ಸ್ವಚ್ಛ ಭಾರತದ ಪ್ರಚಾರದಲ್ಲಿ ಕಂಗನಾಳನ್ನು ನೋಡಿ ಖುಷಿಪಡೋಣ, ಬೆಜ್ವಾಡಾ ವಿಲ್ಸನ್ ಮಾತಿಗೂ ಕಿವಿಯಾಗಿ ತುಸುವಾದರೂ ತಲೆತಗ್ಗಿಸೋಣ!

ಚೈತನ್ಯ ಹೆಗಡೆ

ಮೋದಿ ಸರ್ಕಾರದ ‘ಸ್ವಚ್ಛ ಭಾರತ’ ಅಭಿಯಾನದಲ್ಲಿ ಮತ್ತೊಂದು ಮಹತ್ತರ ಬೆಳವಣಿಗೆ ಆಗಿದೆ. ಏನದು? ಮತ್ತೇನಿಲ್ಲ, ಜನರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತೊಂದು ವಿಡಿಯೋ ಯೂಟ್ಯೂಬಿನಲ್ಲಿ ತೇಲಾಡುತ್ತಿದೆ. ಜನಪ್ರಿಯತೆ ಉತ್ತುಂಗದಲ್ಲಿರುವ ಹಿಂದಿ ಚಿತ್ರರಂಗದ ನಟಿ ಕಂಗನಾ ರಣಾವತ್ ಈ ಬಾರಿಯ ಜಾಹೀರಾತಿನಲ್ಲಿ ರಾಯಭಾರಿ ಆಗಿದ್ದಾರೆ. ಪ್ರಾರಂಭದಿಂದಲೂ ಈ ಅಭಿಯಾನದೊಂದಿಗೆ ಬೆಸೆದುಕೊಂಡಿರುವ ಅಮಿತಾಭ್ ಬಚ್ಚನ್ ಅವರ ನಿರೂಪಣೆ ಈ 2:45 ನಿಮಿಷದ ಜಾಹೀರಾತಿಗಿದೆ.

ತಮ್ಮ ವಠಾರದಲ್ಲಿ, ಕೆಲಸದ ಜಾಗದಲ್ಲಿ, ವಾಹನ ನಿಲುಗಡೆ ಸ್ಥಳಗಳಲ್ಲಿ ಯಾರು ಕಸ ಚೆಲ್ಲುವರೋ ಅವರ ಬಳಿ ಲಕ್ಷ್ಮೀ ಇರುವುದಿಲ್ಲ ಎಂಬ ಕತೆಯನ್ನು ಹೊತ್ತ ವಿಡಿಯೋ ಇದು. ಹೊಲಸು ಮಾಡುತ್ತಿರುವವರ ಬಳಿಯಿರುವ ಫೋಟೋದಿಂದ ಮಾಯವಾಗಿಬಿಡುವ ಲಕ್ಷ್ಮೀ ಪಾತ್ರದಲ್ಲಿ ಕಂಗನಾ ರಣಾವತ್ ಇದ್ದಾರೆ. ‘ಸ್ವಚ್ಛತೆ ದೈವತ್ವಕ್ಕೆ ಸಮೀಪ ಎಂದು ನಾವು ಚಿಕ್ಕಂದಿನಿಂದ ಕಲಿತಿದ್ದನ್ನು ದೊಡ್ಡವರಾಗಿ ಮರೆತುಬಿಡುತ್ತೇವೆ’ ಎಂದು ವಿಡಿಯೋ ಕೊನೆಯಲ್ಲಿ ಅಮಿತಾಭ್ ಪಾಠ ಹೇಳುತ್ತಾರೆ.

