ರಾಜ್ಯಸಭೆಯಲ್ಲಿ ಚರ್ಚೆಯಾದ ಕಾಶ್ಮೀರ, ಪರಿಹಾರ ಯಾರಲ್ಲಿರದಿದ್ದರೂ ಪ್ರಧಾನಿ ಮೇಲೊಂದಿಷ್ಟು ಪ್ರಹಾರ

ಕಾಶ್ಮೀರದಲ್ಲಿ ಮುಂದುವರಿದ ಕರ್ಫ್ಯೂ

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆಯಲ್ಲಿ ಕಾಶ್ಮೀರದ ಉದ್ವಿಗ್ನ ಸ್ಥಿತಿಯ ಚರ್ಚೆಯಾಯಿತು. ಕಾಶ್ಮೀರಕ್ಕೆ ಸರ್ವಪಕ್ಷಗಳ ನಿಯೋಗ ಹೋಗಿಬರಬೇಕು, ಅಲ್ಲಿನ ಜನರ ಹೃದಯಗಳನ್ನು ಗೆಲ್ಲಬೇಕು… ಇಂಥ ಪ್ರಸ್ತಾಪಗಳನ್ನು ಬಿಟ್ಟರೆ ಹಿಂಸಾಚಾರ ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ದಿಷ್ಟವಾಗಿ ಅನುಸರಿಸಬೇಕಿರುವ ಯಾವ ಕ್ರಮದ ಕುರಿತೂ ಸಲಹೆಗಳು ಬರಲಿಲ್ಲ. ಸರ್ದಾರ ಪಟೇಲರ ಮುತ್ಸದ್ಧಿತನ, ವಾಜಪೇಯಿ ಅವರ ದೊಡ್ಡತನ ಇವೆಲ್ಲವೂ ಪ್ರತಿಪಕ್ಷ ಸಮೂಹದ ಗುಲಾಂ ನಬಿ ಆಜಾದ್, ಸೀತಾರಾಂ ಯೆಚೂರಿ ಅವರಿಂದ ಪ್ರಶಂಸೆಗೊಳಗಾದವು. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದಕ್ಕಾಗಿ ವಾಜಪೇಯಿ ಹೊಗಳಿಕೆಯಾಯಿತು ಅಷ್ಟೆ.

ಪ್ರಮುಖರ ಮಾತುಗಳನ್ನು ವರದಿಯ ಹೊರತಾದ ಟಿಪ್ಪಣಿಗಳೊಂದಿಗೆ ಓದಿಕೊಂಡರೆ ಕೆಲವು ಕೌತುಕಗಳು ಎದುರಾಗುತ್ತವೆ.

ಗುಲಾಂ ನಬಿ ಆಜಾದ್ (ಕಾಂಗ್ರೆಸ್)

‘ಪ್ರಧಾನಿಗೆ ಕಾಶ್ಮೀರ ಪರಿಸ್ಥಿತಿ ಕುರಿತು ಸಂಸತ್ತಿನಲ್ಲಿ ಮಾತನಾಡಬೇಕು ಎಂದೇ ಅನಿಸಿಲ್ಲ. ಸಂಸತ್ತಿನ ಸನಿಹದ ಕಚೇರಿಗೆ ಪ್ರಧಾನಿ ದಿನವೂ ಬರುತ್ತಾರೆ. ಆದರೆ ಸದನ ಕಲಾಪದಲ್ಲಿ ಆಸಕ್ತಿ ಇಲ್ಲ. ಕಾಶ್ಮೀರದ ಪರಿಸ್ಥಿತಿ ಬಗ್ಗೆ ನಾವು ನಾಲ್ಕನೇ ಬಾರಿಗೆ ಚರ್ಚೆ ಮಾಡುತ್ತಿದ್ದೇವೆ. ಆದರೂ ಸದನದಲ್ಲಿ ಉತ್ತರಿಸುವ ಬದಲು ಪ್ರಧಾನಿ ಅವರು ಮಧ್ಯಪ್ರದೇಶದ ಸಮಾವೇಶದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅವರು ಸಂಸತ್ತಿನ ಮೇಲೆ ಇಟ್ಟಿರುವ ಗೌರವ ಇದರಿಂದ ಗೊತ್ತಾಗುತ್ತದೆ. ಆಫ್ರಿಕಾದಲ್ಲಿ ಏನೇ ಆದರೂ ತಕ್ಷಣ ಟ್ವಿಟರ್ ಮೂಲಕ ಪ್ರತಿಕ್ರಿಯಿಸೋ ಪ್ರಧಾನ ಮಂತ್ರಿಯವರು ಭಾರತದ ಪ್ರಮುಖ ಭಾಗ ಹೊತ್ತಿ ಉರಿಯುವಾಗ ಮೌನವಾಗಿರುತ್ತಾರೆ.’

