ಮೋದಿ ನೇತೃತ್ವದ ಭಾರತವು ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಕೊಡಿಸಲಿ, ಬಾಂಬ್ ದಾಳಿಗಳಿಂದ ಸುದ್ದಿಯಾಗಿರುವ ಬಲೊಚಿಸ್ತಾನದ ಪರ ಮೊಳಗುತ್ತಲೇ ಇದೆ ಮನವಿ!

ಚೈತನ್ಯ ಹೆಗಡೆ

ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಗುರುವಾರ ರಸ್ತೆ ಪಕ್ಕದಲ್ಲಿ ಬಾಂಬ್ ಸ್ಫೋಟಿಸಿ 13 ಜನ ಸತ್ತಿರುವ ಹಾಗೂ ಅದಕ್ಕೂ ಒಂದು ದಿನ ಮೊದಲು ಇದೇ ಪ್ರಾಂತ್ಯದ ಆಸ್ಪತ್ರೆಯಲ್ಲಾದ ಸ್ಫೋಟಕ್ಕೆ ಬಲೋಚಿನ ನವ ತಲೆಮಾರಿನ ವಕೀಲರೇ ಇಲ್ಲವಾಗಿ, 74 ಸಾವುಗಳಾದ ಸುದ್ದಿಯನ್ನು ಓದಿರುತ್ತೀರಿ. ಪಾಕಿಸ್ತಾನದ ತಾಲಿಬಾನ್ ಗುಂಪು, ಐಸಿಸ್ ಹೀಗೆ ಹಲವರು ತಾವೇ ಮಾಡಿದ್ದು ಎನ್ನುತ್ತಿದ್ದಾರೆ. ಉಗ್ರವಾದವನ್ನು ಬೆಳೆಸಿರುವುದು ಪಾಕಿಸ್ತಾನವೇ ಆದ್ದರಿಂದ ಇದೊಂದು ಭಸ್ಮಾಸುರ ಪ್ರಕ್ರಿಯೆ ಎಂದು ಮೇಲ್ನೋಟಕ್ಕೆ ವ್ಯಾಖ್ಯಾನಿಸುವುದೇನೋ ಸರಿ.

ಬಲೋಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಹೀಗೆ ಎರಡು ದಿನಗಳಲ್ಲಿ ಸತ್ತವರ ಬಗ್ಗೆ ಜಾಗತಿಕ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದೆ. ಈ ಸಾವುಗಳಿಗೆ ಮಾನವತೆ ಮರುಕಪಡಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಬಲೊಚಿಸ್ತಾನದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲೇ ಬರೋಬ್ಬರಿ 25 ಸಾವಿರ ಸಂಖ್ಯೆಯಲ್ಲಿ ಜನ ನಾಪತ್ತೆಯಾಗಿರುವುದರ ಬಗ್ಗೆ ಜಗತ್ತೇಕೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿಲ್ಲ? ಮಾನವ ಹಕ್ಕು ಸಂಘಟನೆಗಳೇಕೆ ಗದ್ದಲ ಎಬ್ಬಿಸುತ್ತಿಲ್ಲ? ಏಕೆಂದರೆ ಬಲೊಚಿಸ್ತಾನದಲ್ಲಿ ಲಾಗಾಯ್ತಿನಿಂದ ಮನೆ ಮನೆಗೆ ನುಗ್ಗಿ ಕೊಲೆ, ಅತ್ಯಾಚಾರ, ಅನಾಚಾರಗಳಲ್ಲಿ ಮಗ್ನವಾಗಿರುವುದು ಖುದ್ದು ಪಾಕಿಸ್ತಾನದ ಸೇನೆಯೇ!

ಅದೇಕೆ ಪಾಕಿಸ್ತಾನವು ಬಲೋಚಿನಲ್ಲಿ ತನ್ನದೇ ದೇಶದ ಜನರ ಗೋರಿಗಳನ್ನು ಕಟ್ಟುತ್ತಿದೆ? ಏಕೆಂದರೆ ಬಲೊಚಿಸ್ತಾನದ ಜನ ಪಾಕಿಸ್ತಾನದಿಂದ ಸ್ವಾತಂತ್ರ್ಯ ಬಯಸುತ್ತಿದ್ದಾರೆ ಹಾಗೂ ಇದು ನಿನ್ನೆ- ಮೊನ್ನೆ ಹುಟ್ಟಿಕೊಂಡ ಬೇಡಿಕೆ ಅಲ್ಲ.

