ಸುಷ್ಮಾ ಸ್ವರಾಜರ ಭಾರತೀಯ ಸಂವೇದನೆ ನೋಡಿಯಾದರೂ ಎದೆಯೊಳಗಿನ ದ್ವೇಷ ತೊರೆದು ಸಹಿಷ್ಣುಗಳಾದಾರೆಯೇ ತಥಾಕಥಿತ ಸೆಕ್ಯುಲರಿಸ್ಟರು?

ಜುಡಿತ್ ಡಿಸೋಜ ಜತೆ ಸುಷ್ಮಾ ಸ್ವರಾಜ್

ಪ್ರವೀಣ್ ಕುಮಾರ್

ರೈಲಿನಲ್ಲಿ ತೊಂದರೆಯಾದರೆ ದಿಗಿಲುಗೊಳ್ಳಬೇಕಿಲ್ಲ, ರೈಲ್ವೆ ಮಂತ್ರಿ ಸುರೇಶ್ ಪ್ರಭು ಖಾತೆಗೆ ಟ್ವೀಟ್ ಸಂದೇಶ ಕಳುಹಿಸುವುದು ಗೊತ್ತಿದ್ದರೆ ಸಾಕು. ಅಂತೆಯೇ ವಿದೇಶಗಳಲ್ಲಿ ತೊಂದರೆಗಳೆದುರಾದಾಗ, ರಾಯಭಾರ ಕಚೇರಿ ಹುಡುಕಿ ಯಾರಿಗೆ ದೂರು ಕೊಡುವುದೋ, ಎಷ್ಟು ಸಮಯ ಹಿಡಿಯುತ್ತದೋ ಅಂತ ಖಿನ್ನರಾಗಬೇಕಿಲ್ಲ- ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟಿಸಿದರೆ ಭಾರತದ ರಾಜತಾಂತ್ರಿಕ ಬಲವೇ ಸಂತ್ರಸ್ತರ ಬೆನ್ನಿಗೆ ಬಂದಂತೆ..

ಇವ್ಯಾವವೂ ಉತ್ಪ್ರೇಕ್ಷೆ ಅಲ್ಲ. ಇಂಥ ಸಂದರ್ಭಗಳಲ್ಲಿ ಜಾತಿ-ಧರ್ಮ ನೋಡುವ ಯೋಚನೆಯೂ ಯಾರತ್ತಲೂ ಸುಳಿದಿಲ್ಲ. ಆದರೆ ಇವ್ಯಾವುದೂ ಪ್ರಶಂಸಿಸಬೇಕಾದ ವಿಷಯವೇ ಅಲ್ಲ ಎಂಬಂತೆ ತಥಾಕಥಿತ ಸೆಕ್ಯುಲರ್ ಬುದ್ಧಿಜೀವಿಗಣ, ‘ಬಿಜೆಪಿ ಸರ್ಕಾರವು ದಲಿತರನ್ನು- ಅಲ್ಪಸಂಖ್ಯಾತರನ್ನು ಸಮಾನವಾಗಿ ಕಾಣುವ ಗುಣ ತೋರಬೇಕು’ ಎಂದು ಸಹಿಷ್ಣುತೆಯ ಉಪದೇಶ ಕುಟ್ಟುವ ಕೆಲಸವನ್ನೇನೂ ಕಡಿಮೆ ಮಾಡಿಲ್ಲ. ಏಕೆಂದರೆ ಇವರಿಗೆ ಅರ್ಹತೆ ಇರುವ ಕೆಲಸ ಇದೊಂದೇ. ವಾಸ್ತವಗಳಿಗೆ ಕುರುಡಾಗಿ ಉಪದೇಶ ಹೇಳೋದು.

ಆದರೆ..

