ಒಲಿಂಪಿಕ್ಸ್ ಐದನೇ ದಿನ ಭಾರತಕ್ಕೆ ಸತತ ಸೋಲುಗಳ ಮಧ್ಯೆ ತೃಪ್ತಿ ತಂದ ಜಯಗಳಾವುವು ಗೊತ್ತಾ?

ಭಾರತದ ಭರವಸೆಯ ಮಹಿಳಾ ಆರ್ಚರಿಪಟು ದೀಪಿಕಾ ಕುಮಾರಿ…

ಡಿಜಿಟಲ್ ಕನ್ನಡ ಟೀಮ್:

ರಿಯೋ ಒಲಿಂಪಿಕ್ಸ್ ನಲ್ಲಿ ಬುಧವಾರವೂ ಭಾರತಕ್ಕೆ ಸೋಲಿನ ಬೇಸರ ತಪ್ಪಲಿಲ್ಲ. ಶೂಟಿಂಗ್ ನಲ್ಲಿ ಜಿತು ರೈ ಹಾಗೂ ಪ್ರಕಾಶ್ ನಂಜಪ್ಪ, ವೇಟ್ ಲಿಫ್ಟಿಂಗ್ ನಲ್ಲಿ ಸತೀಶ್ ಶಿವಲಿಂಗಂ, ಜುಡೋನಲ್ಲಿ ಅವ್ತಾರ್ ಸಿಂಗ್ ಮತ್ತು ಮಹಿಳೆಯರ ಹಾಕಿ ತಂಡ ಹೀಗೆ ಸಾಲು ಸಾಲು ಸೋಲನುಭವಿಸಿತು. ಈ ಎಲ್ಲದರ ಮಧ್ಯೆ ಆರ್ಚರಿಯಲ್ಲಿ, ಬೊಂಬೈಲಾ ದೇವಿ ಮತ್ತು ದೀಪಿಕಾ ಕುಮಾರಿ ಅವರಿಗೆ ಮತ್ತು ಬಾಕ್ಸಿಂಗ್ ನಲ್ಲಿ ಮನೋಜ್ ಕುಮಾರ್ ಅವರಿಗೆ ಒಲಿದ ಜಯ ಭಾರತದ ಪಾಲಿಗೆ ತೃಪ್ತಿದಾಯಕ.

ಕಾರಣ ಏನಂದ್ರೆ, ಸೋತಿರುವವರ ಪೈಕಿ ಜಿತು ರೈ ಬಿಟ್ಟರೆ ಮಿಕ್ಕವರಾರು ಪದಕ ತರುವ ನಿರೀಕ್ಷೆ ಹೊಂದಿದವರಲ್ಲ. ಆದರೆ, ಗೆದ್ದಿರುವವರ ಪೈಕಿ ಆರ್ಚರಿ ಪಟು ಬೊಂಬೈಲ ದೇವಿ, ದೀಪಿಕಾ ಕುಮಾರಿ ಪದಕದ ಭರವಸೆಯ ಕ್ರೀಡಾಪಟುಗಳು. ಇನ್ನು ಮನೋಜ್ ಅವರ ಜಯ ಸಹ ಬಾಕ್ಸಿಂಗ್ ಅಭಿಯಾನಕ್ಕೆ ಶುಭಾರಂಭ ನೀಡಿದೆ.

ಪುರುಷರ 50 ಮೀ ಪಿಸ್ತೂಲ್ ವಿಭಾಗದಲ್ಲಿ ಜಿತು ರೈ 554 ಅಂಕಗಳೊಂದಿಗೆ 12ನೇ ಸ್ಥಾನ ಪಡೆದ್ರೆ, 547 ಅಂಕಗಳಿಸಿದ ಪ್ರಕಾಶ್ ನಂಜಪ್ಪ 25ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ರು. ಇನ್ನು ಪುರುಷರ 77 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಸತೀಶ್ ಶಿವಲಿಂಗಂ ಒಟ್ಟು 329 ಕೆ.ಜಿ ಎತ್ತುವ ಮೂಲಕ 4ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದರು.

