ಬಿಂದ್ರಾ ಕೈತಪ್ಪಿದ ಪದಕ, ಮೂರನೇ ದಿನ ನಿರಾಸೆಯನ್ನೇ ಉಂಡ ಭಾರತ, ಇಂದಿನ ಸ್ಪರ್ಧೆಗಳೇನು…?

ಡಿಜಿಟಲ್ ಕನ್ನಡ ಟೀಮ್:

ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಿಕ ಎರಡು ದಿನಗಳಲ್ಲಿ ಭಾರತಕ್ಕೆ ಸಿಕ್ಕ ನಿರಾಸೆ ಸೋಮವಾರ ದುಪ್ಪಟ್ಟಾಗಿತ್ತು. ಕಾರಣ, ಇನ್ನೇನು ಜಯ ಸಿಕ್ಕಿತು ಎನ್ನುವ ಹಂತದಲ್ಲಿ ಭರವಸೆಯ ಶೂಟರ್ ಅಭಿನವ್ ಬಿಂದ್ರಾ ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದ್ರು. ಇಷ್ಟು ಸಾಲದದು ಅಂತಾ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ ಅಂತಿಮ ಮೂರು ಸೆಕೆಂಡ್ ಬಾಕಿ ಇರುವಾಗ ಸೋಲನುಭವಿಸಿದ್ದು ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಯ್ತು.

ಭಾರತಕ್ಕೆ ಪದಕ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಕಾರಣರಾಗಿದ್ದು ಬಿಂದ್ರಾ… ಸಂಜೆ ನಡೆದ 10 ಮೀ. ಏರ್ ರೈಫಲ್ ನ ಅರ್ಹತಾ ಸುತ್ತಿನಲ್ಲಿ (625.7 ಅಂಕ) ಉತ್ತಮ ಪ್ರದರ್ಶನ ನೀಡಿ 7ನೇ ಸ್ಥಾನ ಪಡೆದ ಬಿಂದ್ರಾ, ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ರು, ರಾತ್ರಿ ನಡೆದ ಪ್ರಶಸ್ತಿ ಸುತ್ತಿನಲ್ಲಿ (163.8) ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾದ್ರು.

ಇನ್ನು ಹಾಕಿಯ ಬಿ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಸೋಲನುಭವಿಸಿತು. ಪಂದ್ಯದುದ್ದಕ್ಕೂ ಆಕರ್ಷಕ ಪ್ರದರ್ಶನ ನೀಡಿದ ಭಾರತ, ತನಗಿಂತ ಬಲಿಷ್ಠ ತಂಡವಾಗಿರೋ ಜರ್ಮನಿಗೆ ಅತ್ಯುತ್ತಮ ಹೋರಾಟ ನೀಡಿತು. ಆದರೆ ಪಂದ್ಯದ ಮುಕ್ತಾಯಕ್ಕೆ ಕೇವಲ 3 ಸೆಕೆಂಡ್ ಗಳು ಬಾಕಿ ಇರುವಾಗ ಜರ್ಮನಿ ಗಳಿಸಿದ ಗೋಲು ಭಾರತದ ನಿರಾಸೆಗೆ ಕಾರಣವಾಯ್ತು. ಈ ಸೋಲು ನಿರಾಸೆ ಮೂಡಿಸಿದ್ದರೂ ಭಾರತ ಬಲಿಷ್ಠ ತಂಡದ ವಿರುದ್ಧ ನೀಡದ ಪ್ರದರ್ಶನ ತೃಪ್ತಿದಾಯಕವೇ. ಅಂತಿಮ ಕ್ಷಣದಲ್ಲಿ ಮಾಡಿದ ತಪ್ಪನ್ನು ಮುಂದಿನ ಪಂದ್ಯಗಳಲ್ಲಿ ಭಾರತ ಸರಿಪಡಿಸಿಕೊಂಡರೆ, ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸೋದ್ರಲ್ಲಿ ಅನುಮಾನವೇ ಇಲ್ಲ.

ಇನ್ನು ಪುರುಷರ ಟ್ರಾಪ್ ಶೂಟಿಂಗ್ ನಲ್ಲಿ ಮಾನವ್ ಜಿತ್ ಸಿಂಗ್ ಸಂಧು 115 ಅಂಕಗಳೊಂದಿಗೆ 16ನೇ ಸ್ಥಾನ ಪಡೆದು, ತಮ್ಮ ಹೊರಾಟ ಅಂತ್ಯಗೊಳಿಸಿದ್ರು. ಇನ್ನು ಈಜಿನಲ್ಲೂ ಭಾರತಕ್ಕೆ ಹಿನ್ನಡೆಯೇ ಆಗಿದೆ. 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಶಿವಾನಿ ಕಟಾರಿಯಾ (2:09.30 ನಿಮಿಷ) 41ನೇ ಸ್ಥಾನ ಪಡೆದರೆ, ಪುರುಷರ 200 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ ಸಾಜನ್ ಪ್ರಕಾಶ್ (1:59.37 ನಿ.) 28ನೇ ಸ್ಥಾನ ಪಡೆಯಲಷ್ಟೇ ಶಕ್ತರಾದ್ರು.

