ಕಲ್ಲು ತೂರಾಡಿ ಕಾನೂನು ಮುರಿದವರನ್ನಷ್ಟೇ ನಾವು ಮುದ್ದಿಸುತ್ತೇವೆ ಎಂಬ ಸಂದೇಶ ನೀಡಿದ್ದೇ ಕಾಶ್ಮೀರದ ವಿಷಯದಲ್ಲಿ ಸಂಸತ್ತು ಮೆರೆದಿರುವ ಪ್ರೌಢಿಮೆಯೇ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆಯಲ್ಲಿ ಬುಧವಾರವಿಡೀ ನಡೆದ ಕಾಶ್ಮೀರ ಚರ್ಚೆಯ ಕೊನೆಯಲ್ಲಿ ಗೃಹ ಸಚಿವ ರಾಜನಾಥ ಸಿಂಗ್, ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳು ಹಾಗೂ ಸೌಮ್ಯವಾದಿಗಳೊಂದಿಗೆ ಸರ್ಕಾರ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಲ್ಲದೇ, ಶುಕ್ರವಾರ ಈ ಬಗ್ಗೆ ಸರ್ವಪಕ್ಷಗಳ ಸಭೆಗೂ ಒಪ್ಪಿಗೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಬಹುಪಾಲು ಹಾಗೂ ರಾಜಕೀಯ ಪಕ್ಷಗಳು ಬುಧವಾರದ ರಾಜ್ಯಸಭೆ ನಿರ್ಣಯವನ್ನು ಏಕಧ್ವನಿಯ, ವಾಸ್ತವ ಅರಿತ ಪ್ರೌಢಿಮೆಯ ನಡೆ ಎಂದೆಲ್ಲ ವ್ಯಾಖ್ಯಾನಿಸುತ್ತಿವೆ. ಹಲವು ಸುದ್ದಿವಾಹಿನಿಗಳ ಉತ್ಸಾಹ ಹೇಗಿದೆ ಎಂದರೆ ಕೇಂದ್ರ ಸರ್ಕಾರ ಪ್ರತ್ಯೇಕತಾವಾದಿಗಳೊಂದಿಗೂ ಮಾತುಕತೆಗೆ ಸಿದ್ಧವಾಗಿದೆ ಎಂದವರು ವ್ಯಾಖ್ಯಾನಿಸುತ್ತಿದ್ದಾರೆ.

ಸದನದಲ್ಲಿ ಸಿಪಿಎಂ ಮಾತಾಡಿದ್ದನ್ನು ಕೇಳಿದರೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕತಾವಾದಿಗಳು ಮತ್ತು ಹಿಜ್ಬುಲ್ ಉಗ್ರರೊಂದಿಗೂ ಸರ್ಕಾರ ಮಾತಾಡಬೇಕು? ‘ಕಾಶ್ಮೀರಿಗಳ ಮನಸ್ಸು-ಹೃದಯ ಬೆಸೆಯುವ ವಿಶ್ವಾಸವೃದ್ಧಿ ಕೆಲಸವಾಗಬೇಕು’ ಎಂಬ ಕಾಂಗ್ರೆಸ್ಸಿನ ರೋಮ್ಯಾಂಟಿಕ್ ಉಪದೇಶ ಕೇಳಲು ಉದಾತ್ತವಾಗಿದೆಯಾದರೂ ಅದರ ಅನುಷ್ಠಾನಕ್ಕೆ ಅನುಸರಿಸಬೇಕಾದ ನಿರ್ದಿಷ್ಟ ನೀಲನಕ್ಷೆ ಏನು ಎಂಬುದನ್ನದು ಹೇಳಬೇಕಿದೆ.

ಬುಧವಾರ ರಾಜನಾಥ ಸಿಂಗ್ ಅವರು ರಾಜ್ಯಸಭೆಯಲ್ಲಿ ಎದ್ದಿದ್ದ ಹಲವು ಆತಂಕಗಳಿಗೆ ನೀಡಿರುವ ಉತ್ತರ ಗಮನಾರ್ಹವಾದದ್ದು.

