20 ಸಾವಿರ ಪೊಲೀಸ್ ಹುದ್ದೆ ಭರ್ತಿ ಭರವಸೆ, 26 ವಾರಗಳ ತಾಯ್ತನದ ರಜೆ, ಅಧಿಕಾರಿಗಳಿಗೆ ಕೋಳಿವಾಡ ಕ್ಲಾಸ್, ಒಲಿಂಪಿಕ್ಸ್ ನಿಂದ ಭಾರತೀಯ ಬಿಲ್ಲುಗಾರ್ತಿಯರು ಔಟ್, ಒಲಿಂಪಿಯನ್ ದೀಪಾಗೆ ಈಗ ಫಿಸಿಯೋ ಲಭ್ಯ…

People purchasing Shree Varamahalakshmi Festival pooja items at Gandhi Bazar Market in Bengaluru on Thursday.

 ವರಮಹಾಲಕ್ಷ್ಮೀ ಹಬ್ಬದ ಮುನ್ನಾದಿನ ಬೆಂಗಳೂರಿನ ಗಾಂಧಿ ಬಜಾರು ಪೂಜಾ ಸಾಮಗ್ರಿಗಳ ಆಘ್ರಾಣವನ್ನೇ ಹೊದ್ದಿತ್ತು…

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಕೆಲಸದ ಒತ್ತಡದಿಂದ ಪೊಲೀಸರ ಆತ್ಮಹತ್ಯೆ ಹಾಗೂ ಪ್ರತಿಭಟನೆ ಬೆದರಿಕೆಯ ಬಿಸಿ ಸರ್ಕಾರಕ್ಕೆ ಮುಟ್ಟಿದೆ. ಪರಿಣಾಮ ಸದ್ಯ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 20158 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಂಬರುವ ಮಾರ್ಚ್ ತಿಂಗಳ ಒಳಗಾಗಿ ಈ ಹುದ್ದೆಗಳ ನೇಮಕ ಮಾಡೊದಾಗಿ ಮಾಹಿತಿ ನೀಡಿದ್ದಾರೆ ಗೃಹ ಸಚಿವ ಡಾ.ಜಿ ಪರಮೇಶ್ವರ್. ಈ ಬಗ್ಗೆ ಪರಮೇಶ್ವರ್ ಹೇಳಿದಿಷ್ಟು:

‘ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಖಾಲಿ ಇದ್ದ ಪೇದೆಗಳ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಇಲಾಖೆ ಅನುಮತಿ ನೀಡಿದ್ದ 1 ಲಕ್ಷ ಹುದ್ದೆ ಭರ್ತಿಯಾಗಲಿದೆ. ಮುಂದಿನ ಮೂರು ವರ್ಷಗಳ ಕಾಲ ಪ್ರತಿವರ್ಷ ನಿವೃತ್ತಿಯಾಗುವ ಮೂರರಿಂದ ನಾಲ್ಕು ಸಾವಿರ ಪೊಲೀಸ್ ಪೇದೆಗಳ ಹುದ್ದೆಗಳನ್ನು ಹಣಕಾಸು ಇಲಾಖೆ ಅನುಮತಿ ಮೇರೆಗೆ ನೇರ ನೇಮಕಾತಿ ಮಾಡಲಾಗುವುದು. ಅಲ್ಲದೆ, ಕೆಪಿಎಸ್ಸಿ ಮೂಲಕ 889 ಸಬ್ ಇನ್ಸ್ ಪೆಕ್ಟರ್ ಹುದ್ದೆ ಭರ್ತಿ ಮಾಡಲಾಗುವುದು. ಆ ಪೈಕಿ 260 ಹುದ್ದೆಗಳು ನೇಮಕಾತಿ ಪ್ರಕ್ರಿಯೆಯಲ್ಲಿವೆ. ಉಳಿದ 629 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಮೊದಲ ಬಾರಿಗೆ ಗುಪ್ತಚಾರ ವಿಭಾಗ ಮತ್ತು ಸಿಐಡಿಗೆ ಪ್ರತ್ಯೇಕವಾಗಿ 41 ಹಾಗೂ 12 ಮಂದಿಯನ್ನು ನೇರವಾಗಿ ನೇಮಕಾತಿ ಮಾಡಲಾಗುವುದು. ಈಗಾಗಲೇ 6 ಸಾವಿರ ಪೊಲೀಸ್ ಪೇದೆಗಳ ನೇಮಕಾತಿ ಮಾಡಿದ್ದು ಅವರು ತರಬೇತಿಯಲ್ಲಿದ್ದಾರೆ. ಆ ಪೈಕಿ 2 ಸಾವಿರ ಮಂದಿ ಸೆಪ್ಟೆಂಬರ್ ವೇಳೆಗೆ ತರಬೇತಿ ಮುಗಿಸಿ ಹೊರಬರಲಿದ್ದಾರೆ. 6610  ಪೇದೆಗಳ ನೇಮಕಾತಿಗೆ ಎರಡನೇ ಹಂತದಲ್ಲಿ ಅಧಿಸೂಚನೆ ಹೊರಡಿಸಿದ್ದೇವೆ. ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ಮುಗಿದಿದೆ. ಉಳಿದ 7548 ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದೆ.