ನಿಜ.. ಭಾರತದಲ್ಲಿ ಸಹ ಕೆಲ ಈಶಾನ್ಯ ರಾಜ್ಯಗಳಲ್ಲಿ, ಕಾಶ್ಮೀರದ ಕೆಲವು ಭಾಗಗಳಲ್ಲಿ ಆಜಾದಿ ಘೋಷಣೆ ಮೊಳಗಿತ್ತು. ಆದರೆ ಇದನ್ನು ಬಲೊಚಿಸ್ತಾನದ ವಿದ್ಯಮಾನದೊಂದಿಗೆ ಹೋಲಿಸುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ… ಗೊತ್ತಿರಲಿ, ಈ ಬಲೊಚಿಸ್ತಾನ ಪ್ರಾಂತ್ಯ ಪಾಕಿಸ್ತಾನದ ಶೇ.40 ರಷ್ಟು ಭೂಪ್ರದೇಶವನ್ನು ಹೊಂದಿದೆ!

1947 ರಲ್ಲಿ ದೇಶ ವಿಭಜನೆಯಾದಾಗ ಬಲೊಚಿಸ್ತಾನಕ್ಕೆ ಪಾಕಿಸ್ತಾನದೊಂದಿಗೆ ಸೇರಿಕೊಳ್ಳಲು ಇಷ್ಟವಿರಲಿಲ್ಲ. ಆದರೆ, 1948 ರಲ್ಲಿ ಬಲೊಚಿಸ್ತಾನದಲ್ಲಿ ಸೇನಾ ಬಲ ಪ್ರಯೋಗದ ಮೂಲಕ ಪಾಕಿಸ್ತಾನ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಲ್ಲಿಂದ ಇಲ್ಲಿಯವರೆಗೂ ಅಲ್ಲಿನ ಪ್ರಜೆಗಳು ಆ ಪ್ರದೇಶವನ್ನು ಆಕ್ರಮಿತ ಪ್ರದೇಶ ಅಂತಲೇ ಕರೆಯುತ್ತಾರೆ. ಬಲೊಚಿಸ್ತಾನದ ಸ್ವಾತಂತ್ರ್ಯಕ್ಕಾಗಿ 1950, 60 ಮತ್ತು 70 ರ ದಶಕಗಳಲ್ಲಿ ಪಾಕಿಸ್ತಾನದಲ್ಲಿ ಹಲವು ದಂಗೆಗಳು ಎದ್ದವು. ಈ ಎಲ್ಲ ದಂಗೆಗಳನ್ನು ಸೇನೆಯ ಮೂಲಕವೇ ಹತ್ತಿಕ್ಕಲಾಯಿತು. ಆದರೆ 2000 ಇಸವಿಯ ನಂತರ ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆ ನಂತರ ಬಲೊಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿತು. 2004ರಿಂದ ಬಲೊಚ್ ಬಂಡಾಯ ಗುಂಪು ಪಾಕಿಸ್ತಾನ ಸೇನೆಯೊಂದಿಗೆ ನಿರಂತರವಾಗಿ ಕಾದಾಟ ನಡೆಸಲಾರಂಭಿಸಿತು. 2009 ರಲ್ಲಿ ಬಲೊಚ್ ನ್ಯಾಷನಲ್ ಮೊಮೆಂಟ್ ಅಧ್ಯಕ್ಷ ಗುಲಮ್ ಮೊಹಮದ್ ಬಲೊಚ್ ಮತ್ತು ಇತರೆ ಇಬ್ಬರು ಪರಿಣಾಮಕಾರಿ ನಾಯಕರ ಹತ್ಯೆಯೂ ಆಯ್ತು. ಈ ಹತ್ಯೆಯನ್ನು ಪಾಕಿಸ್ತಾನ ಸೇನೆಯೇ ನಡೆಸಿದೆ ಎಂಬುದು ಬಲೊಚಿಗರ ಆಪಾದನೆ.

