ಕಾವೇರಿ ಕುಡಿಯಲಷ್ಟೇ, ಶಿಖಾ ಸೇರಿದಂತೆ ಅಧಿಕಾರಿಗಳ ವರ್ಗಾವಣೆ, ಬಿಪಿಎಲ್ ಕಾರ್ಡ್ ಸಿಗೋದು ಕಷ್ಟ, ಪ್ರಿಕ್ವಾರ್ಟರ್ ಪ್ರವೇಶಿಸಿದ ಬೊಂಬೈಲಾ ದೇವಿ

ಆರ್ಕ್ ಬಿಷಪ್ ಬರ್ನಾಡ್ ಮೊರಾಸ್ ತಮ್ಮ ಸ್ಥಾನ ತ್ಯಜಿಸಬೇಕು ಎಂದು ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತ ಕನ್ನಡ ಸಂಘ ಬೆಂಗಳೂರಿನ ಮೌರ್ಯವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಕನ್ನಡಿಗ ಕ್ರೈಸ್ತರಿಗೆ ಬಿಷಪ್ ವಿರೋಧಿಯಾಗಿದ್ದಾರೆ ಎಂಬುದು ಇವರ ವಿರೋಧಕ್ಕೆ ಕಾರಣ.

ಡಿಜಿಟಲ್ ಕನ್ನಡ ಟೀಮ್:

ಕುಡಿಯಲಷ್ಟೇ ಕಾವೇರಿ ನೀರು, ಕೃಷಿಗಿಲ್ಲ

ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಸುವುದು ಹಾಗೂ ಈ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಯಲು ನಿಷೇಧ ಹೇರಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಹೀಗಾಗಿ ಸಂಬಂಧಪಟ್ಟ ಜಿಲ್ಲಾಡಳಿತ ಅನಗತ್ಯವಾಗಿ ಕೊಳವೆ ಬಾವಿ ತೊಡುವುದನ್ನು ತಡೆಯುವಂತೆ ಸರ್ಕಾರ ಸೂಚಿಸಿದೆ. ಈ ಬಾರಿ ಜಲಾನಯನ ಪ್ರದೇಶದಲ್ಲಿ ಶೇ 50 ರಷ್ಟು ಮಳೆ ಕೊರತೆಯಿಂದ ಜಲಾಶಯದಲ್ಲಿ ಶೇ 50 ರಷ್ಟು ನೀರು ತುಂಬಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಭತ್ತ ಸೇರಿದಂತೆ ಯಾವುದೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಮುಂದೆ ಮಳೆ ಆಧರಿಸಿ, ಪರ್ಯಾಯ ಬೆಳೆ ಬೆಳೆಯಲು ಸಿದ್ಧರಾಗಿ ಎಂಬುದು ಸರ್ಕಾರದ ಮನವಿ.

ಮೈಸೂರು ಡಿಸಿ ಶಿಖಾ ವರ್ಗಾವಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮರಿಗೌಡರನ್ನು ಜೈಲಿಗೆ ಕಳುಹಿಸಿದ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ಶಿಖಾ ಅವರನ್ನು ನೇಮಕ ಮಾಡುವ ಮೂಲಕ ವರ್ಗಾವಣೆ ಮಾಡಲಾಗಿದೆ. ಶಿಖಾ ಅವರ ಸ್ಥಾನಕ್ಕೆ ಡಿ.ರಣದೀಪ್ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಈ ಬಾರಿ ಶಿಖಾ ಅವರು ಒಳಗೊಂಡಂತೆ ಒಟ್ಟು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ ರಾಜ್ಯ ಸರ್ಕಾರ. ಈ ಸಂದರ್ಭದಲ್ಲಿ ಶಿಖಾ ಅವರ ಪತಿ ಮಂಡ್ಯ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ ಅವರನ್ನು ಆಹಾರ ನಿಗಮ ಪೂರೈಕೆಯ ಆಯುಕ್ತರನ್ನಾಗಿ ವರ್ಗಾಯಿಸಿದ್ದು, ಇವರ ಸ್ಥಾನಕ್ಕೆ ಜೀಯಾವುಲ್ಲಾ ನೇಮಕಗೊಂಡಿದ್ದಾರೆ.

