ದ್ವಂದಾರ್ಥ ಎಂದರೆ ಕಾಮೋದ್ರೇಕದ್ದೇ ಸಂಭಾಷಣೆ, ಬೀದಿಯಲ್ಲಿ ಪರಿಣಾಮ ತೋರುವ ಈ ಕ್ರಿಯೆಗೆ ಯಾರು ಹೊಣೆ?

ಅವಳ ಮೈಮುಟ್ಟಬಹುದು. ಅವಳಷ್ಟೇ ಅಲ್ಲ.. ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳ ಮೈ ಕೂಡ ಮುಟ್ಟಬಹುದು. ಅವಳು ಬೇಡ ಅಂದರೆ ಅದು ಬೇಕು ಎನ್ನುವ ಸಂಕೇತ….

author-geetha‘ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಸಿನಿಮಾಗಳು ಇತ್ತೀಚಿಗೆ ಬರ್ತಾನೆ ಇಲ್ಲ…’

‘ಹೌದೇ ?’

‘ಯಾಕೆ ? ನಿಮಗೆ ಗೊತ್ತಿಲ್ಲವೇ ? ನೀವು ಮನೆಯವರೆಲ್ಲಾ ಒಟ್ಟಿಗೆ ಸಿನಿಮಾಕ್ಕೆ ಹೋಗ್ತಿರಾ ? ’

‘ಊಂ… ಸಿನಿಮಾಗೆ ಹೋಗುವುದು ಅಪರೂಪವೇ.. ಆದರೆ..’

‘ಗೊತ್ತಿಲ್ಲ ನಿಮಗೆ ಐಟಂ ಸಾಂಗ್ ಇರಲೇಬೇಕು.. ಈ ಡಬ್ಬಲ್ ಮೀನಿಂಗ್ ಡೈಲಾಗ್ಸ್ ಕೇಳೋಕ್ಕಾಗಲ್ಲ… ವಿಪರೀತ ಪೋಲಿಯಾಗಿರುತ್ತೆ. ಹೆಂಡತಿ ಮಕ್ಕಳೊಂದಿಗೆ ನೋಡೋಕ್ಕೆ ಆಗೊಲ್ಲ…’

‘ಪೋಲಿಯಾಗಿದ್ದರೆ ಹೆಂಡತಿಯೊಂದಿಗೆ ಕೇಳೊದಿಕ್ಕೆ ಏನು ಕಷ್ಟ ? ಮಕ್ಕಳಿಗೆ ಅಂತ ಮಾಡೋ ಚಿತ್ರಗಳನ್ನು ಮಕ್ಕಳೇ ಇಷ್ಟಪಡೋಲ್ಲಾ ಈಗ…’

‘ಅರೇ ನಿವೇನು ಹೇಳ್ತಾ ಇದೀರಿ ?’

‘ಮಕ್ಕಳು, ಮಕ್ಕಳಿಗೆ ಅಂತ ಬಾಲಿಶವಾಗಿ ಚಿತ್ರ ಮಾಡಿದ್ರೆ ಅವರುಗಳು ಯಾಕೆ ನೋಡ್ತಾರೆ? ಮಕ್ಕಳಿಗೆ ಅರ್ಥವಾಗೊಲ್ಲ… ಅನ್ನೋ ನಂಬಿಕೆಯಿಂದ ಶುರು ಮಾಡಿ ಅವರಿಗೆ ಬುದ್ಧಿ ಹೇಳಬೇಕು ಎಂದು ಕೊನೆ ಮಾಡುತ್ತೇವೆ. ಮಕ್ಕಳಿಗೆ ಅರ್ಥವಾಗುತ್ತೆ… ಬುದ್ಧಿ ಹೇಳಿಸಿಕೊಳ್ಳುವುದು.. ಅದೂ ಒಂದು ಚಲನಚಿತ್ರದ ಮೂಲಕ.. ಯಾರಿಗೂ ಬೇಡ.’

‘ಈ ಡಬ್ಬಲ್ ಮೀನಿಂಗ್ ಜೋಕ್ ಗಳು ನಮಗೇ ಮುಜುಗುರವಾಗುತ್ತೆ.. ಇನ್ನು ಹೆಂಗಸರು..’

‘ಯಾಕೆ? ಹೆಂಗಸರಿಗೆ, ಹೆಂಡತಿಗೆ ಡಬ್ಬಲ್ ಮೀನಿಂಗ್ ಜೋಕುಗಳು ಇಷ್ಟವಾಗೋಲ್ಲ ಅಂತ ಯಾಕೆ ಅಂದುಕೊಂಡಿದ್ದೀರಿ? ಅವರಿಗೂ ಇಷ್ಟವಾಗಬಹುದು..’