ಎಲ್ಲವಕ್ಕೂ ಮಿಡಿಯುವ ವಿದೇಶ ಸಚಿವೆ ಸುಷ್ಮಾ ಸ್ವರಾಜರ ಮಾನವೀಯ ಕೆಲಸಗಳಿಂದ ಬಿಜೆಪಿ ತನ್ನ ರಾಜಕೀಯ ಬಂಡವಾಳ ಹೆಚ್ಚಿಸಿಕೊಳ್ಳುವುದಕ್ಕೆ ಸಹಕಾರಿಯೇ? ಅದರ ಸಾಧ್ಯತೆಗಳೇ ಕ್ಷೀಣ. ಹಾಗಿದ್ದೂ ಅವರು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಿಷ್ಣುತೆ, ಎಲ್ಲರನ್ನೂ ಒಳಗೊಳ್ಳುವುದು ಎಂಬ ಹೆಸರಲ್ಲಿ ತಲೆಬುಡವಿಲ್ಲದ ಉಪದೇಶ ಕೊಡುವವರು ಸುಷ್ಮಾ ಕಾರ್ಯಗಳತ್ತ ನೋಡಬೇಕು. ನಂತರದಲ್ಲಿ ತಮ್ಮ ಸಹಿಷ್ಣುತಾ ಪ್ರವಚನವನ್ನು ಕೇಂದ್ರ ಸರ್ಕಾರಕಲ್ಲದೇ, ಅದರಿಂದ ಪ್ರಯೋಜನ ಪಡೆದವರಿಗೆ ಮಾಡಬೇಕು.

ಏಕೆ ಅಂದಿರಾ?

ಮೊನ್ನೆಯಷ್ಟೇ ಫೈಜಾನ್ ಪಟೇಲ್ ಎಂಬಾತ ‘ಹೆಂಡತಿ ಬಿಟ್ಟು ಹನಿಮೂನಿಗೆ ಹೊರಡಬೇಕಾಗಿದೆ ಮೇಡಂ.. ಏನಾರ ಮಾಡಿ’ ಅಂತ ಟ್ವಿಟ್ಟರಿನಲ್ಲಿ ಸುಷ್ಮಾ ಸ್ವರಾಜ್ ಬಳಿ ಹಲ್ಕಿಸಿದ. ಇವನ ಹೆಂಡತಿಯನ್ನು ಯಾವ ಜಿಹಾದಿಗಳೂ ಅಪಹರಣ ಮಾಡಿರಲಿಲ್ಲ. ಆಕೆ ತನ್ನ ಪಾಸ್ಪೋರ್ಟ್ ಕಳೆದುಕೊಂಡಿದ್ದಳಂತೆ. ಹೆಚ್ಚು- ಕಡಿಮೆ ಇದು ಸ್ವಪ್ರಮಾದದ ನಿರ್ಲಕ್ಷಿಸಬಹುದಾದ ಪ್ರಕರಣ. ಆದರೆ ಸಚಿವೆ ಸುಷ್ಮಾ ತಕ್ಷಣ ವಿವರ ತರಿಸಿಕೊಂಡು, ತಾತ್ಕಾಲಿಕವಾಗಿ ಪ್ರಯಾಣದ ಏರ್ಪಾಟಾಗುವುದಕ್ಕೆ ಕ್ರಮ ಕೈಗೊಂಡರು. ಇದೇನು ಸುಮ್ಮನೇ ಆಗಿಬಿಡುವುದಿಲ್ಲ. ಅಧಿಕಾರಿವರ್ಗ ಇದಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ‘ದಂಪತಿಯ ಮಧುಚಂದ್ರ ನೆರವೇರುವುದಕ್ಕೆ ಸಹಕರಿಸಿದ ಸುಷ್ಮಾ’ ಎಂಬುದು ರೋಚಕ ಸಂಗತಿಯಾದ್ದರಿಂದ, ಟ್ವಿಟ್ಟರ್ ನಲ್ಲಿರುವವರು ಸಹಜ ಕುತೂಹಲದಿಂದ ಈ ಪ್ರಕರಣದ ಹಿಂದು-ಮುಂದುಗಳನ್ನು ಕೆದಕಿದರು. ಯಾರೀ ಫೈಜಾನ್ ಪಟೇಲ್ ಎಂಬುದೂ ಈ ಕೌತುಕದ ಭಾಗವೇ ಆಯಿತು. ಆಗ ಈ ಉಪಕೃತ ಫೈಜಾನನ ವಿಕೃತಿ ಎಂಥಾದ್ದು ಅಂತ ಗೊತ್ತಾಯಿತು. ಸರ್ಕಾರ- ಸುಷ್ಮಾ ಇವರೆಲ್ಲರ ಬಗ್ಗೆ ದ್ವೇಷ- ನಂಜುಗಳನ್ನೇ ಉಸಿರಾಡುತ್ತಿದ್ದ ವ್ಯಕ್ತಿ ಈತ. ಬಿಡಿ, ಸುಷ್ಮಾ ಅವರನ್ನಾಗಲೀ, ಮೋದಿ ಸರ್ಕಾರವನ್ನಾಗಲೀ ವಿಷಯಾಧರಿತವಾಗಿ ಟೀಕಿಸುವುದಕ್ಕೆ ಎಲ್ಲರೂ ಸ್ವತಂತ್ರರು. ಆದರೆ ಒಬಾಮಾ ಭೇಟಿ ಸಂದರ್ಭದ ಫೋಟೊ ಇಟ್ಟುಕೊಂಡು ‘ಇಲ್ಲಿ ಸುಷ್ಮಾರ ಕೈ ಎಲ್ಲಿದೆ’ ಅಂತ ಅಣಕವಾಡುವ ಗಟಾರ ಸಂಸ್ಕೃತಿ ಈತನದ್ದು.