ಪೇದೆಗಳ ನೆಮಕಾತಿ ಪ್ರಕ್ರಿಯೆ ಸರಳೀಕರಣ ಮಾಡಲಾಗಿದ್ದು ಈಗ ಮೊದಲು ಲಿಖಿತ ಪರೀಕ್ಷೆ ನಡೆಸಿ ನಂತರ ದೈಹಿಕ ಪರೀಕ್ಷೆ ಮಾಡಲಾಗುವುದು. ಇದರಿಂದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ದೈಹಿಕ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ಪೊಲೀಸ್ ಪೇದೆಗಳ ನೇಮಕಾತಿಯ ಪೈಕಿ ಬೆಂಗಳೂರಿಗೆ 2800 ಪೇದೆಗಳನ್ನು ನಿಯೋಜಿಸಲಾಗುವುದು. ಸಂಚಾರ ವಿಭಾಗಕ್ಕೂ ಅಗತ್ಯ ಪೇದೆಗಳನ್ನು ಒದಗಿಸಲಾಗುವುದು. ಕರ್ನಾಟಕ ರಾಜ್ಯ ಪೊಲೀಸ್ ಸೇವೆಯಲ್ಲಿರುವ 30 ಅಧಿಕಾರಿಗಳನ್ನು  ಐಪಿಎಸ್ ಗೆ ಭರ್ತಿ ಪಡೆಯಲು ರಾಜ್ಯ ಸರ್ಕಾರ ಯುಪಿಎಸ್ ಸಿಗೆ ಶಿಫಾರಸು ಮಾಡಿದ್ದೇವೆ’

ಇದೇ ಸಂದರ್ಭದಲ್ಲಿ ಮೈಸೂರು ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅವರು ಹೇಳಿದ್ದು ಹೀಗೆ:

‘ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ  ಈ ಬಾರಿ ಸ್ವಾತಂತ್ರೋತ್ಸವಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಪ್ರಕರಣಕ್ಕೂ ಚಿತ್ತೂರು ಮತ್ತು ಕೊಲ್ಲಂ ಬಾಂಬ್ ಸ್ಫೋಟ ಪ್ರಕರಣಕ್ಕೂ ಸಾಮ್ಯತೆ ಇದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿದ್ದು, ಅದರ ಮಾಹಿತಿ ಪಡೆದು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು.’

ತೆರವು ಸದನ ಸಮಿತಿ ಸಭೆಗೆ ಗೈರಾದ ಅಧಿಕಾರಿಗಳಿಗೆ ಕೋಳಿವಾಡ ತರಾಟೆ

ಕೆರೆ ಒತ್ತುವರಿ ತೆರವು ಸದನ ಸಮಿತಿ ಸಭೆಗೆ ಗೈರಾದ ಅಧಿಕಾರಿಗಳನ್ನು ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷರಾಗಿರುವ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ತೀವ್ರ ತರಾಟೆಗೆ ತಗೊಂಡ್ರು.