balochistan

ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತವು ಬಲೊಚಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಸತತವಾಗಿ ಮನವಿ ಸಲ್ಲಿಸುತ್ತಿದ್ದಾರೆ ಬಲೊಚಿನ ಹೋರಾಟಗಾರರು. ‘ಅಲ್ರಪ್ಪಾ.. ಬೇರೆ ದೇಶದ ಆಂತರಿಕ ವಿಷಯದಲ್ಲಿ ನಾವು ಕೈ ಹಾಕಲಿಕ್ಕಾಗುವುದಿಲ್ಲವಲ್ಲ..’ ಅಂತ ಭಾರತದ ಪರ ಚಿಂತಕರು (ಸರ್ಕಾರ ಅಧಿಕೃತವಾಗಿ ಮಾತಾಡುವುದು ಅಂತಾರಾಷ್ಟ್ರೀಯ ನಿಯಮದಲ್ಲಿ ತಪ್ಪಾಗುತ್ತದೆ) ಕೇಳಿದಾಗಲೆಲ್ಲ ನಯೆಲಾ ಕ್ವಾದ್ರಿ ಬಲೊಚ್ ಹಾಗೂ ಬಲಾಚ್ ಪರ್ಡಿಲಿ ಅವರಂಥ ಬಲೊಚ್ ರಾಷ್ಟ್ರೀಯವಾದಿ ಹೋರಾಟಗಾರರಿಂದ ಬರುವ ಉತ್ತರ ಏನು ಗೊತ್ತೇ? ‘ಇದು ಜಾಗತಿಕ ಮಾನವ ಹಕ್ಕಿನ ಉಲ್ಲಂಘನೆಯ ವಿಷಯ. ಮಾನವ ಹಕ್ಕು ಉಲ್ಲಂಘನೆಗೂ ಮೀರಿ ಪಾಕ್ ನಡೆಸುತ್ತಿರುವ ಹತ್ಯಾಕಾಂಡವಿದು. ಅವತ್ತು ಬಂಗಾಳಿ ಸಹೋದರರ ಹತ್ಯಾಕಾಂಡದಲ್ಲಿ ಪಾಕಿಸ್ತಾನ ತೊಡಗಿಸಿಕೊಂಡ ಸಂದರ್ಭದಲ್ಲಿ ಭಾರತದ ಸೇನೆ ಅಲ್ಲಿಗೆ ನುಗ್ಗಿ ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರದ ಉದಯಕ್ಕೆ ಕಾರಣವಾಗಲಿಲ್ಲವೇ? ಪಾಕಿಸ್ತಾನ ಈಗ ಬಲೊಚಿಗಳ ಮೇಲೆ ನಡೆಸುತ್ತಿರುವುದೂ ಹತ್ಯಾಕಾಂಡವೇ. ನಾವು ಮುಸ್ಲಿಮರಾದರೂ ನಮ್ಮ ಸಾಂಸ್ಕೃತಿಕ ಇತಿಹಾಸ ಬೇರೆಯೇ ಇದೆ. ಎಲ್ಲರನ್ನೂ ಒಳಗೊಳ್ಳುವ ಭಾರತೀಯ ಸೆಕ್ಯುಲರ್ ತತ್ತ್ವವೇ ನಮ್ಮದೂ ಸಹ. ನಾವು ನಿಮ್ಮ ಸಹೋದರರಲ್ಲವೇನು? ನೀವೇಕೆ ನಮಗೆ ಸಹಾಯ ಮಾಡುತ್ತಿಲ್ಲ?’

