ಕರ್ನಾಟಕದ 15 ನದಿಗಳಲ್ಲಿ ನಂಜು, ಸಿರಿಯಾದ ಮನಮಿಡಿಯುವ ಚಿತ್ರಗಳು, ರೈತರ ಬಿಡುಗಡೆ, ಬಿಜೆಪಿಯ ಆಂತರಿಕ ತಾಕಲಾಟ, ಒತ್ತುವರಿ ಕ್ರಮಕ್ಕೆ ಆಕ್ಷೇಪ

ಐಎಸ್ ಐಎಸ್ ಹಿಡಿತದಲ್ಲಿದ್ದ ಸಿರಿಯಾದ ಮಂಬಿಜ್ ನಗರವನ್ನು ಸಿರಿಯಾದ ಮೈತ್ರಿಪಡೆ ಮುಕ್ತಗೊಳಿಸಿತು. ಈ ವೇಳೆ ಉಗ್ರರು ಮಾನವ ರಕ್ಷಾ ಕವಚದಂತೆ ಇರಿಸಿಕೊಂಡಿದ್ದ 2 ಸಾವಿರ ನಾಗರಿಕರ ಬಿಡುಗಡೆ ಆಯಿತು. ಆ ನಾಗರಿಕರ ಸಂಭ್ರಮವನ್ನು ಇಲ್ಲಿನ ಚಿತ್ರವೇ ಹೇಳುತ್ತದೆ. ಕುರ್ದ್ ಮಿಲಿಟರಿ ಯೋಧೆಯನ್ನು ಆಲಂಗಿಸಿಕೊಂಡಿರುವ ಮಹಿಳೆ, ಕಣ್ಣೊಂದು ಬಿಟ್ಟು ಮತ್ತೇನೂ ಕಾಣಬಾರದಷ್ಟರಮಟ್ಟಿಗೆ ಬುರ್ಖಾ ತೊಡಬೇಕೆಂಬ ಉಗ್ರ ಸಂಘಟನೆಯ ಹುಕುಂ ಪಾಲಿಸುತ್ತಿದ್ದಾಕೆ ಸ್ವಾತಂತ್ರ್ಯ ಸಿಗುತ್ತಲೇ ಮುಖವಸ್ತ್ರ ಸುಡುತ್ತಿರುವ ದೃಶ್ಯ, ಕರುಳ ಕುಡಿಗಳೊಂದಿಗೆ ಹೊಸಜೀವ ಪಡೆದವರಂತೆ ಹೆಜ್ಜೆ ಹಾಕುತ್ತಿರುವ ಅಮ್ಮಂದಿರು… ಮಾನವತೆ ಗೆಲ್ಲಲಿ!

syria3

syria2

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ 15 ನದಿಗಳ ನೀರು ನೇರವಾಗಿ ಕುಡಿಯಲು ಬಳಸೋದಕ್ಕೆ ಯೋಗ್ಯವಲ್ಲ

ಅರ್ಕಾವತಿ ವ್ಯಾಪ್ತಿಯ ಕಾವೇರಿ, ಕಬಿನಿ, ಭದ್ರಾ, ಕೃಷ್ಣಾ, ಲಕ್ಷ್ಮಣತೀರ್ಥ, ಮಲಪ್ರಭಾ, ಮಂಜಿರಾ, ಕಾಳಿ, ಶಿಂಸಾ, ತುಂಗಭದ್ರಾ ಸೇರಿದಂತೆ ಒಟ್ಟು 15 ನದಿಗಳಲ್ಲಿನ ನೀರು ಬಳಕೆಗೆ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ದೇಶಾದ್ಯಂತ 302 ನದಿಗಳಲ್ಲಿನ ನೀರನ್ನು ಕುಡಿಯಲು ಯೋಗ್ಯವೇ ಎಂಬುದನ್ನು ಮಾಲಿನ್ಯ ನಿಯಂತ್ರಣಾ ಮಂಡಳಿ ಪರೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ ಕರ್ನಾಟಕದ 15 ನದಿಗಳ ನೀರು ಕುಡಿಯಲು ಯೋಗ್ಯವಲ್ಲ, ಈ ನದಿಗಳಲ್ಲಿರುವ ನೀರನ್ನು ನೇರವಾಗಿ ಬಳಕೆ ಮಾಡದೆ ಶುದ್ಧ ಘಟಕಗಳ ಮೂಲಕ  ಶುದ್ಧೀಕರಿಸಿ ಬಳಕೆ ಮಾಡಬೇಕು ಎಂದು ಮಂಡಳಿ ಸಲಹೆ ಮಾಡಿದೆ.