ಕೆರೆಗಳಿಗೆ ಹೊಂದಿಕೊಂಡಿರುವ ಬಫರ್ ಜೋನ್ ಪ್ರದೇಶ ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಸಭೆ ಕರೆದಿದ್ದು, ಸಭೆಗೆ ಕಂದಾಯ ಇಲಾಖೆಗೆ ಸೇರಿದ ಅಧಿಕಾರಿಗಳು ಹಾಜರಿರಲಿಲ್ಲ. ಇದನ್ನು ಗಮನಿಸಿದ ಸಭಾಧ್ಯಕ್ಷರು ಅಂತಹ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಲ್ಲದೆ, ಮಾಹಿತಿ ಮತ್ತು ದಾಖಲೆ ಸಮೇತ ಹಾಜರಾಗುವಂತೆ ಆದೇಶಿಸಿದ್ರು.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ಭಾನುವಾರ ರಿಯೋ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ವಾಲ್ಟ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಸ್ಪರ್ಧಿಸುತ್ತಿರುವ ದೀಪಾ ಕರ್ಮಾಕರ್ ಮನವಿಗೆ ಕೊನೆಗೂ ಪುರಸ್ಕಾರ ಸಿಕ್ಕಿದೆ. ಕ್ರೀಡಾಕೂಟ ಆರಂಭಕ್ಕೂ ಮುನ್ನ ದೀಪಾ ತಮ್ಮ ವೈಯಕ್ತಿಕ ಫಿಸಿಯೋ ಸಾಜದ್ ಅಹ್ಮದ್ ರನ್ನು ರಿಯೋಗೆ ಕರೆದೊಯ್ಯಲು ಅನುಮತಿ ಕೋರಿದ್ದರು. ಇದನ್ನು ಆರಂಭದಲ್ಲಿ ನಿರಾಕರಿಸಲಾಗಿತ್ತು. ಈಗ ಪ್ರಶಸ್ತಿ ಸುತ್ತಿಗೆ ಮೂರು ದಿನಗಳು ಮಾತ್ರ ಬಾಕಿ ಇರುವಾಗ ಭಾರತೀಯ ಕ್ರೀಡಾ ಪ್ರಾಧಿಕಾರ ಫಿಸಿಯೋ ಅವರನ್ನು ಕಳುಹಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರೊಂದಿಗೆ ಪ್ರಶಸ್ತಿ ಸುತ್ತಿಗೆ 72 ಗಂಟೆ ಬಾಕಿ ಇರುವಾಗ ದೀಪಾ ಕೋರಿಕೆಗೆ ಸಮ್ಮತಿಸಲಾಗಿದೆ.
  • ಗುರುವಾರ ನಡೆದ ಮಹಿಳೆಯರ ಆರ್ಚರಿ ವೈಯಕ್ತಿಕ ವಿಭಾಗದಲ್ಲಿ ಭಾರತದ ಪ್ರಮುಖ ಆಟಗಾರ್ತಿ ದೀಪಿಕಾ ಕುಮಾರಿ ಸೋಲನುಭವಿಸಿದರು. ಚೈನೀಸ್ ತೈಪೇನ ತಾನ್ ಯಂಗ್ ವಿರುದ್ಧ 0-6 ಸೆಟ್ ಗಳ ಅಂತರದಲ್ಲಿ ಸೋತ ದೀಪಿಕಾ ಒಲಿಂಪಿಕ್ಸ್ ನಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ್ರು. ಇನ್ನು ಮತ್ತೊಬ್ಬ ಆರ್ಚರ್ ಬೊಂಬೈಲಾ ದೇವಿ ತಮ್ಮ ಪ್ರತಿಸ್ಪರ್ಧಿ ಮೆಕ್ಸಿಕೊದ ಅಲೆಕ್ಸಾಂಡ್ರಾ ವ್ಯಾಲೆನ್ಸಿಯಾ ವಿರುದ್ಧ 2-6 ಅಂಕಗಳ ಅಂತರದಲ್ಲಿ ಪರಾಭವಗೊಂಡರು. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಆರ್ಚರ್ ಗಳ ಹೋರಾಟ ಅಂತ್ಯಗೊಂಡಿದೆ.