ಸ್ವತಂತ್ರ ದಿನದಂದು 320 ಖೈದಿಗಳಿಗೆ ಸ್ವಾತಂತ್ರ

ಮರದಂಡನೆ, ಜೀವಾವಧಿ ಶಿಕ್ಷೆಗೆ ಒಳಪಟ್ಟು ಸುದೀರ್ಘ ಜೈಲು ವಾಸ ಅನುಭವಿಸುತ್ತಿರುವ 320 ಪುರುಷ ಮತ್ತು ಮಹಿಳಾ ಖೈದಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಮಾರ್ಗಸೂಚಿ ಅನ್ವಯ 14 ವರ್ಷ ಜೈಲುವಾಸ ಅನುಭವಿಸಿರುವ ಗಂಡಸರು, ಹಾಗೂ ಹತ್ತು ವರ್ಷ ಜೈಲು ವಾಸ ಅನುಭವಿಸಿರುವ ಮಹಿಳಾ ಖೈದಿಗಳನ್ನು ತಕ್ಷಣವೇ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಪೈಕಿ ಸನ್ನಡತೆ ಆಧಾರದ ಮೇಲೆ 272 ಗಂಡಸರು ಹಾಗೂ 48 ಹೆಂಗಸರು ಜೈಲಿನಿಂದ ಬಿಡುಗಡೆ ಪಡೆಯಲಿದ್ದಾರೆ.

ಬಿಪಿಎಲ್ ಕಾರ್ಡ್ ಪಡೆಯುವ ಕ್ರಮ ಬಿಗಿ ಮಾಡಿದ ಸರ್ಕಾರ

ಅನ್ನಭಾಗ್ಯ ಸೇರಿದಂತೆ ಸರ್ಕಾರದ ಹಲವು ಯೋಜನೆಗಳನ್ನು ಪಡೆಯಲು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೆರವಾಗುವ ಬಿಪಿಎಲ್ ಕಾರ್ಡ್ ಅನ್ನು ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಬಿಗು ಮಾಡಿದೆ. ನಾಲ್ಕು ಮಾನದಂಡಗಳ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲು ನಿರ್ಧರಿಸಿದ್ದು, ಆ ಮಾನದಂಡಗಳು ಹೀಗಿವೆ:

  • ಸರ್ಕಾರಿ, ಸರ್ಕಾರಿ ಅನುದಾನಿತ ಕಛೇರಿಗಳಲ್ಲಿ ವೇತನ ಪಡೆಯುವವರು, ಸರ್ಕಾರಿ ಪ್ರಾಯೋಜಿತ ನಿಗಮ, ಮಂಡಳಿಗಳಲ್ಲಿ ಕೆಲಸ ಮಾಡುವವರನ್ನು ಬಿಪಿಎಲ್ ಕಾರ್ಡಗೆ ಪರಿಗಣಿಸುವಂತಿಲ್ಲ.
  • ಮೂರು ಹೆಕ್ಟೇರ್ ನಷ್ಟು ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ.
  • ನಗರ ಪ್ರದೇಶಗಳಲ್ಲಿ ಹತ್ತು ಚದರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹನ್ನೆರಡು ಚದರದ ಸ್ವಂತ ಮನೆಗಳನ್ನು ಹೊಂದಿದವರಿಗೆ ಬಿಪಿಎಲ್ ಕಾರ್ಡು ಸಿಗುವುದಿಲ್ಲ.
  • ಅದೇ ರೀತಿ ತಿಂಗಳಿಗೆ 150 ಯೂನಿಟ್‍ಗಳಿಗಿಂತ ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆ ಮಾಡುವವರಿಗೆ ಬಿಪಿಎಲ್ ಕಾರ್ಡು ನೀಡುವುದಿಲ್ಲ.

ಪ್ರೀಕ್ವಾರ್ಟರ್ ಪ್ರವೇಶಿಸಿದ ಬೊಂಬೈಲಾ ದೇವಿ

ಭಾರತದ ಮಹಿಳಾ ಹಿರಿಯ ಆರ್ಚರಿಪಟು ಬೊಂಬೈಲಾ ದೇವಿ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಬುಧವಾರ ಸಂಜೆ ನಡೆದ ಅಂತಿಮ 32ರ ಘಟ್ಟದ ಪಂದ್ಯದಲ್ಲಿ ಬೊಂಬೈಲಾ ದೇವಿ ತಮ್ಮ ಪ್ರತಿಸ್ಪರ್ಧಿ ಚೈನೀಸ್ ಥೈಪೇನ ಲಿನ್ ಶಿಹ್ ಚಿಯಾ ವಿರುದ್ಧ 6-2 ಅಂಕಗಳ ಅಂತರದಲ್ಲಿ ಗೆದ್ದರು. ಅಂತಿಮ 16ರ ಘಟ್ಟದ ಪಂದ್ಯ ಗುರುವಾರ ಸಂಜೆ 5.55ಕ್ಕೆ ಆರಂಭವಾಗಲಿದೆ.

ಬಿಬಿಎಂಪಿಯ ಅಕ್ರಮ ತೆರವು ಕಾರ್ಯ ಮುಂದುವರಿದಿದೆ. ದೊಡ್ಡ ಬೊಮ್ಮಸಂದ್ರದಲ್ಲಿ ನಡೆದ ತೆರವು ಕಾರ್ಯದ ದೃಶ್ಯ

BBMP Demolition drive at Doddabomasandra in Bengaluru on Wednesd

Leave a Reply