sushma1

sushma

ಬಿಡಿ. ಇವೆಲ್ಲ ಸುಷ್ಮಾ ಸ್ವರಾಜ್ ಅವರಿಗೆ ಮುಖ್ಯವಾಗುವುದೂ ಇಲ್ಲ. ಅವರು ಸ್ಕ್ರೀನ್ ಶಾಟ್ ಸಲಹೆಗಾರರನ್ನಿಟ್ಟುಕೊಂಡು ಆಡಳಿತ ನಡೆಸುತ್ತಿಲ್ಲ, ನಡೆಸಲೂಬಾರದು…

ಆದರೆ ಸಹಿಷ್ಣುತೆ- ಗೌರವಗಳೆಲ್ಲ ಒನ್ ವೇ ರಸ್ತೆಗಳಾಗಿಬಿಟ್ಟರೆ ಹೇಗೆ? ಒಂದೊಮ್ಮೆ ಸುಷ್ಮಾ ಅವರು ‘ಹನಿಮೂನ್ ಉತ್ಸಾಹದಲ್ಲಿ ಪಾಸ್ಪೋರ್ಟ್ ಸರಿಯಾಗಿ ಇಟ್ಟುಕೊಳ್ಳದ ನಿನ್ನ ಹೆಂಡತಿ ನಿರ್ಲಕ್ಷ್ಯಕ್ಕೆ ನಾನೇನಯ್ಯ ಮಾಡ್ಲಿ? ಅದೇನು ಪ್ರೊಸೀಜರ್ ಇವೆಯೋ ಅನುಸರಿಸಿ ಹೊಸ ಪಾಸ್ಪೋರ್ಟ್ ಪಡಿ’ ಎಂದಿದ್ದರೆ ಸೆಕ್ಯುಲರ್ ಸಹಿಷ್ಣುಗಳ ಗಣ ಹೇಗೆ ಪ್ರತಿಕ್ರಿಯಿಸುತ್ತಿತ್ತು? ಅರೆ ಮುಸ್ಲಿಂ ನಾಮಧೇಯನಿಗೆ ಸ್ಪಂದಿಸುವ ಹೃದಯವೇ ಸರ್ಕಾರಕ್ಕಿಲ್ಲ ಎಂಬ ಬೊಬ್ಬೆ ಖಾತ್ರಿಯಾಗುತ್ತಿತ್ತು.

ಗಲ್ಫ್ ರಾಷ್ಟ್ರಗಳ ಕೆಲಸಗಾರರಿಗೆ ತೊಂದರೆಯಾಗುತ್ತಿದ್ದರೆ ವಿದೇಶ ಸಚಿವಾಲಯದ ಸಹಾಯಕ ಮಂತ್ರಿ ವಿ. ಕೆ. ಸಿಂಗ್ ಖುದ್ದು ಸೌದಿ ಅರೇಬಿಯಾಕ್ಕೆ ಹೋಗಿ ಮಾತನಾಡುತ್ತಾರೆ. ಸಚಿವೆ ಸ್ವರಾಜ್ ಅನುಕ್ಷಣ ಈ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತ, ಭಾರತೀಯ ಕೆಲಸಗಾರರ ಪರ ನಾವಿದ್ದೇವೆ ಎಂಬ ಅಚಲ ವಿಶ್ವಾಸ ಮೂಡಿಸುತ್ತಾರೆ. ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಭಾರತೀಯ ಮೂಲದವರೂ ಇರುವ ಈ ವಿಭಾಗಕ್ಕೆ ಸ್ಪಂದಿಸೋದರಿಂದ ತಮಗೆ ಮತಗಳು ಬರೋದಕ್ಕೆ ಸಾಧ್ಯವೇ ಅಂತ ಇವರ್ಯಾರೂ ಯೋಚಿಸಲಿಲ್ಲ. ಭಾರತೀಯತೆ ಮಾತ್ರವೇ ಇಲ್ಲಿ ಮುಖ್ಯವಾಯಿತು. ಗೊತ್ತಿರಲಿ, ತೈಲ ಆರ್ಥಿಕತೆಯನ್ನೇ ಅವಲಂಬಿಸಿರುವ ಈ ರಾಷ್ಟ್ರಗಳಲ್ಲಿ ಇಂದಲ್ಲ, ನಾಳೆ ಬಿಕ್ಕಟ್ಟು ಉಲ್ಬಣವಾಗುವಂಥದ್ದೇ. ಹಾಗಾದರೂ ನಿಮಗೆ ಭಾರತವಿದೆ ಎಂದು ಅವರಲ್ಲಿ ಈ ಸರ್ಕಾರ ವಿಶ್ವಾಸ ಮೂಡಿಸಿದೆಯಲ್ಲ… ಸೆಕ್ಯುಲರ್ ಸಹಿಷ್ಣು ಬಳಗಕ್ಕೆ ಇದೇಕೆ ಮೆಚ್ಚುಗೆಯ ವಿಷಯವಾಗುವುದಿಲ್ಲ?

