ಸ್ಥಳೀಯರೊಂದಿಗೆ ಸೇರಿ ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸಲು ಬಂದೆನೆಂದ ಉಗ್ರ, ಇಷ್ಟಾದರೂ ಪ್ರತಿಪಕ್ಷಗಳಿಗೆ ಅಪರಾಧಿಯಾಗಿ ಕಾಣುತ್ತಿರುವುದು ಕೇಂದ್ರ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್:

‘ಸ್ಥಳೀಯರೊಂದಿಗೆ ಬೆರೆತು ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸುವುದಕ್ಕಾಗಿಯೇ ಬಂದೆ. ಪಾಕಿಸ್ತಾನದ ಲಷ್ಕರೆ ತಯ್ಬಾ ಸಂಘಟನೆಯಿಂದ ತರಬೇತು ಪಡೆದುಕೊಂಡು ಭಾರತ ಪ್ರವೇಶಿಸಿದೆ. ಬುರ್ಹಾನ್ ವಾನಿ ಹತ್ಯೆಯ ನಂತರ ಉದ್ಭವಿಸಿದ್ದ ಪರಿಸ್ಥಿತಿ ಲಾಭ ಪಡೆಯುವುದೇ ಉದ್ದೇಶವಾಗಿತ್ತು…’

ಕಳೆದ ತಿಂಗಳು ಜಮ್ಮು-ಕಾಶ್ಮೀರದಲ್ಲಿ ಬಂಧಿತನಾಗಿದ್ದ ಉಗ್ರ ಬಹಾದ್ದೂರ್ ಅಲಿ ವಿಚಾರಣೆ ವೇಳೆ ದಾಖಲಿಸಿರುವ ವಿಡಿಯೋ ತಪ್ಪೊಪ್ಪಿಗೆ ಹೇಳಿಕೆಯ ಸಾರವಿದು. ಈ ತಪ್ಪೊಪ್ಪಿಗೆಯನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಾರಿದ ‘ನ್ಯಾಷನಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ’, ಕಾಶ್ಮೀರದ ಪ್ರಕ್ಷುಬ್ಧ ವಾತಾವರಣದಲ್ಲಿ ಪಾಕಿಸ್ತಾನ ಅದಾಗಲೇ ನುಸುಳಿಕೊಂಡಿರುವುದನ್ನು ದೃಢಪಡಿಸಿದೆ. ಜುಲೈ 25ರಂದು ಬಂಧಿತನಾದ ಈತನ ಬಳಿ ಎ. ಕೆ. 47 ರೈಫಲ್, ಗ್ರೆನೆಡ್ ಮತ್ತು ಗ್ರೆನೆಡ್ ಲಾಂಚರ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಹೀಗೆ ಕಾಶ್ಮೀರದ ಪ್ರತಿಭಟನೆಯಲ್ಲಿ ಉಗ್ರರು ಬೆರೆತುಕೊಂಡಿರುವ ಸಂಗತಿ ಇನ್ನಷ್ಟು- ಮತ್ತಷ್ಟು ಸ್ಪಷ್ಟವಾಗುತ್ತಿದ್ದರೆ, ಸಂಸತ್ತಿನಲ್ಲಿ ಮಾತ್ರ ಪ್ರತಿಪಕ್ಷದವರು ಆಡಳಿತಾರೂಢ ಬಿಜೆಪಿಯನ್ನು ಹಣಿಯುವುದಕ್ಕೆ ಸಿಕ್ಕಿದೆ ಒಂದು ಅವಕಾಶ ಎಂಬಂತೆ ಮಾತಾಡುತ್ತಿದ್ದರು. ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್, ಸಿಪಿಎಂನ ಸೀತಾರಾಂ ಯೆಚೂರಿ ಇವರೆಲ್ಲರ ಧಾಟಿ ಎಂದರೆ- ‘ಕಾಶ್ಮೀರಿಗಳ ಹೃದಯ ಬೆಸೆಯುವ ಕೆಲಸ ಕೇಂದ್ರದಿಂದಾಗಬೇಕು..’

