ಪಿಒಕೆ-ಬಲೊಚ್ ಕಾರ್ಡ್ ತೆರೆದಿಟ್ಟ ಮೋದಿ, ರೈತರಿಗೆ ಜಾಮೀನು, ಬಿಜೆಪಿ ನಾಯಕಗೆ ಗುಂಡೇಟು, ಮೇಕೆ ಹಾಲಿಗೆ ಸೊಸೈಟಿ ನಿರ್ಮಾಣ

Rehearsals for Independence Day in progress at Manekshaw Parade ground in Bengaluru on Friday.

ಆಗಸ್ಟ್ 15ರಂದು ನಡೆಯಲಿರುವ 70ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಮಾಣೆಕ್ ಶಾ ಪೆರೇಡ್ ಗ್ರೌಂಡ್ ನಲ್ಲಿ ಪೂರ್ವಸಿದ್ಧತೆ ತಾಲೀಮಿನಲ್ಲಿ ಶಾಲಾ  ಮಕ್ಕಳು..

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರ ಕುರಿತ ಸರ್ವಪಕ್ಷ ಸಭೆಯಲ್ಲಿ ಏನಾಯ್ತು?

‘ಸಂವಿಧಾನದ ಚೌಕಟ್ಟಿನಲ್ಲಿ ಕಾಶ್ಮೀರಕ್ಕೆ ಏನಾಗುವುದೋ ಆ ಸಹಾಯ ಮಾಡೋಣ. ಉಳಿದಂತೆ ಯಾವುದೇ ರಾಜಿ ಇಲ್ಲ.’ ಇದು ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಾಳಿದ ನಿಲುವು. ಎಲ್ಲ ಪಕ್ಷಗಳೂ ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತದ ಸಾರ್ವಭೌಮತೆ ಎತ್ತಿಹಿಡಿಯುವ ಏಕಧ್ವನಿ ಅನುಸರಿಸುವ ನಿರ್ಣಯಕ್ಕೆ ಬಂದಿವೆ ಎಂದು ನಾಲ್ಕು ತಾಸುಗಳ ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಸಭೆಯಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಕಾಶ್ಮೀರಿಗಳ ಹೃದಯ ಬೆಸೆಯುವ ಹಳೆರಾಗ ತೆರೆದಿದ್ದರಬಹುದಾದರೂ ಪ್ರಧಾನಿ ಮೋದಿ, ಪಿಒಕೆ ಮತ್ತು ಬಲೊಚಿಸ್ತಾನಗಳ ಬಗ್ಗೆ ಮಾತಾಡಿ ಬೇರೆಯದೇ ಮಾರ್ಗ ಹಿಡಿದಿರುವುದು ಸ್ಪಷ್ಟ. ಕಾಶ್ಮೀರದ ಗಲಭೆಗ್ರಸ್ತ ಪ್ರದೇಶಕ್ಕೆ ಸರ್ವಪಕ್ಷಗಳ ನಿಯೋಗ ಹೋಗಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆಯಾದರೂ ಸರ್ಕಾರ ಈ ಬಗ್ಗೆ ಭರವಸೆ ನೀಡಿಲ್ಲ. ಗೃಹ ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವಂತೆ ಪ್ರಧಾನಿ ಹೇಳಿರುವ ಮುಖ್ಯಮಾತು ಇದು- ‘ಜಮ್ಮು-ಕಾಶ್ಮೀರದ ಭಾಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದೇ. ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಬಲೊಚಿಸ್ತಾನಗಳಲ್ಲಿ ನಡೆಸುತ್ತಿರು ಮಾನವ ಹಕ್ಕು ದಮನವನ್ನು ನಾವು ಜಗತ್ತಿನೆದುರು ಹೇಳಬೇಕು. ಜಮ್ಮು- ಕಾಶ್ಮೀರದ ಬಗ್ಗೆ ಪಾಕಿಸ್ತಾನದೊಂದಿಗೆ ಮಾತನಾಡುವ ಪ್ರಶ್ನೆಯೇ ಇಲ್ಲ. ಅವರ ಜತೆಗೇನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚರ್ಚೆ’