  • ಕೆಲಸದ ಸ್ಥಳಗಳಲ್ಲಿ ನೀಡಲಾಗುವ ತಾಯ್ತನದ ರಜೆ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ರಾಜ್ಯಸಭೆಯಲ್ಲಿ ಪಾಸ್ ಮಾಡಲಾಗಿದೆ. ಕಳೆದ ಎರಡು ವರ್ಷಗಳ ಪರಿಶ್ರಮದ ಫಲವಾಗಿ ಈ ಮಸೂದೆ ಜಾರಿಗೊಳಿಸಲಾಗಿದೆ ಎಂದು ಮಹಿಳಾ ಕಲ್ಯಾಣ ಸಚಿವೆ ಮನೆಕಾ ಗಾಂಧಿ ತಿಳಿಸಿದ್ದಾರೆ.
  • ರಸ್ತೆ ಅಪಘಾತಕ್ಕೆ ಸಿಲುಕಿದವರ ರಕ್ಷಣೆಗೆ ಮುಂದಾಗದೇ ನಿರ್ಲಕ್ಷ್ಯವಹಿಸಿ ಮಾನವೀಯತೆ ಮರೆಯತ್ತಿರುವ ಘಟನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದನ್ನು ತಡೆಯಲು ಸರ್ಕಾರ ಹೊಸ ಪ್ಲಾನ್ ಮಾಡಿದೆ. ದೆಹಲಿಯಲ್ಲಿ ವ್ಯಕ್ತಿಯೊಬ್ಬ ಅಫಘಾತಕ್ಕೆ ಒಳಗಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದರೂ ಪಕ್ಕದಲ್ಲಿ ಹಾದುಹೋದ ಯಾರೂ ಆತನ ವಿಚಾರಣೆಗೆ ಬರದ ಘಟನೆ ಗುರುವಾರ ರಾಷ್ಟ್ರದ ಅಂತಃಸ್ಸಾಕ್ಷಿಯನ್ನೇ ಚುಚ್ಚಿದೆ. ವ್ಯಕ್ತಿಯ ಪಕ್ಕ ಬಿದ್ದ ಮೊಬೈಲ್ ಫೋನ್ ಎತ್ತಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವರು ಈತನನ್ನು ನೋಡಿ ಮುಂದೆ ಹೋದರೂ ಯಾರೂ ಸಹಾಯಕ್ಕೆ ಬರದಿರುವುದೂ ಸಿಸಿಟಿವಿ ಕೆಮರಾದಲ್ಲಿ ದಾಖಲಾಗಿದೆ. ಇಂಥ ಘಟನೆ ದೇಶದ ನಾನಾ ಭಾಗಗಳಲ್ಲೂ ಹಿಂದೆ ಆಗಿತ್ತೆಂಬುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಇನ್ಮುಂದೆ ರಸ್ತೆ ಅಪಘಾತದಲ್ಲಿ ಸಿಲುಕಿದವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದವರಿಗೆ ದೆಹಲಿ ಸರ್ಕಾರ ಬಹುಮಾನ ನೀಡಲು ನಿರ್ಧರಿಸಿದೆ. ಈ ಸಂಬಂಧ ಸದ್ಯವೇ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
  • ಪಾಕಿಸ್ತಾನದಲ್ಲಿ ಗುರುವಾರ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ. ಪಾಕ್ ನೈರುತ್ಯ ಭಾಗದ ಕ್ವೆಟಾದಲ್ಲಿ ನ್ಯಾಯಾಧೀಶರ ಭದ್ರತಾ ಸಿಬ್ಬಂದಿ ವಾಹನ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ.

Leave a Reply