ಕಲ್ಲು ಹಿಡಿದು ನಿಂತವರ ಎದುರು ಹೋಗಿ ಯಾವ ಹೃದಯ ಕವಿತೆ ಹೇಳಲು ಸಾಧ್ಯ? ಕಾಶ್ಮೀರಿ ಯುವಕರು ಹಿಂಸೆ ಬಿಟ್ಟರೆ ತಾನೇ ಮಾತುಕತೆ? ನೀರಿಲ್ಲ, ಉದ್ಯೋಗವಿಲ್ಲ ಎಂಬಿತ್ಯಾದಿ ಕಾರಣಗಳಿಗೆ ಪ್ರತಿಭಟಿಸುತ್ತಿದ್ದರೆ ಅದಕ್ಕೆ ಪರಿಹಾರ ಹೇಳುವ ಕೆಲಸ ಯಾರಾದರೂ ಮಾಡಬಹುದು. ಆದರೆ ದೇಶದ ಸಾರ್ವಭೌಮತ್ವ ತುಂಡರಿಸುವವರ ಹೃದಯಗಳನ್ನು ಅರಳಿಸುವುದು ಸಂಸತ್ತಿನಲ್ಲಿ ಮಾತಾಡಿದಷ್ಟು ಸುಲಭದ್ದೇ? ಅಥವಾ ಈಗ ಶುರುವಾಗಿರುವುದು ಹಿಂದಿನ ಆಡಳಿತಗಳಲ್ಲಿ ಇಲ್ಲದೇ ಇದ್ದ ವಿದ್ಯಮಾನವೇ? ಹಾಗೇನಿಲ್ಲ, ಪ್ರತ್ಯೇಕತಾವಾದಿಗಳ ಅಬ್ಬರ ಆಗಾಗ ತಲೆಎತ್ತುತ್ತಲೇ ಇದೆ. ಹಿಂದಿನ ಕಾಂಗ್ರೆಸ್-ಎನ್ ಸಿ ಆಡಳಿತದಲ್ಲೂ ಗಲಭೆಗಳಾಗಿವೆ. ಹೀಗಿರುವಾಗ ಹೃದಯಗಳನ್ನು ಬೆಸೆಯುವುದು ಎಂಬ ಮಾತಿಗೇನರ್ಥ?

ಉಗ್ರನ ತಪ್ಪೊಪ್ಪಿಗೆ ಮಾತು ಹಾಗಿರಲಿ, ಕಾಶ್ಮೀರದಲ್ಲಿ ಭಾರತದ ವಿರುದ್ಧ ಶಸ್ತ್ರ ಹಿಡಿದವರಿಗೆ- ಕಲ್ಲು ತೂರಾಟಗಾರರಿಗೆ ತಮ್ಮ ಬೆಂಬಲ ಇದೆ ಅಂತ ಪಾಕಿಸ್ತಾನ ಸರ್ಕಾರ ಹಾಗೂ ಅಲ್ಲಿನ ಉಗ್ರ ಸಂಘಟನೆಗಳು ಬಹಿರಂಗವಾಗಿಯೇ ಹೇಳಿವೆ.

ಹೀಗಿರುವಾಗ ನಮ್ಮ ಸಂಸತ್ತು ಮಾತಾಡಬೇಕಿರುವ ಧಾಟಿ ಯಾವುದು? ‘ಕಾಶ್ಮೀರಿ ಯುವಕರೇ ಕಲ್ಲು ತೂರಾಟ ನಿಲ್ಲಿಸಿ. ಶಾಂತಿಯಿಂದ ಬದುಕುವುದಕ್ಕೆ ಏನು ಬೇಕೋ ಅದನ್ನು ಕೊಡುವುದಕ್ಕೆ ಭಾರತ ಸರ್ಕಾರ ಸಿದ್ಧವಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾದ್ದರಿಂದ ಮತ್ಯಾವ ಚೌಕಾಶಿಗೂ ದಾರಿಯೇ ಇಲ್ಲ. ಇನ್ನೂ ಹಿಂಸಾಗ್ರಸ್ತರಾಗಿದ್ದೀರೆಂದರೆ ಪಾಕಿಸ್ತಾನಿ ಪ್ರೇರಿತ ಉಗ್ರವಾದದೊಂದಿಗೆ ಕೈಜೋಡಿಸಿದ್ದೀರೆಂದು ಅರ್ಥ..’

ಕಾಶ್ಮೀರವನ್ನು ಕಣ್ಣೆದುರೇ ಕಸಿಯಲು ಹೊರಟಿರುವ ಪಾಕಿಸ್ತಾನದ ಚಿತ್ರಣ ಮಕ್ಕಳಿಗೂ ಅರ್ಥವಾಗುತ್ತಿರುವಾಗ, ಪ್ರತಿಪಕ್ಷದಲ್ಲಿ ಕುಳಿತಿರುವ ಒಂದೇ ಕಾರಣಕ್ಕೆ ‘ಕಾಶ್ಮೀರಿಗಳ ಹೃದಯ ಬೆಸೆಯಬೇಕು, ಅವರನ್ನು ಪ್ರೀತಿಸಲು ಕಲಿಯಬೇಕು. ಇವರ ಮೇಲೆ ಪೆಲ್ಲೆಟ್ ಗನ್ ಉಪಯೋಗಿಸಬಾರದು’ ಅಂತ ಕೇಂದ್ರ ಸರ್ಕಾರಕ್ಕೆ ಹಾಗೂ ಪರೋಕ್ಷವಾಗಿ ಇತರ ಭಾರತೀಯರಿಗೆ ಉಪದೇಶಿಸುತ್ತಿರುವ ಇವರ ನಡೆ ಅಣಕವಲ್ಲದೇ ಇನ್ನೇನು?

Leave a Reply