ಖಂಡಿತ. ಸ್ವಚ್ಛ ಭಾರತವೆಂಬುದು ಒಂದು ಜಾಗೃತಿಯಾಗಬೇಕು ಹಾಗೂ ಸಮಾಜದ ಜನಪ್ರಿಯ ಸ್ಥಾನದಲ್ಲಿರುವವರು ಈ ಸಂದೇಶ ಹೇಳಿದಾಗ ಜನ ಆಲಿಸುತ್ತಾರೆ ಎಂಬುದನ್ನೆಲ್ಲ ಒಪ್ಪುವಂಥದ್ದೇ. ಅಮಿತಾಭ್, ಕಂಗನಾ ಅಂಥವರೆಲ್ಲ ಇದಕ್ಕೆ ಸಂಭಾವನೆಯನ್ನೇನೂ ಪಡೆಯದೆಯೇ ಭಾಗವಹಿಸುತ್ತಿರಬಹುದು. ಸ್ವಚ್ಛ ಭಾರತ ಶುರುವಾದಾಗಿನಿಂದ ಜನರಲ್ಲಿ ಬೇಕಾಬಿಟ್ಟಿ ಕಸ ಚೆಲ್ಲಬಾರದೆಂಬ ಪ್ರಜ್ಞೆಯೂ ಬಹುಮಟ್ಟಿಗೆ ಬಂದಿದೆ ಎಂಬುದನ್ನೂ ಒಪ್ಪೋಣ.

ಪ್ರಧಾನಿ ನರೇಂದ್ರ ಮೋದಿಯೇ ಹೇಳಿಕೊಂಡಂತೆ, ಮಾಧ್ಯಮವೂ ಸೇರಿದಂತೆ ಪ್ರತಿಯೊಬ್ಬರೂ ಅಗ್ರಶ್ರೇಣಿಯಲ್ಲಿರಿಸಿರುವ ಈ ಸರ್ಕಾರದ ಕಾರ್ಯಕ್ರಮವೇನಾದರೂ ಇದ್ದರೆ ಅದು ಸ್ವಚ್ಛಭಾರತ. ಹೀಗಾಗಿ ಸ್ವಚ್ಛ ಭಾರತದ ಬಗ್ಗೆ ಅಪಸ್ವರ ಎತ್ತುವುದೇ ‘ದೇಶದ್ರೋಹ’ವಾಗಿಬಿಡುವ ಅಪಾಯವಿದೆ! ಆದರೂ ಕೆಲ ಪ್ರಶ್ನೆಗಳನ್ನು ಕೇಳಲೇಬೇಕಿದೆ.

