
ಡಿಜಿಟಲ್ ಕನ್ನಡ ಟೀಮ್:
ರಿಯೋ ಒಲಿಂಪಿಕ್ಸ್ ನಲ್ಲಿ ಗುರುವಾರ ಭಾರತಕ್ಕೆ ಸಿಕ್ಕಿದ್ದು ಮಿಶ್ರಫಲ… ಯಾಕಂದ್ರೆ, ಒಂದೆಡೆ ಬ್ಯಾಡ್ಮಿಂಟನ್ ನಲ್ಲಿ ಭಾರತದ ಖ್ಯಾತ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಶುಭಾರಂಭ ಮಾಡದ್ರೆ, ಆರ್ಚರಿಯಲ್ಲಿ ದೀಪಿಕಾ ಕುಮಾರಿ ಹಾಗೂ ಬೊಂಬೈಲಾ ದೇವಿ ಪ್ರಿಕ್ವಾರ್ಟರ್ ನಲ್ಲಿ ತಮ್ಮ ಹೋರಾಟಕ್ಕೆ ತೆರೆ ಎಳೆದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ ಸಿಂಧು ತಮ್ಮ ಪ್ರತಿಸ್ಪರ್ಧಿ ಹಂಗೇರಿಯ ಲೌರಾ ಸರೊಸಿ ವಿರುದ್ಧ 21-8, 21-9 ಸೆಟ್ ಗಳ ಅಂತರದಲ್ಲಿ ಗೆದ್ದರೆ, ಸೈನಾ ನೆಹ್ವಾಲ್ ಎದುರಾಳಿ ಬ್ರೆಜಿಲ್ ನ ಲೊಹಯ್ನಿ ವಿಸೆಂಟ್ ವಿರುದ್ಧ 21-17, 21-17 ಸೆಟ್ ಗಳಿಂದ ಜಯಿಸಿದ್ರು. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕೆ. ಶ್ರೀಕಾಂತ್ ತಮ್ಮ ಎದುರಾಳಿ ಲಿನೊ ಮುನೊಜ್ ವಿರುದ್ಧ 21-11, 21-17 ಸೆಟ್ ಗಳಿಂದ ಜಯಿಸಿದರು.
ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ನೇಪಾಳದ ತಕಾಹಶಿ ಮತ್ತು ಮಟ್ಸುಟೊಮೊ ಜೋಡಿ ವಿರುದ್ಧ 15-21, 10-21 ಸೆಟ್ ಗಳ ಅಂತರದಲ್ಲಿ ಪರಾಭವಗೊಂಡರು. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ ಜೋಡಿ ಡಿ ಗುಂಪಿನ ಪಂದ್ಯದಲ್ಲಿ ಇಂಡೋನೆಷ್ಯಾದ ಸೆತಿಯಾನ್ ಮತ್ತು ಅಸನ್ ಜೋಡಿ ವಿರುದ್ಧ 18-21, 13-21 ಸೆಟ್ ಗಳಿಂದ ಸೋತರು.
ಮಹಿಳೆಯರ ಆರ್ಚರಿ ವೈಯಕ್ತಿಕ ವಿಭಾಗದಲ್ಲಿ ಭಾರತದ ಪ್ರಮುಖ ಆಟಗಾರ್ತಿ ದೀಪಿಕಾ ಕುಮಾರಿ ಸೋಲನುಭವಿಸಿದರು. ಚೈನೀಸ್ ತೈಪೇನ ತಾನ್ ಯಂಗ್ ವಿರುದ್ಧ0-6 ಸೆಟ್ ಗಳ ಅಂತರದಲ್ಲಿ ಸೋತ ದೀಪಿಕಾ ಒಲಿಂಪಿಕ್ಸ್ ನಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ್ರು. ಮತ್ತೊಬ್ಬ ಆರ್ಚರ್ ಬೊಂಬೈಲಾ ದೇವಿ ತಮ್ಮ ಪ್ರತಿಸ್ಪರ್ಧಿ ಮೆಕ್ಸಿಕೊದ ಅಲೆಕ್ಸಾಂಡ್ರಾ ವ್ಯಾಲೆನ್ಸಿಯಾ ವಿರುದ್ಧ 2-6 ಅಂಕಗಳ ಅಂತರದಲ್ಲಿ ಪರಾಭವಗೊಂಡರು. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಆರ್ಚರ್ ಗಳ ಹೋರಾಟ ಅಂತ್ಯಗೊಂಡಿದೆ.
