ಜಿಎಸ್ಟಿ ಕುರಿತ ಹೊಗಳಿಕೆಗಳ ಮಹಾಪೂರದಲ್ಲಿ ಕೊಚ್ಚಿ ಹೋಯಿತೇ ರಾಜ್ಯಗಳ ಹಿತಾಸಕ್ತಿ?

vasant shettyವಸಂತ ಶೆಟ್ಟಿ

ಕಳೆದ ಹದಿನೈದು ವರ್ಷಗಳಿಂದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ(ಜಿ.ಎಸ್.ಟಿ)ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ. 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಮುಂದಾಳತ್ವದಲ್ಲಿ ಶುರುವಾದ ಆರ್ಥಿಕ ಸುಧಾರಣೆಯ ಪ್ರಕ್ರಿಯೆ ಈಗ ಇನ್ನೊಂದು ಹಂತ ತಲುಪಿದ್ದು, ಜಿ.ಎಸ್.ಟಿ ದೇಶದ ಜಿಡಿಪಿ ಬೆಳವಣಿಗೆಯನ್ನು ಒಂದರಿಂದ ಎರಡು ಪ್ರತಿಶತ ಹೆಚ್ಚಿಸುವ ಮೂಲಕ ಅರ್ಥ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಲಿದೆ ಅನ್ನುವ ವಾದವನ್ನು ಜಿ.ಎಸ್.ಟಿ ಪರವಾಗಿರುವವರು ಮಂಡಿಸುತ್ತಿದ್ದಾರೆ. ಆದರೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವ ಹಕ್ಕನ್ನು ಬಹುತೇಕ ಕಳೆದುಕೊಳ್ಳುವ ಸ್ವರೂಪದಲ್ಲಿ ಜಿ.ಎಸ್.ಟಿ ಬರುವುದು ಸಂವಿಧಾನದ ಆಶಯಗಳಿಗೆ ಪೂರಕವಾಗಿದೆಯೇ?, ಜಿ.ಎಸ್.ಟಿಯನ್ನು ಕೇವಲ ಆರ್ಥಿಕತೆಯ ಆಯಾಮದಿಂದಷ್ಟೇ ನೋಡದೆ ರಾಜಕೀಯ ಮತ್ತು ಸಾಮಾಜಿಕ ಆಯಾಮದಿಂದಲೂ ನೋಡಬೇಕಿದೆಯೇ?, ಜಿ.ಎಸ್.ಟಿ ಅನುಷ್ಟಾನಕ್ಕೆ ಏರ್ಪಟ್ಟಿರುವ ಜಿ.ಎಸ್.ಟಿ ಕೌನ್ಸಿಲ್ ತರದ ಏರ್ಪಾಡುಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಪನಂಬಿಕೆ ಹೆಚ್ಚಲು ಕಾರಣವಾಗಲಿದೆಯೇ? ಅನ್ನುವ ಪ್ರಶ್ನೆಗಳತ್ತಲೂ ಈಗ ಗಮನ ಹರಿಸಬೇಕಿದೆ.

ಭಾರತದ ತೆರಿಗೆ ಏರ್ಪಾಡು ಹೇಗಿದೆ?

ಜಿ.ಎಸ್.ಟಿ ಎಂದರೇನು ಅನ್ನುವುದನ್ನು ನೋಡುವ ಮೊದಲು ಭಾರತ ಒಕ್ಕೂಟದಲ್ಲಿ ತೆರಿಗೆ ವ್ಯವಸ್ಥೆ ಹೇಗೆ ಏರ್ಪಟ್ಟಿದೆ ಅನ್ನುವುದನ್ನು ಕೊಂಚ ತಿಳಿಯಬೇಕು. ಭಾರತದ ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಬೇರೆ ಬೇರೆ ವಿಷಯಗಳ ಮೇಲೆ ತೆರಿಗೆ ಹಾಕುವ ಹಕ್ಕನ್ನು ನೀಡಲಾಗಿದೆಯಾದರೂ ಹೆಚ್ಚಿನ ವಿಷಯಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇಂದ್ರಕ್ಕೇ ದಕ್ಕಿದೆ. ನೇರ ತೆರಿಗೆಯಾಗಿರುವ ಆದಾಯ ತೆರಿಗೆ, ಕಂಪನಿಗಳು ಕಟ್ಟುವ ಕಾರ್ಪೊರೇಟ್ ತೆರಿಗೆ ಮುಂತಾದವುಗಳನ್ನು ಸಂಗ್ರಹಿಸುವ ಹಕ್ಕನ್ನು ಕೇವಲ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. (ಅಮೇರಿಕದಲ್ಲಿ ರಾಜ್ಯ ಸರ್ಕಾರಗಳಿಗೂ ಆದಾಯ ತೆರಿಗೆ ವಿಧಿಸುವ ಹಕ್ಕಿದೆ.) ಇನ್ನು ಬೇರೆ ಬೇರೆ ಉತ್ಪನ್ನ, ಸೇವೆ ಇತ್ಯಾದಿಗಳ ಮೇಲೆ ಹಾಕಲಾಗುವ ವಾರೆ ತೆರಿಗೆ (ಇಂಡೈರೆಕ್ಟ್ ಟ್ಯಾಕ್ಸ್)ಯ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಸೇವಾ ತೆರಿಗೆ, ಎಕ್ಸೈಸ್ ಡ್ಯುಟಿ, ಕಸ್ಟಂ ಡ್ಯುಟಿ ಮುಂತಾದವುಗಳನ್ನು ಹಾಗೂ ರಾಜ್ಯ ಸರ್ಕಾರಕ್ಕೆ ಮಾರಾಟ ತೆರಿಗೆ, ಅಬಕಾರಿ ಸುಂಕ, ಮನರಂಜನಾ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಹಕ್ಕನ್ನು ನೀಡಲಾಗಿದೆ. ಇದಲ್ಲದೇ ಸ್ಪೆಕ್ಟ್ರಂ ಮತ್ತು ಇತರೆ ನೈಸರ್ಗಿಕ ಸಂಪನ್ಮೂಲಗಳ ಹರಾಜಿನಿಂದ ಸಂಗ್ರಹವಾಗುವ ಆದಾಯವೂ ಕೇಂದ್ರದ ಕೈಗೆ ಹೋಗುತ್ತದೆ. ಜನರಿಗೆ ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ, ಕಾನೂನು ಸುವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹೊಣೆ ಹೊತ್ತಿರುವ ರಾಜ್ಯ ಸರ್ಕಾರಗಳು ತಮ್ಮಲ್ಲಿ ಸಂಗ್ರಹವಾಗುವ ತೆರಿಗೆಯೊಂದರಿಂದಲೇ ಎಲ್ಲ ಖರ್ಚು ವೆಚ್ಚವನ್ನು ನಿಭಾಯಿಸಲಾರವು. ಆದ್ದರಿಂದಲೇ ಕೇಂದ್ರ ಸರ್ಕಾರ ತಾನು ಸಂಗ್ರಹಿಸುವ ತೆರಿಗೆಯಲ್ಲಿ ಒಂದಿಷ್ಟು ಪಾಲನ್ನು ರಾಜ್ಯಗಳ ಜೊತೆ ಹಣಕಾಸು ಆಯೋಗ ಅನ್ನುವ ಅರೆ ನ್ಯಾಯಾಂಗ ವ್ಯವಸ್ಥೆಯ ಶಿಫಾರಸ್ಸಿನ ಅನ್ವಯ ಮರಳಿ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಇದಲ್ಲದೇ ಈ ಹಿಂದೆ ಇದ್ದ ಯೋಜನಾ ಆಯೋಗದ ಮೂಲಕ ಯೋಜಿತವಲ್ಲದ ಖರ್ಚಿನ ಬಾಬ್ತಿನಲ್ಲಿ (ಅನ್ ಪ್ಲಾನ್ಡ್ ಎಕ್ಪೆನ್ಸ್) ಬಹಳ ದೊಡ್ಡ ಮೊತ್ತದ ಹಣವನ್ನು ತನಗೆ ಇಷ್ಟ ಬಂದ ರಾಜ್ಯಗಳ ಜೊತೆ, ತನ್ನಿಷ್ಟದ ಯೋಜನೆಗಳ ಮೇಲೆ ಖರ್ಚು ಮಾಡುವ ಅಧಿಕಾರವೂ ಕೇಂದ್ರದ ಕೈಯಲ್ಲಿತ್ತು. ಈ ಏರ್ಪಾಡನ್ನು ಗಮನಿಸಿದಾಗ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕತೆಯ ತಕ್ಕಡಿ ಬಹಳ ದೊಡ್ಡ ಮಟ್ಟದಲ್ಲೇ ಕೇಂದ್ರದತ್ತ ವಾಲಿರುವುದನ್ನು ಗಮನಿಸಬಹುದು. ಬಡ ರಾಜ್ಯಗಳನ್ನು ಮೇಲೆತ್ತಲು ಕೇಂದ್ರದ ಕೈಯಲ್ಲಿ ಸಂಪನ್ಮೂಲದ ಕೀಲಿಕೈ ಇರಬೇಕು ಅನ್ನುವ ಆಲೋಚನೆ ಇಲ್ಲಿ ಗುರುತಿಸಬಹುದು. ಆದರೆ ಶಿಕ್ಷಣ, ಉದ್ಯಮದ ವಿಷಯದಲ್ಲಿ ಅಪಾರ ಪ್ರಗತಿ ಸಾಧಿಸಿ, ಕೇಂದ್ರದ ಖಜಾನೆಗೆ ದೊಡ್ಡ ಕೊಡುಗೆ ನೀಡುತ್ತಿರುವ ದಕ್ಷಿಣ ಮತ್ತು ಪಶ್ಚಿಮ ಭಾರತದ ಹಲವು ರಾಜ್ಯಗಳ ಏಳಿಗೆಯನ್ನು ಇಂತಹದೊಂದು ಏರ್ಪಾಡು ಕಟ್ಟಿ ಹಾಕಿದೆ ಅನ್ನುವುದಕ್ಕೆ ಸಾಕಷ್ಟು ಅಂಕಿಅಂಶಗಳಿವೆ. ಜೊತೆಯಲ್ಲೇ ಹೆಚ್ಚಿನ ಜನಸಂಖ್ಯೆಯ ಆಧಾರದ ಮೇಲೆ ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನ ಪಡೆದು ದೆಹಲಿಯ ರಾಜಕೀಯವನ್ನು ನಿಯಂತ್ರಿಸುವ ಉತ್ತರದ ಬಡ ರಾಜ್ಯಗಳು ಈ ವ್ಯವಸ್ಥೆಯ ನಿವ್ವಳ ಲಾಭ ಪಡೆಯುತ್ತಿದ್ದಾರೆ ಅನ್ನುವುದಕ್ಕೂ ಸಾಕಷ್ಟು ಅಂಕಿಅಂಶಗಳಿವೆ.

ಜಿ.ಎಸ್.ಟಿ ಅಂದರೇನು?