  • ಪೆಲ್ಲೆಟ್ ಗನ್ ಬಳಕೆ ಬೇಡ ಎನ್ನುವುದು ನಮ್ಮ ನಿಲುವೂ ಹೌದು. ಆದರೆ ಪರ್ಯಾಯವಿನ್ನೂ ಸಿಗಬೇಕಿದೆ. ಭದ್ರತಾಪಡೆಗಳು ಹೆಚ್ಚಿನ ಬಲಪ್ರಯೋಗ ಮಾಡುತ್ತಿವೆ ಎಂಬ ಗ್ರಹಿಕೆ ತಪ್ಪು. ಗಲಭೆ ಶುರುವಾದಾಗಿನಿಂದ ಈವರೆಗೆ 4515 ಯೋಧರು ಗಾಯಾಳುಗಳಾಗಿದ್ದಾರೆ. ಸಂಯಮ ವಹಿಸಿದ್ದರಿಂದಲೇ ಅವರು ಈ ಪ್ರಮಾಣದಲ್ಲಿ ಪೆಟ್ಟು ತಿನ್ನಬೇಕಾಗಿ ಬಂತು.
  • ಸುದೀರ್ಘ ನಿಷೇಧಾಜ್ಞೆ ಇದ್ದಾಗಲೂ ಕಣಿವೆಗೆ ಅಗತ್ಯ ವಸ್ತುಗಳನ್ನು ತಲುಪಿಸುವುದಕ್ಕೆ ಸರ್ಕಾರಗಳು ವಹಿಸಿದ ಶ್ರಮವನ್ನೂ ಗಮನಿಸಬೇಕು. ನಿಷೇಧಾಜ್ಞೆ ನಡುವೆಯೂ ಜೀವನಾವಶ್ಯಕ ವಸ್ತುಗಳು ಕಾಶ್ಮೀರಿಗಳನ್ನು ತಲುಪುತ್ತಿವೆ. ಕಲ್ಲು ತೂರಾಟಗಾರರು 108 ಆಂಬುಲೆನ್ಸ್ ಗಳಿಗೆ ಹಾನಿ ಮಾಡಿದ್ದಾರೆ. ಆದರೂ ಗಾಯಾಳುಗಳಿಗೆಲ್ಲರಿಗೂ ಚಿಕಿತ್ಸೆ ಕೊಡಲಾಗಿದೆ.
  • ಸಂಸತ್ತಿನಲ್ಲಿ ಪ್ರಧಾನಿ ಮಾತಾಡಿಲ್ಲ ಎಂಬ ಆಕ್ಷೇಪ ಬೇಕಿಲ್ಲ. ಈ ವಿಷಯದ ಬಗ್ಗೆ ಹಿಂದೆಯೂ ಸದನದಲ್ಲಿ ಮಾತಾಡಿದ್ದೇನೆ. ಅವೆಲ್ಲವೂ ಪ್ರಧಾನಿ ಜತೆ ಸಮಾಲೋಚನೆ ನಂತರವೇ ಬಂದಿದ್ದು. ಈ ವಿಷಯದಲ್ಲಿ ಅವರು ಪ್ರತಿಹಂತದಲ್ಲೂ ಸಮಾಲೋಚನೆಯಲ್ಲಿದ್ದಾರೆ.
  • ಬೇರೆ ರಾಜ್ಯಗಳಿಗೆ ಮಿಡಿದಷ್ಟೇ ಜಮ್ಮು-ಕಾಶ್ಮೀರಕ್ಕೂ ಹಿಂದುಸ್ತಾನಿಗಳ ಹೃದಯ ಮಿಡಿಯುತ್ತದೆ. ಆದರೆ ಪ್ರತಿಭಟನಾನಿರತ ಕಾಶ್ಮೀರಿ ಯುವಕರ ಕೈಯಲ್ಲಿ ಐಎಸ್ಐಎಸ್ ಬಾವುಟ ಕಾಣುತ್ತಿರುವುದು ಒಪ್ಪಲಸಾಧ್ಯ. ಮುಸ್ಲಿಮರನ್ನೂ ಬಿಡದೇ ಕೊಲ್ಲುತ್ತಿರುವ ಸಂಘಟನೆಯ ಬಾವುಟ ಕಾಶ್ಮೀರದಲ್ಲೇಕೆ? ಭಾರತದ ನೆಲದಲ್ಲಿ ನಿಂತು ಪಾಕಿಸ್ತಾನ ಜಿಂದಾಬಾದ್ ಅನ್ನುವುದನ್ನೂ ನಾವು ಸಹಿಸಲಾಗುವುದಿಲ್ಲ. ಇದರಿಂದ ಯುವಕರನ್ನು ದೂರವಿರಿಸಿ ಎಂದು ನಾನು ಕಾಶ್ಮೀರಿಗಳನ್ನು ವಿನಂತಿಸಿಕೊಳ್ಳುತ್ತೇನೆ.