ಬಲೊಚಿಸ್ತಾನ ಲಿಬರೇಷನ್ ಆರ್ಗನೈಸೇಷನ್ (ಬಿಎಲ್ಒ) ಹೋರಾಟಗಾರರು ಕೆನಡಾದಲ್ಲಿದ್ದುಕೊಂಡು ಹೋರಾಟ ನಡೆಸುತ್ತಿದ್ದಾರೆ. ಬಲಾಚ್ ಪರ್ಡಿಲಿ 2009ರಿಂದ ದೆಹಲಿಯಲ್ಲೇ ಆಶ್ರಯ ಪಡೆದಿದ್ದಾರೆ. ಇನ್ನೊಬ್ಬಳು ಹೋರಾಟಗಾರ್ತಿ ನಯೆಲಾ ಕ್ವಾದ್ರಿ ಬಲೊಚ್ ಕೆನಡಾದಲ್ಲಿ ಆಶ್ರಯ ಪಡೆದಿದ್ದಾರೆ. ಇವರ ಕುಟುಂಬವನ್ನೇ ಪಾಕಿಸ್ತಾನಿ ಸೇನೆ ಹಿಂಸೆಗೆ ಒಳಪಡಿಸಿದ ಮೇಲೆ ಆಕೆ ಬಲೊಚಿಸ್ತಾನವನ್ನು ತೊರೆಯಬೇಕಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವು ಬಲೊಚಿಗಳ ಮೇಲೆ ನಡೆಸುತ್ತಿರುವ ಅನ್ಯಾಯ- ಅತ್ಯಾಚಾರ- ಹತ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತೊಡಗಿಸಿಕೊಂಡಿರುವ ಈಕೆ, 2016ರ ಮೇನಲ್ಲಿ ಭಾರತಕ್ಕೂ ಭೇಟಿ ಇತ್ತಿದ್ದರು. ನಾನಾ ಮಾಧ್ಯಮಗಳು ಹಾಗೂ ಇನ್ನಿತರ ವೇದಿಕೆಗಳಲ್ಲಿ ಈಕೆ ಹಂಚಿಕೊಂಡಿರುವ ವಿಚಾರಗಳಲ್ಲಿ ಬಲೊಚಿಸ್ತಾನದ ಚಿತ್ರಣ ಸಿಕ್ಕುತ್ತದೆ.