‘ಅಯ್ಯೋ…’

‘ಡಬ್ಬಲ್ ಮೀನಿಂಗ್ ಅಂದರೆ, ಅದು ನಿಮಗೆ ಅರ್ಥವಾಯಿತು ಅಂತ.. ಹೊರ ಅರ್ಥ ಒಳ ಅರ್ಥ ಎರಡು ನಿಮಗೆ ಅರ್ಥವಾಯಿತು ಅಂದರೆ ನಿಮ್ಮ ಮನಸ್ಸು ಹುಳ್ಳಗೆ ತಾನೇ..’

ವಾದಿಸುತ್ತಿದ್ದವರು ಸರಿದು ಹೋದರು, ‘ನನ್ನೇ ಅಂತಿದೀರಲ್ಲಾ…’ ಎಂದು ಗೊಣಗುತ್ತಾ..

ನಾನು ಸುಮ್ಮನೆ ಕುಳಿತೆ.

ಎದುರಿಗಿದ್ದವರು ಆಡಿದ ಮಾತನ್ನು ಒಂದು ಅರ್ಥದಲ್ಲಿ ತೆಗೆದುಕೊಳ್ಳುತ್ತೇವೆ. ಪದಗಳ ಅರ್ಥ, ಆಡಿದವರ ದನಿಯ ಏರಿಳಿತ, ಕಿರುನಗೆ ಅಥವಾ ಹುಳ್ಳನಗೆ, ನಮ್ಮ ಅನುಭವದ ಪರಿಧಿ.. ಅರ್ಥವನ್ನು ಕೊಡುತ್ತದೆ. ಡಬ್ಬಲ್ ಮೀನಿಂಗ್ ಇದೆ, ದ್ವಂದ್ವಾರ್ಥವಿದೆ ಎಂದರೆ ಆ ಇನ್ನೊಂದು ಅರ್ಥದ ಪರಿಚಯವೂ ನಮಗಿರಬೇಕು.. ನೇರವಾಗಿ ಹೇಳಿದ್ದೇ ಅರ್ಥವಾಗದವರು ಇನ್ನು ಇನ್ನೊಂದು ಅರ್ಥ ಹೇಗೆ ಮಾಡಿಕೊಳ್ಳುತ್ತಾರೆ ? ಆ double meaning ಡೈಲಾಗ್ ಅಂದರೆ ಸೆಕ್ಷುಯಲ್ ಅರ್ಥವೇ ಇರುವುದು ಎಂದು ನನಗೆ ಬಹಳಷ್ಟು ವರ್ಷ ಅರ್ಥವಾಗಿರಲೇ ಇಲ್ಲ.

‘ಮನೆಗೆ ಬಾ.. ನಿಂಗೆ ಹಬ್ಬ ಕಾದಿದೆ..’

‘ಹೀಗೆ ಮಾಡ್ತಾ ಇದ್ರೆ ಕಡುಬು ಕೊಡ್ತೀನಿ… ಅಷ್ಟೇ’ ಎಂದು ಅಮ್ಮ ಕಣ್ಣರಳಿಸಿ, ದನಿಯೇರಿಸಿ ಅಂದಾಗ… ಆ ವಾಕ್ಯದ ಡಬಲ್ ಮೀನಿಂಗ್ ನಮಗೆ ಚೆನ್ನಾಗಿ ಅರ್ಥವಾಗುತ್ತಿತ್ತು.

ನಮ್ಮ ಚಲನಚಿತ್ರಗಳಲ್ಲಿ ಮಾತ್ರ ಡಬ್ಬಲ್ ಮೀನಿಂಗ್ ಅಂದರೆ ಒಂದು ನೆಟ್ಟಿಗೆ, ಇನ್ನೊಂದು ಸೆಕ್ಷುಯಲ್ ಅರ್ಥ ಕೊಡುವ ವಾಕ್ಯಗಳು (ಸಂಭಾಷಣೆ) ಅಂತಲೇ ಅರ್ಥ!