ಇನ್ನು ಭಾರತದ ಪರ ಜುಡೋನಲ್ಲಿ ಸ್ಪರ್ಧಿಸಿದ್ದ ಏಕೈಕ ಕ್ರೀಡಾಪಟು ಅವ್ತಾರ್ ಸಿಂಗ್, ಒಲಿಂಪಿಕ್ಸ್ ನಿರಾಶ್ರಿತ ತಂಡದ ಪೊಪೊಲೆ ಮಿಸೆಂಗಾ ವಿರುದ್ಧ 1-0 ಅಂತರದಲ್ಲಿ ಸೋತರು. ಇತ್ತ ಮಹಿಳೆಯರ ಹಾಕಿ ತಂಡ ನಿರೀಕ್ಷೆಯಂತೆ ಪ್ರಬಲ ಆಸ್ಟ್ರೇಲಿಯಾ ವಿರುದ್ಧ 6-1 ಗೋಲುಗಳ ಅಂತರದಲ್ಲಿ ಮುಖಭಂಗ ಅನುಭವಿಸಿತು.

ಮಹಿಳೆಯರ ವೈಯಕ್ತಿಕ ಆರ್ಚರಿ ವಿಭಾಗದಲ್ಲಿ ಭಾರತದ ಹಿರಿಯ ಆರ್ಚರಿಪಟು ಬೊಂಬೈಲಾ ದೇವಿ ಚೈನೀಸ್ ತೈಪೇನ ಲಿನ್ ಶಿಹ್ ಚಿಯಾ ವಿರುದ್ಧ 6-2 ಅಂತರದಿಂದ ಜಯಿಸಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದ್ರು. ಇನ್ನು ಮತ್ತೊಬ್ಬ ಆರ್ಚರಿಪಟು ದೀಪಿಕಾ ಕುಮಾರಿ ಸಹ ಪ್ರಿಕ್ವಾರ್ಟರ್ ಪ್ರವೇಶಿಸಿದ್ದು, ಇಟಲಿಯ ಗ್ಯುಂಡಲಿನಾ ಸರ್ಟೊರಿ ವಿರುದ್ಧ 6-2 ಅಂತರದ ಜಯ ಸಾಧಿಸಿದ್ರು. ಮತ್ತೊಂದೆಡೆ ಪುರುಷರ 64 ಕೆ.ಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಮನೋಜ್ ಕುಮಾರ್ ಲುಥೆನಿಯಾದ ಎವಾಲ್ಡಸ್ ವಿರುದ್ಧ 2-1 ಸುತ್ತುಗಳ ಅಂತರದಲ್ಲಿ ಮಣಿಸಿ ಉತ್ತಮ ಆರಂಭ ಮಾಡಿದ್ದಾರೆ.

ಉಳಿದಂತೆ ಗುರುವಾರ ಬೆಳಗಿನ ಜಾವ ನಡೆಯಬೇಕಿದ್ದ ಟೆನಿಸ್ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿಯು ಆಸ್ಟ್ರೇಲಿಯಾದ ಸ್ಟೋಸರ್ ಹಾಗೂ ಪೀರ್ಸ್ ಜೋಡಿ ವಿರುದ್ಧದ ಪಂದ್ಯ ಮಳೆಯಿಂದಾಗಿ ಗುರುವಾರಕ್ಕೆ ಮುಂದೂಡಲಾಗಿದೆ.