ಇಂತಹದೊಂದು ತೆರಿಗೆ ಏರ್ಪಾಟಿರುವ ಒಕ್ಕೂಟದಲ್ಲಿ ಜಿ.ಎಸ್.ಟಿ ತೆರಿಗೆ ಮಾಡಲು ಹೊರಟಿರುವುದು ಏನು ಅನ್ನುವುದನ್ನು ತಿಳಿಯುವ ಮುನ್ನ ಜಿ.ಎಸ್.ಟಿ ಅಂದರೇನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ತೆರಿಗೆ ಸಂಬಂಧಿಸಿದ ವಿಚಾರಗಳು ಜನಸಾಮಾನ್ಯರಿರಲಿ, ಆಳುವ ನಾಯಕರಲ್ಲೂ ಬಹುತೇಕರಿಗೆ ಕಬ್ಬಿಣದ ಕಡಲೆಯಂತದ್ದು. ಹೀಗಾಗಿ ಇಂತಹ ತೆರಿಗೆ ಸುಧಾರಣೆಯ ಕ್ರಮವನ್ನು ಕೆಲ ಮಟ್ಟಿಗಾದರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಜಿ.ಎಸ್.ಟಿ ಇಲ್ಲವೇ ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ ಅನ್ನುವುದು ಸರಕು ಮತ್ತು ಸೇವೆಗಳ ಮೇಲೆ ಹಾಕಲಾಗುವ ಒಂದು ವಾರೆ ತೆರಿಗೆ (ಇಂಡೈರೆಕ್ಟ್ ಟ್ಯಾಕ್ಸ್). ಈ ಮುಂಚಿನ ತೆರಿಗೆ ಪದ್ದತಿಯಲ್ಲಿ ಸರಕು ಮತ್ತು ಸೇವೆಯ ವಿಷಯಕ್ಕೆ ಬಂದಾಗ ಜನರು ಬೇರೆ ಬೇರೆ ಹಂತದಲ್ಲಿ ತೆರಿಗೆ ಕಟ್ಟಬೇಕಾಗಿತ್ತು. ಅಂದರೆ ಒಂದು ಉತ್ಪನ್ನಕ್ಕೆ ಬಳಸುವ ಮೂಲವಸ್ತುವಿನ ಖರೀದಿಯಿಂದ ಹಿಡಿದು ಉತ್ಪಾದನೆ, ಹಂಚಿಕೆ, ಸಾಗಾಟ ಕೊನೆಯಲ್ಲಿ ಗ್ರಾಹಕನಿಗೆ ಮಾರುವ ಹಂತದವರೆಗೆ ಪ್ರತಿ ಹಂತದಲ್ಲೂ ತೆರಿಗೆ ಕಟ್ಟಬೇಕಾದ ಅಗತ್ಯವಿತ್ತು. ಸರಿಯಾದ ವ್ಯವಸ್ಥೆಯಲ್ಲಿ ಉತ್ಪಾದಕನೊಬ್ಬ ಒಂದು ವಸ್ತುವಿಗೆ ತನ್ನ ಮಟ್ಟದಲ್ಲಿ ತಾನು ಸೇರಿಸಿದ ಮೌಲ್ಯ ವರ್ಧನೆಗೆ ತಕ್ಕುದಾಗಿ ತೆರಿಗೆ ಕಟ್ಟುವ ಹಾಗಿರಬೇಕಿತ್ತು. ಹಾಗಿರದೇ ಇದ್ದ ವ್ಯವಸ್ಥೆಯಿಂದಾಗಿ ಉತ್ಪಾದಕರು ಅತಿ ಹೆಚ್ಚಿನ ತೆರಿಗೆ ಕಟ್ಟುವ ಒತ್ತಡಕ್ಕೊಳಗಾಗುತ್ತಿದ್ದರು. ಇದರಿಂದ ಸಹಜವಾಗಿಯೇ ತೆರಿಗೆ ವ್ಯವಸ್ಥೆಯಿಂದಲೇ ಆಚೆ ಉಳಿಯುವ, ತೆರಿಗೆ ವಂಚಿಸುವವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಲಾಯಿತು. ವ್ಯಾಟ್ ಹೆಚ್ಚಾಗಿ ಸರಕುಗಳ ಮೇಲೆ ಹಾಕುವ ತೆರಿಗೆಯಾಗಿದ್ದರೆ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಹೆಸರೇ ಹೇಳುವಂತೆ ಸರಕಿನೊಂದಿಗೆ ಸೇವೆಯ ಮೇಲೂ ತೆರಿಗೆ ವಿಧಿಸುವ ಅವಕಾಶ ಹೊಂದಿದೆ. ಈಗ ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಹುತೇಕ ವಾರೆ ತೆರಿಗೆಗಳೆಲ್ಲವನ್ನೂ ಒಂದಾಗಿಸಿದ, ಸುಲಭಗೊಳಿಸಿದ ತೆರಿಗೆ ಮಾದರಿಯನ್ನು ಜಿ.ಎಸ್.ಟಿ ಎಂದು ಕರೆಯಬಹುದು. ದೇಶಾದ್ಯಂತ ಒಂದು ನಿಗದಿಪಡಿಸಿದ ದರದ ತೆರಿಗೆ ಕಟ್ಟಿ ಸಲೀಸಾಗಿ ವ್ಯಾಪಾರ-ವಹಿವಾಟು ಮಾಡಬಹುದು, ತೆರಿಗೆ ಮೇಲೆ ತೆರಿಗೆ ಕಟ್ಟುವ ಗೋಜಿಲ್ಲ, ವಿದ್ ಬಿಲ್ ಬೇಕಾ, ವಿದೌಟ್ ಬಿಲ್ ಬೇಕಾ ಅಂತ ಕದ್ದುಮುಚ್ಚಿ ವ್ಯವಹಾರ ಮಾಡುವ ಅಗತ್ಯವಿಲ್ಲ, ಅಂತರ್ ರಾಜ್ಯ ಟೋಲ್ಗಳಲ್ಲಿ ಚೆಕಿಂಗ್ ಹೆಸರಿನಲ್ಲಿ ಕಾಯುವ ಗೋಜಿಲ್ಲ, ಹೀಗೆ ಪ್ರಯೋಜನಗಳ ಪಟ್ಟಿ ತೋರಿಸುವವರನ್ನು ಕಂಡಾಗ  ನಿಜಕ್ಕೂ ಎಷ್ಟು ಸಕತ್ ಆಗಿದೆಯಲ್ಲ ಅಂತ ಯಾರಿಗೂ ಅನ್ನಿಸುತ್ತೆ. ಇಷ್ಟೆಲ್ಲ ಲಾಭದ ಲೆಕ್ಕವೇ ಆದರೆ ರಾಜ್ಯಗಳು ಯಾಕೆ ಮೊಂಡು ಹಟ ಹಿಡಿದು ಇದನ್ನು ವಿರೋಧಿಸುತ್ತ ಬಂದಿದ್ದವು ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮುಖ್ಯ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ದಿನಗಳುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರು ಜಿ.ಎಸ್.ಟಿಯನ್ನು ವಿರೋಧಿಸುತ್ತಲೇ ಬಂದಿದ್ದರು. ಡೆವಿಲ್ ಇಸ್ ಇನ್ ದಿ ಡಿಟೇಲ್ ಅನ್ನುವ ಇಂಗ್ಲಿಷ್ ಗಾದೆಯಂತೆ ಜಿ.ಎಸ್.ಟಿಯನ್ನು ಇನ್ನೊಂದು ಮಗ್ಗುಲಿಂದ ನೋಡದೇ ಹೋದಲ್ಲಿ ಅದರಿಂದ ಆಗುವ ತೊಂದರೆಗಳ ಪರಿಣಾಮ ಅರ್ಥವಾಗುವುದಿಲ್ಲ. ಏನು ಹಾಗೆಂದರೆ?

ಜಿ.ಎಸ್.ಟಿ ಕೌನ್ಸಿಲ್ ನಿಜಕ್ಕೂ ರಾಜ್ಯಗಳ ಪರವೇ?

ಭಾರತ ಒಂದು ಹಲತನದ ನಾಡು. ಪ್ರತಿಯೊಂದು ರಾಜ್ಯ, ಅದರ ಭಾಷೆ, ಸಂಸ್ಕೃತಿ, ಸಮಸ್ಯೆಗಳು, ಆಶೋತ್ತರಗಳು ಎಲ್ಲದರಲ್ಲೂ ಅಗಾಧ ಭಿನ್ನತೆಯಿದೆ. ಹೀಗಿರುವಾಗ ಪ್ರತಿಯೊಂದು ರಾಜ್ಯ ಸರ್ಕಾರಕ್ಕೂ ತನ್ನ ಜನರ ಏಳಿಗೆ, ಅನುಕೂಲಕ್ಕೆ ತಕ್ಕಂತೆ ತೆರಿಗೆ ವಿಧಿಸುವ ಹಕ್ಕು ಇರಬೇಕಾದದ್ದು ಅವಶ್ಯ. ಈಗ ಜಿ.ಎಸ್.ಟಿ ಅನ್ವಯ ದೇಶದೆಲ್ಲೆಡೆ ಒಂದೇ ದರದ ತೆರಿಗೆ ವಿಧಿಸಿದರೆ ಅದು ರಾಜ್ಯಗಳನ್ನು ಕಟ್ಟಿ ಹಾಕುವ ಕೆಲಸವಲ್ಲವೇ? ಜಿ.ಎಸ್.ಟಿ ಅನ್ವಯ ಜಿ.ಎಸ್.ಟಿ ವ್ಯಾಪ್ತಿಯಲ್ಲಿರುವ ಯಾವುದೇ ವಿಷಯದ ಬಗ್ಗೆ ತೆರಿಗೆ ಹೆಚ್ಚಿಸುವ, ಕಡಿಮೆಗೊಳಿಸುವ, ವಿನಾಯ್ತಿ ನಿರ್ಧರಿಸುವ ಯಾವುದೇ ಹಕ್ಕು ಇನ್ನು ಮುಂದೆ ರಾಜ್ಯಗಳಿಗೆ ಇರುವುದಿಲ್ಲ. ಆ ಹಕ್ಕೆಲ್ಲವೂ ಜಿ.ಎಸ್.ಟಿ ಕೌನ್ಸಿಲ್ ಅನ್ನುವ ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿತ್ವದ ಮಂಡಳಿಯ ಕೈಯಲ್ಲಿರಲಿದೆ. ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ಯಾವುದೇ ತೆರಿಗೆ ಸಂಬಂಧಿತ ಜಗಳ ಬಗೆಹರಿಸುವ ಕೆಲಸವೂ ಇದೇ ಮಂಡಳಿಯದ್ದು. ಜಿ.ಎಸ್.ಟಿ ದರ ಎಷ್ಟಿರಬೇಕು ಅನ್ನುವುದನ್ನು ಇದೇ ನಿರ್ಧರಿಸುತ್ತೆ. ಇದೆಲ್ಲವನ್ನೂ ಕೇಂದ್ರ ಸರ್ಕಾರವೇನು ನಿಯಂತ್ರಿಸುತ್ತಿಲ್ಲವಲ್ಲ, ಮಂಡಳಿಯಲ್ಲಿ ರಾಜ್ಯಗಳ ಪ್ರತಿನಿಧಿತ್ವವೂ ಇದೆಯಲ್ಲ ಅನ್ನಬಹುದು. ಆದರೆ ಮಂಡಳಿಯ ಪ್ರತಿನಿಧಿತ್ವ ಗಮನಿಸಿದರೆ ಜಿ.ಎಸ್.ಟಿ ಕೌನ್ಸಿಲ್ ಮೇಲೆ ಕೇಂದ್ರದ ಸ್ಪಷ್ಟವಾದ ಹಿಡಿತ ಇರುವುದನ್ನು ಕಾಣಬಹುದು. ಮಂಡಳಿಯಲ್ಲಿ 33.33% ವಿಟೋ ಮಾಡುವ ಅಧಿಕಾರವನ್ನು ಕೇಂದ್ರ ತನ್ನ ಬಳಿಯೇ ಉಳಿಸಿಕೊಂಡಿದೆ.( ಜಯಲಲಿತಾ ಅವರು ಕೇಂದ್ರದ ವಿಟೋ ಮಾಡುವ ಅಧಿಕಾರ 25% ದಾಟಬಾರದು ಎಂದು ವಾದಿಸಿದ್ದರು.) ಇನ್ನುಳಿದ 66.67% ವಿಟೋ ಅಧಿಕಾರವನ್ನು ರಾಜ್ಯಗಳೆಲ್ಲವಕ್ಕೂ ಸೇರಿ ನೀಡಿದೆ (ಅಲ್ಲಿಗೆ ಇಪ್ಪತ್ತೊಂಬತ್ತು ರಾಜ್ಯ ಮತ್ತು ವಿಧಾನಸಭೆಯಿರುವ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನು ಹಂಚಿದಾಗ ಪ್ರತಿಯೊಂದು ರಾಜ್ಯಕ್ಕೆ 2.15% ವಿಟೋ ಮಾಡುವ ಅಧಿಕಾರ ಸಿಕ್ಕುತ್ತದೆ.). ಮಂಡಳಿಯಲ್ಲಿ ಯಾವುದೇ ಪ್ರಸ್ತಾಪ ಒಪ್ಪಿಗೆಯಾಗಬೇಕೆಂದರೆ ಅದಕ್ಕೆ 75% ಮತ ಬೀಳಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಅಲ್ಲಿಗೆ ಎಲ್ಲ ರಾಜ್ಯಗಳು ಸೇರಿ ಒಂದು ಬೇಡಿಕೆಯಿಟ್ಟು, ಆ ಬೇಡಿಕೆ ಕೇಂದ್ರಕ್ಕೆ ಒಪ್ಪಿಗೆಯಾಗದಿದ್ದರೆ ಕೇಂದ್ರ ತನ್ನ ವಿಟೋ ಬಳಸಿ ಅದನ್ನು ಸುಲಭವಾಗಿ ಕೆಡವಿ ಹಾಕಬಹುದು. ಆದರೆ ಕೇಂದ್ರವೇನಾದರೂ ಒಂದು ಪ್ರಸ್ತಾಪ ಇಟ್ಟರೆ ಅದಕ್ಕೆ ಮೂವತ್ತೊಂದರಲ್ಲಿ ಹತ್ತೊಂಬತ್ತು ರಾಜ್ಯಗಳು ಒಪ್ಪಿದರೆ ಸಾಕು. ನಾಣ್ಯ ಎಸೆದು ಹೆಡ್ಸ್ ಬಿದ್ದರೆ ನಾನು ಗೆದ್ದೆ, ಟೇಲ್ಸ್ ಬಿದ್ದರೆ ನೀನು ಸೋತೆ ಅನ್ನುವಂತಿದೆಯಲ್ಲವೇ ಇದು? ಇನ್ನೊಂದೆಡೆ ದೇಶದ ಬೊಕ್ಕಸ ತುಂಬಿಸುವ ತಮಿಳುನಾಡು, ಗುಜರಾತ್, ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಕ್ಕೂ ಒಂದೇ ಮತ, ಬಡ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರಕ್ಕೂ ಒಂದೇ ಮತ, ಗೋವಾ, ಮಿಜೋರಾಂನಂತಹ ಸಣ್ಣ ರಾಜ್ಯಗಳಿಗೂ ಒಂದೇ ಮತದ ಅಧಿಕಾರ ನೀಡುವ ಮೂಲಕ ಒಂದು ರೀತಿಯಲ್ಲಿ ಮುಂದುವರೆದ ರಾಜ್ಯಗಳ ಅಭಿಪ್ರಾಯಕ್ಕೆ ಮಂಡಳಿಯಲ್ಲಿ ಹೆಚ್ಚಿನ ಮನ್ನಣೆ ಸಿಗದ ವ್ಯವಸ್ಥೆ ಏರ್ಪಟ್ಟಿದೆ ಅನ್ನುವುದನ್ನು ಇಲ್ಲಿ ಗಮನಿಸಬೇಕಿದೆ. ಇಷ್ಟೇ ಅಲ್ಲ, ಮಂಡಳಿಯ ನಿರ್ಧಾರಗಳ ಬಗ್ಗೆ ಯಾವುದೇ ತಕರಾರು, ದೂರುಗಳಿದ್ದಲ್ಲಿ, ಅದನ್ನು ಹೇಗೆ ನಿರ್ವಹಿಸಬೇಕು ಅನ್ನುವುದರ ಬಗ್ಗೆ ಸಂವಿಧಾನ ತಿದ್ದುಪಡಿ ಮಸೂದೆ ಸ್ಪಷ್ಟವಾಗಿ ಮಾತನಾಡಿಲ್ಲ. ಮಂಡಳಿಯ ನಿರ್ಧಾರವನ್ನು ರಾಜ್ಯವೊಂದು ಪ್ರಶ್ನಿಸಲು ಬೇಕಿರುವ ವ್ಯವಸ್ಥೆಯನ್ನು ಸ್ಥಾಪಿಸುವ ಹಕ್ಕನ್ನು ಮಂಡಳಿಗೇ ನೀಡಲಾಗಿದೆ. ನನ್ನ ನಿರ್ಧಾರವನ್ನು ಪ್ರಶ್ನಿಸಲು ಬೇಕಿರುವ ವ್ಯವಸ್ಥೆ ಹೇಗಿರಬೇಕು, ಯಾರು ಅದನ್ನು ಕೇಳಬೇಕು ಅನ್ನುವುದನ್ನು ನಾನೇ ನಿರ್ಧರಿಸುತ್ತೇನೆ ಅನ್ನುವ ಏರ್ಪಾಡು ಕೊಂಚ ವಿಚಿತ್ರವಾಗಿದೆಯಲ್ಲವೇ? ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ದೇಶದ ಮೂವತ್ತು ರಾಜ್ಯಗಳಲ್ಲಿ ಯಾವ ಪಕ್ಷಗಳ ಆಳ್ವಿಕೆ ಇದೆ ಅನ್ನುವುದು. ಈ ಹೊತ್ತಿಗೆ ನೇರ, ಇಲ್ಲವೇ ಸಮ್ಮಿಶ್ರ ಸರ್ಕಾರದ ಸ್ವರೂಪದಲ್ಲಿ, 14 ರಾಜ್ಯಗಳಲ್ಲಿ ಬಿಜೆಪಿ ಮತ್ತು 9 ರಾಜ್ಯಗಳಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿವೆ. ಈ ಎರಡರಲ್ಲಿ ಯಾವ ಪಕ್ಷ ದೆಹಲಿಯಲ್ಲಿ ಅಧಿಕಾರದಲ್ಲಿದ್ದರೂ, ಅದರ ಹೈಕಮಾಂಡ್ ಮಾತನ್ನು ಮೀರುವ ಧೈರ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಅದರ ಸರ್ಕಾರಗಳಿಗೆ ಇಲ್ಲ ಅನ್ನುವುದನ್ನು ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಲಿಗೆ ಒಂದು ಕಡೆ ಕೇಂದ್ರಕ್ಕಿರುವ ವಿಟೋ ಪವರ್, ಇನ್ನೊಂದೆಡೆ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಲು ಬೇಕಿರುವ ನ್ಯಾಯಯುತ ಏರ್ಪಾಡಿನ ಕೊರತೆ ಮತ್ತು ಮತ್ತೊಂದೆಡೆ ಹೈಕಮಾಂಡ್ ರಾಜಕಾರಣದ ಒತ್ತಡವನ್ನು ಗಮನಿಸಿದಾಗ ಜಿ.ಎಸ್.ಟಿ ಕೌನ್ಸಿಲ್ ಅನ್ನುವುದು ಹೆಚ್ಚು ಕಡಿಮೆ ಕೇಂದ್ರದ ಹಿಡಿತದಲ್ಲಿರುವ ಮಂಡಳಿಯಾಗಿದ್ದು, ಕೇಂದ್ರದ ನಿಲುವಿಗೆ ತಕ್ಕಂತೆ ರಾಜ್ಯಗಳೆಲ್ಲವೂ ಕುಣಿಯಬೇಕಾದ ಒತ್ತಡ ಜಿ.ಎಸ್.ಟಿ ಹುಟ್ಟುಹಾಕಲಿದೆ ಅನ್ನುವ ಆತಂಕ ಹಲವು ರಾಜ್ಯಗಳಿಗಿವೆ. ವಿಧಿ ಸೆಂಟರ್ ಫಾರ್ ಲೀಗಲ್ ರಿಸರ್ಚ್ ಸಂಸ್ಥೆಯ ಅಲೋಕ್ ಪ್ರಸನ್ನ ಕುಮಾರ್ ಅವರು “ಇವತ್ತಿರುವ ಸ್ವರೂಪದಲ್ಲಿ ಜಿ.ಎಸ್.ಟಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಪನಂಬಿಕೆಗೆ ಒಂದು ಸಾಂಸ್ಥಿಕ ಸ್ವರೂಪ ನೀಡಿ, ಎರಡೂ ತಮ್ಮನುಕೂಲಕ್ಕೆ ತಕ್ಕ ಹಟಮಾರಿ ನಿಲುವು ತಳೆಯುವತ್ತ ದೂಡಬಹುದು” ಅನ್ನುತ್ತಾರೆ. ಅಲೋಕ್ ಅವರು ಇನ್ನೊಂದು ಮುಖ್ಯ ವಿಚಾರವನ್ನು ತಮ್ಮ ಇತ್ತೀಚಿನ ಅಂಕಣದಲ್ಲಿ ಎತ್ತಿದ್ದರು. ಸಂವಿಧಾನದ ಪ್ರಕಾರ, ಯಾವುದೇ ಒಂದು ವಿಷಯದ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಇಲ್ಲ. ಸಂವಿಧಾನದ ಜಂಟಿ ಪಟ್ಟಿಯನ್ವಯ ಒಂದು ವಿಷಯದ ಮೇಲೆ ಕೇಂದ್ರ, ರಾಜ್ಯಗಳೆರಡೂ ಕಾನೂನು ಮಾಡಬಹುದು, ಆದರೆ ಒಂದೇ ವಿಷಯದ ಮೇಲೆ ತೆರಿಗೆ ವಿಧಿಸುವ ಹಕ್ಕು ಒಂದೇ ವಿಷಯದ ಮೆಲೆ ಇಲ್ಲ. ರಾಜ್ಯ ಮತ್ತು ಕೇಂದ್ರಗಳ ನಡುವೆ ತೆರಿಗೆಯ ವಿಚಾರದಲ್ಲಿ ಗೊಂದಲ ಇರಬಾರದು ಅನ್ನುವ ಕಾರಣಕ್ಕೆ ಇಂತಹದೊಂದು ಬಗೆತ ಏರ್ಪಟ್ಟಿದ್ದು, ಜಿ.ಎಸ್.ಟಿ ಮೂಲಕ ಸರಕು ಮತ್ತು ಸೇವೆಗಳೆರಡರ ಮೇಲೆ ರಾಜ್ಯ ಮತ್ತು ಕೇಂದ್ರ ಇಬ್ಬರೂ ತೆರಿಗೆ ವಿಧಿಸುವಂತಾಗುವುದು ಒಕ್ಕೂಟ ವ್ಯವಸ್ಥೆಯ ಸಂವಿಧಾನದ ಏರ್ಪಾಡಿನಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯೆಂದೇ ಅವರು ಗುರುತಿಸುತ್ತಾರೆ. ಇದೇ ನೆಲೆಯಲ್ಲಿ ಎಐಎಡಿಎಂಕೆ ಪಕ್ಷ ಜಿ.ಎಸ್.ಟಿ ಮಸೂದೆಯನ್ನು ಅಸಂವಿಧಾನಿಕ ಎಂದು ವಿರೋಧಿಸಿತ್ತು. ಇದೇ ನೆಲೆಯಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದಲ್ಲಿ ಇದನ್ನು ಎಐಎಡಿಎಂಕೆ ಪ್ರಶ್ನಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಹಿಂದೂ ಪತ್ರಿಕೆಯಲ್ಲಿ ಬರೆದಿರುವ ಮುಂಬೈ ಮೂಲದ ಎಕನಾಮಿಸ್ಟ್ ಅಜಿತ್ ರಾನಡೆ ಜಿ.ಎಸ್.ಟಿ ಬಂದರೆ ಆಗುವ ಪ್ರಯೋಜನಗಳನ್ನು ಒಪ್ಪುತ್ತಲೇ ಜಿ.ಎಸ್.ಟಿ ಬಗೆಗಿನ ತಮಗಿರುವ ಆತಂಕಗಳನ್ನು ಮಂಡಿಸಿದ್ದಾರೆ. ಯಾವ ರಾಜ್ಯದಿಂದ ಎಷ್ಟು ಹಣ  ಜಿ.ಎಸ್.ಟಿಯ ಲೆಕ್ಕದಲ್ಲಿ ಬೊಕ್ಕಸಕ್ಕೆ ಬರುತ್ತೆ ಅನ್ನುವುದನ್ನು ಪರಿಗಣಿಸದೇ ಎಲ್ಲ ರಾಜ್ಯಗಳಿಗೂ ಒಂದು ಮತ ನೀಡಿರುವ ಕ್ರಮವನ್ನು ಸರಿಯಲ್ಲ ಅನ್ನುವ ಅವರು ರಾಜ್ಯಗಳಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ತೆರಿಗೆ ವಿಧಿಸುವ ಹಕ್ಕನ್ನು ಪೂರ್ತಿಯಾಗಿ ಮೊಟಕುಗೊಳಿಸುವ ಜಿ.ಎಸ್.ಟಿ ಹೆಜ್ಜೆಯನ್ನು ಗಮನಿಸಬೇಕು ಎಂದಿದ್ದಾರೆ. 1982ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕಾಮರಾಜ್ ಅವರು ತಮಿಳುನಾಡಿನಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆಯನ್ನು ಜಾರಿಗೊಳಿಸಿದರು. ಅವರ ನಡೆಯನ್ನು ವಿರೋಧಿಗಳು ಆರ್ಥಿಕವಾಗಿ ಅಶಿಸ್ತಿನ ನಡೆಯೆಂದೇ ಟೀಕಿಸಿದರು. ಅದಕ್ಕೆ ಉತ್ತರವಾಗಿ ಯೋಜನೆಯ ವೆಚ್ಚ ಭರಿಸಲು ಸರಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿದ ಅವರು (ಜಿ.ಎಸ್.