ಹುತಾತ್ಮ ಯೋಧನ ಮನೆಯ ಭಾಗವೂ ತೆರವಿಗಾಗಿ ಗುರುತು, ವಿನಾಯತಿ ಸಿಗದಾದರೂ ಅಧಿಕಾರಿಗಳಿಂದ ಸಂವೇದನೆ ಸಾಧ್ಯವಾದೀತು…

BBMP Demolition drive at Doddabomasandra in Bengaluru on Wednesday.

ಪ್ರಾತಿನಿಧಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ಪಠಾಣ್ ಕೋಟ್ ಹುತಾತ್ಮ ಯೋಧ ನಿರಂಜನ್ ಅವರ ಬೆಂಗಳೂರಿನ ನಿವಾಸದ ಒಂದು ಭಾಗವೂ ಬಿಬಿಎಂಪಿಯ ತೆರವು ಕಾರ್ಯಾಚರಣೆಗೆ ಒಳಪಡಲಿದೆ ಎಂಬುದು ಸಧ್ಯದ ಸುದ್ದಿ. ನಿರಂಜನ್ ಅವರ ತಾಯಿ ಮತ್ತು ಸಹೋದರ ಇರುವ ನಿವಾಸದ ಚಿಕ್ಕ ಭಾಗವೊಂದು ಮಳೆನೀರು ಹೋಗಬೇಕಿರುವ ಕಾಲುವೆಯ ಮೇಲೆಯೇ ನಿರ್ಮಾಣವಾಗಿರುವುದರಿಂದ ಅದನ್ನು ತೆರವುಗೊಳಿಸುವುದಕ್ಕೆ ಬಿಬಿಎಂಪಿ ಗುರುತು ಮಾಡಿದೆ.

ದೇಶಕ್ಕಾಗಿ ಮಡಿದ ಯೋಧರ ಕುಟುಂಬದ ವಿಷಯದಲ್ಲಿ ತುಸು ಮುತುವರ್ಜಿ ವಹಿಸಬೇಕಿರುವ ಅಗತ್ಯ ಇದ್ದೇ ಇದೆ. ಹಾಗೆಂದು ಕಾಯ್ದೆಗಳನ್ನು ಬದಲಿಸಲು ಆಗುವುದಿಲ್ಲ. ಇಲ್ಲಿ ಗಮನಿಸಬೇಕಿರುವ ವಿಷಯ ಎಂದರೆ ನಿರಂಜನರ ಕುಟುಂಬವೂ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿಲ್ಲ. ಆದರೆ ಬಿಬಿಎಂಪಿ ಬುಲ್ಡೋಜರ್ ಹಚ್ಚಿಬಿಟ್ಟರೆ ಏಕಾಏಕಿ ಕಟ್ಟಡವು ವಿರೂಪಗೊಳ್ಳುತ್ತಾದ್ದರಿಂದ, ಗುರುತು ಮಾಡಿರುವ ಜಾಗವನ್ನು ತಾವೇ ತೆರವುಗೊಳಿಸುವುದಕ್ಕೆ ಕೆಲದಿನಗಳ ಅವಕಾಶ ಕೊಡಿ ಎಂದು ಕೇಳಿದೆ. ಯೋಧರ ಕುಟುಂಬದ ವಿಷಯದಲ್ಲಿ ಇದೊಂದು ಕೋರಿಕೆ ಮನ್ನಿಸುವ ಸಂವೇದನೆಯನ್ನು ಅಧಿಕಾರಿಗಳು ತೋರಬೇಕಿದೆ.

ತೆರವು ಕಾರ್ಯಾಚರಣೆಯಿಂದ ಅನೇಕ ಕುಟುಂಬಗಳು ನಿರಾಶ್ರಿತವಾಗಿರುವುದು ಕಟುಸತ್ಯ. ಆದರೆ ಒಳಚರಂಡಿ, ಪ್ರವಾಹ ಬರದಂತೆ ನಿರ್ಮಾಣ ಇವೆಲ್ಲವನ್ನೂ ನಾಗರಿಕರು ಸರ್ಕಾರದಿಂದ ಅಪೇಕ್ಷಿಸುವಾಗ ಈ ಕ್ರಮ ಅನಿವಾರ್ಯ.

ಕೊನೆಗೂ ಇವೆಲ್ಲ ನ್ಯಾಯಬದ್ಧ ಎನ್ನಿಸುವುದು ಇದರಲ್ಲಿ ಭಾಗಿಯಾಗಿ ಪರವಾನಗಿಗಳನ್ನು ಕೊಟ್ಟ ಅಧಿಕಾರಿಗಳಿಗೆ ಶಿಕ್ಷೆಯಾದಾಗ ಮಾತ್ರ. ಈ ನಿಟ್ಟಿನಲ್ಲಿ 20 ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿರುವುದಾಗಿ ಸರ್ಕಾರ ಹೇಳಿದೆ. ಇನ್ನೊಂದೆಡೆ ಬಿಬಿಎಂಪಿಯ ತೆರವು ಕಾರ್ಯಾಚರಣೆಗೆ ತಡೆ ನೀಡುವುದಕ್ಕೆ ನಿರಾಕರಿಸುತ್ತ, ಹೈಕೋರ್ಟ್ ನೀಡಿರುವ ನಿರ್ದೇಶನ ಸಹ ಗಮನಾರ್ಹ. ರಾಜಕಾಲುವೆಗಳ ಮೇಲೆ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಅನುಮತಿಸಿದ ಅಧಿಕಾರಿಗಳ ಪಟ್ಟಿಯನ್ನು ಬಿಬಿಎಂಪಿ ಆಗಸ್ಟ್ 23ರ ಒಳಗೆ ಹೈಕೋರ್ಟಿಗೆ ನೀಡಬೇಕು ಎಂಬ ಆದೇಶವಾಗಿದೆ. ಈ ನಿರ್ದೇಶನವಿತ್ತಿರುವ ಜಸ್ಟೀಸ್ ಎಲ್. ನಾರಾಯಣಸ್ವಾಮಿ ಅವರ ಪ್ರಕಾರ, ಕರ್ನಾಟಕ ಮುನ್ಸಿಪಲ್ ಆಕ್ಟ್ ನಲ್ಲಿ ಇಂಥ ಅಧಿಕಾರಿಗಳಿಗೆ ಶಿಕ್ಷಿಸುವುದಕ್ಕೆ ಸಾಧ್ಯವಿದೆ. ಆದರೆ ಶಿಕ್ಷೆಯ ಪ್ರಮಾಣ ಖಚಿತಪಡಿಸುವ ನಿಯಮಗಳಿಲ್ಲವಾದ್ದರಿಂದ ಶಾಸನಸಭೆ ಆದಷ್ಟು ಬೇಗ ತಿದ್ದುಪಡಿ ತರುವತ್ತ ಯೋಚಿಸಬೇಕು ಎಂದು ತಮ್ಮ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Leave a Reply