ಇನ್ನು ಪದಕ ಪಟ್ಟಿಯನ್ನು ಗಮನಿಸೋದಾದ್ರೆ, ಅಮೆರಿಕ 32 ಪದಕಗಳೊಂದಿಗೆ (11 ಚಿನ್ನ, 11 ಬೆಳ್ಳಿ, 10 ಕಂಚು) ಪಾರುಪತ್ಯ ಮುಂದುವರೆಸಿದ್ದು, ಚೀನಾ 23 ಪದಕ (10 ಚಿನ್ನ, 5 ಬೆಳ್ಳಿ, 8 ಕಂಚು) ಹಾಗೂ ಜಪಾನ್ 18 ಪದಕಗಳೊಂದಿಗೆ (6 ಚಿನ್ನ, 1 ಬೆಳ್ಳಿ, 11 ಕಂಚು) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಇಂದು ಭಾರತೀಯ ಅಥ್ಲೀಟ್ ಗಳು ಕಣಕ್ಕಿಳಿಯಲಿರೋ ಸ್ಪರ್ಧೆಗಳು…

ಗಾಲ್ಫ್ ನಲ್ಲಿ ಲಾಹಿರಿ ಮತ್ತು ಶಿವ: ನೂರಕ್ಕೂ ಹೆಚ್ಚು ವರ್ಷಗಳ ನಂತರ ಮತ್ತೆ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಂಡಿರುವ ಗಾಲ್ಫ್ ಸ್ಪರ್ಧೆ ಇಂದಿನಿಂದ ಆರಂಭವಾಗಲಿದ್ದು, ಭಾರತದ ಖ್ಯಾತ ಆಟಗಾರರಾದ ಅನಿರ್ಬಾನ್ ಲಾಹಿರಿ ಮತ್ತು ಶಿವ್ ಚವ್ರಾಸಿಯಾ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ಸಂಜೆ 4ಕ್ಕೆ ಆರಂಭವಾಗಲಿದೆ.

ಬ್ಯಾಡ್ಮಿಂಟನ್ ಸ್ಪರ್ಧೆ ಆರಂಭ: ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ಕಣಕ್ಕಿಳಿಯಲಿದ್ದು, ಎ ಗುಂಪಿನ ಪಂದ್ಯದಲ್ಲಿ ನೇಪಾಳದ ತಕಾಹಶಿ ಮತ್ತು ಮಟ್ಸುಟೊಮೊ ಜೋಡಿಯನ್ನು ಎದುರಿಸಲಿದೆ. ಪಂದ್ಯ ಸಂಜೆ 4.30ಕ್ಕೆ ಆರಂಭವಾಗಲಿದೆ. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ ಜೋಡಿ ಡಿ ಗುಂಪಿನ ಪಂದ್ಯದಲ್ಲಿ ಇಂಡೋನೆಷ್ಯಾದ ಸೆತಿಯಾನ್ ಮತ್ತು ಅಸನ್ ಜೋಡಿ ವಿರುದ್ಧ ಸೆಣಸಲಿದೆ. ಈ ಪಂದ್ಯ ಸಂಜೆ 5.30ಕ್ಕೆ ಆರಂಭ. ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ ಸಿಂಧು ಪ್ರತಿಸ್ಪರ್ಧಿ ಹಂಗೇರಿಯ ಲೌರಾ ಸರೊಸಿ ವಿರುದ್ಧ ಸೆಣಸಲಿದ್ದು, ಪಂದ್ಯ ಸಂಜೆ 6.30ಕ್ಕೆ ನಡೆಯಲಿದೆ. ಪುರುಷರ ಸಿಂಗಲ್ಸ್ ನಲ್ಲಿ ಕಿಡಂಬಿ ಶ್ರೀಕಾಂತ್ ಮೆಕ್ಸಿಕೊದ ಲಿನೊ ಮುಂಜೊ ವಿರುದ್ಧ ಸೆಣಸಲಿದ್ದು ಪಂದ್ಯ ಶುಕ್ರವಾರ ಬೆಳಗಿನ ಜಾವ 5.35ಕ್ಕೆ ಆರಂಭವಾಗಲಿದೆ.