ಟಿ ಬಂದ ಮೇಲೆ ಇದು ಸಾಧ್ಯವಿಲ್ಲ) ಆ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಕಾರಣರಾದರು. ಇಂದಿಗೂ ಆ ಯೋಜನೆಯನ್ನು ಭಾರತವಷ್ಟೇ ಅಲ್ಲದೇ ವಿದೇಶದಲ್ಲೂ ಕೊಂಡಾಡುತ್ತಾರೆ. ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಯ ಜೊತೆ ಹಾಜರಾತಿಯನ್ನು ಹೆಚ್ಚಿಸಿದ ಖ್ಯಾತಿ ಆ ಯೋಜನೆಯದ್ದು. ಮಹಾರಾಷ್ಟ್ರದಲ್ಲಿ 1972ರಲ್ಲಿ ಉಂಟಾದ ಬರ ಪರಿಸ್ಥಿತಿ ನಿಭಾಯಿಸಲು ಶುರುವಾದ ಉದ್ಯೋಗ ಖಾತ್ರಿ ಯೋಜನೆಗಾಗಿ ನಗರವಾಸಿಗಳ ಮೇಲೆ ಪ್ರೊಫೆಶನ್ ಟ್ಯಾಕ್ಸ್ ಹಾಕುವ ನಿರ್ಧಾರ ಅಲ್ಲಿನ ಸರ್ಕಾರ ಕೈಗೊಂಡಿತ್ತು(ಜಿ.ಎಸ್.ಟಿ ಬಂದ ಮೇಲೆ ಇದೂ ಸಾಧ್ಯವಿಲ್ಲ). ಮೂರು ದಶಕಗಳ ನಂತರ ಅದೇ ಯೋಜನೆ ನರೇಗಾ ಯೋಜನೆಗೆ ಸ್ಪೂರ್ತಿಯಾಯಿತು. ಹೀಗೆ ಎರಡು ಉದಾಹರಣೆ ನೀಡುವ ಅವರು ಜಿ.ಎಸ್.ಟಿ ವ್ಯವಸ್ಥೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ಕಳವಳದ ಬಗ್ಗೆ ಸಹಾನುಭೂತಿಯಾಗಿರಬೇಕು ಎಂದು ವಾದಿಸಿದ್ದಾರೆ.

ಸಿ.ಪಿ.ಎಂ ಪಕ್ಷದ ಮಾಜಿ ರಾಜ್ಯಸಭಾ ಸಂಸದ ಕೆ.ಎನ್.ಬಾಲಗೋಪಾಲ್ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ತೆರಿಗೆ ಸಂಗ್ರಹಣೆಗೆ ಆರ್ಥಿಕ ಆಯಾಮದ ಹೊರತಾಗಿ ಇರಬಹುದಾದ ಸಾಮಾಜಿಕ ಆಯಾಮವೊಂದರ ಬಗ್ಗೆ ಗಮನ ಸೆಳೆಯುತ್ತಾರೆ. ತಂಬಾಕು ಉತ್ಪನ್ನಗಳು ಸಮಾಜದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಅದಕ್ಕೆ ಅತಿ ಹೆಚ್ಚಿನ ತೆರಿಗೆಯನ್ನು ಎಲ್ಲ ಸರ್ಕಾರಗಳು ವಿಧಿಸುತ್ತವೆ. ತಂಬಾಕು ಬೆಳೆಯುವ ರಾಜ್ಯ ಹೆಚ್ಚು ಮಾರಾಟವಾಗಲಿ ಎನ್ನುವ ಕಾರಣಕ್ಕೆ ತೆರಿಗೆ ಕಡಿಮೆ ಇಡಲು ಬಯಸುತ್ತದೆ. ಆದರೆ ತಂಬಾಕು ಉತ್ಪನ್ನಗಳಿಂದ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ರಾಜ್ಯವೊಂದು ಹೆಚ್ಚಿನ ತೆರಿಗೆ ವಿಧಿಸಲು ಬಯಸುತ್ತದೆ. ಈಗ ಎಲ್ಲೆಡೆ ಒಂದೇ ತೆರಿಗೆ ದರ ಬಂದರೆ ಕೇಂದ್ರ ಯಾರ ಹಿತಾಸಕ್ತಿ ಕಾಪಾಡುತ್ತದೆ? ಹೊಸತಾಗಿ ಯಾವುದಾದರೂ ಸೆಸ್ ಇಲ್ಲವೇ ಸರ್ಚಾರ್ಜ್ ಹಾಕುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇರುವುದರಿಂದ ರಾಜ್ಯವೊಂದರಲ್ಲಿ ಉಂಟಾಗುವ ತುರ್ತು ಅಗತ್ಯಕ್ಕೆ ಸ್ಪಂದಿಸಲು ಸಂಪನ್ಮೂಲ ಹೊಂದಿಸುವ ಯಾವ ಆಯ್ಕೆಗಳು ರಾಜ್ಯಗಳಿಗೆ ಇಲ್ಲವಾಗುತ್ತೆ. “ಮೇಕ್ ಇನ್ ಇಂಡಿಯಾ” ಸ್ಥಳೀಯ ಉದ್ಯಮವನ್ನು ಹೊರ ದೇಶದ ಆಮದಿನ ಮುಂದೆ ಉಳಿಸಿ, ಗಟ್ಟಿಗೊಳಿಸಲು ಬಯಸುತ್ತದೆ. ಅಂತೆಯೇ ರಾಜ್ಯಗಳು ತಮ್ಮಲ್ಲಿನ ಸ್ಥಳೀಯ ಉದ್ಯಮ, ಉದ್ಯೋಗವನ್ನು ಕಾಪಾಡಲು ಬಯಸುತ್ತವೆ. ಸ್ಥಳೀಯ ಉದ್ಯಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ತಕ್ಕ ತೆರಿಗೆ ನಿರ್ಧರಿಸುವ ಹಕ್ಕು ರಾಜ್ಯಗಳು ಕಳೆದುಕೊಂಡರೆ ಅದರಿಂದ ಈ ಆಶಯಕ್ಕೆ ಧಕ್ಕೆಯುಂಟಾಗುತ್ತದೆ ಅನ್ನುವರ್ಥದ ವಾದವನ್ನು ಅವರು ಮಂಡಿಸುತ್ತಾರೆ.

