ಹೀನಾ ನಿರಾಸೆ ಮೂಡಿಸಿದ್ರು, ಆಸೆ ಜೀವಂತ ಇರಿಸಿದ ಅತನು, ಜಯದ ಹಾದಿಗೆ ಮರಳಿತು ಹಾಕಿ ತಂಡ

ಭಾರತದ ಆರ್ಚರಿಪಟು ಅತನು ದಾಸ್…

ಡಿಜಿಟಲ್ ಕನ್ನಡ ಟೀಮ್:

ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲೂ ಭಾರತದ ಶೂಟರ್ ಹೀನಾ ಸಿಧು ವೈಫಲ್ಯ ಮಂಗಳವಾರ ನಡೆದ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ನಿರಾಸೆ ತಂದಿತು. ಆದರೆ, ಈ ನೋವನ್ನು ಮರೆಸಿದ್ದು ಮಾತ್ರ ಹಾಕಿ ಪುರುಷರ ತಂಡ ಹಾಗೂ ಆರ್ಚರಿಪಟು ಅತನು ದಾಸ್ ಅವರ ಭರವಸೆಯ ಪ್ರದರ್ಶನ.

ಸೋಮವಾರವಷ್ಟೇ ಅಭಿನವ್ ಬಿಂದ್ರಾ ಪದಕ ವಂಚಿತವಾಗಿದ್ದು ಅಭಿಮಾನಿಗಳಲ್ಲಿ ನಿರಾಸೆಯಲ್ಲಿ ಮುಳುಗಿಸಿತ್ತು. ಅದರ ಬೆನ್ನಲ್ಲೇ ಮಂಗಳವಾರ ನಡೆದ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತ ಹೀನಾ ಸಿಧು (576 ಅಂಕ) 20ನೇ ಸ್ಥಾನ ಪಡೆದು ಹೋರಾಟ ಅಂತ್ಯಗೊಳಿಸಿದ್ದು ಮತ್ತಷ್ಟು ಬೇಸರ ತರಿಸಿತ್ತು. ಇನ್ನು ರೋಯಿಂಗ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಭಾರತದ ದತ್ತು ಬಬನ್ ಬೊಂಕನಲ್ 6:59.89 ನಿಮಿಷದಲ್ಲಿ ಗುರಿ ತಲುಪಿ 15ನೇ ಸ್ಥಾನ ಪಡೆದರು.

ಇವಿಷ್ಟೂ ಸೋಲಿನ ಕಥೆಯಾದ್ರೆ ಅಭಿಮಾನಿಗಳ ಮನಗಲ್ಲಿ ಜಯ ದಾಖಲಿಸಿ ಮಂದಹಾಸ ಮೂಡಿಸಿದ್ದು ಭಾರತದ ಆರ್ಚರಿಪಟು ಅತನು ದಾಸ್. ಕ್ಯೂಬಾದ ಆಡ್ರಿಯಾನ ಪೆಟನ್ಸ್ ವಿರುದ್ಧ 6-4 ಅಂತರದಲ್ಲಿ ಜಯಿಸಿದ್ರು. ಅದರೊಂದಿಗೆ ಅಂತಿಮ 16ರ ಘಟ್ಟ ಪ್ರವೇಶಿಸಿದ್ರು. ಅತನು ಆ.12ರಂದು ನಡೆಯಲಿರುವ ಪ್ರಿಕ್ವಾರ್ಟರ್ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಲೀ ಸ್ಯೂಂಗ್ ಯುನ್ ವಿರುದ್ಧ ಆಡಲಿದ್ದು, ಪಂದ್ಯ ಸಂಜೆ 5.40ಕ್ಕೆ ಆರಂಭವಾಗಲಿದೆ.