ಭಾರತ ಪುರುಷರ ಹಾಕಿ ತಂಡ ಪ್ರಬಲ ಹಾಲೆಂಡ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ್ರೆ, ಮಹಿಳೆಯರ ಹಾಕಿ ತಂಡವೂ ಅಮೆರಿಕ ವಿರುದ್ಧ 3-0 ಗೋಲುಗಳ ಅಂತರಲ್ಲಿ ಮಣಿಯಿತು.
ಪುರುಷರ 56 ಕೆ.ಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಭಾರತದ ಶಿವಥಾಪ ಅಂತಿಮ 32ರ ಸುತ್ತಿನಲ್ಲಿ ಕ್ಯೂಬಾದ ರೊಬೆಸಿ ರಮಿರೆಜ್ ವಿರುದ್ಧ 5-2 ಸೋಲನುಭವಿಸಿ ನಿರಾಸೆ ಮಾಡಿದ್ರು. ಇನ್ನು ಟೆನಿಸ್ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿಯು ಆಸ್ಟ್ರೇಲಿಯಾದ ಸ್ಟೋಸರ್ ಹಾಗೂ ಪೀರ್ಸ್ ಜೋಡಿಯನ್ನು 2-0 ಸೆಟ್ ಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ. ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಖ್ಯಾತ ಆಟಗಾರರಾದ ಅನಿರ್ಬಾನ್ ಲಾಹಿರಿ 74 ಅಂಕಗಳಿಸಿದ್ರೆ ಮತ್ತು ಶಿವ್ ಚವ್ರಾಸಿಯಾ ಮೊದಲ ಸುತ್ತಿನಲ್ಲಿ 71 ಅಂಕಗಪಡೆದರು. ಎರಡನೇ ಸುತ್ತಿನ ಆಟ ಬಾಕಿ ಇದೆ.
ಇನ್ನು ಪದಕ ಪಟ್ಟಿಯನ್ನು ನೋಡಿದ್ರೆ, ಭಾರತ ಪದಕ ಖಾತೆ ಇನ್ನಷ್ಟೇ ತೆರೆಯಬೇಕಿದೆ. ಅಮೆರಿಕ 37 ಪದಕ (15 ಚಿನ್ನ, 12 ಬೆಳ್ಳಿ, 10 ಕಂಚು) ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ 25 ಪದಕ (10 ಚಿನ್ನ, 6 ಬೆಳ್ಳಿ, 9 ಕಂಚು) ಹಾಗೂ ಜಪಾನ್ 19 ಪದಕ (6 ಚಿನ್ನ, 1 ಬೆಳ್ಳಿ, 12 ಕಂಚು) ಗಳೊಂದಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಅಲಂಕರಿಸಿದೆ.
ಇಂದು ನಡೆಯಲಿರುವ 15 ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಳುಗಳು ಭಾಗವಹಿಸುತ್ತಿದ್ದು, ಅವುಗಳು ಹೀಗಿವೆ…
– ಇಂದಿನಿಂದ ಅಥ್ಲೆಟಿಕ್ಸ್ ಆರಂಭ: ಶುಕ್ರವಾರ ಅಥ್ಲೆಟಿಕ್ಸ್ ವಿವಿಧ ಐದು ಸ್ಪರ್ಧೆಗಳಲ್ಲೇ ಭಾರತದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಕರ್ನಾಟಕದ ವಿಕಾಸ್ ಗೌಡ ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ರಾತ್ರಿ 7.25 ಕ್ಕೆ ಆರಂಭವಾಗಲಿದ್ದು, ಪ್ರಶಸ್ತಿ ಸುತ್ತು ಶನಿವಾರ ರಾತ್ರಿ 7.20ಕ್ಕೆ ಆರಂಭವಾಗಲಿದೆ.