 ‘ಉಗ್ರರಿಗೆ ಧರ್ಮವಿಲ್ಲ. ಹೀಗಾಗಿ ಮುಸಲ್ಮಾನರನ್ನೂ ಗುರಿಯಾಗಿಸುತ್ತಿದ್ದಾರೆ. ಕಾಶ್ಮೀರ ಜಾತ್ಯತೀತವಾದುದು.ಅಲ್ಲಿನ ಕಾನೂನು ಸುವ್ಯವಸ್ಥೆ ಕೇವಲ ಅಲ್ಲಿನ ಪೊಲೀಸರ ಜವಾಬ್ದಾರಿಯಲ್ಲ. ಅದು ಪ್ಯಾರಾ ಮಿಲಿಟರಿ ಪಡೆಗೂ ಅನ್ವಯಿಸುತ್ತದೆ. ಹೀಗಾಗಿ ಮೆಹಬೂಬ್ ಮುಫ್ತಿ ಅವರೇ ಏಕಾಂಗಿಯಾಗಿ ಸಮಸ್ಯೆ ಬಗೆಹರಿಸಬೇಕೆಂದರೆ, ಅದು ಸಾಧ್ಯವಾಗುವುದಿಲ್ಲ. ಜಮ್ಮು-ಕಾಶ್ಮೀರವು ಭಾರತದ ಭಾಗ ಎನ್ನೋದು ಕೇವಲ ಕಾಗದದ ದಾಖಲೆಗೆ ಮಾತ್ರ ಸೀಮಿತವಾಗಬಾರದು. ಮಾನಸಿಕವಾಗಿ ಕಾಶ್ಮೀರದ ಜತೆ ಸಂಪರ್ಕ ಹೊಂದಿರಬೇಕು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಶ್ಮೀರ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಗಳಾಗಿತ್ತು. ಸಂಸತ್ತಿನಲ್ಲಿ ಅಧಿವೇಶನ ನಡೆಯುವಾಗ ಕಾಶ್ಮೀರ ಜನರ ನೋವಿಗೆ ಸ್ಪಂದಿಸಿ, ಅವರು ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಳ್ಳುವುದು ಮುಖ್ಯ. ಸರ್ಕಾರ ಸರ್ವ ಪಕ್ಷ ಸಭೆ ಕರೆದು, ಎಲ್ಲ ಪಕ್ಷದ ನಾಯಕರ ಸಮಿತಿಯನ್ನು ಕಾಶ್ಮೀರಕ್ಕೆ ಕಳುಹಿಸಬೇಕು.’