ಹಾಕಿಯಲ್ಲಿ ಹಾಲೆಂಡ್ ಸವಾರು: ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಬಲ ಹಾಲೆಂಡ್ ತಂಡ ಎದುರಾಗಲಿದೆ. ಹಾಲೆಂಡ್ ವಿಶ್ವ ಶ್ರೇಯಾಂಕದಲ್ಲಿ 2ನೇ ಸ್ಥಾನ ಹೊಂದಿದ್ದು, ಭಾರತಕ್ಕೆ ಕಠಿಣ ಸವಾಲಾಗಲಿದೆ. ಈ ಪಂದ್ಯದಲ್ಲಿ ಭಾರತ ಉತ್ತಮ ಹೋರಾಟ ನೀಡಬೇಕಿದ್ದು, ಸೋಲಿನಿಂದ ಪಾರಾದರೆ ತೃಪ್ತಿದಾಯಕ. ಗೆದ್ದರಂತು ಭಾರತದ ಆತ್ಮವಿಶ್ವಾಸ ಇಮ್ಮಡಿಯಾಗಲಿದೆ. ಪಂದ್ಯ ಸಂಜೆ 6.30ಕ್ಕೆ ಶುರು. ಇನ್ನು ಭಾರತ ಮಹಿಳಾ ತಂಡಕ್ಕೆ ಅಮೆರಿಕ ಸವಾಲು ನೀಡಲಿದ್ದು, ಪಂದ್ಯ ಶುಕ್ರವಾರ ಬೆಳಗಿನ ಜಾವ 4ಕ್ಕೆ ಆರಂಭವಾಗಲಿದೆ.

ಬಾಕ್ಸಿಂಗ್ ನಲ್ಲಿ ಶಿವಥಾಪ: ಪುರುಷರ 56 ಕೆ.ಜಿ ವಿಭಾಗದಲ್ಲಿ ಭಾರತದ ಭರವಸೆಯ ಬಾಕ್ಸರ್ ಶಿವಥಾಪ ಅಂತಿಮ 32ರ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, ಕ್ಯೂಬಾದ ರೊಬೆಸಿ ರಮಿರೆಜ್ ವಿರುದ್ಧ ಆಡಲಿದ್ದಾರೆ. ಪಂದ್ಯ ರಾತ್ರಿ 8 ಕ್ಕೆ ಆರಂಭ.

ಆರ್ಚರಿ ಪ್ರಿಕ್ವಾರ್ಟರ್: ಮಹಿಳಾ ಆರ್ಚರಿ ವೈಯಕ್ತಿಕ ವಿಭಾಗದ ಅಂತಿಮ 16ರ ಘಟ್ಟದಲ್ಲಿ ಭಾರತದ ಬೊಂಬೈಲಾ ದೇವಿ ಅವರು ಮೆಕ್ಸಿಕೊದ ಅಲೆಕ್ಸಾಂಡ್ರಾ ವ್ಯಾಲೆನ್ಸಿಯಾ ವಿರುದ್ಧ ಸೆಣಸಲಿದ್ದು, ಪಂದ್ಯ ಸಂಜೆ 5.55ಕ್ಕೆ ಆರಂಭವಾಗಲಿದೆ. ಇನ್ನು ದೀಪಿಕಾ ಕುಮಾರಿ ಅವರು ಚೈನೀಸ್ ತೈಪೇನ ತಾನ್ ಯಂಗ್ ವಿರುದ್ಧ ಸೆಣಸಲಿದ್ದು ಈ ಪಂದ್ಯ ಸಂಜೆ 5.30ಕ್ಕೆ ಆರಂಭ.

ಮುಂದೂಡಲ್ಪಟ್ಟ ಟೆನಿಸ್ ಮಿಶ್ರಡಬಲ್ಸ್: ಟೆನಿಸ್ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿಯು ಆಸ್ಟ್ರೇಲಿಯಾದ ಸ್ಟೋಸರ್ ಹಾಗೂ ಪೀರ್ಸ್ ಜೋಡಿ ವಿರುದ್ಧದ ಪಂದ್ಯ ಮಳೆಯಿಂದಾಗಿ ಇಂದು ಮುಂದೂಡಲಾಗಿದ್ದು, ಮಧ್ಯರಾತ್ರಿ 12 ಗಂಟೆಗೆ ನಡೆಯಲಿದೆ.

Leave a Reply