ಸ್ವಚ್ಛ ಭಾರತಕ್ಕೆ ಸೇವಾ ತೆರಿಗೆಯನ್ನೂ ಕೊಡು, ಸ್ವಚ್ಛತೆಯನ್ನೂ ನೀನೇ ಮಾಡು ಎಂಬ ಪ್ರಧಾನಿಯವರ ಶಾಣ್ಯಾತನವನ್ನು ಮೆಚ್ಚಿಕೊಳ್ಳೋಣ. ಆದರೆ, ಸಾಮಾನ್ಯನೊಬ್ಬ ಚಾಕಲೇಟಿನ ರ್ಯಾಪರ್ ಬಿಚ್ಚಿದರೆ ಅದನ್ನು ರಸ್ತೆ ಮೇಲೆ ಎಸೆಯಬಾರದು ಸರಿ.. ಆದರೆ ಕಸದಬುಟ್ಟಿ ಹುಡುಕಿಯಾದರೂ ಅದಕ್ಕೊಂದು ಗುರಿ ತಲುಪಿಸಲೇಬೇಕಲ್ಲ? ಅಲ್ಲಿಂದ ಅದನ್ನು ಎತ್ತಿ ಸಂಸ್ಕರಿಸುವ ನೈಜ ಸ್ವಚ್ಛ ಭಾರತೀಯರು ಇದ್ದಾರಲ್ಲ..ಪೌರ ಕಾರ್ಮಿಕರು ಇದ್ದಾರಲ್ಲ, ಅಂಥವರ ಬಗ್ಗೆ ಸ್ವಚ್ಛ ಭಾರತ ಅಭಿಯಾನ ಯಾವತ್ತು ಮಾತನಾಡಲಿದೆ? ಕಂಗನಾ, ಅಮಿತಾಭ್, ನೀತಾ ಅಂಬಾನಿ ಎಲ್ಲರೂ ಪರದೆ ಮೇಲೆ ತುಂಬ ಚೆನ್ನಾಗಿ ಕಾಣುತ್ತಾರೆ ಸರಿ. ಹಾಗಂತ ಸ್ವಚ್ಛ ಭಾರತವು ಈ ಮೆರುಗನ್ನು ದಾಟುವುದು ಯಾವಾಗ? ಮೋದಿ ಭಕ್ತರಲ್ಲಿ ಹೆಚ್ಚಿನವರು ಬಾಯ್ತುಂಬ ಬಯ್ದುಕೊಳ್ಳುವ ಎನ್ಡಿಟಿವಿಯೋ, ಇನ್ನೊಂದೋ, ‘ಸ್ವಚ್ಛ ಭಾರತ’ವನ್ನು ಹೊಗಳುತ್ತಿರುವುದಾದರೂ ಏಕೆ? ಸೆಲಿಬ್ರಿಟಿ ಮತ್ತು ಜಾಹೀರಾತುದಾರರ ಸಂಗಮದ ‘ಬ್ರಾಂಡ್’ ಒಂದು ರೂಪುಗೊಂಡಿರುವುದರಿಂದ ಹಾಗೂ ಇದು ಮಾಧ್ಯಮ ಮಾರುಕಟ್ಟೆಗೆ ಲಾಭ ತಂದುಕೊಡುತ್ತಿರುವುದರಿಂದ ಅಷ್ಟೆ. ಡೆಟ್ಟಾಲ್ ಮತ್ತು ಹಾರ್ಪಿಕ್ ಜತೆ ಸೇರಿಕೊಂಡು ಎನ್ಡಿಟಿವಿ ‘ಸ್ವಚ್ಛ ಭಾರತ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಳ್ಳೋದು ಸರ್ಕಾರದ ಮೇಲಿನ ಪ್ರೀತಿಗಲ್ಲ ಸ್ವಾಮಿ, ವ್ಯಾಪಾರಿ ಹಿತಾಸಕ್ತಿಯಿಂದ. ಹಾಗಂತ ಸ್ವಚ್ಛ ಭಾರತವೆಂಬುದು ಡೆಟ್ಟಾಲ್, ಹಾರ್ಪಿಕ್ ಕುರಿತಾಗಿ ಅಂತಾಗಬಾರದಲ್ಲವೇ?

ಮ್ಯಾಗ್ಸಸೆ ಪುರಸ್ಕೃತ ಬೆಜ್ವಾಡಾ ವಿಲ್ಸನ್ ‘ಸ್ವಚ್ಛ ಭಾರತ’ದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದು ಇದೇ ನೆಲೆಯಲ್ಲೇ. ಬೆಜ್ವಾಡಾ ವಿಲ್ಸನ್ ಅವರ ಒಟ್ಟಾರೆ ಮಾತುಗಳಲ್ಲಿ ತಥಾಕಥಿತ ಸೆಕ್ಯುಲರ್ ವರ್ಗಕ್ಕೆ ಮೋದಿ ಮೇಲಿರುವ ಪೂರ್ವಾಗ್ರಹವೇ ಇಣುಕುತ್ತಾದರೂ, ಸ್ವಚ್ಛ ಭಾರತದ ಕುರಿತಾದ ಅವರ ನೋವಿನ ಮಾತುಗಳನ್ನು ನಾವು ಕೇಳಿಸಿಕೊಳ್ಳಲೇಬೇಕು. ಅವರ ಪ್ರತಿಪಾದನೆಗಳು ಹೀಗಿವೆ-

