ಭಾರತದ ತ್ರಿಪುರಾವನ್ನು ಜಾಗತಿಕ ನಕಾಶೆಯಲ್ಲಿ ಹೊಳಪಿಸುತ್ತಿರುವ ದೀಪಾ ಕರ್ಮಾಕರ್ ಏಕಾಂಗಿ ಹೋರಾಟದ ಹಾದಿ!

ಡಿಜಿಟಲ್ ಕನ್ನಡ ಟೀಮ್:

‘ಭಾರತದಲ್ಲಿ ಜಿಮ್ನಾಸ್ಟಿಕ್ ಅಂದ್ರೆ ಸರ್ಕಸ್ ಎನ್ನುವ ಮನೋಭಾವವಿದೆ. ಅದನ್ನು ಬದಲಾಯಿಸಿ ಜಿಮ್ನಾಸ್ಟಿಕ್ ಕ್ರೀಡೆಯನ್ನು ಖ್ಯಾತಿಗೊಳಿಸುವುದು ನನ್ನ ಗುರಿ…’ ಹೀಗಂತ ಹೇಳಿದ್ದು ಬೇರೆ ಯಾರು ಅಲ್ಲ, ಒಲಿಂಪಿಕ್ಸ್ ಜಿಮ್ನಾಸ್ಟಿಕ್ ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿರೋ ದೀಪಾ ಕರ್ಮಾಕರ್.

ಭಾರತದ ನಕಾಶೆಯಲ್ಲಿ ತ್ರಿಪುರಾ ಎಲ್ಲಿದೆ ಎಂದು ಕೇಳುವ ಪರಿಸ್ಥಿತಿ ಬೇರೆ ದಿನಗಳಲ್ಲಿದ್ದರೂ ಭಾನುವಾರ ತಡರಾತ್ರಿ ಮಾತ್ರ ಭಾರತೀಯರು ಬೆರಗುಗಣ್ಣಿಂದ ಟಿವಿ ಎದುರು ಕುಳಿತು, ಆ ರಾಜ್ಯದಿಂದ ಹೋಗಿ ಒಲಿಂಪಿಕ್ಸ್ ನಲ್ಲಿ ಅಪಾಯಕಾರಿ ವಾಲ್ಟ್ ನಲ್ಲಿ ಭಾಗವಹಿಸಿದ್ದ ದೀಪಾ ಆಟವನ್ನು ನೋಡುತ್ತಿದ್ದರು. ಲೈವ್ ತೋರಿಸದೇ ಇರುವ ಟಿವಿ ವಾಹಿನಿಯನ್ನು ಟ್ವಿಟ್ಟರಿನಲ್ಲಿ ಬೆಂಡೆತ್ತಿದರು. ನಿರೀಕ್ಷೆ ಹುಸಿಯಾಗಲಿಲ್ಲ…

ಹೌದು, ಒಲಿಂಪಿಕ್ಸ್ ಗೆ ಅರ್ಹತೆ ಪಡೆದಾಗ ಈ ಮಾತನ್ನು ಹೇಳಿದ್ದ ದೀಪಾ ಕರ್ಮಾಕರ್, ಈಗ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಮೊದಲ ಭಾರತೀಯ ಜಿಮ್ನಾಸ್ಟರ್ ಎಂಬ ಐತಿಹಾಸಿಕ ಸಾಧನೆಯೊಂದಿಗೆ ತನ್ನ ಮಾತನ್ನು ಸಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾಳೆ.

ಚೀನಾ, ಗ್ರೇಟ್ ಬ್ರಿಟನ್ ಹಾಗೂ ಇತರೆ ದೇಶಗಳ ಹಲವಾರು ಪ್ರಬಲ ಸ್ಪರ್ಧಿಗಳ ಮಧ್ಯೆ ಭಾರತದಿಂದ ದೀಪಾ ಏಕಾಂಗಿಯಾಗಿ ಸ್ಪರ್ಧಿಸಿದ್ದಾಳೆ. ನಿನ್ನೆ ನಡೆದ ಐದು ವಿಭಾಗಗಳ ಜಿಮ್ನಾಸ್ಟಿಕ್ ನಲ್ಲೂ ದೀಪಾ ಈ ಎಲ್ಲ ಸ್ಪರ್ಧಿಗಳನ್ನು ಒಬ್ಬಳೇ ಎದುರಿಸಿದಳು. ಆ ಪೈಕಿ ಮಹಿಳೆಯರ ವೈಯಕ್ತಿಕ ವಾಲ್ಟ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಯಶಸ್ವಿಯಾದಳು. ಇತರೆ ದೇಶಗಳ ಸ್ಪರ್ಧಿಗಳು ತಂಡ ತಂಡವಾಗಿ ಬಂದು ಒಬ್ಬರಿಗೊಬ್ಬರು ಬೆಂಬಲಿಸುತ್ತಾ ಸ್ಪರ್ಧಿಸುತ್ತಿದ್ದರೆ, ದೀಪಾಗೆ ಸಾಥ್ ನೀಡಿದ್ದು ಮಾತ್ರ ಆಕೆಯಲ್ಲಿನ ಛಲ. ಮನದಲ್ಲಿ ಸಾಧನೆಯ ಗುರಿಯೊಂದು ಬಿಟ್ಟು ಬೇರೇನು ಇಲ್ಲವೆಂಬುದು ದೀಪಾ ಮುಖದಲ್ಲಿ ಬಿಂಬಿತವಾಗುತ್ತಿತ್ತು.

ಆಗಸ್ಟ್ 14 ರಂದು ನಡೆಯಲಿರುವ ವಾಲ್ಟ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದೀಪಾ ಸ್ಪರ್ಧಿಸಲಿದ್ದು, ಆಕೆಗೆ ನಮ್ಮೆಲ್ಲರ ಬೆಂಬಲವಿರಲಿ. ಈ ಸ್ಪರ್ಧೆಯಲ್ಲಿ ಪದಕ ಗೆಲ್ಲಲಿ ಎಂಬುದು ಕೋಟ್ಯಂತರ ಅಭಿಮಾನಿಗಳು ಆಶಯ ಮತ್ತು ಹಾರೈಕೆ. ತನ್ನ ಈವರೆಗಿನ ಸಾಧನೆಯಿಂದ ದೀಪಾ ಈಗಾಗಲೇ ಕೋಟ್ಯಂತರ ಭಾರತೀಯರ ಮನ ಗೆದ್ದಾಗಿದೆ. ಜಿಮ್ನಾಸ್ಟಿಕ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಮತ್ತೊಂದು ದಾಖಲೆ ಬರೆಯಲಷ್ಟೇ ಪದಕ ಗೆಲ್ಲಬೇಕಿದೆ.

ತ್ರಿಪುರಾದ ಅಗರ್ತಲಾ ಮೂಲದ ದೀಪಾ ಈ ಮಟ್ಟಕ್ಕೆ ಬೆಳೆದು ಬಂದ ಹಾದಿಯೂ ಸವಾಲಿನಿಂದ ಕೂಡಿದ್ದು, ಈಕೆಯ ಹಾದಿ ಮತ್ತು ಪ್ರತಿಷ್ಠಿತ ಪ್ರೊಡುನೇವ್ ಶೈಲಿ ಪೂರ್ಣಗೊಳಿಸಿದ ಮೈಲುಗಲ್ಲಿನ ಕುರಿತು ಈ ಹಿಂದೆ ಪ್ರಕಟಿಸಿದ್ದ, ಈ ಸಂಭ್ರಮ- ನಿರೀಕ್ಷೆಗಳ ಹೊತ್ತಲ್ಲಿ ನೀವು ಓದಲೇಬೇಕಾದ ಡಿಜಿಟಲ್ ಕನ್ನಡದ ವರದಿ ಇಲ್ಲಿದೆ.

Leave a Reply