ಫೈನಲ್ ಪ್ರವೇಶಿಸಿದ ದೀಪಾ, ಮಹಿಳಾ ಆರ್ಚರಿ ತಂಡ ಹೋರಾಟ ಕ್ವಾರ್ಟರ್ ನಲ್ಲಿ ಅಂತ್ಯ, ಸೋಲಿಂದ ತಪ್ಪಿಸಿಕೊಂಡ ವನಿತೆಯರ ಹಾಕಿ, ಹೀನಾಗೆ ಸೋಲಿನ ನಿರಾಸೆ

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಭಾಗವಹಿಸಿರುವ ಭಾರತದ ಏಕೈಕ ಅಭ್ಯರ್ಥಿ ದೀಪಾ ಕರ್ಮಾಕರ್ ಫೈನಲ್ ಪ್ರವೇಶ, ಕಮರಿದ ಭಾರತ ಮಹಿಳಾ ಆರ್ಚರಿ ತಂಡದ ಕನಸು, ಸುದೀರ್ಘ 36 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಭಾರತ ವನಿತೆಯರ ಹಾಕಿ ತಂಡ ಆರಂಭಿಕ ಪಂದ್ಯದಲ್ಲಿ ಸೋಲಿನಿಂದ ಪಾರು, ಇನ್ನು ಮಹಿಳಾ ಶೂಟರ್ ಹೀನಾ ಸಿಧು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿ ನಿರಾಸೆ ಮೂಡಿಸಿದರು… ಇವು ಒಲಿಂಪಿಕ್ಸ್ ಎರಡನೇ ದಿನದ ಭಾರತ ಅಥ್ಲೀಟ್ ಗಳ ಫಲಿತಾಂಶದ ರೌಂಡಪ್.

ಜಿಮ್ನಾಸ್ಟಿಕ್ ನಲ್ಲಿ ಏಕಾಂಗಿಯಾಗಿ ಭಾರತದ ನಿರೀಕ್ಷೆಯನ್ನು ಹೊತ್ತಿರುವ ದೀಪಾ ಕರ್ಮಾಕರ್ (14.850 ಅಂಕ) ಮಹಿಳೆಯರ ವೈಯಕ್ತಿಕ ವಾಲ್ಟ್ ವಿಭಾಗದ ಅರ್ಹತಾಸುತ್ತಿನಲ್ಲಿ 8ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಪ್ರಶಸ್ತಿ ಸುತ್ತಿನ ಪಂದ್ಯ ಆ.14 ರಂದು ನಡೆಯಲಿದೆ. ಉಳಿದಂತೆ ಮಹಿಳೆಯರ ವೈಯಕ್ತಿಕ ಆಲ್ ರೌಂಡ್ ವಿಭಾಗದಲ್ಲಿ (51.665) 51ನೇ, ಬೀಮ್ ವಿಭಾಗದಲ್ಲಿ (12.866) 65ನೇ, ಫ್ಲೋರ್ ಎಕ್ಸರ್ಸೈಸ್ ವಿಭಾಗದಲ್ಲಿ (12.033) 75ನೇ ಹಾಗೂ ಅನ್ಇವನ್ ಬಾರ್ಸ್ ವಿಭಾಗದಲ್ಲಿ (11.666) 77ನೇ ಸ್ಥಾನ ಪಡೆದರು.

ಅತ್ಯುತ್ತಮ ಪ್ರದರ್ಶನ ನೀಡಿದರೂ ಕೂದಲೆಳೆಯ ಅಂತರದಲ್ಲಿ ರಷ್ಯಾ ವಿರುದ್ಧ ಹಿನ್ನಡೆ ಅನುಭವಿಸಿದ ಭಾರತ ಮಹಿಳಾ ಆರ್ಚರಿ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಶೂಟೌಟ್ ಸುತ್ತಿನಲ್ಲಿ ಪರಾಭವಗೊಂಡಿತು. ಇದರೊಂದಿಗೆ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿದೆ. ಇದಕ್ಕೂ ಮುನ್ನ ನಡೆದಿದ್ದ ಪ್ರಿಕ್ವಾರ್ಟರ್ ಪಂದ್ಯದಲ್ಲಿ ಭಾರತ ತಂಡ ಕೊಲಂಬಿಯಾ ವಿರುದ್ಧ 5-3 ಅಂತರದಲ್ಲಿ ಜಯಿಸಿತ್ತು.