ಅತನು ದಾಸ್ ಜಯದ ನಂತರ ಭಾರತದ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದು ಭಾರತ ಪುರುಷರ ಹಾಕಿ ತಂಡ. ಸೋಮವಾರ ಪ್ರಬಲ ಜರ್ಮನಿ ವಿರುದ್ಧ ಅತ್ಯುತ್ತಮ ಪ್ರದರ್ಶನದ ಹೊರತು ಎದುರಾದ ಕೊನೆ ಕ್ಷಣದ ಸೋಲಿನಿಂದ ಹೊರ ಬಂದ ಆಟಗಾರರು, ಅರ್ಜೆಂಟೀನಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯಿಸಿದರು. ಭಾರತದ ಪರ ಚಿಂಗ್ಲೆಂಸಾನಾ ಸಿಂಗ್ 8ನೇ ಹಾಗೂ ಕೊತಾಜಿತ್ ಸಿಂಗ್ 35ನೇ ನಿಮಿಷದಲ್ಲಿ ಗೋಲು ಬಾರಿಸಿದ್ರೆ, ಅರ್ಜೆಂಟೀನಾ ಪರ ಗೊಂಜಾಲೊ ಪೈಲಟ್ 49ನೇ ನಿಮಿಷದಲ್ಲಿ ಗೋಲು ಗಳಿಸಿದ್ರು. ಇದರೊಂದಿಗೆ ಭಾರತ 2009ರ ನಂತರ ಮೊದಲ ಬಾರಿಗೆ ಅರ್ಜೆಂಟೀನಾ ವಿರುದ್ಧ ಜಯಿಸಿದೆ. ಅಲ್ಲದೆ ಭಾರತ ಬಿ ಗುಂಪಿನಲ್ಲಿ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸುವತ್ತ ಸಾಗಿದೆ. ಭಾರತ ತಮ್ಮ ಮುಂದಿನ ಪಂದ್ಯದಲ್ಲಿ ಪ್ರಬಲ ಹಾಲೆಂಡ್ ವಿರುದ್ಧ ಆಡಲಿದ್ದು ಮಹತ್ವದ ಪಂದ್ಯವಾಗಲಿದೆ. ಈ ಪಂದ್ಯ ಆ.11ರಂದು ಸಂಜೆ 6.30ಕ್ಕೆ ನಡೆಯಲಿದೆ.

ಇನ್ನು ಬೆಳಗಿನ ಜಾವ ನಡೆದ ಪುರುಷರ 75 ಕೆ.ಜಿ ಮಿಡಲ್ ವೇಟ್ ಬಾಕ್ಸಿಂಗ್ ನಲ್ಲಿ ಭಾರತದ ವಿಕಾಸ್ ಕೃಷ್ಣನ್ ಯಾದವ್ ತಮ್ಮ ಪ್ರತಿಸ್ಪರ್ಧಿ ಅಮೆರಿಕದ ಚಾರ್ಲ್ಸ್ ಕೊನ್ವೆಲ್ ವಿರುದ್ಧ 3-0 ಸುತ್ತುಗಳ ಅಂತರದಿಂದ ಗೆದ್ದು, ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದ್ರು. ಅಂತಿಮ 16ರ ಘಟ್ಟದ ಪಂದ್ಯದಲ್ಲಿ ವಿಕಾಸ್ ಕೃಷ್ಣನ್ ತಮ್ಮ ಪ್ರತಿಸ್ಪರ್ಧಿ ಟರ್ಕಿಯ ಒಂಡರ್ ಸಿಪಲ್ ವಿರುದ್ಧ ಸೆಣಸಲಿದ್ದು, ಪಂದ್ಯ ಮಧ್ಯರಾತ್ರಿ 3.45ಕ್ಕೆ ನಡೆಯಲಿದೆ.

ಇನ್ನು ಆರಂಭಿಕ ನಾಲ್ಕು ದಿನಗಳಲ್ಲಿ ಪದಕ ಪಟ್ಟಿಯನ್ನು ನೋಡೊದಾದ್ರೆ, ಅಮೆರಿಕ 24 ಪದಕ (8 ಚಿನ್ನ, 8 ಬೆಳ್ಳಿ, 8 ಕಂಚು) ಗಳೊಂದಿಗೆ ಅಗ್ರಸ್ಥಾನಿಯಾಗಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಇನ್ನು ಚೀನಾ 17 ಪದಕ (8 ಚಿನ್ನ, 3 ಬೆಳ್ಳಿ, 6 ಕಂಚು) ಹಾಗೂ ಆಸ್ಟ್ರೇಲಿಯಾ 9 ಪದಕ (4 ಚಿನ್ನ, 5 ಕಂಚು) ದೊಂದಿಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.

ಬುಧವಾರ ಭಾರತದ ಸ್ಪರ್ಧಿಗಳು ಕಣಕ್ಕಿಳಿಯಲಿರುವ ವಿಭಾಗಗಳ ಪಟ್ಟಿ…

–  ಶೂಟಿಂಗ್ ನಲ್ಲಿ ಜೀತು ಮತ್ತು ಪ್ರಕಾಶ್ ಸ್ಪರ್ಧೆ: ಪುರುಷರ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ಭರವಸೆಯ ಶೂಟರ್ ಜೀತು ರೈ ಮತ್ತು ಕರ್ನಾಟಕದ ಪ್ರಕಾಶ್ ನಂಜಪ್ಪ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ಸಂಜೆ 5.30ಕ್ಕೆ ಆರಂಭವಾಗಲಿದ್ದು, ಪ್ರಶಸ್ತಿ ಸುತ್ತು ರಾತ್ರಿ 8.30ಕ್ಕೆ ಆರಂಭವಾಗಲಿದೆ.