ರಾಜ್ಯಗಳ ಸ್ವಾಯತ್ತತೆಯ ವಾದವೊಂದೇ ಅಲ್ಲದೇ ಜಿ.ಎಸ್.ಟಿ ಅನುಷ್ಟಾನದ ಸವಾಲುಗಳು, ಜಿ.ಎಸ್.ಟಿ ಬಂದ ತಕ್ಷಣ ಉಂಟಾಗಬಹುದಾಗ ಹಣದುಬ್ಬರ, ಜಿ.ಎಸ್.ಟಿ ಬಂದ ಮೇಲೆ ಆಗುವ ತೆರಿಗೆ ಕೊರತೆ ನಿಭಾಯಿಸಬೇಕೆಂದರೆ ಮಾರುಕಟ್ಟೆಯಲ್ಲಿ ಸರಕು/ಸೇವೆಗಳಿಗೆ ಬೇಡಿಕೆ ಹೆಚ್ಚಿ, ತೆರಿಗೆ ಸಂಗ್ರಹ ಹೆಚ್ಚಬೇಕು, ಆದರೆ ಇಂದಿನ ಆರ್ಥಿಕ ಹಿಂಜರಿತದ ಪ್ರಭಾವದ ನಡುವೆ ಇದಕ್ಕೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಹಲವು ಚರ್ಚೆಗಳು ಈಗ ಎಲ್ಲೆಡೆ ನಡೆದಿವೆ. ಏನೇ ಆದರೂ ಜಿ.ಎಸ್.ಟಿ ಮುಂದಿನ ದಿನಗಳಲ್ಲಿ ಕಾವಿನ ರಾಜಕೀಯ ಚರ್ಚೆ, ಪಲ್ಲಟಗಳಿಗೆ ಕಾರಣವಾದರೆ ಅಚ್ಚರಿಯಿಲ್ಲ. ಇಡೀ ಜಿ.ಎಸ್.ಟಿ ಚರ್ಚೆಯನ್ನು ಗಮನಿಸಿದಾಗ ತಮಿಳುನಾಡಿನ ಎಐಎಡಿಎಂಕೆ ಪಕ್ಷವೊಂದೇ ರಾಜ್ಯಗಳ ತೆರಿಗೆ ಸ್ವಾಯತ್ತತೆಗಾಗಿ ಅದ್ಭುತವಾದ ವಾದ ಮಂಡಿಸಿ ಕೊನೆ ಗಳಿಗೆಯವರೆಗೂ ಹೋರಾಡಿತು ಅನ್ನುವುದನ್ನು ಕಾಣಬಹುದು. ಇನ್ನೊಂದೆಡೆ ಜಿ.ಎಸ್.ಟಿಯಿಂದ ಸದ್ಯಕ್ಕೆ ಅಷ್ಟು ದೊಡ್ಡ ಮಟ್ಟದ ತೆರಿಗೆ ಹಾನಿಯಾಗದ, ಉತ್ಪಾದನೆಗಿಂತ ಹೆಚ್ಚಾಗಿ ಕನಸ್ಯೂಮ್ ಆಧಾರಿತ ಅರ್ಥವ್ಯವಸ್ಥೆಯನ್ನು ಹೊಂದಿರುವ ಕರ್ನಾಟಕದ ರಾಜಕಾರಣಿಗಳು ಇದರ ವಿರುದ್ಧ ಯಾವುದೇ ಮಾತನಾಡಿಲ್ಲ. ರಾಜಕಾರಣಿಗಳಿಗೆ ಐದು ವರ್ಷದ ಆಚೆಗಿನ ವಿಶನ್ ಇರಲು ಸಾಧ್ಯವಿಲ್ಲ. ಐದು ವರ್ಷ ಆಗಬಹುದಾದ ತೆರಿಗೆ ಹಾನಿಯನ್ನು ಕೇಂದ್ರ ತುಂಬಿ ಕೊಡುವ ಮಾತನಾಡಿರುವ ಕಾರಣ ಕರ್ನಾಟಕವಂತೂ ನಿರುಮ್ಮಳವಾಗಿ ಇದಕ್ಕೆ ಬೆಂಬಲ ಸೂಚಿಸಿದೆ. ಆದರೆ ಕರ್ನಾಟಕದ ತುರ್ತು ಅಗತ್ಯಗಳಿಗೆ ತಕ್ಕಂತೆ ಹೊಸ ಸಂಪನ್ಮೂಲ ಹೊಂದಿಸಬೇಕಾದ ವಿಶೇಷ ಸಂದರ್ಭ ಬಂದಾಗಲಷ್ಟೇ ಜಿ.ಎಸ್.ಟಿ ಹೇಗೆ ತನ್ನ ಕೈ ಕಟ್ಟಿ ಹಾಕಿದೆ ಅನ್ನುವುದು ನಮ್ಮ ಸರ್ಕಾರಗಳಿಗೆ ಅರ್ಥವಾಗಬಹುದೇನೋ.

(ಐಟಿ ವೃತ್ತಿಯಲ್ಲಿರುವ ಲೇಖಕರು ಅಂಕಣಕಾರರು. ಒಕ್ಕೂಟ ವ್ಯವಸ್ಥೆ, ನಾಡು-ನುಡಿ ವಿಷಯಗಳಲ್ಲಿ ಇವರ ಬರವಣಿಗೆ)

2 COMMENTS

  1. very informative article. MSM covers only the positive side of bringing GST, however this article details what we are actually loosing through GST. wish even Karnataka had a govt like TN and fight for the interest of state.

Leave a Reply