  • ನಾವು ಭಾರತದ ಬೆಂಬಲವನ್ನು ಕೇಳುತ್ತಿರುವುದಕ್ಕೆ ಕಾರಣ ಸ್ಪಷ್ಟವಿದೆ. ಈವರೆಗೆ ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳಿದ್ದವು. ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ನರೇಂದ್ರ ಮೋದಿಯವರಿಗೆ ಸಿಕ್ಕಿರುವ ಬಹುಮತದ ಬೆಂಬಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚಳ, ಆರ್ಥಿಕ ಶಕ್ತಿಯಾಗಿ ನಿಂತಿರುವ ರೀತಿ ಇವೆಲ್ಲವೂ ಸಹಕಾರಿಯಾಗಿವೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಲೇ ಅವರಿಗೆ ಇಲ್ಲಿ ಸಂಭಾಳಿಸಬೇಕಾದ ವಿಷಯಗಳು ಸಾಕಷ್ಟಿದ್ದವು. ಹೀಗಾಗಿ ಎರಡು ವರ್ಷದ ನಂತರ ಇಲ್ಲಿಗೆ ಬಂದು ಬಲೊಚಿಗಳ ಪರವಾಗಿ ಸಹಾಯ ಯಾಚಿಸುತ್ತಿದ್ದೇನೆ. ಈಗಲೂ ಭಾರತಕ್ಕೆ ಅದರದ್ದೇ ಸಮಸ್ಯೆಗಳಿವೆ ಅಂತ ಗೊತ್ತು. ಆದರೆ ಅವತ್ತು ಇಂದಿರಾ ಗಾಂಧಿಯವರು ದೇಶದಲ್ಲಿ ಸಮಸ್ಯೆಗಳಿದ್ದಾಗಲೂ ಬಾಂಗ್ಲಾದೇಶದ ವಿಮೋಚನೆಗೆ ಸ್ಪಂದಿಸಿದರಲ್ಲವೇ? ಜಗತ್ತು ನಮ್ಮ ಬಗ್ಗೆ ಮಾತಾಡಬೇಕೆಂದು ಬಯಸುತ್ತೇವೆ, ಆದರೆ ಅತಿ ಹೆಚ್ಚಿನ ನಿರೀಕ್ಷೆ ಇರುವುದು ನರೇಂದ್ರ ಮೋದಿ ನೇತೃತ್ವದ ಭಾರತದ ಮೇಲೆ.
  • ಬಲೊಚಿಸ್ತಾನವನ್ನು ಕಾಶ್ಮೀರದ ಜತೆ ಹೋಲಿಸಲೇಬಾರದು. ಬ್ರಿಟಿಷ್ ಆಡಳಿತದಲ್ಲಿ ಜಮ್ಮು-ಕಾಶ್ಮೀರ ಭಾರತದ ಭಾಗವಾಗಿತ್ತು ಆದರೆ ಬಲೊಚಿಸ್ತಾನವಲ್ಲ. ಬಲೊಚಿಸ್ತಾನವನ್ನು ಬ್ರಿಟಿಷರು ಅವರ ಸ್ವಾರ್ಥಕ್ಕಾಗಿ ಮೂರು ಭಾಗ ಮಾಡಿದ್ದರು. ವಿಲೀನ ಕಾಯ್ದೆ ಪ್ರಕಾರ ರಾಜಾಡಳಿತ ಪ್ರದೇಶಗಳು ಭಾರತ/ಪಾಕಿಸ್ತಾನಗಳಲ್ಲಿ ವಿಲೀನವಾದವಷ್ಟೆ. ಆದರೆ ಪಾಕಿಸ್ತಾನದ ಸೃಷ್ಟಿಗೆ ಕಾರಣನಾದ ಇದೇ ಜಿನ್ನಾ, ಒಬ್ಬ ವಕೀಲನಾಗಿ ಬಲೊಚಿಸ್ತಾನ ಒಂದು ಪ್ರತ್ಯೇಕ ದೇಶ ಎಂದು ಸೈಮನ್ ಆಯೋಗದ ಎದುರು ವಾದಿಸಿದ್ದ. ಬಲೊಚಿಸ್ತಾನವು ಪಾಕಿಸ್ತಾನದ ಭಾಗವಾಗುವುದಕ್ಕೆ ಒತ್ತಡ ಹೇರುವುದಿಲ್ಲ ಎಂಬ ಭರವಸೆ ಮುರಿದು ನಂತರ ಸೇನೆ ಕಳುಹಿಸಿ ವಿಲೀನ ಮಾಡಿಕೊಂಡ ದ್ರೋಹಿ ಆತ. ಇವತ್ತು ಪಾಕಿಸ್ತಾನದ ಸಂಸತ್ತಿನಲ್ಲಿ ಬಲೊಚಿಸ್ತಾನವನ್ನು ಪ್ರತಿನಿಧಿಸುತ್ತೇನೆಂದು ಹೊರಟವರು ಕೇವಲ ಶೇ.3-4 ಮತ ಪಡೆದವರು. ಅವರು ನಮ್ಮನ್ನು ಪ್ರತಿನಿಧಿಸುವುದಿಲ್ಲ.