ಟಿಪ್ಪಣಿ: ಕಲ್ಲು ತೂರುವುದನ್ನು ಬಿಟ್ಟು ಕೆಲಸ ಹಿಡಿದು ಅಭಿವೃದ್ಧಿಗಾಥೆಯಲ್ಲಿ ಭಾಗವಾಗಿ ಎಂಬುದು ಕಾಶ್ಮೀರಿಗರಿಗೆ ಪ್ರಧಾನಿ ಕೊಟ್ಟ ಕರೆ. ಸಂಸತ್ತಿನಲ್ಲಿ ಮಾತನಾಡಲಿ ಎಂಬ ನಬಿಯವರ ಒತ್ತಾಸೆ ಆಕ್ಷೇಪಾರ್ಹವೇನಲ್ಲವಾದರೂ ಪ್ರಧಾನಿ ಮಧ್ಯಪ್ರದೇಶದಿಂದ ಮಾತಾಡಿದರೂ, ದೆಹಲಿಯಿಂದ ಮಾತನಾಡಿದರೂ ಪರಿಹಾರವಿರುವುದು ಅಷ್ಟೇ ಅಲ್ಲವೇ? ಉಗ್ರರು, ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸಬೇಕೇನು? ಇನ್ನು, ಯುಪಿಎ ಅವಧಿಯಲ್ಲಿ ಕಾಶ್ಮೀರಿಗರಲ್ಲಿ ವಿಶ್ವಾಸ ವೃದ್ಧಿಸಿದ ಕತೆ ಗೊತ್ತಿರುವಂಥದ್ದೇ. ಅಮರನಾಥ ಯಾತ್ರೆ ವೇಳೆಯಲ್ಲಿ ಹಿಂದು ಯಾತ್ರಿಗಳಿಗೆ ತಾತ್ಕಾಲಿಕ ಟೆಂಟ್ ಕಟ್ಟಿಕೊಟ್ಟಿದ್ದನ್ನೂ ಕಾಶ್ಮೀರಿಗಳು ವಿರೋಧಿಸಿದರು. ಮುಖ್ಯಮಂತ್ರಿಯಾಗಿದ್ದ ಗುಲಾಂ ನಬಿ ಕಾಶ್ಮೀರಿಗರನ್ನು ಪುಸಲಾಯಿಸಲು ಈ ಸೌಲಭ್ಯವನ್ನೇ ಹಿಂದೆ ತೆಗೆದುಕೊಂಡಾಗ, ಜಮ್ಮುವಿನಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಜಮ್ಮು ಹಾಗೂ ಇತರ ಭಾಗದ ಜನರಿಗೆ ನೋವು ತಂದು ಕಾಶ್ಮೀರಿಗಳು ಹೇಳಿದ್ದಕ್ಕೆಲ್ಲ ಗೋಣಾಡಿಸುವುದೇ ಗುಲಾ ನಬಿ ಅವರ ವಿಶ್ವಾಸವೃದ್ಧಿ ಕಾರ್ಯಕ್ರಮವೇ?

ಸೀತಾರಾಂ ಯೆಚೂರಿ (ಸಿಪಿಎಂ)

ಈ ಸರ್ಕಾರ ವಾಜಪೇಯಿ ಅವರ ಧೋರಣೆಯನ್ನು ಮುಂದುವರಿಸುತ್ತಿಲ್ಲ. 1990ರಲ್ಲಿ ವಾಜಪೇಯಿ ಘೋಷಿಸಿದ್ದ ಕದನ ವಿರಾಮವು ರಮ್ಜಾನ್ ಶಾಂತಿ ಎಂದೇ ಹೆಸರಾಗಿತ್ತು. 2004ರಲ್ಲಿ ಆಡ್ವಾಣಿಯವರು ಹಿಜ್ಬುಲ್ ಮತ್ತು ಪ್ರತ್ಯೇಕತಾವಾದಿಗಳನ್ನು ದುಂಡುಮೇಜಿನ ಮಾತುಕತೆಗೆ ಕರೆದಿದ್ದರು. ಈಗ ಇಂಥ ರಾಜಕೀಯ ಪ್ರಕ್ರಿಯೆಗೆ ಅಡ್ಡಿ ಏನಿದೆ? ಪೆಲ್ಲೆಟ್ ಗನ್ನುಗಳಿಗೆ ಅವಕಾಶವಿರಬಾರದು. ಕಾಶ್ಮೀರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವಿರುವುದು ಸ್ಪಷ್ಟ. ನಮ್ಮ ಆಂತರಿಕ ವಿಷಯಗಳಲ್ಲೇಕೆ ಮೂಗು ತೂರಿಸುವಿರಿ ಎಂದು ಸ್ಪಷ್ಟವಾಗಿ ಹೇಳಬೇಕು. ಆದರೆ ನಮ್ಮ ಪ್ರಧಾನಿ ಅಲ್ಲಿಗೆ ಹೋಗಿ ಬರ್ತ್ ಡೆ ವಿಶ್ ಮಾಡಿಬಂದು, ನಂತರ ಮಾತುಕತೆ ಮುರಿದುಕೊಂಡು ಸೂಕ್ತ ದಿಕ್ಕೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ.

ಟಿಪ್ಪಣಿ: ವಾಜಪೇಯಿ- ಆಡ್ವಾಣಿ ಮಾಡಿದ ಪ್ರಯತ್ನಗಳಿಗೆ ಫಲ ಸಿಕ್ಕಿತೇ? ಉಗ್ರರು ಮತ್ತು ಪ್ರತ್ಯೇಕತಾವಾದಿಗಳ ಜತೆ ಜನ್ಮೇಪಿ ಮಾತುಕತೆ ಮಾಡಿಕೊಂಡಿರಬೇಕು ಎಂಬ ಫಲಿತಾಂಶ ಬರದ ಕ್ರಮವನ್ನೇ ಅನುಸರಿಸುವ ಸಲಹೆ ‘ಫೇಲ್ಡ್ ಐಡಿಯಾ’ ಗಳಿಗೇ ಜೋತು ಬೀಳುವ ಕಮ್ಯುನಿಸ್ಟರಿಂದ ಬಂದಿದ್ದು ನಿರೀಕ್ಷಿತವೇ.