bezwada-wilson

  • ಅಮಿತಾಭ್ ಬಚ್ಚನ್, ಅಂಬಾನಿಗಳೆಲ್ಲ ಕೆಮರಾದ ಎದುರು ಪೊರಕೆ ಹಿಡಿಯುತ್ತಾರೆ ಸರಿ. ಆದರೆ ಅವರೆಲ್ಲ ಎದ್ದುಹೋದಮೇಲೆ ಆ ಕೆಲಸವನ್ನು ಮಾಡುವ ವರ್ಗವಿದೆಯಲ್ಲ. ಈ ಸೆಲಿಬ್ರಿಟಿಗಳು ದಿನವೂ ಸ್ವಚ್ಛತೆಯ ಶ್ರಮದಾನವನ್ನೇನೂ ಮಾಡುವುದಿಲ್ಲ. ಈ ಕೆಲಸವನ್ನು ನಿಜಕ್ಕೂ ಮಾಡುತ್ತಿರುವ ಸ್ವಚ್ಛತಾ ಕರ್ಮಚಾರಿಗಳಿಗೆ ಈ ಸ್ವಚ್ಛತಾ ಅಭಿಯಾನದ ನಿಧಿಯಲ್ಲಿ ಏನು ಹೋಗಲಿಕ್ಕಿದೆ ಅಂತ ನೋಡಿದರೆ ಕಾಣುವುದು ದೊಡ್ಡ ಶೂನ್ಯ!
  • ಇದು ಕಾರ್ಪೊರೆಟ್ ಕಂಪನಿಗಳು ಸೇರಿಕೊಂಡು ಶೌಚಾಲಯಗಳನ್ನು ಕಟ್ಟುವ ಒಂದು ಕಾರ್ಯಕ್ರಮ ಎಂಬುದರಾಚೆಗೆ ಮತ್ತೇನೂ ಇಲ್ಲ. ಈ ಶೌಚಾಲಯಗಳನ್ನು ಸ್ವಚ್ಛ ಮಾಡುವ ಜನ ಬೇರೆಯೇ ಇದ್ದಾರೆ. ಜನರ ತೆರಿಗೆ ಹಣದಲ್ಲಿ ರೂಪುಗೊಂಡಿರುವ ಸ್ವಚ್ಛ ಭಾರತ ಅಭಿಯಾನ ಇವರ ಬದುಕನ್ನು ತಾಗುವುದೇ ಇಲ್ಲ. ಇಷ್ಟೆಲ್ಲ ತಂತ್ರಜ್ಞಾನದ ಸಾಧನೆಗಳಾಗುತ್ತಿರುವ ಹೊತ್ತಲ್ಲಿ ಅವರಿನ್ನೂ ಶೌಚದ ಗುಂಡಿಗಳಲ್ಲಿ ಇಳಿದು, ಕಟ್ಟಿದ ಮಲಮೂತ್ರಗಳನ್ನು ಸರಿಸುತ್ತಿದ್ದಾರೆ. ಕಾಯ್ದೆಯ ಪ್ರಕಾರ ಮಲ ಹೊರುವ ಪದ್ಧತಿ ಎಂದೋ ಕೊನೆಗೊಂಡಿದೆ. ಆದರೆ, ಇವತ್ತಿಗೂ ವಿಸರ್ಜನೆ ಸಂಸ್ಕರಣದ ತೊಟ್ಟಿ ಹಾಳಾದರೆ ಮನುಷ್ಯ ಅದರಲ್ಲಿ ಇಳಿಯದೇ ಸರಿಪಡಿಸುವ ವಿಧಾನ ಇದೆಯೇ? ಸಫಾಯಿ ಕರ್ಮಚಾರಿಗಳನ್ನೇ ಅಲ್ಲಿ ಇಳಿಸುತ್ತಿದ್ದೇವೆ ತಾನೇ? ಈ ಬಗ್ಗೆ ಮಾತಾಡದ ಸ್ವಚ್ಛತಾ ಆಂದೋಲನಕ್ಕೆ ಏನನ್ನೋಣ? ಈ ವರ್ಗದ ಜನ ಸತ್ತರೆ ಸಿಗುವ ಪರಿಹಾರವಾಗಲಿ, ಇವರ ಕುಟುಂಬದವರಿಗೆ ಬೇರೆಯ ವೃತ್ತಿ ಕೌಶಲ ಕೊಡಿಸುವ ಕಾರ್ಯವನ್ನಾಗಲೀ ಸ್ವಚ್ಛತೆಯ ಆಂದೋಲನದಲ್ಲಿನ ಅಂಶವಾಗಿ ಯಾರೂ ಪರಿಗಣಿಸುತ್ತಿಲ್ಲ.
  • ಸ್ವಚ್ಛ ಭಾರತ ಅಭಿಯಾನದ ಮೂಲಕ ಪ್ರಧಾನಿ ಮೋದಿ ಹೇಳುತ್ತಿರುವುದೇನೆಂದರೆ- ಬನ್ನಿ, ನಾವೆಲ್ಲರೂ ಸ್ವಚ್ಛತಾ ಕಾರ್ಮಿಕರು ಎಂದು. ಆದರೆ ವಾಸ್ತವ ಅದಲ್ಲ. ಇಷ್ಟು ವರ್ಷ ಈ ಕೆಲಸ ತನ್ನದಲ್ಲ ಎಂದುಕೊಂಡಿದ್ದ ವರ್ಗಕ್ಕೆ ಅದನ್ನು ಹೇಳಿ. ಆದರೆ ಜಾತಿಯ ಕಾರಣದಿಂದ ಜನ್ಮದಾರಭ್ಯ ಆ ಕೆಲಸಕ್ಕೆ ಅಂಟಿಕೊಂಡಿರುವ ನಮಗೆ ಆ ಮಾತನ್ನು ಹೇಳಿದರೆ ಕೋಪ ಬರುತ್ತದೆ. ನಮ್ಮ ಇಡೀ ಸಫಾಯಿ ಕರ್ಮಚಾರಿ ಆಂದೋಲನ ಇರುವುದೇ ಜಾತಿಯೊಂದಿಗೆ ಬೆಸೆದುಕೊಂಡಿರುವ ಈ ಕೆಲಸವನ್ನು ಆ ನಿರ್ದಿಷ್ಟ ಜಾತಿಯವರು ಬಿಡಬೇಕು ಎಂಬ ನೆಲೆಯಲ್ಲಿ. ಏಕೆಂದರೆ ಇದರೊಂದಿಗೆ ಬಹುದೊಡ್ಡ ಅಪಮಾನವೊಂದು ಬೆರೆತುಕೊಂಡಿದೆ. ನನ್ನ ತಾಯಿಯ ಜೀವನದ ಅತಿದೊಡ್ಡ ಆಸೆಯೇ ನಾನು ಸ್ವಚ್ಛತಾ ಕಾರ್ಮಿಕ ಆಗಬಾರದು ಎಂಬುದಾಗಿತ್ತು. ‘ಮಗನೇ ಏನಾದರೂ ಮಾಡು. ಆದರೆ ಜೀವನದಲ್ಲಿ ಪೊರಕೆ ಹಿಡಿಯಬೇಡ’ ಎಂದೇ ನನ್ನ ತಾಯಿ ಹೇಳಿದ್ದು. ಹೀಗಿರುವಾಗ ಪ್ರಧಾನಿ ನನ್ನಂಥವರನ್ನೂ ಸೇರಿಸಿಕೊಂಡು, ಬನ್ನಿ ಭಾರತ ಸ್ವಚ್ಛ ಮಾಡೋಣ ಎಂದು ಹೇಳಿದರೆ, ಸ್ವಚ್ಛತೆ ಉಪದೇಶ ನಿಮ್ಮಿಂದ ನಮಗೆ ಬೇಕಿಲ್ಲ ಎಂದೇ ಹೇಳುತ್ತೇನೆ.

Leave a Reply