  • ಭಾರತ ಅಥವಾ ಜಗತ್ತು ನಮಗೇಕೆ ಸಹಾಯ ಮಾಡಬೇಕೆಂದರೆ ಶಾಂತಿ ಸ್ಥಾಪನೆ ಮತ್ತು ಸ್ಥಿರತೆಗಾಗಿ. ಜಗತ್ತಿನ ಎಲ್ಲ ಉಗ್ರ ದಾಳಿಗಳಿಗೆ ಇಂದು ಪಾಕಿಸ್ತಾನದ ಕೊಂಡಿ ಕಾಣಿಸುತ್ತಿದೆ. ಈ ಪಾಕಿಸ್ತಾನದ ಬಲ-ಹಿತಾಸಕ್ತಿಗಳಿರುವುದು ಜಮ್ಮು-ಕಾಶ್ಮೀರದಲ್ಲೋ, ಬಾಂಗ್ಲಾದಲ್ಲೋ ಅಲ್ಲ. ಎಲ್ಲ ನೈಸರ್ಗಿಕ ಸಂಪತ್ತುಗಳಿರುವುದು ಬಲೊಚಿಸ್ತಾನದಲ್ಲಿ. ಐಎಂಎಫ್ ಹಾಗೂ ಪಾಶ್ಚಾತ್ಯ ಬಲಗಳು ಯಾವ ಆಧಾರದಲ್ಲಿ ಪಾಕಿಸ್ತಾನಕ್ಕೆ ಹಣ ಸುರಿದಿವೆ ಎಂದರೆ ಬಲೊಚಿಸ್ತಾನವಿದೆಯಲ್ಲ ಎಂಬ ಕಾರಣಕ್ಕೆ. ಇವತ್ತು ಚೀನಾ ಎಕನಾಮಿಕ್ ಕಾರಿಡಾರ್ ಮಾತಾಡುತ್ತಿರುವುದು ಬಲೊಚಿಸ್ತಾನದ ನೈಸರ್ಗಿಕ ಸಂಪತ್ತುಗಳನ್ನು ದೋಚುವುದಕ್ಕೆ. ನಮ್ಮ ಹುಡುಗರು ಈಗಲ್ಲಿ ಚೀನಾ ನಿರ್ಮಾಣಗಳನ್ನು ಧ್ವಂಸ ಮಾಡುತ್ತಿದ್ದಾರೆ. ಬಲೊಚಿಸ್ತಾನ ಸ್ವತಂತ್ರವಾದರೆ ಪಾಕಿಸ್ತಾನಕ್ಕೆ ಹೆಚ್ಚು ದಿನ ಅಸ್ತಿತ್ವವನ್ನೇ ಉಳಿಸಿಕೊಳ್ಳಲಾಗುವುದಿಲ್ಲ.
  • ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನವು ಬಲೊಚಿನ ಮಕ್ಕಳು-ಮಹಿಳೆಯರು ಸೇರಿದಂತೆ 25 ಸಾವಿರ ಮಂದಿಯನ್ನು ನಾಪತ್ತೆಯಾಗಿಸಿದೆ. ಹಾಡಹಗಲೇ ಪಾಕ್ ಸೇನೆ ಬಲೊಚಿಗಳನ್ನು ಎತ್ತಿ ಒಯ್ಯುತ್ತದೆ. ಅತ್ಯಾಚಾರದ ಶಿಬಿರಗಳನ್ನೇ ನಿರ್ಮಿಸಿ ಅಲ್ಲಿ ಬಲೊಚಿ ಹೆಂಗಸರ ಮೇಲೆ ನಿರಂತರ ದೌರ್ಜನ್ಯ ಎಸಗಲಾಗುತ್ತಿದೆ. ಅಪಹರಣಕ್ಕೊಳಗಾಗಿದ್ದ ಪರ್ತಕರ್ತನೊಬ್ಬ ಅತ್ಯಾಚಾರ ಘಟಕವನ್ನು ಕಣ್ಣಾರೆ ಕಂಡು ‘ಏಷ್ಯನ್ ಹ್ಯೂಮನ್ ರೈಟ್ ವಾಚ್’ ಸಂಸ್ಥೆಗೆ ವರದಿ ಮಾಡಿದ್ದ.

baloch twi

ಬೇರ್ಯಾವುದೋ ಪ್ರಕರಣಗಳಿಗೆ ಬಲೊಚಿಸ್ತಾನ ಸುದ್ದಿಯಲ್ಲಿದ್ದು ನಮ್ಮ ಗಮನಕ್ಕೆ ಸಂದಿರುವಾಗ ಅದರ ನಿಜ ಸಂಘರ್ಷ ನಮ್ಮ ಅರಿವಿನಲ್ಲಿರಲಿ. ಚರಿತ್ರೆ ಹೇಗೆಲ್ಲ ಮಗ್ಗುಲು ಹೊರಳಿಸುವುದೋ, ಭಾರತದ ಪಾತ್ರ ಏನಾಗಿರುತ್ತದೋ ಯಾರಿಗೆ ಗೊತ್ತು!

Leave a Reply