ಕೇಂದ್ರದ ಕಾರ್ಖಾನೆಗಳ ತಿದ್ದುಪಡಿ ಮಸೂದೆ ಕಾರ್ಮಿಕ ವಿರೋಧಿಯೇ?

 

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆಯಲ್ಲಿ ಬುಧವಾರ ಕಾರ್ಖಾನೆ ತಿದ್ದುಪಡಿ ಮಸೂದೆ 2016 ಪಾಸ್ ಆಯ್ತು.. ಇದರೊಂದಿಗೆ ಕೈಗಾರಿಕೆಗಳಲ್ಲಿ ಕಾರ್ಮಿಕರ ಹೆಚ್ಚುವರಿ ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ.

ಇಷ್ಟು ದಿನಗಳ ಕಾಲ ತ್ರೈಮಾಸಿಕ ಅವಧಿಯಲ್ಲಿ ಕಾರ್ಮಿಕರು 50 ತಾಸುಗಳ ಕಾಲ ಹೆಚ್ಚುವರಿ ಅವಧಿ ಕೆಲಸ ಮಾಡಬಹುದಿತ್ತು. ಈ ಮಸೂದೆ ಮೂಲಕ ಇದನ್ನು 100 ತಾಸುಗಳಿಗೆ ಹೆಚ್ಚಿಸಲಾಗಿದ್ದು, ವಿಶೇಷ ಸಂದರ್ಭಗಳಲ್ಲಿ 125 ತಾಸುಗಳವರೆಗೂ ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ.

ಯಾಕೆ ಈ ತಿದ್ದುಪಡಿ?

ಕೈಗಾರಿಕೆಗಳ ತಾಂತ್ರಿಕ ವಿಭಾಗಗಳಲ್ಲಿನ ಕೊರತೆಯನ್ನು ನೀಗಿಸಲು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಸಮಾನ ಹೆಚ್ಚುವರಿ ಕೆಲಸದ ಸಮಯ ಜಾರಿ ಮಾಡುವುದು ಹಾಗೂ ಕೈಗಾರಿಕೆಗಳಲ್ಲಿನ ಉತ್ಪನ್ನ ಹೆಚ್ಚಿಸುವುದು ಈ ಮಸೂದೆಯ ಮುಖ್ಯ ಉದ್ದೇಶ.

ಈ ಮಸೂದೆ ಅಗೀಕರಿಸುವ ಮುನ್ನ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ಅವರು ಹೇಳಿದಿಷ್ಟು: ‘ಈ ಮಸೂದೆ ಕಾರ್ಮಿಕರ ಹಿತಾಸಕ್ತಿಗೆ ವಿರೋಧಿಯಾಗಿಲ್ಲ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯೇ ಕಾರ್ಮಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಕೆಲಸದ ಕಾಲಾವಧಿಯನ್ನು 144ಕ್ಕೆ ಸೀಮಿತಗೊಳಿಸಿದೆ. ಈ ಮಸೂದೆಯಲ್ಲಿ ಅದಕ್ಕಿಂತಲೂ ಕಡಿಮೆ ಅವಧಿಯನ್ನೇ ನಿಗದಿ ಮಾಡಲಾಗಿದೆ.’

ಕಾಂಗ್ರೆಸ್ ವಿರೋಧ ಏನು…?

ಈ ಮಸೂದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ‘ಇದು ಉದ್ಯಮಿಗಳಿಗೆ ಮಾತ್ರ ನೆರವಾಗುವ ಮಸೂದೆ. ಇಲ್ಲಿ ಕಾರ್ಮಿಕರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ’ ಎಂದಿದೆ.

ಅಷ್ಟೇ ಅಲ್ಲದೆ, ಈಗ ಲೋಕಸಭೆ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ 2014ರಲ್ಲಿ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಕಾರ್ಮಿಕ ಸುಧಾರಣೆ ವಿಧೇಯಕದಲ್ಲಿ ಕೆಲವು ತಿದ್ದುಪಡಿಗೆ ಶಿಫಾರಸ್ಸು ಮಾಡಲಾಗಿತ್ತು. ಇದು ಸ್ಟ್ಯಾಂಡಿಂಗ್ ಕಮಿಟಿಯಿಂದ ಒಪ್ಪಿಗೆ ಪಡೆಯಲು ಸಿದ್ಧವಾಗಿತ್ತು. ಹೀಗಿರುವಾಗ ಆ ವಿಧೇಯಕ ಬದಲಿಗೆ ಈ ಮಸೂದೆಯನ್ನು ತರಾತುರಿಯಲ್ಲಿ ಜಾರಿಗೊಳಿಸುತ್ತಿರುವುದೇಕೆ ಎಂಬುದು ಕಾಂಗ್ರೆಸ್ ಪ್ರಶ್ನೆ.

‘ಈ ವಿಧೇಯಕವನ್ನು ತಡೆ ಹಿಡಿದಿರುವ ಮೂಲಕ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ, ಕಾರ್ಮಿಕ ಮಕ್ಕಳನ್ನು ಮತ್ತು ಗರ್ಭಿಣಿಯರ ಹಿತಾಸಕ್ತಿ ಕಾಪಾಡುವ ಹಾಗೂ ಅವರಿಗೆ ಭತ್ಯೆಗೆ ಸಂಬಂಧಿಸಿದಂತೆ ಮಾಡಲಾದ ತಿದ್ದುಪಡಿಯನ್ನು ತಡೆ ಹಿಡಿಯಲಾಗಿದೆ’ ಎಂಬುದು ಮಲ್ಲಿಕಾರ್ಜು ಖರ್ಗೆ ಅವರ ಆಕ್ಷೇಪ.

1 COMMENT

  1. ಎರಡು ಪಟ್ಟು ವೇತನಕ್ಕಿರುವ ನಿರ್ಬಂಧಗಳನ್ನು ತೆಗೆಯಬೇಕಿತ್ತು.

Leave a Reply