ಕಾಶೀನಾಥ್, ಉಪೇಂದ್ರ, ಜಗ್ಗೇಶ್, ಶರಣ್ ತಟ್ಟನೆ ಕಣ್ಣ ಮುಂದೆ ಬರುತ್ತಾರೆ. ನಮ್ಮ ಸಿನಿಮಾಗಳಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ ಎಂಬ ವಿಚಾರ ಬಂದಾಗ… ಹಾಗೆಂದ ಮಾತ್ರಕ್ಕೆ ಬೇರೆ ಯಾರೂ ಹೇಳಿಯೇ ಇಲ್ಲವೆಂದಲ್ಲ. ಬರೆದವರು ಎಂದ ಕೂಡಲೆ ನೆನಪಿಗೆ ಒಂದಿಬ್ಬರ ಹೆಸರು ಬರುತ್ತದೆ… ಹಾಗೆಂದ ಮಾತ್ರಕ್ಕೆ ಬೇರೆ ಯಾರೂ ಬರೆದಿಲ್ಲ ಎಂದಲ್ಲ…

ಈ ಡಬ್ಬಲ್ ಮೀನಿಂಗ್ ನಲ್ಲೂ ಹಲವು ಬಗೆಯಿವೆ. ಕೆಲವು ನವಿರಾಗಿ ಕಚಗುಳಿ ಇಡುತ್ತವೆ. ಕೆಲವು ವಾಕರಿಕೆ ಹುಟ್ಟಿಸುತ್ತವೆ. ಅದು ಹೇಳುವವರ ಮೇಲೆ, ಕೇಳುವಾಗ ನಾವಿರುವ ಪರಿಸ್ಥಿತಿ ಹಾಗೂ ಮನಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ. ನಾವು ಬೆಳೆದುಬಂದಿರುವ ವಾತಾವರಣ, ನಮ್ಮ ಪರಿಸರ, ನಮ್ಮ ಓದು ತಿಳಿವು… ಎಲ್ಲದರ ಮೇಲೆ ನಮ್ಮ ಗ್ರಹಿಕೆ ಅವಲಂಬಿಸಿರುತ್ತದೆ. ‘blatantly below the belt’ ಅಂತಾರೆ ಇಂಗ್ಲೀಷಿನಲ್ಲಿ. ಕೆಲವು crude and vulgar jokesಗಳು ಕೆಲವರಿಗೆ ಅಸಹ್ಯವೆನಿಸಿರುತ್ತದೆ. ಹಲವರು ಗಹಗಹಿಸಿ ನಗುತ್ತಿರುತ್ತಾರೆ.

‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಆ ಮಟ್ಟಿಗೆ ಯಶಸ್ಸು ಗಳಿಸಿದ್ದೇ ಆ ಚಿತ್ರದ ನಾಯಕಿ ಹೇಳಿರುವ ಡೈಲಾಗುಗಳಿಂದ ಎಂದು ಹೇಳುವವರೂ ಇದ್ದಾರೆ. ನೀಟಾಗಿ, ಚೆಂದ ಕಾಣುವ ಹೆಣ್ಣು ಮಕ್ಕಳ ಬಾಯಿಂದ ಸೆಕ್ಷುಯಲಿ provocative (ಕಾಮವನ್ನು ಉದ್ರೇಕಿಸುವ) ಮಾತುಗಳನ್ನು ಆಡಿಸುವುದು ನಮ್ಮ ಚಲನಚಿತ್ರಗಳ ಹೊಸಾ ಟ್ರೆಂಡು. ‘ಏನಿದು ಅಸಹ್ಯ’ ಎಂದರೆ.. ಬೇರೆ ಭಾಷೆಗಳಲ್ಲಿ ಬಂದರೆ ನೋಡುತ್ತೀರಿ, ಕೇಳುತ್ತೀರಿ… ಕನ್ನಡದಲ್ಲಿ ಬಂದರೆ ಮಾತ್ರ ಯಾಕೆ ವಿರೋಧಿಸುತ್ತೀರಿ? ಎಂದು ಮರು ಪ್ರಶ್ನಿಸುತ್ತಾರೆ.

‘ಡಬಲ್ ಮೀನಿಂಗ್ ಏನು ಬಂತು? ಈಗ ಜನ ಮಾತಾಡೋದೇ ಹೀಗೇ..’ ಎಂದು ತಮ್ಮನ್ನು ಪ್ರಶ್ನಿಸಿದ ನಿರೂಪಕರನ್ನು ನಾಯಕನಟರು ದಬಾಯಿಸಿದರು.