ಹಾಕಿಯಲ್ಲಿ ಭಾರತ ವನಿತೆಯರ ತಂಡ ನೇಪಾಳ ವಿರುದ್ಧ 2-2 ಗೋಲುಗಳ ಸಮಬಲದೊಂದಿಗೆ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಭಾರತದ ಪರ ರಾಣಿ 31ನೇ ಹಾಗೂ ಲಿಲಿಮಾ ಮಿಂಜ್ 40ನೇ ನಿಮಿಷದಲ್ಲಿ ಗೋಲು ಹೊಡೆದರೆ, ಜಪಾನ್ ಪರಎಮಿ ನಿಶಿಕೋರಿ 15ನೇ ಮತ್ತು ಮಿಯ್ ನಕಾಶಿಮಾ 28ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮಹಿಳಾ ಶೂಟರ್ ಹೀನಾ ಸಿಧು 10 ಮೀ. ಏರ್ ಪಿಸ್ತೂಲ್ ವಿಭಾಗದ ಅರ್ಹತಾ ಸುತ್ತಿನಲ್ಲೇ ಪರಾಭವಗೊಂಡಿದ್ದು ತೀವ್ರ ನಿರಾಸೆ ತಂದಿತು. ಈ ಸುತ್ತಿನಲ್ಲಿ 380 ಅಂಕಗಳಿಸಿ 14ನೇ ಸ್ಥಾನ ಪಡೆಯುವುದರೊಂದಿಗೆ ಸೋತರು. ಮಂಗಳವಾರ ನಡೆಯಲಿರುವ ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಭಾರತ ಪದಕದ ಖಾತೆ ಇನ್ನಷ್ಟೇ ತೆರೆಯಬೇಕಿದ್ದು, ಚೀನಾ 8 ಪದಕ (3 ಚಿನ್ನ, 2 ಬೆಳ್ಳಿ, 3 ಕಂಚು)ಗಳೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ರೆ, ಆಸ್ಟ್ರೇಲಿಯಾ 5 ಪದಕ (3 ಚಿನ್ನ, 2 ಕಂಚು) ದ್ವಿತೀಯ ಹಾಗೂ ಅಮೆರಿಕ 11 ಪದಕ (2 ಚಿನ್ನ, 5 ಬೆಳ್ಳಿ, 4 ಕಂಚು) ಗಳೊಂದಿಗೆ ತೃತೀಯ ಸ್ಥಾನದಲ್ಲಿದೆ. (ಚಿನ್ನದ ಪದಕ ಆಧಾರದ ಮೇಲೆ ಈ ಸ್ಥಾನ ನಿಗದಿ ಮಾಡಲಾಗುವುದು.)

ಕ್ರೀಡಾಕೂಟದ ಮೂರನೇ ದಿನ ಭಾರತ ಅಥ್ಲೀಟ್ ಗಳ ಸ್ಪರ್ಧೆ ಹೀಗಿವೆ…

  • ಶೂಟಿಂಗ್ ಕಣದಲ್ಲಿ ಬಿಂದ್ರಾ- ಗಗನ್: ಭಾರತದ ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಗಳಾದ ಅಭಿನವ್ ಬಿಂದ್ರಾ ಹಾಗೂ ಗಗನ್ ನಾರಂಗ್ ಸೋಮವಾರ ಕಣಕ್ಕಿಳಿಯಲಿದ್ದಾರೆ. ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಇವರಿಬ್ಬರು ಸ್ಪರ್ಧಿಸಲಿದ್ದು, ಅರ್ಹತಾ ಸುತ್ತು ಸಂಜೆ 5.30ಕ್ಕೆ ನಡೆಯಲಿದ್ದು, ಫೈನಲ್ ಸುತ್ತು ರಾತ್ರಿ 8.30ಕ್ಕೆ ನಡೆಯಲಿದೆ.
  • ವೈಯಕ್ತಿಕ ಆರ್ಚರಿಯಲ್ಲಿ ಲಕ್ಷ್ಮಿರಾಣಿ: ಮಹಿಳಾ ಆರ್ಚರಿಯ ವೈಯಕ್ತಿಕ ವಿಭಾಗದ ಅಂತಿಮ 64ರ ಸುತ್ತಿನಲ್ಲಿ ಭಾರತದ ಲಕ್ಷ್ಮಿರಾಣಿ ಸ್ಲೊವಾಕಿಯಾದ ಅಲೆಕ್ಸಾಂಡ್ರಾ ಲಾಂಗೊವಾ ವಿರುದ್ಧ ಸೆಣಸಲಿದ್ದು, ಈ ಸ್ಪರ್ಧೆ ರಾತ್ರಿ 7.27ಕ್ಕೆ ಆರಂಭವಾಗಲಿದೆ.
  • ಹಾಕಿಯಲ್ಲಿ ಪುರುಷರಿಗೆ ಜರ್ಮನಿ, ಮಹಿಳೆಯರಿಗೆ ಬ್ರಿಟನ್ ಸವಾಲು: ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 3-2 ಅಂತರದ ಜಯದೊಂದಿಗೆ ಶುಭಾರಂಭ ಮಾಡಿದ್ದ ಭಾರತ ತಂಡ, ಇಂದು ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಎದುರಿಸುತ್ತಿರೋದು ಜರ್ಮನಿ ಸವಾಲನ್ನು. ಈ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಇನ್ನು ಮಹಿಳೆಯರ ಹಾಕಿಯಲ್ಲಿ ಭಾರತಕ್ಕೆ ಎರಡನೇ ಪಂದ್ಯದಲ್ಲಿ ಎದುರಾಗುತ್ತಿರುವುದು ಗ್ರೇಟ್ ಬ್ರಿಟನ್.
  • ಈಜಿನಲ್ಲಿ ಶಿವಾನಿ ಮತ್ತು ಸಾಜನ್: ಮಹಿಳೆಯರ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಈಜುಪಟು ಶಿವಾನಿ ಕಟಾರಿಯಾ ಮೊದಲ ಹೀಟ್ಸ್ ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ರಾತ್ರಿ 9.30ಕ್ಕೆ ನಡೆಯಲಿದೆ. ಇನ್ನು ಪುರುಷರ 200 ಮೀ. ಬಟರ್ ಫ್ಲೈ ವಿಭಾಗದಲ್ಲಿ ಭಾರತದ ಸಾಜನ್ ಪ್ರಕಾಶ್ ಮೊದಲ ಹೀಟ್ಸ್ ನಲ್ಲಿ ಭಾಗವಹಿಸುತ್ತಿದ್ದು, ಈ ಸ್ಪರ್ಧೆ ರಾತ್ರಿ 10ಕ್ಕೆ ಆರಂಭವಾಗಲಿದೆ.

Leave a Reply