ರೊಸ್ಟನ್ ಚೇಸ್ ಎಸೆತದಲ್ಲಿ ಬೌಲ್ಡ್ ಆದ ಅಜಿಂಕ್ಯ ರಹಾನೆ…
ಡಿಜಿಟಲ್ ಕನ್ನಡ ಟೀಮ್:
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಆತಿಥೇಯ ವೆಸ್ಟ್ ಇಂಡೀಸ್ ಬೌಲರ್ ಗಳು ಪ್ರವಾಸಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಶಾಕ್ ನೀಡಿದ್ದಾರೆ. ಮಂಗಳವಾರ ಆರಂಭವಾದ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ಬ್ಯಾಟ್ಸ್ ಮನ್ ಗಳು ವಿಂಡೀಸ್ ದಾಳಿಗೆ ಕಂಗೆಟ್ಟರು. ಈ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ಆಸರೆಯಾಗಿ ನಿಂತಿರೋದು ಮಾತ್ರ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್.
ಗ್ರಾಸ್ ಐಲೆಟ್ ನಲ್ಲಿ ನಡೆಯುತ್ತಿರೋ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯರು ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು. ಬೌಲರ್ ಗಳಿಗೆ ನೆರವಾಗುವ ಪಿಚ್ ಸತ್ವದ ಸಂಪೂರ್ಣ ಲಾಭ ಪಡೆದ ವಿಂಡೀಸ್ ಬೌಲರ್ ಗಳು ಶಿಸ್ತುಬದ್ಧ ದಾಳಿ ನಡೆಸಿದ್ರು. ಪರಿಣಾಮ ಭಾರತ ಮೊದಲ ದಿನದಾಟದಲ್ಲಿ 5 ವಿಕೆಟ್ ಗೆ 235 ರನ್ ದಾಖಲಿಸಿದೆ.
ಸರಣಿಯ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದ ವಿಂಡೀಸ್ ಪಡೆ, ಸರಣಿಯಲ್ಲಿ ಅಚ್ಚರಿಯ ರೀತಿಯಲ್ಲಿ ಭಾರತಕ್ಕೆ ಪೈಪೋಟಿ ನೀಡುತ್ತಿದೆ. ಎರಡನೇ ಟೆಸ್ಟ್ ಪಂದ್ಯದ ಅಂತಿಮ ದಿನ ನಡೆಸಿದ ಹೋರಾಟ ಹಾಗೂ ಸೋಲಿನಿಂದ ಪಾರಾದ ರೀತಿ ತಂಡದ ಆಟಗಾರರಿಗೆ ಇನ್ನಿಲ್ಲದ ಆತ್ಮವಿಶ್ವಾಸ ತುಂಬಿದೆ. ಅದು ಈ ಪಂದ್ಯದಲ್ಲಿ ಆಟಗಾರರ ಪ್ರದರ್ಶನದಲ್ಲಿ ಎದ್ದುಕಾಣುತ್ತಿದೆ.
ಭಾರತದ ಪರ ಆರಂಭಿಕ ಕೆ.ಎಲ್ ರಾಹುಲ್ (50) ಅರ್ಧಶತಕ ಹಾಗೂ ರಹಾನೆ (35) ಹೊರತು ಪಡೆಸಿದ್ರೆ, ಉಳಿದ ಅಗ್ರ ಕ್ರಮಾಂಕ ದಾಂಡಿಗರಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ಒಂದು ಹಂತದಲ್ಲಿ 87 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಕುಸಿದಿದ್ದ ಟೀಂ ಇಂಡಿಯಾಗೆ ಆಸರೆಯಾಗಿದ್ದು ಅಶ್ವಿನ್ (ಅಜೇಯ 75). ಅಶ್ವಿನ್ ಗೆ ಉತ್ತಮ ಸಾಥ್ ನೀಡುತ್ತಿರುವ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (ಅಜೇಯ 46) ಮುರಿಯದ 6ನೇ ವಿಕೆಟ್ ಗೆ (108) ಶತಕದ ಜತೆಯಾಟ ನೀಡಿ ಆಟವನ್ನು ಕಾಯ್ದಿರಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಪದಾರ್ಪಣೆ ಪಂದ್ಯದಲ್ಲೇ ಗಮನ ಸೆಳೆದ ಜೋಸೆಫ್ 2, ಚೇಸ್ 2 ಮತ್ತು ಗೆಬ್ರಿಯಲ್ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನಿಂಗ್ಸ್ 234ಕ್ಕೆ 5
ರಾಹುಲ್ 50, ಧವನ್ 1, ಕೊಹ್ಲಿ 3, ರಹಾನೆ 35, ರೋಹಿತ್ 9, ಅಶ್ವಿನ್ ಅಜೇಯ 75, ಸಾಹ ಅಜೇಯ 46, ಇತರೆ 15. (ಜೋಸೆಫ್ 38ಕ್ಕೆ 2, ಚೇಸ್ 38ಕ್ಕೆ 2, ಗೆಬ್ರಿಯಲ್ 68ಕ್ಕೆ 1)