ಶರದ್ ಯಾದವ್

ನಾವು ಕಾಶ್ಮೀರಿಗಳ ಹೃದಯ ಗೆಲ್ಲಬೇಕು. ಸರ್ದಾರ್ ಪಟೇಲರ ಮಾರ್ಗವಾಗಿತ್ತದು. ಅವರಿಗೆ ತಳಸ್ಪರ್ಶಿ ಹಿಡಿತವಿತ್ತು. ಪೆಲ್ಲೆಟ್ ಗನ್ನಿಗೆ ಪರ್ಯಾಯ ಬೇಕೆ ಬೇಕು.

ಟಿಪ್ಪಣಿ: ಸರ್ದಾರ್ ಪಟೇಲರು ಹೃದಯಗಳನ್ನು ಬೆಸೆಯುವ ಮಾತಾಡುತ್ತ ಕುಳಿತಿದ್ದರೆ ಅಂದಿನ ನಿಜಾಮನ ಹೈದರಾಬಾದೂ ಕಾಶ್ಮೀರವಾಗುತ್ತಿತ್ತು. ಸಾರ್ವಭೌಮತ್ವಕ್ಕೆ ಸವಾಲೆದುರಾದಾಗ ಸೇನಾ ಕಾರ್ಯಾಚರಣೆಗೆ ಮುಂದಾಗಿದ್ದರಿಂದಲೇ ಒಕ್ಕೂಟ ಉಳಿದಿದ್ದು. ಶರದ್ ಯಾದವರು ಅದ್ಯಾವ ಶಾಲೆಯಲ್ಲಿ ಇತಿಹಾಸ ಓದಿಬಿಟ್ಟರೋ ಗೊತ್ತಿಲ್ಲ..

ರಾಂಗೋಪಾಲ್ ಯಾದವ್ (ಸಮಾಜವಾದಿ)

ಒಬ್ಬ ಉಗ್ರ ಸತ್ತಿದ್ದಕ್ಕೆ ಜನರಿಂದ ಈ ರೀತಿ ಪ್ರತಿಕ್ರಿಯೆಯಾ? ಯಾವ ಉತ್ತೇಜಕ ಕ್ರಮಗಳನ್ನೂ ಒಪ್ಪಿಕೊಳ್ಳದಷ್ಟರಮಟ್ಟಿಗೆ ಪಾಕಿಸ್ತಾನವು ಕಾಶ್ಮೀರಿಗರಿಗೆ ವಿಷ ತುಂಬಿದೆ. ಈ ವಿಷದ ಮೂಲ ಹುಡುಕಬೇಕಾಗುತ್ತದೆ. ನಾವೆಲ್ಲ ಜಮ್ಮು-ಕಾಶ್ಮೀರದ ಬಗ್ಗೆ ಮಾತಾಡುತ್ತೇವೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಕೇಳುವ ಕೆಲಸವಾಗಬೇಕು. ಸರ್ಕಾರವೇಕೆ ಈ ವಿಷಯದಲ್ಲಿ ಸುಮ್ಮನಿದೆ? ಸರ್ದಾರ ಪಟೇಲರು ಉಳಿದೆಲ್ಲ ಸಂಸ್ಥಾನಗಳನ್ನು ವಿಲೀನಗೊಳಿಸಿದ್ದರು. ಜಮ್ಮು-ಕಾಶ್ಮೀರ ಮಾತ್ರವೇ ನೆಹರು ಕಡೆಗೆ ನೋಡಿತು. ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದು ತಪ್ಪೆಸಗಿದರು ನೆಹರು.

ಟಿಪ್ಪಣಿ: ಪಕ್ಷದ ಗುರುತು ಮೀರಿ ನಿಜ ವಿಷಯ ಮಾತಾಡುವವರು ಪ್ರತಿಪಕ್ಷ ಪಾಳೆಯದಲ್ಲೂ ಇದ್ದಾರೆ ಎಂಬುದೇ ಸಮಾಧಾನ!

Leave a Reply