ಅಫಘಾನಿಸ್ತಾನದಲ್ಲಿ ಅಪಹರಣಕ್ಕೆ ಒಳಗಾಗಿದ್ದ ಕ್ರೈಸ್ತ ಮಿಷನರಿ ಕಾರ್ಯಕರ್ತೆ ಜುಡಿತ್ ಅವರನ್ನು ಮುತುವರ್ಜಿಯಿಂದ ಬಿಡಿಸಿ ತಂದಿತು ಭಾರತ ಸರ್ಕಾರ. ಅಧಿಕಾರದಲ್ಲಿರುವವರಿಗೆ ಅನ್ಯಮತ ಅಸಹಿಷ್ಣುತೆ ಇದ್ದಿದ್ದರೆ ಇದು ತಮ್ಮ ಪ್ರಕರಣವಲ್ಲ ಎಂದು ಸುಲಭದಲ್ಲಿ ಕೈಚೆಲ್ಲುತ್ತಿದ್ದರು.

ಇಲ್ಲೂ ಸಹ ಸಹಿಷ್ಣುತೆ- ಆದರಗಳು ಏಕಮುಖವಾಗಿವೆ. ಕ್ರೈಸ್ತ ಸಮುದಾಯದ ಪ್ರಮುಖರು ಮೋದಿ ಸರ್ಕಾರದ ಬಗ್ಗೆ ಎದೆಯಲ್ಲಿ ನಂಜನ್ನೇ ಪೋಷಿಸಿಕೊಂಡಿರುವುದು ಅವರ ಹಲವು ಅಭಿಯಾನಗಳಿಂದ ಸಾಬೀತಾಗಿದೆ. ಸ್ವರಾಜ್ಯ ನಿಯತಕಾಲಿಕದಲ್ಲಿ ಈ ಕ್ರೈಸ್ತ ಕೃತಘ್ನತೆಯ ಮಾನಸಿಕತೆಯನ್ನು ಅರವಿಂದನ್ ನಿಲಕಂಠನ್ ಅನನ್ಯವಾಗಿ ಚಿತ್ರಿಸಿದ್ದಾರೆ. ಅವರು ಬರೆದಿರುವುದನ್ನು ಸಂಗ್ರಹವಾಗಿ ಹೇಳುವುದಾದರೆ…

ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚರ್ಚ್ ಗಳ ಮೇಲೆ ದಾಳಿ ನಡೆಯುತ್ತಿದೆ, ಚರ್ಚ್ ಗಳ ಕಿಟಕಿ ಬಾಗಿಲಿನ ಗಾಜುಗಳನ್ನು ಒಡೆದು ಹಿಂದೂ ರಾಷ್ಟ್ರವಾದಿಗಳು ದಾಳಿ ನಡೆಸಿದ್ದಾರೆ ಎಂಬ ಕೂಗು ಕೇಳಿಬಂದಿತ್ತು. ಆದರೆ ಕ್ರಿಕೆಟ್ ಆಡುವ ಹುಡುಗರು ಅಕಸ್ಮಾತ್ ಕಿಟಕಿ ಒಡೆದಿದ್ದನ್ನೂ ‘ಹಿಂದುಗಳು ಮಾಡಿದ ದಾಳಿ’ ಅಂತ ಬಿಂಬಿಸಲಾಯಿತೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂತು.

