‘ನಮ್ಮವರು ಸೆಲ್ಫಿ ತೆಗೆಸಿಕೊಳ್ಳಲು ಒಲಂಪಿಕ್ಸ್ ಗೆ ಹೋಗಿದ್ದಾರೆ’ ಎನ್ನುವ ಶೋಭಾ ಡೇ ಟ್ವಿಟರ್ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಅದು ಒಂದು ರೀತಿಯಲ್ಲಿ ಭಾರತೀಯರ ಮನಸ್ಥಿತಿಯನ್ನು ತೆರೆದಿಡುತ್ತದೆ ಎಂದು ಹೇಳ ಬಹುದು. ಸದಾ ಗೆಲುವಿಗೆ ಹಪಹಪಿಸುವ ಮನಸ್ಥಿತಿಗೆ ಅಭಿನವ್ ಬಿಂದ್ರಾ ಕೂದಲೆಳೆಯಲ್ಲಿ ಪದಕ ಕಳೆದುಕೊಂಡ ನಿರಾಸೆ ಕೂಡ ತಾಕದೆ ಹೋಗಿದೆ. ‘ಒಲಂಪಿಕ್ಸ್’ ಎನ್ನುವುದು ಜಾಗತಿಕ ಮಟ್ಟದ ಮಾನವೀಯ ಬೆಸುಗೆ ಎಂಬ ತಾತ್ವಿಕತೆಯ ಅರಿವು ಕೂಡ ಕ್ರೀಡೆಯಷ್ಟೇ ಮುಖ್ಯ ಎನ್ನುವಂತಹ ಸಂವೇದನೆ ಸಿನಿಮಾ ಸೇರಿದಂತೆ ಭಾರತೀಯ ಮಾಧ್ಯಮಗಳಿಗೆ ಇಲ್ಲದಿರುವದರಿಂದಲೇ ಇಂತಹ ವಿಪರೀತ ಪ್ರತಿಕ್ರಿಯೆಗಳು ಬರುತ್ತಿವೆ. ಒಲಂಪಿಕ್ ವಿಜೇತೆ ‘ಮೇರಿ ಕೋಮ’ರ ಜೀವನವನ್ನು ಆಧರಿಸಿದ ಚಿತ್ರವನ್ನೇ ನೋಡಿ ಇಲ್ಲಿ ನೈಜ ಘಟನೆಗಳಿಗಿಂತ ಬಾಲಿವುಡ್ ಸೂತ್ರಗಳಿಗೇ ಮಹತ್ವ ದೊರಕಿದೆ. ಮುಖ್ಯವಾಗ ಬೇಕಿದ್ದ ಮಣಿಪುರವಾಗಲೀ ಅಲ್ಲಿನ ಸಂಸ್ಕೃತಿಯಾಗಲೇ ಚಿತ್ರದಲ್ಲಿ ಕಾಣಿಸುವುದೇ ಇಲ್ಲ. ಇನ್ನೂ ದೊಡ್ಡ ವಿಪರ್ಯಾಸವೆಂದರೆ ಚಿತ್ರ ರೂಪಿಸಿದವರಿಗೆ ಬಾಕ್ಸಿಂಗ್ಗೂ ಬೀದಿ ಬದಿಯ ಹೊಡದಾಟಕ್ಕೂ ವ್ಯತ್ಯಾಸವಿದೆ ಎನ್ನುವುದೂ ಕೂಡ ಗೊತ್ತಿಲ್ಲ. ಇದು ಒಂದು ಮಾದರಿಯಾದರೆ, ‘ಭಾಗ್ ಮಿಲ್ಕಾಸಿಂಗ್’ ಚಕ್ ದೇ ಇಂಡಿಯಾ’ದಂತಹ ಚಿತ್ರಗಳು ಕ್ರೀಡೆಗಿಂತಲೂ ಭಾವನಾತ್ಮಕ ವಿಚಾರಗಳಿಗೆ ಮಹತ್ವ ನೀಡಿದ್ದವು. ಒಂದು ರೀತಿಯಲ್ಲಿ ಇವೆರಡೂ ಭಾರತೀಯ ಮನಸ್ಥಿತಿಯ ಎರಡು ನೆಲೆಗಳನ್ನು ಬಿಂಬಿಸುತ್ತವೆ. ಇದರ ಹೊರತಾದ ಸಾಧ್ಯತೆಗಳ ಅರಿವಿಲ್ಲದಿರುವುದರಿಂದಲೇ ಬಹುತೇಕರಿಗೆ ಒಲಂಪಿಕ್ಸ್ನಲ್ಲಿನ ಭಾರತೀಯರ ಸೋಲನ್ನು ಅರಗಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.
