬೇಕು. ಗೋವಲ್ಲಿ ಮುಕ್ಕೋಟಿ ದೇವರನ್ನು ಕಾಣುವ ಪ್ರೇಮಿಗಳು ಬರಿದೇ ಭಾವನಾತ್ಮಕತೆ ತೋರಿಸದೇ ಅವನ್ನು ಸಾಕಬೇಕು. ಇಲ್ಲದಿದ್ದರೆ- ನಮ್ಮನೆಯವರೆಲ್ಲ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಹೋಗ್ತಾರೆ, ಆದ್ರೆ ಸರ್ಕಾರಿ ಕನ್ನಡ ಶಾಲೆಗಳು ಉಳಿಯದೇ ಹೋದ್ರೆ ನಾವು ಸುಮ್ನಿರಲ್ಲ ಮತ್ತೆ… ಅಂತ ಆಕ್ರೋಶಪಟ್ಟಂತಾಗುತ್ತದೆ ಅಷ್ಟೆ.

ನಿಜ, ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಗೋಪ್ರೇಮಿಗಳು, ಮಂದಿರದ ಕನಸಿನವರು, ಆರ್ಥಿಕತೆ ಉತ್ತಮವಾಗಲಿ ಎಂದು ಕನಸಿದ ಯುವಕರು ಎಲ್ಲರ ಪಾಲಿದೆ. ಅಂತೆಯೇ ಅನುಸೂಚಿತ ಜಾತಿಗಳ ಬೆಂಬಲದ ಪಾಲೂ ದೊಡ್ಡದಿದೆ. ಹೀಗಿರುವಾಗ ಈ ವರ್ಗದಲ್ಲಿ ಭಯದ ಪರಿಸ್ಥಿತಿಯನ್ನು ನಿರ್ಮಿಸುತ್ತಿರುವ ಯಾರನ್ನೇ ಆದರೂ ತರಾಟೆಗೆ ತೆಗೆದುಕೊಳ್ಳುವುದು ನಾಯಕತ್ವದ ದೃಷ್ಟಿಯಿಂದ ಅತಿಯೋಗ್ಯ ಕೆಲಸವೇ ಹೌದು.

1 COMMENT

  1. I entirely agree with this view and it is time that all Hindus including our own brothers Dalits should join hands to protect and uphold our culture and any ill treatment of any sort to a single Dalit in this country is not acceptable and our Hon’ble PM is absolutely right in saying that he should be shoot before killing any dalit in this country.

Leave a Reply