–  ಮಹಿಳಾ ವೈಯಕ್ತಿಯ ಆರ್ಚರಿಯಲ್ಲಿ ಬೊಂಬೈಲಾ ಕಣಕ್ಕೆ: ಭಾರತದ ಹಿರಿಯ ಮಹಿಳಾ ಆರ್ಚರ್ ಬೊಂಬೈಲಾ ದೇವಿ ವೈಯಕ್ತಿಕ ವಿಭಾಗದ ಅಂತಿಮ 64ರ ಸುತ್ತಿನಲ್ಲಿ ಆಸ್ಟ್ರಿಯಾದ ಲಾರೆನ್ಸ್ ಬಲ್ಡೌಫ್ ವಿರುದ್ಧ ಆಡಲಿದ್ದು, ಸಂಜೆ 6.30ಕ್ಕೆ ಆರಂಭವಾಗಲಿದೆ.

–  ಜುಡೋನಲ್ಲಿ ಅವತಾರ್ ಸಿಂಗ್: ಪುರುಷರ 90 ಕೆ.ಜಿ ಜೂಡೋ ಸ್ಪರ್ಧೆಯಲ್ಲಿ ಭಾರತದ ಅವತಾರ್ ಸಿಂಗ್ ಒಲಿಂಪಿಕ್ಸ್ ನಿರಾಶ್ರಿತರ ತಂಡದ ಸದಸ್ಯ ಪೊಪೊಲೆ ಮಿಸೆಂಗಾ ವಿರುದ್ಧ ಅಂತಿಮ 32ರ ಘಟ್ಟದಲ್ಲಿ ಸೆಣಸಲಿದ್ದು, ಪಂದ್ಯ ರಾತ್ರಿ 7.20ಕ್ಕೆ ಆರಂಭವಾಗಲಿದೆ.

–  ಹಾಕಿ ಮಹಿಳೆಯರಿಗೆ ಆಸ್ಟ್ರೇಲಿಯಾ ಸವಾಲು: ಭಾರತ ಹಾಕಿ ತಂಡ ಬಿ ಗುಂಪಿನ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

– ಬಾಕ್ಸಿಂಗ್ ನಲ್ಲಿ ಮನೋಜ್ ಪಂಚ್: ಪುರುಷರ 64 ಕೆ.ಜಿ ಲೈಟ್ ವೇಟ್ ವಿಭಾಗದಲ್ಲಿ ಭಾರತದ ಭರವಸೆಯ ಬಾಕ್ಸರ್ ಮನೋಜ್ ಕುಮಾರ್ ಅಂತಿಮ 32ರ ಸುತ್ತಿನಲ್ಲಿ ಲುಥೆನಿಯಾದ ಎವಾಲ್ಡಾಸ್ ಪೆಟ್ರೊಸ್ಕಾಸ್ ವಿರುದ್ಧ ಸೆಣಸಲಿದ್ದಾರೆ. ಪಂದ್ಯ ಬೆಳಗಿನ ಜಾವ 3.15ಕ್ಕೆ ಆರಂಭ.

ಬೋಪಣ್ಣ-ಮಿರ್ಜಾ ಜೋಡಿ ಕಣಕ್ಕೆ: ಟೆನಿಸ್ ನಲ್ಲಿ ಪುರುಷ ಹಾಗೂ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿಗಳು ಈಗಾಗಲೇ ತಮ್ಮ ಹೋರಾಟ ಅಂತ್ಯಗೊಳಿಸಿದ್ದು, ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೊಪಣ್ಣ ಜೋಡಿ ಇಂದು ಹೋರಾಟ ಆರಂಭಿಸಲಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಈ ಜೋಡಿ ಆಸ್ಟ್ರೇಲಿಯಾದ ಸ್ಟೋಸರ್ ಮತ್ತು ಪೀರ್ಸ್ ಜೋಡಿಯನ್ನುಯನ್ನು ಎದುರಿಸಲಿದೆ. ಪಂದ್ಯ ಮಧ್ಯರಾತ್ರಿ 12ಕ್ಕೆ ಆರಂಭ.

Leave a Reply