ಕಾವೇರಿ ಕೊಳ್ಳ, ತುಂಗಭದ್ರಾ, ಮಲಪ್ರಭಾ, ಕೃಷ್ಣ ವ್ಯಾಪ್ತಿಯ ಬಹುತೇಕ ನದಿ ನೀರುಗಳಲ್ಲಿ ಸತ್ತಪ್ರಾಣಿಗಳ ಮೂಳೆಗಳು, ಅರೆಬರೆ ಸುಟ್ಟ ಮೃತ ದೇಹಗಳು, ಮನುಷ್ಯನ ಸುಟ್ಟ ಅಸ್ಥಿ ಬಿಡುವುದು, ಅನುಪಯುಕ್ತ ತ್ಯಾಜ್ಯಗಳನ್ನು ನದಿಗೆ ಬಿಸಾಡುವುದು, ಕಾರ್ಖಾನೆಗಳು ವಿಸರ್ಜಿಸುವ ಮಲಿನ ನೀರು ಇತ್ಯಾದಿಗಳ  ಅಂಶಗಳಿಂದ ನದಿ ನೀರು  ವಿಷಕಾರಿಯಾಗಿದೆ.

ಈ ಹಿಂದೆ ಕಾವೇರಿ ನೀರು ಕುಡಿಯಲು ಯೋಗ್ಯವಲ್ಲ ಎಂದು ರಾಜ್ಯಸರ್ಕಾರ  ಶುದ್ಧೀಕರಣಕ್ಕೆ ಮುಂದಾಗಿತ್ತು. ಇದಕ್ಕಾಗಿ ಬಜೆಟ್‍ನಲ್ಲಿ ವಿಶೇಷ ಅನುದಾನ ಒದಗಿಸಿತ್ತು. ಆದರೆ ಯೋಜನೆಯ ಅನುಷ್ಠಾನವೇನೂ ಸಮರ್ಪಕವಾಗಿರಲಿಲ್ಲ.

ರೈತರ ಬಿಡುಗಡೆ

ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಡೆದ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ರೈತರನ್ನು ಬಿಡುಗಡೆ ಮಾಡಲಾಗಿದೆ.

ಚಿತ್ರದುರ್ಗ ಜೈಲಿನಲ್ಲಿದ್ದ 57 ರೈತರನ್ನು ಹಾಗು ಬಳ್ಳಾರಿ ಜೈಲಿನಲ್ಲಿದ್ದ 129 ರೈತರನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರದುರ್ಗದಿಂದ ಧಾರವಾಡದ ನವಲಗುಂದಕ್ಕೆ ತೆರಳಲು ಚಿತ್ರದುರ್ಗದ ಮುರುಘಾ ಮಠದಿಂದ ರೈತರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಮುಂದುವರಿದಿರುವ ಬಿಜೆಪಿ ಆಂತರಿಕ ಸಂಘರ್ಷ

ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ, ಅತೃಪ್ತಿ ನಿವಾರಿಸಲು ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಈ ತಿಂಗಳ 16ರಂದು ಪಕ್ಷದ ಪ್ರಮುಖರ ಸಭೆ ಕರೆದಿದ್ದಾರೆ. ಆದರೆ ಶನಿವಾರ ಭಿನ್ನಮತೀಯ ನಾಯಕ ಈಶ್ವರಪ್ಪ ಇಂದು ಪ್ರತ್ಯೇಕವಾಗಿ ತಮ್ಮ ಬೆಂಬಲಿಗರ ಸಭೆ ನಡೆಸಿದರು.

ಒಂದೆಡೆ ಈಶ್ವರಪ್ಪರವರು ವಿಧಾನಸೌಧದಲ್ಲಿ ಸಭೆ ಸೇರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಲ್ಲಿ ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಸಿದರೆ ಮತ್ತೊಂದೆಡೆ ಪಕ್ಷದ ಕಚೇರಿಯಲ್ಲಿ ಈಶ್ವರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಭಾನುಪ್ರಕಾಶ್, ನಿರ್ಮಲ ಸುರಾನ, ಸೋಮಣ್ಣ ಬೇವಿನಮರದ ಮತ್ತಿತರ ನಾಯಕರು ಸಭೆ ನಡೆಸಿರುವುದು ಬಿಜೆಪಿಯ ಮೊದಲ ಸಾಲಿನಲ್ಲಿಸಧ್ಯಕ್ಕೆ ಎಲ್ಲವೂ ಸರಿಯಾಗುವ ಲಕ್ಷಣಗಳೇನಿಲ್ಲ ಎಂಬ ಸೂಚನೆ ನೀಡುತ್ತಿದೆ.

ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಪಕ್ಷದ ಕಚೇರಿಯಲ್ಲಿ ಸದ್ದುಗದ್ದಲವಿಲ್ಲದೆ ನಡೆಯಿತು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ ಹಾಗೂ ಮತ್ತಿತರರು ಭಾಗವಹಿಸಿದ್ದರು. ಆದರೆ ಪಕ್ಷದ ಕಚೇರಿಯಲ್ಲಿ ನಡೆಯುತ್ತಿದ್ದ ಇನ್ನೊಂದು ಸಭೆ ನಡೆಯುತ್ತಿದ್ದರೆ ತಮಗೇನೂ ಸಂಬಂಧವಿಲ್ಲ ಎಂಬಂತೆ ಈ ನಾಯಕರು ಸಭೆಯಲ್ಲಿ ಭಾಗವಹಿಸಿ ತೆರಳಿದರು.

ಅಹಿಂದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಪಡೆಯ ಮೊಟ್ಟ ಮೊದಲ ಸಮಾವೇಶವನ್ನು ರಾಜ್ಯಮಟ್ಟದಲ್ಲಿ ನಡೆಸಬೇಕೋ ಜಿಲ್ಲಾ ಮಟ್ಟದಲ್ಲಿ ನಡೆಸಬೇಕೋ ಎಂಬ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲು ಆಗಸ್ಟ್ 18 ರಂದು ನಿರ್ಣಾಯಕ ಸಭೆ ನಡೆಯಲಿದೆ ಎಂದರು.

ಒತ್ತುವರಿ ತೆರವು- ಕೆಲವು ಆಕ್ಷೇಪಗಳು

 Freedom Fighter, Doreswamy, Director, Anti Land Grabbing Committ

ಬೆಂಗಳೂರಿನಲ್ಲಿ ಬಿಬಿಎಂಪಿ ನಡೆಸುತ್ತಿರುವ ಒತ್ತುವರಿ ತೆರವಿನ ಕುರಿತು ಶನಿವಾರ ಎರಡು ಸುದ್ದಿಗೋಷ್ಟಿಗಳು ನಡೆದವು. ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯ ಎ.ಟಿ. ರಾಮಸ್ವಾಮಿ ಮತ್ತು ದೊರೆಸ್ವಾಮಿಯವರ ಸುದ್ದಿಗೋಷ್ಟಿಯಲ್ಲಿ, ‘ಒತ್ತುವರಿ ತೆರವಿಗೆ ನಿರ್ದಿಷ್ಟ ಕ್ರಿಯಾಯೋಜನೆ ಇಲ್ಲದಿರುವುದರಿಂದ ಪ್ರಭಾವಿಗಳು ತಪ್ಪಿಸಿಕೊಳ್ಳುವ ಅವಕಾಶ ಹೆಚ್ಚಿನದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರು, ವಕೀಲರ ಸಮೂಹವಾಗಿರುವ ‘ಬೆಂಗಳೂರಿನ ನಾಗರೀಕರಾದ ನಾವು’ ಸಂಘಟನೆಯೂ ಪತ್ರಿಕಾಗೋಷ್ಟಿ ನಡೆಸಿ ಒತ್ತುವರಿ ಸಂದರ್ಭದಲ್ಲಿ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನೆಲಸಮ ಕಾರ್ಯಾಚರಣೆಯಲ್ಲಿ ಸರ್ಕಾರ ಸೂಕ್ತ ದಾಖಲೆಗಳನ್ನು ಸೃಶ್ಟಿಸದೇ ಇರುವುದರಿಂದ ಈಗ ಆರೋಪಿಗಳಾಗಿರುವ ಅಧಿಕಾರಿಗಳು, ಪ್ರಭಾವಿಗಳು ದೋಷಮುಕ್ತರಾಗಿಬಿಡುವ ಅವಕಾಶ ಹೆಚ್ಚಿದೆ. ಕಾಲಮಿತಿಯಲ್ಲಿ ಶೀಘ್ರ ವಿಚಾರಣೆ ಆಗಬೇಕೆಂದು ಆಗ್ರಹಿಸಿದ ಸಂಘಟನೆ, ಮನೆ ಕಳೆದುಕೊಂಡ ಸಾಮಾನ್ಯರಿಗೆ ತಾತ್ಕಾಲಿಕ ನೆರವನ್ನಾದರೂ ನೀಡುವ ಬಗ್ಗೆ ಸರ್ಕಾರ ಕಾರ್ಯ ಪ್ರವೃತ್ತವಾಗಬೇಕೆಂದು ಆಗ್ರಹಿಸಿತು.

2 COMMENTS

  1. adidas fleur

    “Unbelievable has to go in Jan #mufc— Ross Fisher (.theross1989) December 4, 2016Zlatan Ibrahimovic lobs Stekelenburg after dodgy decision by Everton goalkeeperThe Sun.

Leave a Reply