ಇದಕ್ಕೂ ಮೊದಲು ಪ್ರತಿಪಕ್ಷಗಳು ಕಾಶ್ಮೀರ ವಿಷಯದಲ್ಲಿ ಏನೆಲ್ಲ ಹೇಳಿದ್ದವು ಎಂಬುದನ್ನು ಈ ಸುದ್ದಿಕತೆಯಲ್ಲಿ ಓದಿಕೊಳ್ಳಬಹುದು.

ಬಿಜೆಪಿಯ ಸಂಸದ ಶಂಶೀರ್ ಸಿಂಗ್ ಹೇಳಿರುವ ಮಾತುಗಳು ಗಮನಾರ್ಹ.

‘ಕಾಶ್ಮೀರ ಕಣಿವೆಯ ಬಗ್ಗೆ ಮಾತನಾಡುವಾಗ ನಾವು ಜಮ್ಮು-ಕಾಶ್ಮೀರವೆಂದು ಅಮೂಲಾಗ್ರವಾಗಿ ನೋಡಬೇಕು. ಜಮ್ಮು, ಕಾಶ್ಮೀರ ಹಾಗೂ ಲಡಾಕ್ ಬೇರೆ ಬೇರೆ ಪ್ರದೇಶಗಳು. ಪಾಕಿಸ್ತಾನ ಜಮ್ಮುವಿನಲ್ಲಿ ಶಾಂತಿಯನ್ನು ಕದಡಲು ಪ್ರಯತ್ನ ನಡೆಸುತ್ತಲೇ ಇದೆ. ಆದರೆ, ಅಲ್ಲಿನ ಜನರು ಎಂದಿಗೂ ಶಾಂತಿಗೆ ಧಕ್ಕೆಯಾಗುವಂತೆ ನಡೆದುಕೊಂಡಿಲ್ಲ. ಶೇ. 55ರ ಜನಸಂಖ್ಯೆ ಹೊಂದಿರುವ ಜಮ್ಮು, ಪಾಕಿಸ್ತಾನದೊಂದಿಗೆ 500 ಕಿ.ಮೀ ಗಡಿ ಹೊಂದಿದೆ. ಆದರೆ ಅಲ್ಲಿ ಯಾವ ಸಮಸ್ಯೆಗಳಿಲ್ಲ. ಅಲ್ಲಿನ ಅನೇಕ ಯುವಕರು ನಿರುದ್ಯೋಗಿಗಳು. ಆದರೂ ಸಹ ಅವರು ತಮ್ಮ ಕೈಗೆ ಗನ್ ತೆಗೆದುಕೊಳ್ಳಬಹುದಿತ್ತಲ್ಲ.. ಇಲ್ಲಿಯೇ ರಾಷ್ಟ್ರೀಯತೆ ಮತ್ತು ಪ್ರತ್ಯೇಕತೆಯ ವ್ಯತ್ಯಾಸ ಗೊತ್ತಾಗುತ್ತದೆ.