ಮಹಿಳೆಯರ ಶಾಟ್ ಪುಟ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಮನ್ ಪ್ರೀತ್ ಕೌರ್ ಸ್ಪರ್ಧಿಸಲಿದ್ದು, ಸಂಜೆ 6.35ಕ್ಕೆ ಆರಂಭವಾಗಲಿದೆ. ಪ್ರಶಸ್ತಿ ಸುತ್ತು ಶನಿವಾರ 6.30ಕ್ಕೆ ಆರಂಭ.
ಪುರುಷರ 800 ಮೀ. ಓಟದಲ್ಲಿ ಭಾರತದ ಜಿನ್ಸನ್ ಜಾನ್ಸನ್ 3ನೇ ಹಿಟ್ಸ್ ನಲ್ಲಿ ಭಾಗವಹಿಸಲಿದ್ದು, ಈ ಸ್ಪರ್ಧೆ ರಾತ್ರಿ 7ಕ್ಕೆ ಆರಂಭ.
ಪುರುಷರ 20 ಕಿ.ಮೀ ನಡಿಗೆಯಲ್ಲಿ ಭಾರತದ ಕೃಷ್ಣನ್ ಗಣಪತಿ, ಗುರ್ಮೀತ್ ಸಿಂಗ್, ಮನೀಶ್ ಸಿಂಗ್ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ರಾತ್ರಿ 11ಕ್ಕೆ ಶುರು.
ಪುರುಷರ 400 ಮೀ. ಓಟದಲ್ಲಿ ಭಾರತದ ಮುಹಮದ್ ಅಮಾಸ್ ಯಾಹಿಯಾ ಸ್ಪರ್ಧಿಸಲಿದ್ದು, ಶನಿವಾರ ಬೆಳಗಿನ ಜಾವ 6.23ಕ್ಕೆ ಆರಂಭವಾಗಲಿದೆ.
ಪುರುಷರ ಲಾಂಗ್ ಜಂಪ್ ವಿಭಾಗದಲ್ಲಿ ಭಾರತದ ಅಂಕಿತ್ ಶರ್ಮಾ ಭಾಗವಹಿಸಲಿದ್ದು, ಈ ಸ್ಪರ್ಧೆ ಶನಿವಾರ ಬೆಳಗಿನ ಜಾವ 5.50ಕ್ಕೆ ಆರಂಭವಾಗಲಿದೆ.
– ಶೂಟಿಂಗ್ ನಲ್ಲಿ ಗಗನ್ ನಾರಂಗ್ ಸ್ಪರ್ಧೆ: ಶೂಟಿಂಗ್ ನ ಮೂರು ವಿಭಾಗಗಳಲ್ಲಿ ಭಾರತದ ಸ್ಪರ್ಧಿಗಳಿದ್ದು, ಪುರುಷರ 50 ಮೀ. ರೈಫಲ್ ಪ್ರೊನ್ ವಿಭಾಗದಲ್ಲಿ ಗಗನ್ ನಾರಂಗ್ ಹಾಗೂ ಚೈನ್ ಸಿಂಗ್ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ಆರಂಭ.
ಪುರುಷರ ಸ್ಕೀಟ್ ವಿಭಾಗದಲ್ಲಿ ಮೈರಾಜ್ ಅಹ್ಮದ್ ಖಾನ್ ಸ್ಪರ್ಧಿಸಲಿದ್ದು, ಸಂಜೆ 6 ಗಂಟೆಗೆ ನಡೆಯಲಿದೆ.
ಪುರುಷರ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಭಾರತಗ ಗುರ್ಪ್ರೀತ್ ಸಿಂಗ್ ಭಾಗವಹಿಸಲಿದ್ದು, ರಾತ್ರಿ 8.45ಕ್ಕೆ ಸ್ಪರ್ಧೆ ಆರಂಭ.
– ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದಲ್ಲಿ ಭಾರತ: ಬ್ಯಾಟ್ಮಿಂಟನ್ ನ ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ಹಾಲೆಂಡ್ ನ ಪೈಕ್ ಮತ್ತು ಮುಸ್ಕೆನ್ಸ್ ಜೋಡಿ ವಿರುದ್ಧ ಸಂಜೆ 5.30ಕ್ಕೆ ಸೆಣಸಿದರೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಸುಮಿತ್ ರೆಡ್ಡಿ ಮತ್ತು ಮನು ಅತ್ರಿ ಜೋಡಿ ಚೀನಾದ ಚೈ ಮತ್ತು ಹಾಂಗ್ ಜೋಡಿ ವಿರುದ್ಧ ರಾತ್ರಿ 7.50ಕ್ಕೆ ಆರಂಭ.
– ಪ್ರಿಕ್ವಾರ್ಟರ್ ನಲ್ಲಿ ಅತನು: ಪುರುಷರ ವೈಯಕ್ತಿಕ ಆರ್ಚರಿ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಭಾರತದ ಅತನು ದಾಸ್ ತಮ್ಮ ಪ್ರತಿಸ್ಪರ್ಧೆ ದಕ್ಷಿಣ ಕೊರಿಯಾದ ಲೀ ಸುಂಗ್ ಯುನ್ ವಿರುದ್ಧ ಆಡಲಿದ್ದಾರೆ. ಪಂದ್ಯ ಸಂಜೆ 5.43ಕ್ಕೆ ಆರಂಭವಾಗಲಿದ್ದು, ಉಪಾಂತ್ಯ ತಲುಪುವ ನಿರೀಕ್ಷೆಯಲ್ಲಿ ಅತನು ದಾಸ್ ಇದ್ದಾರೆ.
– ಹಾಕಿ ಪುರುಷರಿಗೆ ಕೆನಡಾ ಸವಾಲು: ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸೊ ಹಾದಿಯಲ್ಲಿರುವ ಭಾರತ ಪುರುಷರ ಹಾಕಿ ತಂಡ ಶುಕ್ರವಾರ ರಾತ್ರಿ 9 ಕ್ಕೆ ನಡೆಯಲಿರುವ ಬಿ ಗುಂಪಿನ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ, ಭಾರತ ಅಂತಿಮ 8ರ ಘಟ್ಟಕ್ಕೆ ಪ್ರವೇಶ ಬಹುತೇಕ ಖಚಿತ.
– ಬಾಕ್ಸಿಂಗ್ ಪ್ರಿಕ್ವಾರ್ಟರ್ ನಲ್ಲಿ ವಿಕಾಸ್: ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಯಾದವ್ ಪ್ರಿಕ್ವಾರ್ಟರ್ ಸುತ್ತಿನಲ್ಲಿ ಟರ್ಕಿಯ ಒಂಡೆರ್ ಸಿಪಲ್ ವಿರುದ್ಧ ಶನಿವಾರ ಬೆಳಗಿನ ಜಾವ 3.30ಕ್ಕೆ ಸೆಣಸಲಿದ್ದಾರೆ.
– ಗಾಲ್ಫ್ 2ನೇ ಸುತ್ತಿನಲ್ಲಿ ರಾಹಿರಿ ಮತ್ತು ಚವ್ರಾಸಿಯಾ: ಗಾಲ್ಫ್ ನಲ್ಲಿ ಭಾರತದ ಸ್ಪರ್ಧಿಗಳಾದ ಅನಿರ್ಬಾನ್ ಲಾಹಿರಿ ಮತ್ತು ಶಿವ್ ಚವ್ರಾಸಿಯಾ ಎರಡನೇ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಈ ಸುತ್ತು ಸಂಜೆ 4 ಗಂಟೆಗೆ ಆರಂಭವಾಗಲಿದೆ.
– ರೋಯಿಂಗ್ ನಲ್ಲಿ ದತ್ತು: ಭಾರತದ ರೋಯಿಂಗ್ ಸ್ಪರ್ಧಿ ದತ್ತು ಬಬನ್ ಭೊಕನಲ್ ಸೆಮಿಫೈನಲ್ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ರಾತ್ರಿ 9.20ಕ್ಕೆ ಸ್ಪರ್ಧೆ ನಡೆಯಲಿದೆ.