ಆದರೆ ಜಾಗತಿಕವಾಗಿ ಕೂಡ ಇದಕ್ಕಿಂತ ಭಿನ್ನವಾದ ವಾತಾವರಣವಿಲ್ಲ. ಒಲಂಪಿಕ್ಸ್ ಬಗೆಗೆ ಬಂದಿರುವ ಜಾಗತಿಕ ಚಿತ್ರಗಳಲ್ಲಿಯೂ ಭಾವನಾತ್ಮಕ, ರಾಜಕೀಯ ನೆಲೆಗಳೇ ಹೆಚ್ಚಾಗಿವೆ ‘ಕೂಲ್ ರನ್ನಿಂಗ್ಸ್ (1993), ಚಾರಿಯಟ್ಸ್ ಅಫ್ ಫೈರ್(1981), ಮಿರಾಕಲ್(2004), ಮ್ಯೂನಿಚ್(2005), ದಿ ಕಟಿಂಗ್ ದಿ ಎಡ್ಜ್ (1992)ದಂತಹ ಚಿತ್ರಗಳ ಕುರಿತು ವಿಮರ್ಶಕರು ಇಂತಹ ಅಂಶಗಳನ್ನು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ‘ಒಲಂಪಿಯಾ 1936’ಎನ್ನುವ ಸಿನಿಮಾ ಮುಖ್ಯವಾಗುವುದು. ವಿಪರ್ಯಾಸವೆಂದರೆ ಜಗತ್ತಿನ ಶ್ರೇಷ್ಠ ನೂರು ಚಿತ್ರಗಳಲ್ಲಿ ಒಂದು ಎನ್ನುಬ ಹೆಗ್ಗಳಿಕೆಯನ್ನು ಪಡೆದಿರುವ ಈ ಚಿತ್ರವನ್ನು ರೂಪಿಸಿದವನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್. 1936ರಲ್ಲಿ ಬರ್ಲಿನ್ನಲ್ಲಿ ನಡೆದ ಒಲಂಪಿಕ್ಸ್ ನ ಚಿತ್ರಣವನ್ನು ನೀಡುವ ಈ ಚಿತ್ರವನ್ನು ನಿರ್ದೇಶಿಸಿದ್ದು ಅವನ ನೆಚ್ಚಿನ ಜರ್ಮನ್ ನಿರ್ದೇಶಕಿ ಲೇನಿ ರೆಫೆಸ್ತಲ್. ಅಷ್ಟೇ ಅಲ್ಲ ಚಿತ್ರ ರೂಪುಗೊಂಡಿದ್ದೂ ಕೂಡ ಶ್ವೇತ ವರ್ಣೀಯರ ಶ್ರೇಷ್ಠತೆಯನ್ನು ಹೇಳಬೇಕು ಎನ್ನುವ ತಾತ್ವಿಕತೆಯಿಂದ. ಆದರೆ ಚಿತ್ರ ಬೆಳೆಯುತ್ತಾ ಹೊಸ ಅಯಾಮಗಳನ್ನು ಪಡೆಯುತ್ತಾ ಹೋಗಿದೆ. ಚಿತ್ರದ ಆರಂಭದಲ್ಲಿಯೇ ಬಲಿಷ್ಠರಾದ ಶ್ವೇತ ವರ್ಣಿಯರು ಮತ್ತು ಸಾಧಾರಣ ಮೈಕಟ್ಟಿನ ಕಪ್ಪು ವರ್ಣದವರನ್ನು ತೋರಿಸಲಾಗುತ್ತದೆ. ಓಟದ ಸ್ಪರ್ಧೆಯ ವೀಕ್ಷಕ ವಿವರಣೆಯಲ್ಲಿ ‘ಇಬ್ಬರು ಕಪ್ಪು ವರ್ಣದವರು ಬಲಶಾಲಿಯಾದ ಒಬ್ಬ ಶ್ವೇತ ವರ್ಣದವನೆದುರು ತಿಣುಕಾಡುತ್ತಿದ್ದಾರೆ’ ಎನ್ನುವ ಮಾತುಗಳು ಬಂದಿವೆ. ಆದರೆ ಇವೆಲ್ಲವೂ ಬದಲಾಗುವುದು ಜೆಸ್ಸಿ ಓವೆನ್ಸ್ರ ಸ್ಪರ್ಧೆ ಬಂದಾಗ. ಓವೆನ್ಸ್ ಮೊದಲ ಬಂಗಾರದ ಪದಕವನ್ನು ಗೆದ್ದಾಗ ‘ಕಾಡಿನಲ್ಲಿ ಮೃಗಗಳಂತೆ ಬದುಕಿದವರು, ನಗರದಲ್ಲಿ ಪಳಗಿದ ಬಿಳಯರನ್ನು ಹೀಗೂ ಸೋಲಿಸ ಬಲ್ಲರು’ ಎಂದು ಹಿಟ್ಲರ್ ಗೊಣಗಿದ್ದು ಕೂಡ ಚಿತ್ರದಲ್ಲಿ ಸ್ಪಷ್ಟವಾಗಿ ಮೂಡಿ ಬಂದಿದೆ. ಆದರೆ ಓವೆನ್ಸ್ ಲಾಂಗ್ ಜಂಪ್ನಲ್ಲಿ ಬಂಗಾರದ ಪದಕವನ್ನು ಗೆದ್ದಾಗ ಹಿಟ್ಲರ್ ಸ್ವತ: ಬಂದು ಅಭಿನಂದಿಸುತ್ತಾನೆ. ಅವನ ಕಣ್ಣುಗಳಲ್ಲಿ ಈಗ ಮೆಚ್ಚಿಗೆ ಇದೆ. ಪದಕದಿಂದ ಪದಕಕ್ಕೆ ಹಿಟ್ಲರ್ನ ಮುಖದಲ್ಲಿ ಕಾಣುವ ಬದಲಾವಣೆಯ ಸ್ವರೂಪವನ್ನು ಚಿತ್ರವನ್ನು ನೋಡಿಯೇ ಅನುಭವಿಸ ಬೇಕು. ಇಲ್ಲಿಯವರೆಗೆ ಓವೆನ್ಸ್ನ ಪಾರ್ಶ್ವವನ್ನಷ್ಟೇ ತೋರಿಸುತ್ತಿದ್ದ ಕ್ಯಾಮರಾ ಈಗ ಪೂರ್ಣವಾಗಿ ತೋರಿಸಲು ಆರಂಭಿಸುತ್ತದೆ. ನಾಲ್ಕೂ ಬಂಗಾರದ ಪದಕವನ್ನು ಗೆದ್ದೆ ಓವೆನ್ಸ್ನ ಸಾಧನೆಯನ್ನು ಹಿಟ್ಲರ್ ಸೇರಿದಂತೆ ಜರ್ಮನಿಯ ಎಲ್ಲಾ ಪ್ರೇಕ್ಷಕರು ಕೊಂಡಾಡಿದ್ದೂ ಚಿತ್ರದಲ್ಲಿ ದಾಖಲಾಗಿದೆ. ಇಲ್ಲಿ ಕ್ರೀಡೆ ಸರ್ವಾಧಿಕಾರಿ ಮನೋಭಾವದ ಮೇಲೆ ಸ್ಪಷ್ಟ ವಿಜಯವನ್ನು ಸಾಧಿಸಿದೆ.
ಚಿತ್ರದಲ್ಲಿ ದಾಖಲಾಗಿರುವ ಸಂದರ್ಶನದಲ್ಲಿ ಓವೆನ್ಸ್ ಹೇಳುತ್ತಾರೆ. ‘ಅಮೆರಿಕಾದಲ್ಲಿ ನಾನು ಬದುಕಿದ ಅಲ್ಬೇಮಾ ಪ್ರಾಂತ್ಯದಲ್ಲಿ ಕರಿಯರು ಕ್ರೀಡೆಯಲ್ಲಿ ಭಾಗವಹಿಸಲು ಅರ್ಹರು ಎಂದೂ ಕೂಡ ಭಾವಿಸಿಲ್ಲ. ಅಧ್ಯಕ್ಷ ಫ್ರಾಂಕ್ ರೂಸ್ವೆಲ್ಟ್ ನನ್ನನ್ನು ಈ ಕ್ರೀಡಾಕೂಟಕ್ಕೆ ಕಳುಹಿಸಲೇ ಸಿದ್ದರಿರಲಿಲ್ಲ. ಹಿಟ್ಲರ್ ನನ್ನನ್ನು ಅಭಿನಂದಿಸಲಿಲ್ಲ ನಿಜ, ರೂಸ್ವೆಲ್ಟ್ ಕೂಡ ಅಭಿನಂದಿಸಲಿಲ್ಲ ಎನ್ನುವದೂ ಅಷ್ಟೇ ನಿಜ!’ ತಾಂತ್ರಿಕವಾಗಿ ಯಾವ ಸೌಕರ್ಯಗಳೂ ಇಲ್ಲದ, ಸಿನಿಮಾ ಎಂದರೆ ಏನೂ ಎಂಬುದರ ಕುರಿತು ಖಚಿತ ಕಲ್ಪನೆಗಳಿಲ್ಲದ ಆ ಕಾಲದಲ್ಲಿ ಸ್ಕ್ರಿಪ್ಟ್ ಇಲ್ಲದೆ ನೈಜ ಘಟನೆಗಳ ಚಿತ್ರೀಕರಣದಿಂದಲೇ ರೂಪುಗೊಂಡ ‘ಒಲಂಪಿಯಾ 1936’ ರೂಪುಗೊಳ್ಳಲು ಎರಡು ವರ್ಷಗಳೇ ಹಿಡಿಯಿತು. ನಂತರ ಅದನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲು ರೋಫಸ್ತಲ್ 1938ರ ಏಪ್ರಿಲ್ 20ರಂದು ನ್ಯೂಯಾರ್ಕಿಗೆ ಬಂದರು. ಅಂದೇ ಮೂವತ್ತು ಸಾವಿರ ಯಹೂದಿಗಳ ಕಗ್ಗೊಲೆಯ ಸುದ್ದಿ ಬಂದಿತು. ಚಿತ್ರದ ಬಿಡುಗಡೆಗೆ ಅವಕಾಶ ಸಿಗಲಿಲ್ಲ. 1939ರಲ್ಲಿ ಇಂಗ್ಲೆಂಡ್ ಸೇನೆ ಚಿತ್ರವನ್ನು ವಶ ಪಡಿಸಿಕೊಂಡಿತು.
ಮುಂದೆ ‘ಒಲಂಪಿಯಾ’ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದ್ದು 1956 ಮೇ 12ರಂದು. ಅಲ್ಲಿಯವರೆಗೆ ಸಾಕ್ಷಚಿತ್ರವೆಂದಷ್ಟೇ ಅದನ್ನು ಎಲ್ಲರೂ ಭಾವಿಸಿದ್ದವರು. ಆದರೆ ಆಗಲೇ ರೂಪಿತವಾಗಿದ್ದ ಸಿನಿಮಾದ ಎಲ್ಲಾ ಲಕ್ಷಣಗಳೂ ಚಿತ್ರಕ್ಕೆ ಇತ್ತು ಮಾತ್ರವಲ್ಲ ಎಲ್ಲರೂ ಗ್ರಹಿಸಿದ್ದಂತೆ ಚಿತ್ರದ ನಿಜವಾದ ಹೀರೋ ಹಿಟ್ಲರ್ ಆಗಿರಲಿಲ್ಲ. ಜೆಸ್ಸಿ ಓವೆನ್ಸ್ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಒಲಂಪಿಕ್ಸ್ ನ ಕ್ರೀಡಾ ಮನೋಭಾವದ ಸಂದೇಶವನ್ನು ಚಿತ್ರ ಸ್ಪಷ್ಟವಾಗಿ ಹೇಳಿತ್ತು. ವಿಮರ್ಶಕ ಆಲ್ಟರ್ಬ ಸ್ಟೀಲ್ ಗುರುತಿಸಿರುವಂತೆ ‘ಯೋಜಿತ ಸ್ಕ್ರಿಪ್ಟ್, ತಾಂತ್ರಿಕತೆ, ಅಭಿನಯ ಎಲ್ಲವೂ ಹೊಂದಿದ ಎಷ್ಟು ಚಿತ್ರಗಳು ಇಂತಹ ಕ್ರೀಡಾ ಮನೋಭಾವದ ಸಂದೇಶವನ್ನು ನೀಡಿವೆ?’
ಇಂದಿಗೂ ‘ಒಲಂಪಿಯಾ’ಚಿತ್ರವನ್ನು ನೋಡಿದಾಗ ಚರಿತ್ರೆಯ ಪುಟಗಳು ಕಣ್ಮಂದೆ ಬರುವುದು ಮಾತ್ರವಲ್ಲ ಒಲಂಪಿಕ್ಸ್ ನ ಸಂದೇಶ ಕೂಡ ಮನಸ್ಸನ್ನು ಮುಟ್ಟುತ್ತದೆ. ರಿಯೋ ಒಲಂಪಿಕ್ಸ್’ನಲ್ಲಿ ಭಾರತೀಯರ ಪ್ರದರ್ಶನವನ್ನು ಈ ಹಿನ್ನೆಲೆಯಿಂದ ನೋಡಿ ಹೊಸ ಸಾಧ್ಯತೆಗಳು ಖಂಡಿತವಾಗಿಯೂ ದೊರಕುತ್ತವೆ.