ತಡರಾತ್ರಿ ನಡೆದ ಮಹಿಳೆಯರ ವೈಯಕ್ತಿಕ ಆರ್ಚರಿಯ ಅಂತಿಮ 64ರ ಘಟ್ಟದಲ್ಲಿ ಭಾರತದ ಲಕ್ಷ್ಮಿರಾಣಿ ಸ್ಲೊವಾಕಿಯಾದ ಅಲೆಕ್ಸಾಂಡ್ರಾ ಲಾಂಗೊವಾ ವಿರುದ್ಧ 1-7 ಗೇಮ್ ಗಳ ಅಂತರದಲ್ಲಿ ಪರಾಭವಗೊಂಡರು. ಇನ್ನು ಭಾರತ ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧದ ಬಿ ಗುಂಪಿನ ಪಂದ್ಯದಲ್ಲಿ 0-3 ಗೋಲುಗಳ ಅಂತರದಲ್ಲಿ ಮುಖಭಂಗ ಅನುಭವಿಸಿತು.

ಪದಕದ ಪಟ್ಟಿಯನ್ನು ನೋಡುವುದಾದ್ರೆ, ಅಮೆರಿಕ 19 ಪದಕ (5 ಚಿನ್ನ, 7 ಬೆಳ್ಳಿ, 7 ಕಂಚು) ಗಳೊಂದಿಗೆ ಅಗ್ರಸ್ಥಾನ ಪಡೆದ್ರೆ, ಚೀನಾ 13 ಪದಕ (5 ಚಿನ್ನ, 3 ಬೆಳ್ಳಿ, 5 ಕಂಚು) ದೊಂದಿಗೆ ದ್ವಿತೀಯ ಹಾಗೂ ಆಸ್ಟ್ರೇಲಿಯಾ 7 ಪದಕ (4 ಚಿನ್ನ, 3 ಬೆಳ್ಳಿ) ಗಳೊಂದಿಗೆ ತೃತೀಯ ಸ್ಥಾನ ಪಡೆದಿದೆ.

ಇಂದು ಭಾರತೀಯ ಅಥ್ಲೀಟ್ ಗಳು ಭಾಗವಹಿಸುವ ಸ್ಪರ್ಧೆಗಳು ಹೀಗಿವೆ…

ಪುರುಷರ ಸಿಂಗಲ್ಸ್ ರೋಯಿಂಗ್ ನಲ್ಲಿ ದತ್ತು: ರೋಯಿಂಗಿ ಸಿಂಗಲ್ ಸ್ಕಲ್ ವಿಭಾಗದಲ್ಲಿ ಭಾರತದ ದತ್ತು ಭೋಕನಲ್ ಕ್ವಾರ್ಟರ್ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ಸಂಜೆ 5.30ಕ್ಕೆ ಆರಂಭ.

ಮತ್ತೊಮ್ಮೆ ಕಣಕ್ಕೆ ಶೂಟರ್ ಹೀನಾ ಸಿಧು: ಭಾರತದ ಭರವಸೆಯ ಮಹಿಳಾ ಶೂಟರ್ ಹೀನಾ ಸಿಧು ಮಂಗಳವಾರ ಮತ್ತೊಮ್ಮೆ ಕಣಕ್ಕಿಳಿಯಲಿದ್ದು, ಈ ಬಾರಿ ಸ್ಪರ್ಧಿಸುತ್ತಿರೋದು ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ.

–  ಆರ್ಚರಿಯಲ್ಲಿ ಅತನು ದಾಸ್ ಸ್ಪರ್ಧೆ: ಶ್ರೇಯಾಂಕಿತ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿರೋ ಭಾರತದ ಆರ್ಚರ್ ಅತನು ದಾಸ್, ಅಂತಿಮ 64ರ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಈ ಪಂದ್ಯದಲ್ಲಿ ನೇಪಾಳದ ಜಿತ್ಬಹದ್ದೂರ್ ಮುಕ್ತಾನ್ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ರಾತ್ರಿ 8.05ಕ್ಕೆ ಆರಂಭವಾಗಲಿದೆ.

–  ಹಾಕಿಯಲ್ಲಿ ಪುರುಷರಿಗೆ ಅರ್ಜೆಂಟೀನಾ ಸವಾಲು: ಭಾರತ ಪುರುಷರ ಹಾಕಿ ತಂಡ ಬಿ ಗುಂಪಿನ ಮೂರನೇ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಆಡಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

–  ಬಾಕ್ಸಿಂಗ್ ಅಭಿಯಾನ ಆರಂಭಿಸಲಿದ್ದಾರೆ ವಿಕಾಸ್ ಕೃಷ್ಣ: ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಯಾದವ್ ಮಂಗಳವಾರ ಬಾಕ್ಸಿಂಗ್ ತಂಡದ ಹೋರಾಟಕ್ಕೆ ನಾಂದಿಯಾಡಲಿದ್ದಾರೆ. ಪುರುಷರ 75 ಕೆ.ಜಿ ಮಿಡಲ್ ವೇಟ್ ವಿಭಾಗದಲ್ಲಿ ವಿಕಾಸ್ ಸ್ಪರ್ಧಿಸುತ್ತಿದ್ದು, ಅಮೆರಿಕದ ಚಾರ್ಲ್ಸ್ ಕಾನ್ವೆಲ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಮಧ್ಯರಾತ್ರಿ 2.45ಕ್ಕೆ ಆರಂಭವಾಗಲಿದೆ.

Leave a Reply