ನಾಯಕಿ ಚೆಂದವಿದ್ದರೆ ಸಾಕೆನ್ನುವ ಕಾಲವೊಂದಿತ್ತು. ಕುಂಕುಮ ಇಟ್ಟು, ಸೆರಗು ಹೊದ್ದು, ಕೈ ಮರೆಯಲ್ಲಿ ನಕ್ಕರೆ ಸಾಕಿತ್ತು.. ಚೂಪು ಮೊಲೆ ತೋರಲು, ಕಣ್ಣು ಹೊಡೆಯಲು, ಹೊಕ್ಕಳು ತೋರಲು ಕ್ಯಾಬರೇ ಡ್ಯಾನ್ಸರ್ ಇದ್ದಳು. ನಂತರ ಕ್ಯಾಬರೇ ಡ್ಯಾನ್ಸರುಗಳನ್ನು ಮೂಲೆಗೆ ತಳ್ಳಿ ನಾಯಕಿಯರೇ ಅಂಗಸಾಷ್ಠವ ತೋರಿ ಕುಣಿಯಲು ಆರಂಭಿಸಿದಳು.. ಹಾಗೆ ಮಾಡಲು ಅವಳಿಗೆ ಪರಿಸ್ಥಿತಿಯ ಒತ್ತಡವಿತ್ತೆಂದು ಕಥೆಯಲ್ಲಿ ಬಿಂಬಿಸಬೇಕಿತ್ತು. ನಂತರ ಒತ್ತಡ ಹೋಗಿ, ನಾಯಕಿ ಬಿಚ್ಚು ನಾಯಕಿಯಾದಳು. ಹೀರೋ ಅವಳನ್ನು ಮದುವೆಯಾದ ನಂತರ ಸೀರೆ ಅವಳ ಮೈ ಮೇಲೆ ಬರುತಿತ್ತು.

ನಾಯಕ ಡಬ್ಬಲ್ ಮೀನಿಂಗ್ ಪೋಲಿ ಮಾತುಗಳನ್ನಾಡುವಾಗ ಕಣ್ಣರಳಿಸಿ ಹುಸಿ ಮುನಿಸು ತೋರುವ, ನಾಚುವ ಹೆಣ್ಣು ನಾಯಕಿಯಾದಳು. ಅವಳ ನಿತಂಬವನ್ನು ತಬಲಾಗೆ, ಮೊಲೆಗಳನ್ನು ಮತ್ಯಾವುದಕ್ಕೊ ಹೋಲಿಸಿ ನಾಯಕ ಹಾಡಿದಾಗ ನಗುತ್ತಾ ಅದನ್ನು ಸ್ಕ್ರೀನ್ ಭರ್ತಿ ತೋರುವ ಪರಿಪಾಠ ಶುರುವಾಯಿತು.

ಹೊಸದೇನೋ ಕೊಡಬೇಕು ಎಂದು ತಹತಹಿಸುವ ಚಿತ್ರರಂಗ… ನಾಯಕಿಯ ಬಾಯಲ್ಲಿ (ಮುಗ್ಧತೆಯಿಂದ ಹೇಳುವ) double meaning dialogue ಹೇಳಿಸಲು ಪ್ರಾರಂಭಿಸಿದರು. ಒಂದೆರಡು ಚಿತ್ರ (ಆ ಬಗೆಯ) ಕೊಂಚ ದುಡ್ಡು ಮಾಡಿಕೊಂಡ ತಕ್ಷಣ.. ಅದೇ ಗುಂಗಿನಲ್ಲಿ ಚಿತ್ರಗಳು ಬರುತ್ತಿವೆ. ಇತ್ತೀಚೆಗೆ ಬಂದ (ಅಥವಾ ಬರುತ್ತಿರುವ) ಚಿತ್ರವೊಂದರ ಟ್ರೈಲರ್ ಭರ್ತಿ ಡಬ್ಬಲ್ ಮೀನಿಂಗ್ ಡೈಲಾಗ್ ಗಳು.. ಅದನ್ನು ನೋಡಿ, ಕೇಳಿಯೇ ನಮ್ಮ ಜನರು ಥಿಯೇಟರ್ರಿಗೆ ಚಿತ್ರ ನೋಡಲು ಬರುತ್ತಾರೆ ಎಂದಾದರೆ… ‘ಕಾಮ’ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ…

ಕುಡಿಯುವ, ಸಿಗರೇಟ್ ಸೇದುವ, ಅಂಗಾಂಗಗಳೆಲ್ಲಾ ಎತ್ತಿ ತೋರುವಂತೆ ಬಟ್ಟೆ ಹಾಕಿಕೊಂಡು (ಒದ್ದೆ ಬೇರೆ!) ಅಸಹ್ಯ ಹುಟ್ಟಿಸುವ ಡೈಲಾಗ್ ಹೇಳಿ, ‘ದಿಸ್ ಈಸ್ ಎ ರೋಲ್ ಆಫ್ ಮೈ ಲೈಫ್ ಟೈಮ್’ ಎಂದು ನಾಯಕಿಯಾಗಿರುವವಳು ಹೇಳಿದರೆ… ಏನು ಮಾಡುವುದು? ‘ಈಗಿರುವ ಟ್ರೆಂಡ್ ಅದೇ.. ನಮ್ಮನ್ನು ಅನ್ನಬೇಡಿ. ನಿರ್ಮಾಪಕರು ಕಷ್ಟಪಟ್ಟು ದುಡ್ಡು ಹಾಕಿ ಚಿತ್ರ ಮಾಡಿರುತ್ತಾರೆ. ಜನಕ್ಕೆ ಬೇಕಿರುವುದೂ ಅದೇ’ ಅಂದರೆ ಅದಕ್ಕೆ ಉತ್ತರವೇನು?