ಈ ದ್ವೇಷದ ಪ್ರಚಾರದ ಬೆನ್ನಲ್ಲೇ ಮೋದಿ ಸರ್ಕಾರ ಕ್ರೈಸ್ತ ಸಮುದಾಯ ವಿರುದ್ಧ ಯಾವುದೇ ರೀತಿಯ ತಾರತಮ್ಯಕ್ಕೆ ಮುಂದಾಗಲಿಲ್ಲ. ಬದಲಾಗಿ ವಿದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವಿನ ಹಸ್ತ ನೀಡಿತು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರಿದ್ದು ಅವರಿಗೂ ಸರ್ಕಾರ ಉತ್ತಮ ರೀತಿಯಲ್ಲಿ ಸಹಾಯ ಮಾಡಿತು.

ಅಫ್ಘಾನಿಸ್ತಾನದಲ್ಲಿ ಕ್ರೈಸ್ತ ಪಾದ್ರಿ ಹಾಗೂ ಅಲೆಕ್ಸಿಸ್ ಪ್ರೇಮ್ ಕುಮಾರ್ ಅವರ ಸಹೋದರ ಜಾನ್ ಜೋಸೆಫ್ ಅವರನ್ನು ಇಸ್ಲಾಂವಾದಿಗಳು ಅಪಹರಿಸಿದ್ದರು. ಆ ಸಂದರ್ಭದಲ್ಲಿ ಅಲೆಕ್ಸಿಸ್ ಅವರಿಗೆ ಪ್ರಧಾನಿ ಮೋದಿ ಅವರಿಂದ ಖುದ್ದಾಗಿ ಕರೆ ಬಂದಿತ್ತು. ಅದರಲ್ಲಿ, ಅಪಹರಣವಾಗಿದ್ದ ತಮ್ಮ ಸಹೋದರನನ್ನು ಭಾರತ ಸರ್ಕಾರ ರಕ್ಷಿಸಿದೆ ಎಂಬ ಮಾಹಿತಿ ಬಂದಿತ್ತು. ನಂತರ ‘ನನ್ನ ಬಿಡುಗಡೆ ಸಾಧ್ಯವಾಗಿರೋದು ನಮ್ಮ ಪ್ರಧಾನಿ ಅವರಿಂದ. ಅವರೇ ನನ್ನನ್ನು ಕಾಪಾಡಿದ್ದಾರೆ’ ಎಂದು ಸ್ವತಃ ಜಾನ್ ಜೋಸೆಫ್ ಹೇಳಿಕೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಸುಯೆಟ್ ಮಿಷನಿನ್ನ ಹಾಗೂ ಜೆಸುಯೆಟ್ ನಿರಾಶ್ರಿತರ ಸೇವಾ ಸಮಿತಿಯ ವಕ್ತಾರ ಜಾಯ್ ಕರಯಂಪುರಂ ಅವರು ತಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದು ಹೀಗೆ:

‘ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.’

ಭಾರತ ಸರ್ಕಾರದ ಈ ಕಾರ್ಯಕ್ಕೆ ಒಂದೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಶ್ರಮವನ್ನು ಮೂಲೆಗುಂಪು ಮಾಡುವ ಪ್ರಯತ್ನವೂ ನಡೆದಿತ್ತು. ‘ಕ್ಯಾಥೋಲಿಕ್ ನ್ಯೂಸ್ ಸರ್ವೀಸ್’ ಈ ಪ್ರಕರಣದಲ್ಲಿ ಸರ್ಕಾರದ ಮತ್ತು ಮೋದಿ ಅವರ ಪಾತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ತನ್ನ ವರದಿಯಲ್ಲಿ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಪ್ರಧಾನಿಗೆ ಧನ್ಯವಾದ ತಿಳಿಸಿದ್ದನ್ನು ಔಪಚಾರಿಕವಾಗಿ ನಮೂದಿಸಿ, ಉಳಿದಂತೆ ಪ್ರಕರಣದಲ್ಲಿ ಭಾರತ ಸರ್ಕಾರದ ಕಾರ್ಯ ಹಾಗೂ ಶ್ರಮವನ್ನು ಪ್ರಸ್ತಾಪಿಸಲೇ ಇಲ್ಲ.