ಮಹದಾಯಿ ರೈತ ಹೋರಾಟಗಾರರಿಗೆ ಜಾಮೀನು

ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಬಂಧಿತರಾಗಿದ್ದ ಧಾರವಾಡದ ನವಲಗುಂದ ತಾಲೂಕಿನ 179 ರೈತರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಪ್ರತಿಭಟನೆ ವೇಳೆ ಧಾರವಾಡ, ಗದಗ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರಗೊಂಡು ನವಲಗುಂದ ಮತ್ತು ಯಮನೂರಿನಲ್ಲಿ ಪೊಲೀಸರತ್ತ ಕಲ್ಲು ತೂರಾಟ ನಡೆದು ಲಾಠಿ ಚಾರ್ಜ್ ಆಗಿತ್ತು. ಈ ವೇಳೆ ಹಲವು ರೈತರನ್ನು ಪೊಲೀಸರು ಬಂಧಿಸಿದ್ರು. 25 ಪ್ರಕರಣಗಳಡಿ 187 ರೈತರ ಬಂಧನವಾಗಿತ್ತು. ಎರಡು ದಿನಗಳ ಹಿಂದೆ 8 ಜನರಿಗೆ ಜಾಮೀನು ಸಿಕ್ಕಿತ್ತು. ಬಂಧಿತ ರೈತರು ತಲಾ ₹ 50 ಸಾವಿರ ಬಾಂಡ್ ನೀಡಬೇಕು. ಪ್ರತಿ ಸೋಮವಾರ ಧಾರವಾಡ ಜಿಲ್ಲೆಯ ನವಲಗುಂದ ಠಾಣೆಗೆ ಹಾಜರಾಗಬೇಕು, ಸಾಕ್ಷಿ ನಾಶ ಮಾಡಬಾರದು, ಶಾಂತಿಭಂಗ ಮಾಡಬಾರದು ಎಂದು ಷರತ್ತು ವಿಧಿಸಿದ ಜಿಲ್ಲಾ ಕೋರ್ಟ್ ಜಾಮೀನು ಮಂಜೂರು ಮಾಡಿತು.

ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ

ಉತ್ತರಪ್ರದೇಶ ಬಿಜೆಪಿ ನಾಯಕ ಬ್ರಿಜ್ವಾಲ್ ತೆವತಿಯಾ ಅವರ ಕಾರಿನ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಅವರ ಸ್ಥಿತಿ ಗಂಭೀರವಾಗಿದೆ. ಸುಮಾರು 100 ಬಾರಿ ಗುಂಡು ಹಾರಿಸಿದ್ದು,ಮೂರು ಗುಂಡುಗಳು ದೇಹದ ಒಳಹೊಕ್ಕಿರುವ ಇವರನ್ನು ಘಾಜಿಯಾಬಾದಿನ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಪಂಜಾಬ್ ನಲ್ಲಿ ರಾಜ್ಯ ಆರೆಸ್ಸೆಸ್ ಉಪಾಧ್ಯಕ್ಷ ಜಗದೀಶ್ ಗಗ್ನೇಜಾ ಅವರ ಮೇಲೂ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ಈ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆದಿರುವುದು ಆತಂಕ ಮೂಡಿಸಿದೆ.

ಮೇಕೆ ಹಾಲು ಮಾರಾಟಕ್ಕೆ ಸೊಸೈಟಿ ನಿರ್ಮಾಣ

ಕೆಎಂಎಫ್ ಮಾದರಿಯಲ್ಲಿ ಮೇಕೆ ಹಾಲು ಖರೀದಿಗೆ ಸೊಸೈಟಿಗಳನ್ನು ನಿರ್ಮಾಣ ಮಾಡುವ ಯೋಜನೆ ಸಿದ್ಧ ಮಾಡಲಾಗ್ತಿದೆ ಅಂತ ಪಶುಸಂಗೋಪನಾ ಸಚಿವ ಎ. ಮಂಜು ಮಾಹಿತಿ ನೀಡಿದ್ದಾರೆ.

ಲಾಲ್ ಬಾಗ್ ನಲ್ಲಿ ‘ಮೈ ಗೋಟ್’ ಮೇಕೆ ಹಾಲು ಮಾರಾಟ ಮಳಿಗೆ ಉದ್ಘಾಟನೆಯಾಯಿತು. ಮೈಸೂರಿನ ಜಿಲ್ಲೆ ನಂಜನಗೂಡು ತಾಲೂಕಿನ ಯೆಡೆಹಳ್ಳಿಯಲ್ಲಿ ಸುಮಾರು 50 ಎಕರೆಯಲ್ಲಿ 1500 ಮೇಕೆಗಳ `ಮೇಕೆ ಫಾರ್ಮ್ ಯಶೋಧವನ’ ಸಂಸ್ಥೆ ಈ ಮೇಕೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಾಲು ಪ್ರತೀ ಲೀಟರ್ ಬೆಲೆ ಬೆಂಗಳೂರಿನಲ್ಲಿ 250 ರೂ ನಿಗದಿಪಡಿಸಲಾಗಿದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಬೇಡಿಕೆಯೂ ಇದೆ. ಸೆಪ್ಟೆಂಬರ್ 1 ರಿಂದ ಆನ್ ಲೈನ್ ಮೂಲಕ ಮೇಕೆ ಹಾಲು ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ರು ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸಾಚಾರ್.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಹೇಳಿದಿಷ್ಟು:

‘ಮೇಕೆ ಹಾಲು ಖರೀದಿ ಹಾಗೂ ಮಾರಾಟಕ್ಕೆ ಸೊಸೈಟಿಗಳ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಕಳೆದ ಬಜೆಟ್ನಲ್ಲಿ ₹5 ಕೋಟಿ ಮೀಸಲಿಡಲಾಗಿತ್ತು. ತಾಯಿ ಹಾಲಿನಷ್ಟೇ ಶ್ರೇಷ್ಠವಾಗಿರುವ ಮೇಕೆ ಹಾಲು ರೈತರ ಬದುಕನ್ನು ಹಸನು ಮಾಡಲಿದೆ. ಇನ್ನು ರಾಜ್ಯದ 34 ಕುರಿ ಮತ್ತು ಮೇಕೆ ಮಾರಾಟ ಮಳಿಗೆಗಳ ಮೂಲಕ ಮೇಕೆ ಮತ್ತು ಕುರಿ ಮಾಂಸ ಮಾರಾಟ ಮಾಡಿ ಮಾರಾಟಗಾರರಿಗೆ ಅನ್ಯಾಯವಾಗದಂತೆ ಪೂರ್ತಿ ಮೇಕೆ ಅಥವಾ ಕುರಿಯ ಭಾರಕ್ಕೆ ಹಣ ನೀಡುವ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಬಜೆಟ್ ನಲ್ಲಿ ಘೋಷಿಸಿರುವಂತೆ ವಿಧವೆಯರಿಗೆ ಮತ್ತು ನಿರಾಶ್ರಿತ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ 10 ಸಾವಿರ ಘಟಕಗಳ ಮೇಕೆ ಅಥವಾ ಕುರಿಗಳನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ತಿಂಗಳಿನಿಂದ ಶೇ. 75ರ ಸಬ್ಸಿಡಿಯೊಂದಿಗೆ ನೀಡಲಾಗುವುದು.’

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ನ್ಯಾಯಾಧೀಶರ ನೇಮಕ ಪ್ರಕ್ರಿಯೆ ನಿಧಾನವಾಗುತ್ತಿರೋದನ್ನು ಖಂಡಿಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದೆ.
  • ದೆಹಲಿಯಲ್ಲಿ ಇತ್ತೀಚೆಗೆ 2 ಸಾವಿರ ಮತ್ತು ಅದಕ್ಕೂ ಹೆಚ್ಚಿನ ಸಿಸಿಯ ಡಿಸೆಲ್ ಕಾರುಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೆರವುಗೊಳಿಸಿದೆ. ಇದು ಕಾರು ತಯಾರಿಕ ಕಂಪನಿಗಳಿಗೆ ನಿರಾಳ ತಂದಿದೆ.
  • ಅಮೆರಿಕ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರನ್ನು ವಲಸೆ ಇಲಾಖೆ ಅಧಿಕಾರಿಗಳು ತಡೆ ಹಿಡಿದು ತಪಾಸಣೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾದ ನಂತರ ಅಮೆರಿಕ ರಾಯಭಾರಿ ಕಚೇರಿಯಿಂದ ಶಾರುಖ್ ಅವರಿಗೆ ಕ್ಷಮೆ ಕೋರಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾರುಖ್, ‘ತೊಂದರೆ ಇಲ್ಲ.. ನಿಮ್ಮ ಭದ್ರತಾ ಪ್ರಕ್ರಿಯೆಯನ್ನು ಗೌರವಿಸುತ್ತೇನೆ. ಈ ವ್ಯವಸ್ಥೆಯನ್ನೂ ಮೀರಬೇಕೆಂದು ನಾನು ಬಯಸುವುದಿಲ್ಲ. ನಿಮ್ಮ ಸೌಜನ್ಯಕ್ಕೆ ಧನ್ಯವಾದಗಳು’ ಎಂದರು.

Leave a Reply