ಕಾಶ್ಮೀರದಲ್ಲಿ ಸಹ ಗುಜ್ಜರ್ ಸಮುದಾಯ ಶಾಂತವಾಗಿಯೇ ಇದೆ. ಯುವಕರ ಕೈಯಲ್ಲಿ ಪ್ರತ್ಯೇಕತಾವಾದಿಗಳು ಗನ್ನು ಇರಿಸುತ್ತಿದ್ದಾರೆ. ಪ್ರತಿಪಕ್ಷದ ಗುಲಾಂ ನಬಿಯವರು ವಾಸ್ತವ ವಿಚಾರ ಮಾತಾಡದೇ ಕೇವಲ ಪ್ರಧಾನಿ ಟೀಕೆಗೆ ಅವಕಾಶ ಉಪಯೋಗಿಸಿಕೊಳ್ಳುತ್ತಿದ್ದಾರೆ.’

ಅಂದರೆ…

ಹೀಗೆಲ್ಲ ವಿಭಿನ್ನ ವ್ಯಾಖ್ಯಾನಗಳಿರುವಾಗ, ಸರ್ವಪಕ್ಷ ಸಭೆ ಸಾಕಾರವಾಗುತ್ತಿರುವ ಮಾತ್ರಕ್ಕೆ ಪ್ರಜಾಪ್ರಭುತ್ವ ಪ್ರೌಢಿಮೆ ಎಂದು ಕುಣಿದಾಡುವುದರಲ್ಲಿ ಏನರ್ಥವಿದೆ? ಸರ್ವಪಕ್ಷ ಸಭೆಯಲ್ಲಿ ಆಗಲಿಕ್ಕಿರುವುದಾದರೂ ಏನು? ಜಮ್ಮು, ಲಢಾಕ್ ಪ್ರಾಂತ್ಯದ ಆಶೋತ್ತರಗಳನ್ನೆಲ್ಲ ಬಿಟ್ಟು ಕಾಶ್ಮೀರಿ ಕಲ್ಲು ತೂರಾಟಗಾರರ ಹೃದಯ ಬೆಸೆಯುವ ಮಾತನ್ನೇ ಗುಲಾಂ ನಬಿ ಅಂಥವರು ರಿಪೀಟ್ ಹೊಡೆಯುತ್ತಾರೆ. ಹಿಜ್ಬುಲ್ ಉಗ್ರರ ಜತೆಯೂ ಮಾತುಕತೆ ಮಾಡಿ ಒಮ್ಮೆ ಬಿರಿಯಾನಿ ತಿನ್ನೋಣ ಅಂತ ಪ್ರಕಾಶ್ ಕಾರಟ್ ಹೇಳುತ್ತಾರೆ. ಭದ್ರತಾ ಪಡೆಗಳು ಸುಮ್ಮನೇ ಹೊಡೆಸಿಕೊಂಡಿರಲಿ, ಪೆಲ್ಲೆಟ್ ಗನ್ ಬೇಡ ಅಂತ ಇನ್ಯಾರೋ ಬಿಸಿ ಕಾಫಿ ಕುಡಿದು ಮೇಲೇಳುತ್ತಾರೆ.

ಇದು ನಮ್ಮ ರಾಜಕೀಯ ಪಕ್ಷಗಳ ಪ್ರೌಢಿಮೆ. ಈ ಚೆಂದಕ್ಕೆ ಸರ್ವಪಕ್ಷಗಳ ಸಭೆ, ಕಾಶ್ಮೀರಕ್ಕೆ ಸರ್ವಪಕ್ಷಗಳ ನಿಯೋಗ ಎಂಬ ಸರ್ಕಸ್ಸುಗಳೂ ಆಗಿಹೋಗಲಿ ಬಿಡಿ.

Leave a Reply