ಕ್ಯಾಥೋಲಿಕ್ ಹೆರಾಲ್ಡ್ ನಲ್ಲಿ ಫೆ.23, 2015 ರಂದು ‘ಗಾಡ್ ಹ್ಯಾಸ್ ಸೇವ್ಡ್ ಮಿ, ಸೇಸ್ ಜೆಸುಯೆಟ್ ಪ್ರೀಸ್ಟ್ ರೀಲೀಸ್ಡ್ ಬೈ ತಾಲಿಬಾನ್’ ಎಂಬ ವರದಿಯಲ್ಲಿ ಅಪಹರಣದಿಂದ ಪಾರಾದ ಪಾದ್ರಿ ದೇವರಿಗೆ ಧನ್ಯವಾದ ಅರ್ಪಿಸಿದನ್ನು ಹೆಚ್ಚು ವೈಭವೀಕರಿಸಲಾಗಿತ್ತು. ಭಾರತ ಸರ್ಕಾರದ ಪರಿಶ್ರಮದ ಬಗ್ಗೆ ವರದಿಯಲ್ಲಿ ಸ್ವಲ್ಪವೂ ಮಾಹಿತಿ ನೀಡಲಿಲ್ಲ.

ಇನ್ನು ಅಮೆರಿಕದ ಅತ್ಯಂತ ಪರಿಪೂರ್ಣ ಸುದ್ದಿ ಮೂಲ ಎಂದೇ ಖ್ಯಾತಿ ಪಡೆದಿರುವ ‘ನ್ಯಾಷನಲ್ ಕ್ಯಾಥೋಲಿಕ್ ರಿಜಿಸ್ಟರ್’ ನಲ್ಲಿ ಪ್ರಕಟವಾದ ‘ಪ್ರೀಸ್ಟ್ ಫ್ರೀಡ್ ಬೈ ತಾಲಿಬಾನ್: ಗಾಡ್ ಹ್ಯಾಸ್ ಸೇವ್ಡ್ ಮಿ’ ಎಂಬ ವರದಿಯಲ್ಲೂ ಭಾರತ ಸರ್ಕಾರದ ಪರಿಶ್ರಮವನ್ನು ವಿವರಿಸಲೇ ಇಲ್ಲ. ವರದಿಯಲ್ಲಿ ಸಿಬಿಸಿಐ ಪ್ರಧಾನಿಗೆ ಧನ್ಯವಾದ ಅರ್ಪಿಸಿದನ್ನು ಬಿಟ್ಟರೆ, ಉಳಿದ ಯಾವುದೇ ಮಾಹಿತಿ ಇರಲಿಲ್ಲ. ಈ ವರದಿಯಲ್ಲಿ ‘ನನ್ನ ಬಿಡುಗಡೆ ನಂತರ ದೇವರಿಗೆ ಧನ್ಯವಾದ ಹೇಳುತ್ತೇನೆ’ ಎಂಬುದೇ ವರದಿಯ ಪ್ರಮುಖಾಂಶ ಆಗಿತ್ತು.

ಅದು ಕಾಶ್ಮೀರವಿರಬಹುದು, ಈಶಾನ್ಯ ರಾಜ್ಯಗಳಿರಬಹುದು ಅಥವಾ ಭಿನ್ನ ಸಮುದಾಯಗಳ ವಿಷಯವಿದ್ದಿರಬಹುದು. ಸಹಿಷ್ಣುತೆ/ ಮನಸ್ಸುಗಳನ್ನು ಬೆಸೆಯುವುದು ಇವ್ಯಾವವೂ ಏಕಮುಖವಾಗಿದ್ದರೆ ಫಲವಿಲ್ಲ. ಫಲಾನುಭವಿಗಳೂ ತಮ್ಮ ಪೂರ್ವಾಗ್ರಹ- ನಂಜುಗಳನ್ನು ಬಿಟ್ಟು ಹೊಸನೋಟ ತಾಳಬೇಕಾಗುತ್ತದೆ. ಇದನ್ನು ಜನಗಳಿಗೆ ಅರ್ಥ ಮಾಡಿಸಬೇಕಾದ ಬೌದ್ಧಿಕ ವರ್ಗದ ದೊಡ್ಡ ಪಡೆಯೇ ಅಕಾರಣ ಮೋದಿ ದ್ವೇಷ ಮತ್ತು ಏಕಮುಖ ಸಹಿಷ್ಣುತೆ ಉಪದೇಶಗಳಲ್ಲಿ ತೊಡಗಿಸಿಕೊಂಡಿರುವುದು ನಾಚಿಕೆಗೇಡು.

Leave a Reply