ಜೊತೆಗೆ ಸಿನಿಮಾ ಮಂದಿ ಜನರಿಗೆ ಮಾದರಿ, ಸಿನಿಮಾಗಳು ಜನರಿಗೆ ಆದರ್ಶ ಎಂದು ಹೇಳಿದವರು ಯಾರು? ಅದೊಂದು ಕೇವಲ ಮನರಂಜನೆಯ ಮಾಧ್ಯಮ. ದುಡ್ಡು ಮಾಡಲು ಜೀವನ ನಡೆಸಲು ಒಂದು ವೃತ್ತಿ ಎಂದು ಅಂದುಕೊಂಡರೆ ಗೊಂದಲವಿಲ್ಲ.

ಆದರೆ, ಸಾಮಾನ್ಯ ಜನರು ಹಾಗೆ ಅಂದುಕೊಂಡಿಲ್ಲ ಎನ್ನುವುದು ಸತ್ಯ. ಸಿನಿಮಾದ ನಾಯಕ ಅವರಿಗೆ ಆದರ್ಶ… ವಿಲನ್ ಇಷ್ಟವಾದರೆ ಅವನೇ ಆದರ್ಶ. ನಾಯಕಿ ಬಿಚ್ಚುಡುಗೆ ಹಾಕಿಕೊಂಡು ನರ್ತಿಸಿದರೆ… ಅವಳ ಮೈಮುಟ್ಟಬಹುದು. ಅವಳಷ್ಟೇ ಅಲ್ಲ.. ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳ ಮೈ ಕೂಡ ಮುಟ್ಟಬಹುದು. ಅವಳು ಬೇಡ ಅಂದರೆ ಅದು ಬೇಕು ಎನ್ನುವ ಸಂಕೇತ. ಅವಳು ಕೈ ಎತ್ತಿ ಹೊಡೆದರೆ, ಅವಳನ್ನು ದೈಹಿಕ ಸಾಮರ್ಥ್ಯದಿಂದ ಮಣಿಸಬೇಕು. ಚಿಕ್ಕ, ಮೈಕಾಣುವ ಬಟ್ಟೆ ಹಾಕಿಕೊಂಡಿದ್ದರೆ ಅವಳನ್ನು ರೇಪ್ ಮಾಡಬಹುದು. ತುಟಿಗೆ ಮುತ್ತು ಕೊಟ್ಟರೆ (ಬಲವಂತವಾಗಿಯಾದರೂ ಸರಿ) ಅವಳು ಕರಗಿ ದ್ವೇಷವಿದ್ದರೆ ಬಿಟ್ಟು, ಪ್ರೀತಿಸುತ್ತಾಳೆ… ಕೆಟ್ಟ ಕೊಳಕು ಮಾತಿಗೆ ನಾಯಕಿ ನಾಚಿದರೆ, ನಕ್ಕರೆ… ನಿಜ ಜೀವನದಲ್ಲಿಯೂ ಹೆಣ್ಣು ಮಕ್ಕಳ ಮುಂದೆ ಹಾಗೆ ಮಾತನಾಡಬಹುದು… ಕಲಿಕೆ ಎಷ್ಟೊಂದಿದೆ! ಕಲಿಯುತ್ತಿರುವ ಹದಿಹರೆಯದ ಮಕ್ಕಳು ನಮ್ಮ ಸುತ್ತಾ ಇದ್ದಾರೆ… ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಹೇಡಿತನ, ಪರಿಣಾಮದತ್ತ ಗಮನ ಹರಿಸದೆ ಕ್ರಿಯೆ ಮಾಡಿದರೆ, ಹೊತ್ತ ಬಸಿರಿನ ಜವಾಬ್ದಾರಿ ಹೊರುವವರು ಯಾರು? ಹೆರಿಗೆ ಆಗಿಯೇ ಆಗುತ್ತದೆ.

Leave a Reply